ದೇಶದ ಶ್ರೇಷ್ಠ ಸಂಸ್ಕೃತಿ, ಸಂಸ್ಕಾರ, ಕಲೆ ಹಾಗೂ ಸಾಹಿತ್ಯದ ಉಳಿವಿಗೆ ವಚನ ಸಾಹಿತ್ಯದ ಅಧ್ಯಯನ ಅವಶ್ಯಕವಾಗಿದೆ ಎಂದು ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಬಿರಾದಾರ ಅಭಿಪ್ರಾಯಪಟ್ಟರು.
ವಚನಾಮೃತ ಕನ್ನಡ ಸಂಘದ ವತಿಯಿಂದ ನಗರದ ಮಹಾಲಕ್ಷ್ಮಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಹಾಗೂ ಮೈದುನ ರಾಮಯ್ಯ ಅವರ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿ, “ವಚನ ಸಾಹಿತ್ಯ ಅನುಭಾವದ ಸಾಗರವಾಗಿದೆ. ನಮ್ಮ ಶಕ್ತಿಗೆ ಅನುಗುಣವಾಗಿ ಅದನ್ನು ಬಳಸಿಕೊಂಡು ಬಲಿಷ್ಠ ಸಮಾಜ ಕಟ್ಟಬೇಕಾಗಿದೆ. ಯೋಗ ಹಾಗೂ ಸಾತ್ವಿಕ ಆಹಾರದಿಂದ ಸದೃಢ ಆರೋಗ್ಯ ಕಾಯ್ದುಕೊಳ್ಳಬಹುದು. ದೊಡ್ಡ ಸಾಧನೆ ಮಾಡಬಹುದು” ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ, “12ನೇ ಶತಮಾನದ ಶರಣರು ಉತ್ತಮ ಸಮಾಜ ನಿರ್ಮಿಸಿದ್ದರು. ಅವರ ತತ್ವ, ಆದರ್ಶಗಳನ್ನು ಯುವ ಪೀಳಿಗೆಗೆ ತಿಳಿಸಲು ಸಂಘದಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ವಿಚಾರ ಸಂಕಿರಣವು ಹಡಪದ ಅಪ್ಪಣ್ಣ ಹಾಗೂ ಮೈದುನ ರಾಮಯ್ಯ ಅವರ ಬದುಕಿನ ಮೇಲೆ ಬೆಳಕು ಚೆಲ್ಲಿದೆ. ಸಂಘದಿಂದ ಜೂ. 10 ರಂದು ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಅಲ್ಲಮಪ್ರಭುದೇವರ ಕುರಿತ ವಿಚಾರ ಸಂಕಿರಣ ಹಮ್ಮಿಕೊಂಡಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು” ಎಂದು ಮನವಿ ಮಾಡಿದರು.
“ಹಡಪದ ಅಪ್ಪಣ್ಣನವರು ಮಾನವೀಯ ಮೌಲ್ಯಗಳ ಭಂಡಾರವಾಗಿದ್ದರು. ಅಪಾರ ಜ್ಞಾನ ಸಂಪಾದಿಸಿದ್ದರು. ಬಸವಣ್ಣನವರ ಕಾರ್ಯದರ್ಶಿಯಾಗಿ ಒಳ್ಳೆಯ ಹೆಸರು ಗಳಿಸಿದ್ದರು” ಎಂದು ಶಿವಶರಣ ಹಡಪದ ಅಪ್ಪಣ್ಣ ಅವರ ಕುರಿತು ಉಪನ್ಯಾಸ ನೀಡಿದ ಪ್ರೊ. ರಮಾಕಾಂತ ಕಾರಾಮುಂಗೆ ಹೇಳಿದರು.
ಡಾ.ವೀಣಾ ಜಲಾದೆ ಅವರು ಶಿವಶರಣ ಮೈದುನ ರಾಮಯ್ಯ ಅವರ ಕುರಿತು ಉಪನ್ಯಾಸ ನೀಡಿ, “ಹಡಪದ ಅಪ್ಪಣ್ಣನವರು 250 ವಚನಗಳನ್ನು ರಚಿಸಿದ್ದಾರೆ. ಅಪ್ಪಣ್ಣ ಬಸವಪ್ರಿಯ ಕೂಡಲ ಚನ್ನಬಸವಣ್ಣ ಅವರ ಅಂಕಿತ ನಾಮವಾಗಿದೆ. ಮೈದುನ ರಾಮಯ್ಯ ಅವರ ವಚನಗಳಲ್ಲಿ ಸಂಬಂಧಗಳ ಮಹತ್ವ ಕಾಣಬಹುದು. ಮೈದುನ ರಾಮಯ್ಯ ಅವರು ತಮ್ಮ ವಚನಗಳಲ್ಲಿ ಸಂಬಂಧಗಳನ್ನು ಹೇಗೆ ಜೋಪಾನವಾಗಿ ಇಟ್ಟುಕೊಳ್ಳಬೇಕು. ಅದರಿಂದ ಹೇಗೆ ಸುಭದ್ರ ಸಮಾಜವನ್ನು ಕಟ್ಟಬಹುದು ಎನ್ನುವುದನ್ನು ವಿವರಿಸಿದ್ದಾರೆ” ಎಂದು ತಿಳಿಸಿದರು.
ಹಿರಿಯ ಸಾಹಿತಿ ಎಸ್.ಎಸ್. ಹೊಡಮನಿ ಮಾತನಾಡಿದರು. ಕವಿರತ್ನ ಕಾಳಿದಾಸ ಪ್ರಥಮ ದರ್ಜೆ ಕಾಲೇಜಿನ ದೈಹಿಕ ನಿರ್ದೇಶಕ ಓಂಕಾರ ಮಾಶೆಟ್ಟಿ ಉಪಸ್ಥಿತರಿದ್ದರು.
ಇದನ್ನೂ ಓದಿ : ಬೀದರ್ | ಕನೇರಿ ಸ್ವಾಮಿ ಬಸವಕಲ್ಯಾಣ ಪ್ರವೇಶಿಸಕೂಡದು: ಬಸವಪರ ಸಂಘಟನೆಗಳ ನಿರ್ಣಯ
ರೇಣುಕಾ ಮಳ್ಳಿ ಹಾಗೂ ನಾಗಶ್ರೀ ನರೇಂದ್ರ ಸುಶ್ರಾವ್ಯವಾಗಿ ವಚನ ಗಾಯನ ಮಾಡಿದರು. ಶ್ರೀದೇವಿ ಸೋಮಶೆಟ್ಟಿ ಸ್ವಾಗತಿಸಿದರು. ಶಿಲ್ಪಾ ಮಜಗೆ ನಿರೂಪಿಸಿದರು. ಬಸವರಾಜ ಬಿರಾದಾರ ವಂದಿಸಿದರು.





