ಸಾಮಾಜಿಕ ಕಾರ್ಯಕರ್ತ ಸಿದ್ದು ಹಿರೇಮಠ ವಿರುದ್ಧ ಜಾತಿ ನಿಂದನೆ, ಬೆದರಿಕೆ ಹಾಗೂ ಕೊಲೆ ಯತ್ನ ಆರೋಪದಡಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಹೀರಾಪುರ ನಿವಾಸಿ ಸಿದ್ದಾರೂಢ ಕಾಂಬಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ವಿವಿಧ ಕಲಂಗಳಡಿ ಎಫ್‌ಐಆರ್ ದಾಖಲಿಸಿದ್ದಾರೆ.
ದೂರಿನ್ವಯ, ಮೇ 24ರಂದು ರಾತ್ರಿ ಸಿದ್ದಾರೂಢ ಕಾಂಬಳೆ ದ್ವಿಚಕ್ರ ವಾಹನದಲ್ಲಿ ಮಿನಿ ವಿಧಾನಸೌಧ ಎದುರು ಸಂಚರಿಸುತ್ತಿದ್ದ ವೇಳೆ, ಸಿದ್ದು ಹಿರೇಮಠ ಚಲಾಯಿಸುತ್ತಿದ್ದ ಇನ್ನೋವಾ ಕಾರು ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ತಿರುವಿನಲ್ಲಿ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ. ಇದರಿಂದ ದ್ವಿಚಕ್ರ ವಾಹನಕ್ಕೆ ಹಾನಿಯಾಗಿದೆ ಎಂದು ಆರೋಪಿಸಲಾಗಿದೆ.
ಘಟನೆಯ ಬಳಿಕ ಸಿದ್ದು ಹಿರೇಮಠ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ, ಹಳೆ ಜೇವರ್ಗಿ ರಸ್ತೆ ಸಮೀಪದ ಪಿಡಬ್ಲ್ಯುಡಿ ಕ್ವಾರ್ಟರ್ಸ್ ಬಳಿ ಕಾರನ್ನು ವೇಗವಾಗಿ ಚಲಾಯಿಸಿ ಮತ್ತೊಮ್ಮೆ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದಲ್ಲದೆ, ತಮ್ಮ ಬೆಂಬಲಿಗರನ್ನು ಸ್ಥಳಕ್ಕೆ ಕರೆಸಿ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ; ಕೊಲೆ ಆರೋಪ, ಐವರ ವಿರುದ್ಧ ದೂರು
ಸಿದ್ದಾರೂಢ ಕಾಂಬಳೆ ನೀಡಿದ ದೂರಿನ ಮೇರೆಗೆ ಸಿದ್ದು ಹಿರೇಮಠ ವಿರುದ್ಧ ಎಸ್ಸಿ-ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ತಿಳಿಸಿದು ಬಂದಿದೆ.





