ಸ್ನೇಹಿತರೊಂದಿಗೆ ಆಟ ಆಡುವಾಗ ಹಾವು ಕಡಿದು ಆರನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಆಳಂದ ತಾಲೂಕಿನ ಮದಗುಣಕಿ ಗ್ರಾಮದಲ್ಲಿ ನಡೆದಿದೆ.
ಮದಗುಣಕಿ ಗ್ರಾಮದ ಶಿವಕುಮಾರ ಸಂಜುಕುಮಾರ ಸಣಮನಿ (12) ಮೃತ ಬಾಲಕ ಎಂದು ತಿಳಿದು ಬಂದಿದೆ. ಭಾನುವಾರ ಗ್ರಾಮದಲ್ಲಿ ಸ್ನೇಹಿತರೊಂದಿಗೆ ಆಟ ಆಡುವ ವೇಳೆ ಹಾವು ಕಚ್ಚಿದೆ. ಹಾವು ಕಾಣದ ಕಾರಣ ವಿದ್ಯಾರ್ಥಿಯು ಆಟ ಆಡುವಾಗ ಮುಳ್ಳು ಚುಚ್ಚಿದೆ ಎಂದು ಪೋಷಕರಿಗೆ ಹೇಳಿದ್ದರಿಂದ ಕುಟುಂಬಸ್ಥರು ಗಂಭೀರವಾಗಿ ಪರಿಗಣಿಸಿಲ್ಲ.
ಸೋಮವಾರ ವಿದ್ಯಾರ್ಥಿಯ ಮೈತುಂಬಾ ವಿಷವೇರಿದ ಬಳಿಕ ಪ್ರಜ್ಞೆ ಕಳೆದುಕೊಂಡಿದ ಮೇಲೆ ಪೋಷಕರು ಸಮೀಪದ ಮಾದನ ಹಿಪ್ಪರಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಹಾವು ಕಚ್ಚಿರುವುದು ದೃಢಪಟ್ಟ ಬಳಿಕ ಕಲಬುರಗಿ ಜಿಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ : ಬೀದರ್ | ಮಾಯವಾದ ಮಳೆ: ಬರಿದಾದ 57 ಕೆರೆಗಳ ಒಡಲು!
ತಂದೆ-ತಾಯಿಗೆ ಒಬ್ಬನೇ ಮಗನಿದ್ದನು. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತು. ಪುಟ್ಟ ಬಾಲಕನನ ಆಕಸ್ಮಿಕ ಸಾವು ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದ್ದು, ಬಂಧುಮಿತ್ರರು, ಶಾಲಾ ಶಿಕ್ಷಕರು, ಗ್ರಾಮಸ್ಥರು ಮರುಗಿದರು.





