ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಜಿಲ್ಲೆಯ ಕೆರೆ-ಕಟ್ಟೆಗಳು ಬರಿದಾಗುತ್ತಿವೆ. ಇದರ ಪರಿಣಾಮ ಈಗಾಗಲೇ ಕೃಷಿ ಚಟುವಟಿಕೆಗಳ ಮೇಲೆ ಗೋಚರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರು, ಅಂತರ್ಜಲ ಮಟ್ಟ ಹಾಗೂ ಗ್ರಾಮೀಣ ಜೀವನೋಪಾಯದ ಮೇಲೂ ಗಂಭೀರ ಪರಿಣಾಮ ಬೀರುವ ಆತಂಕ ಎದುರಾಗಿದೆ. ತಾತ್ಕಾಲಿಕ ಪರಿಹಾರ ಕ್ರಮಗಳಿಗಿಂತ ಕೆರೆಗಳ ಪುನರುಜ್ಜೀವನ, ಹೂಳು ತೆರವು, ಒತ್ತುವರಿ ತೆರವು, ನೀರು ಹರಿದು ಬರುವ ಕಾಲುವೆಗಳ ದುರಸ್ತಿ ಹಾಗೂ ವಿಬಿ-ಜಿ ರಾಮ್ ಜಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತಹ ಶಾಶ್ವತ ಕ್ರಮಗಳನ್ನು ಸರ್ಕಾರ ಮತ್ತು ಸಂಬಂಧಿತ ಇಲಾಖೆಗಳು ತಕ್ಷಣ ಕೈಗೊಳ್ಳಬೇಕಿದೆ.
ಬೀದರ್ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದೆ. ಜಿಲ್ಲಾದ್ಯಂತ ಭೀಕರ ಬರದ ಛಾಯೆ ಆವರಿಸತೊಡಗಿದೆ. ಮಳೆಗಾಲ ಆರಂಭವಾಗಿ 2 ತಿಂಗಳು ಕಳೆಯುತ್ತಿದ್ದರೂ ಜಿಲ್ಲೆಯ ಬಹುತೇಕ ಕೆರೆಗಳು ಭರ್ತಿಯಾಗಿಲ್ಲ. ಬರಿದಾದ ಕೆರೆ-ಕಟ್ಟೆಗಳಿಂದ ಅಂತರ್ಜಲ ಪಾತಾಳಕ್ಕಿಳಿದು ಮುಂದಿನ ದಿನಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೂ ಬರ ಎದುರಾಗುವ ಸಾಧ್ಯತೆ ನಿಚ್ಚಳವಾಗಿದೆ.
ವಾಡಿಕೆಯಂತೆ ಮಳೆಯಾಗಿದ್ದರೆ ಇಷ್ಟೊತ್ತಿಗಾಗಲೇ ಕೆರೆಗಳು ತುಂಬಿ ತುಳಕುತ್ತಿದ್ದವು. ಅದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಿ ಜನ, ಜಾನುವಾರುಗಳಿಗೆ ಕುಡಿಯುವ ನೀರು ಲಭ್ಯವಾಗುತ್ತಿತ್ತು. ಮಳೆಯಾಶ್ರಿತ ಬೆಳೆಗಳು ಹುಲುಸಾಗಿ ಬೆಳೆದು ಹಸಿರಿನಿಂದ ನಳನಳಿಸುತ್ತಿದ್ದವು. ಆದರೆ, ಈ ಬಾರಿ ಪರಿಸ್ಥಿತಿ ಸಂಪೂರ್ಣ ತದ್ವಿರುದ್ದವಾಗಿದೆ. ಕೆಲ ವರ್ಷಗಳಿಂದ ಈ ಪ್ರಮಾಣದಲ್ಲಿ ಬರ ಪರಿಸ್ಥಿತಿ ಕಾಡಿರಲಿಲ್ಲ. ಕಳೆದ ವರ್ಷವೂ ಮಳೆ ಉತ್ತಮವಾಗಿದ್ದ ಕಾರಣ ಬಹುತೇಕ ಕೆರೆಗಳ ಒಡಲು ತುಂಬಿಕೊಂಡಿದವು. ಕೆಲವೆಡೆ ಭಾರೀ ಮಳೆಯಿಂದಾಗಿ ಕೆರೆಗಳ ಕೋಡಿ ಒಡೆದು ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಬೆಳೆ ಬೆಳೆಯದ ಘಟನೆಗಳು ಜರುಗಿದವು.
ಮುಂಗಾರು ಪೂರ್ವದಲ್ಲಿ ಗುಡುಗು ಸಿಡಿಲಿನೊಂದಿಗೆ ಅಬ್ಬರಿಸಿ ಬೊಬ್ಬಿರಿದ ಮಳೆ ಜೂನ್ ವೇಳೆಗೆ ಮುನಿಸಿಕೊಂಡಿತು. ಇದರಿಂದ ಮುಂಗಾರು ಬಿತ್ತನೆಗೆ ಭಾರೀ ಹಿನ್ನಡೆಯಾಗಿ ರೈತರು ಚಿಂತೆಗೀಡಾದರು. ಜುಲೈ ಮೊದಲ ವಾರದಲ್ಲಿ ಅಲ್ಪ ಪ್ರಮಾಣದಲ್ಲಿ ಸುರಿದ ಮಳೆಯಿಂದ ಸಂತಸಗೊಂಡ ರೈತರು ಭೂಮಿ ಒಡಲಿಗೆ ಉಡಿ ತುಂಬಲು ಶುರು ಮಾಡಿದರು. ಆದರೂ, ಈ ಸಲ ಮುಂಗಾರು ಬಿತ್ತನೆಗಾಗಿ ಹದಗೊಂಡಿದ್ದ ಕೃಷಿ ಭೂಮಿಯಲ್ಲಿ ವಾಡಿಕೆಯಂತೆ ಬಿತ್ತನೆ ಗುರಿ ತಲುಪಲು ಸಾಧ್ಯವಾಗಿಲ್ಲ. ಮೊಳಕೆಯೊಡೆದ ಸಸಿಗಳು ಮಳೆಯ ಕೊರತೆಯಿಂದ ಬಾಡಲಾರಂಭಿಸಿವೆ. ಈಗಲೂ ಎಲ್ಲೆಡೆ ಮಳೆಯ ಕೊರತೆಯ ಮಾತುಗಳು ಜನಜನಿತವಾಗಿದ್ದು, ಅನ್ನದಾತರಲ್ಲಿ ಆತಂಕ ಸೃಷ್ಟಿಸಿದೆ.
ಸಣ್ಣ ನೀರಾವರಿ ಇಲಾಖೆ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 125 ಕೆರೆಗಳಿದ್ದು, 2,958 ಎಂಸಿಎಫ್ಟಿ ನೀರಿನ ಸಾಮರ್ಥ್ಯ ಹೊಂದಿವೆ. ಒಟ್ಟಾರೆ 21 ಸಾವಿರ ಹೆಕ್ಟೇರ್ಗಳಷ್ಟು ಅಚ್ಚುಕಟ್ಟು ಪ್ರದೇಶ ಹೊಂದಿದೆ. ಆದರೆ, ಅವುಗಳ ಪೈಕಿ 57 ಕೆರೆಗಳ ಒಡಲು ಬತ್ತಿ ಬಾಯ್ತೆರೆದಿವೆ. ಇಲಾಖೆಯ ಪ್ರಕಾರ ಈವರೆಗೆ ಶೇ 30ರಷ್ಟು ನೀರು ತುಂಬಿರುವ ಕೆರೆಗಳ ಸಂಖ್ಯೆ 60, ಇನ್ನು 7 ಕೆರೆಗಳಲ್ಲಿ ಶೇ 50ರಷ್ಟು ನೀರು ತುಂಬಿದೆ. ಗ್ರಾಮೀಣ ಕೆರೆಗಳು ಬತ್ತಿರುವುದರಿಂದ ಜನ-ಜಾನುವಾರು ಅಷ್ಟೇ ಅಲ್ಲದೆ ಕೃಷಿ ಚಟುವಟಿಕೆಗಳಿಗೂ ಸಮಸ್ಯೆಯಾಗುತ್ತಿದೆ.
ಔರಾದ್ ತಾಲೂಕಿನಲ್ಲಿ 17 ಕೆರೆಗಳಿವೆ. ಇದರಲ್ಲಿ 4 ಕೆರೆಗಳು ಸಂಪೂರ್ಣ ಬತ್ತಿವೆ. 11 ಕೆರೆಯಲ್ಲಿ ಶೇ 30ರಷ್ಟು ನೀರಿದೆ, 1 ಕೆರೆಯಲ್ಲಿ ಅರ್ಧದಷ್ಟು ನೀರಿದೆ . ಕಮಲನಗರ ತಾಲೂಕಿನಲ್ಲಿ 19 ಕೆರೆಗಳ ಪೈಕಿ 1 ಕೆರೆ ಭರ್ತಿಯಾಗಿಲ್ಲ. 16 ಕೆರೆಗಳಲ್ಲಿ ಅರ್ಧಕ್ಕಿಂತಲೂ ಕಡಿಮೆ ನೀರಿದೆ. 1 ಕೆರೆ ಪೂರ್ತಿ ತುಂಬಿದರೆ, ಒಂದು ಕೆರೆಯಲ್ಲಿ ಅರ್ಧದಷ್ಟು ನೀರಿದೆ. ಬೀದರ್ನಲ್ಲಿ 34 ಕೆರೆಗಳಲ್ಲಿ 19 ಕೆರೆಗಳು ಒಣಗಿವೆ. 11 ಕೆರೆಯಲ್ಲಿ ಶೇ 30ರಷ್ಟು ನೀರಿನ ಸಂಗ್ರಹವಿದೆ. ಇನ್ನುಳಿದ 4 ಕೆರೆಯಲ್ಲಿ ಶೇ 50ರಷ್ಟು ನೀರು ತುಂಬಿದೆ.
ಹುಮನಾಬಾದ್-ಚಿಟಗುಪ್ಪ ತಾಲೂಕಿನ 15 ಕೆರೆಗಳಲ್ಲಿ 11 ಕೆರೆಗಳು ಬತ್ತಿದ್ದು, 3 ಕೆರೆಯಲ್ಲಿಅರ್ಧಕ್ಕಿಂತ ಕಡಿಮೆ ನೀರಿದೆ. ಒಂದು ಕೆರೆ ಅರ್ಧದಷ್ಟು ನೀರಿದೆ. ಚಿಟಗುಪ್ಪಾ ತಾಲೂಕಿನಲ್ಲಿ 8 ಕೆರೆಗಳಿದ್ದು 6 ಕೆರೆಗಳು ಒಣಗಿವೆ. ಉಳಿದ 2 ಕೆರೆಯಲ್ಲಿ ಶೇ 5 ರಷ್ಟು ಮಾತ್ರ ನೀರಿದೆ. ಬಸವಕಲ್ಯಾಣ ತಾಲೂಕಿನಲ್ಲಿ 21 ಕೆರೆಗಳಿದ್ದು, ಅದರಲ್ಲಿ 11 ಕೆರೆಗಳು ಒಣಗಿವೆ. ಇನ್ನುಳಿದ 10 ಕೆರೆಯಲ್ಲಿ ಶೇ 30ರಷ್ಟು ನೀರಿದೆ. ಹುಲಸೂರ ತಾಲೂಕಿನ 2 ಕೆರೆಗಳಲ್ಲಿ ಒಂದು ಬತ್ತಿದ್ದರೆ, ಇನ್ನೊಂದರಲ್ಲಿ ಅರ್ಧಕ್ಕಿಂತ ಕಡಿಮೆ ನೀರಿದೆ. ಭಾಲ್ಕಿ ತಾಲೂಕಿನಲ್ಲಿ 17ರಲ್ಲಿ 10 ಕೆರೆಗಳು ಬತ್ತಿವೆ. 7 ಕೆರೆಯಲ್ಲಿ ಅರ್ಧಕ್ಕಿಂತ ಕಡಿಮೆ ನೀರಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ʼಈ ದಿನ.ಕಾಮ್ʼಗೆ ತಿಳಿಸಿದ್ದಾರೆ.
ಮಳೆ ಬಾರದಿರುವುದರಿಂದ ರೈತರು ಬೆಳೆ ಉಳಿಸಿಕೊಳ್ಳಲು ಕೊಳವೆಬಾವಿಗೆ ಪಂಪ್ಸೆಟ್ ಅಳವಡಿಸಿ ನೀರು ಹಾಯಿಸಿಕೊಳ್ಳುತ್ತಿದ್ದಾರೆ. ಕೆರೆ ಕಟ್ಟೆಗಳಲ್ಲಿ ನೀರಿದ್ದರೆ ಮಾತ್ರ ಬೋರ್ವೆಲ್ಗಳಲ್ಲಿ ಜೀವ ಜಲ ಬತ್ತುವುದಿಲ್ಲ. ಆದರೆ, ಬೋರ್ವೆಲ್ ಹೊಂದಿರುವ ರೈತರು ಈ ಬಾರಿ ಸತತವಾಗಿ ನೀರು ಹಾಯಿಸುತ್ತಿರುವ ಹಿನ್ನೆಲೆ ಕೆರೆಗಳ ನೀರು ಬೋರ್ವೆಲ್ಗಳಿಗೆ ಬಸಿದು ಹೋಗುತ್ತಿದೆ. ಅವುಗಳು ಬರಿದಾದರೆ, ಅಂತರ್ಜಲವೂ ಬತ್ತಿ ಹೋಗಲಿದ್ದು, ಕೊನೆಗೆ ಕೊಳವೆಬಾವಿಗಳು ನೀರಿಗಾಗಿ ಬಾಯ್ತೆರೆಯಬೇಕಾದ ಕಾಲ ದೂರವಿಲ್ಲ ಎಂಬುದು ರೈತರ ಆತಂಕವಾಗಿದೆ.
“ಜೂನ್ ಕಳೆದು ಜುಲೈ ತಿಂಗಳು ಅಂತ್ಯಗೊಳ್ಳುತ್ತಿದ್ದರೂ ನಿರೀಕ್ಷೆಯಂತೆ ಮಳೆಯಾಗಿಲ್ಲ. ಇದರಿಂದ ಜಿಲ್ಲೆಯಲ್ಲಿ ಮುಂಗಾರು ಬಿತ್ತನೆ ಪ್ರಮಾಣವೂ ಕುಸಿದಿದೆ, ಮಳೆ ಅಭಾವದಿಂದ ಬೆಳೆಗಳು ಒಣಗುತ್ತಿವೆ. ಮಳೆಯ ಕೊರತೆಯಿಂದಾಗಿ ಬಹುತೇಕ ಕೆರೆಗಳು ನೀರಿಲ್ಲದೇ ಬತ್ತಿಹೋಗಿವೆ. ಕೆರೆಗಳಲ್ಲಿನ ಹೂಳು ತೆಗೆಯಲು ನಮ್ಮಲ್ಲಿ ಯಾವುದೇ ಯೋಜನೆ ಇಲ್ಲ. ವಿಬಿ-ಜಿ ರಾಮ್ ಜಿ ಯೋಜನೆಯಡಿ ಕೆರೆ ಹೂಳು ತೆಗೆಯುವುದು, ನಿರ್ವಹಣೆ ಮಾಡುವಂತೆ ಮಾಹಿತಿ ನೀಡಲಾಗಿದೆ” ಎಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗದ ಇಇ ಇಸಾಕ್ ಅಹ್ಮದ್ ಖುರೇಶಿ ಹೇಳುತ್ತಾರೆ.
ಕೆರೆಗಳು ಬತ್ತಲು ಮಳೆ ಕೊರತೆ ಒಂದೇ ಕಾರಣವಲ್ಲ. ಕೆಲವು ಕೆರೆಗಳಿಗೆ ನೀರು ಹರಿದು ಬರಲು ಸರಿಯಾದ ವ್ಯವಸ್ಥೆಯೇ ಇಲ್ಲ. ಇನ್ನು ಕೆಲವೆಡೆ ತುಂಬಿದ ಕೆರೆಗಳಿಂದ ನೀರು ವ್ಯರ್ಥವಾಗಿ ಹರಿದು ಹೋಗುತ್ತದೆ. ಕೆರೆಗಳ ಒಡಲಲ್ಲಿ ಸಂಗ್ರಹವಾದ ಹೂಳು, ಗಿಡ-ಗಂಟಿಗಳನ್ನು ತೆಗೆಯುವ ಕೆಲಸ ನಡೆಯದೇ ಇರುವುದರಿಂದ ನೀರಿನ ಸಂಗ್ರಹ ಸಾಮರ್ಥ್ಯವೂ ತಗ್ಗಿದೆ. ಕೆಲವೆಡೆ ಕೆರೆಗಳ ಒತ್ತುವರಿ ನಡೆದಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಕೆರೆಗಳ ಗಡಿ ಗುರುತಿಸಿ, ನಾಮಫಲಕ ಹಾಕಿ ಸಂರಕ್ಷಣೆಗೆ ಸಂಬಂಧಪಟ್ಟ ಇಲಾಖೆ ಮುತುವರ್ಜಿವಹಿಸಬೇಕಿದೆ ಎಂಬುದು ಅನ್ನದಾತರ ಆಗ್ರಹವಾಗಿದೆ.
ರಾಜ್ಯದಲ್ಲಿ ಬರದ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಜನರು ಉದ್ಯೋಗಕ್ಕಾಗಿ ಗುಳೆ ಹೋಗದಂತೆ ವಿಬಿ-ಜಿ ರಾಮ್ ಜಿ ಯೋಜನೆಯ ಬಗ್ಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಇದನ್ನು ಜಿಲ್ಲಾ ಪಂಚಾಯತ್ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ಕೆರೆ ಪುನರುಜ್ಜೀವನ, ದುರಸ್ತಿ ಹಾಗೂ ನಿರ್ವಹಣೆಗಾಗಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತು ನೀಡುವುದು ಅಗತ್ಯವಾಗಿದೆ.
ಮಳೆಯ ಕೊರತೆಯಿಂದ ಜಿಲ್ಲೆಯ ರೈತ ಸಮೂಹ ಸಂಕಷ್ಟಕ್ಕೆ ಸಿಲುಕಿದೆ. ಆಗಾಗ ಅಲ್ಪ ಮಳೆಯಾದರೂ ನಿರೀಕ್ಷೆಯಂತೆ ಬೆಳೆಗಳಿಲ್ಲ. ಗೇಣುದ್ದ ಬೆಳೆದ ಬೆಳೆ ಉಳಿಸಿಕೊಳ್ಳಲು ಕೀಟನಾಶಕ ಸಿಂಪಡಣೆ, ಎಡೆಕುಂಟೆ, ಕಳೆ ತೆಗೆಯುವ ಕೆಲಸದಲ್ಲಿ ಕೃಷಿಕರು ನಿರತರಾಗಿದ್ದಾರೆ. ಇನ್ನೊಂದೆಡೆ ಊರಲ್ಲಿ ಕೃಷಿ ಚಟುವಟಿಕೆಗಳು ವೇಗ ಪಡೆಯದ ಹಿನ್ನೆಲೆ ಬರಗಾಲದ ಛಾಯೆ ಆವರಿಸಿದ್ದನ್ನು ಕಂಡು ಜೀವನ ನಿರ್ವಹಣೆಗಾಗಿ ಕೂಲಿಕಾರರು ಅನ್ಯ ರಾಜ್ಯಗಳಿಗೆ ವಲಸೆ ಹೋಗುವುದು ಕಂಡುಬರುತ್ತಿದೆ.
ಇದನ್ನೂ ಓದಿದ್ದೀರಾ? ಆಂಧ್ರ ಪ್ರದೇಶದಲ್ಲಿ ಮಳೆ ಕೊರತೆ, ತೀವ್ರ ಒಣಹವೆ: ಮುಗಿಲಿನತ್ತ ದಿಟ್ಟಿಸಿರುವ ರೈತರು
ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಜಿಲ್ಲೆಯ ಕೆರೆ-ಕಟ್ಟೆಗಳು ಬರಿದಾಗುತ್ತಿವೆ. ಇದರ ಪರಿಣಾಮ ಈಗಾಗಲೇ ಕೃಷಿ ಚಟುವಟಿಕೆಗಳ ಮೇಲೆ ಗೋಚರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರು, ಅಂತರ್ಜಲ ಮಟ್ಟ ಹಾಗೂ ಗ್ರಾಮೀಣ ಜೀವನೋಪಾಯದ ಮೇಲೂ ಗಂಭೀರ ಪರಿಣಾಮ ಬೀರುವ ಆತಂಕ ಎದುರಾಗಿದೆ. ತಾತ್ಕಾಲಿಕ ಪರಿಹಾರ ಕ್ರಮಗಳಿಗಿಂತ ಕೆರೆಗಳ ಪುನರುಜ್ಜೀವನ, ಹೂಳು ತೆರವು, ಒತ್ತುವರಿ ತೆರವು, ನೀರು ಹರಿದು ಬರುವ ಕಾಲುವೆಗಳ ದುರಸ್ತಿ ಹಾಗೂ ವಿಬಿ-ಜಿ ರಾಮ್ ಜಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತಹ ಶಾಶ್ವತ ಕ್ರಮಗಳನ್ನು ಸರ್ಕಾರ ಮತ್ತು ಸಂಬಂಧಿತ ಇಲಾಖೆಗಳು ತಕ್ಷಣ ಕೈಗೊಳ್ಳಬೇಕಿದೆ. ಇಲ್ಲವಾದರೆ ಈ ವರ್ಷದ ಮಳೆ ಕೊರತೆ ಮುಂದಿನ ಬೇಸಿಗೆಯಲ್ಲಿ ಜಿಲ್ಲೆಯ ಜನ-ಜಾನುವಾರು ಹಾಗೂ ಕೃಷಿ ವ್ಯವಸ್ಥೆಗೆ ಇನ್ನಷ್ಟು ದುಬಾರಿಯಾಗಿ ಪರಿಣಮಿಸುವ ಅಪಾಯವನ್ನು ತಳ್ಳಿಹಾಕಲು ಸಾಧ್ಯವಿಲ್ಲ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




