ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳು ಹಾಗೂ 5 ಕೆಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಭಾರೀ ಏರಿಕೆ ಮಾಡಿರುವುದನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) (ಸಿಪಿಐಎಂ) ತೀವ್ರವಾಗಿ ಖಂಡಿಸಿದೆ.
ಸಿಲಿಂಡರ್ ದರ ಏರಿಕೆಯು ಗ್ರಾಹಕರ ಮೇಲೆ ಅನ್ಯಾಯಕರವಾದ ಹೆಚ್ಚುವರಿ ಭಾರವಾಗಿದ್ದು, ತಕ್ಷಣವೇ ಈ ದರ ಏರಿಕೆಯನ್ನು ಹಿಂಪಡೆಯಬೇಕು. ಜೊತೆಗೆ ದೇಶದಾದ್ಯಂತ ಪಕ್ಷದ ಘಟಕಗಳು ಈ ನಿರ್ಧಾರದ ವಿರುದ್ಧ ಪ್ರತಿಭಟನೆಗಳನ್ನು ಸಂಘಟಿಸುವಂತೆ ಕರೆ ನೀಡಲಾಗಿದೆ.
ವಾಣಿಜ್ಯ ಸಿಲಿಂಡರ್ ದರದಲ್ಲಿ ಸುಮಾರು ₹1000ರವರೆಗೆ ಏರಿಕೆ ಮಾಡಿರುವುದು ಅಭೂತಪೂರ್ವವಾಗಿದೆ. ಇದರ ಪರಿಣಾಮವಾಗಿ ಇತರ ವಸ್ತುಗಳ ಬೆಲೆಗಳು ಹೆಚ್ಚುವ ಸಾಧ್ಯತೆ ಇದ್ದು, ವ್ಯಾಪಾರಸ್ಥರು ಈ ಹೆಚ್ಚುವರಿ ಹೊರೆಗಳನ್ನು ಗ್ರಾಹಕರ ಮೇಲೆ ಹಾಕುವ ಸಾಧ್ಯತೆ ಇದೆ. ಇದರಿಂದ ಹಣದುಬ್ಬರ ಹೆಚ್ಚುವ ಜೊತೆಗೆ ಸಣ್ಣ ಉದ್ಯಮಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಪಕ್ಷ ಎಚ್ಚರಿಸಿದೆ.
14 ಕೆಜಿ ಗೃಹಬಳಕೆಯ ಸಿಲಿಂಡರ್‌ಗಳಿಗೆ ತಕ್ಷಣದ ಏರಿಕೆ ಮಾಡದಿದ್ದರೂ, 5 ಕೆಜಿ ಸಬ್ಸಿಡಿ ರಹಿತ ಸಿಲಿಂಡರ್‌ಗಳ ಬೆಲೆಯನ್ನು ₹261ರಷ್ಟು ಹೆಚ್ಚಿಸಿರುವುದು ಸಣ್ಣ ಕುಟುಂಬಗಳು ಮತ್ತು ವಲಸೆ ಕಾರ್ಮಿಕರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ಈ ಕ್ರಮ ಜನಸಾಮಾನ್ಯರ ಜೀವನವನ್ನು ಇನ್ನಷ್ಟು ಕಷ್ಟಕರವಾಗಿಸುತ್ತದೆ. ಈಗಾಗಲೇ ಅನಿಲ ಕೊರತೆ ಮತ್ತು ಬೆಲೆ ಏರಿಕೆಯ ಕಾರಣದಿಂದ ಅನೇಕ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳುತ್ತಿರುವುದು ಗಮನಾರ್ಹವಾಗಿದೆ.
ಇದನ್ನೂ ಓದಿ : ಬೀದರ್ ಜಿಲ್ಲೆಯ ಅಭಿವೃದ್ಧಿಗೆ ₹500 ಕೋಟಿ ಯೋಜನೆ
ಕಳೆದ ಎರಡು ತಿಂಗಳಲ್ಲಿ ಮೋದಿ ಸರ್ಕಾರವು ವಾಣಿಜ್ಯ ಸಿಲಿಂಡರ್‌ಗಳ ದರದಲ್ಲಿ ಎರಡನೇ ಬಾರಿ ಭಾರೀ ಏರಿಕೆ ಮಾಡಿದೆ. ಸರ್ಕಾರ ಸಿಲಿಂಡರ್ ತೆರಿಗೆಗಳಿಂದ ಬರುವ ಆದಾಯವನ್ನು ಕಡಿಮೆ ಮಾಡಿದ್ದರೆ ಜನರಿಗೆ ಸ್ವಲ್ಪ ಪರಿಹಾರ ಸಿಗುತ್ತಿತ್ತು. ಆದರೆ ಅದಕ್ಕೆ ನಿರಾಕರಿಸಿರುವುದು ಬಡವರ ವಿರುದ್ಧದ ನಿಲುವನ್ನು ತೋರಿಸುತ್ತದೆ ಎಂದು ಸಿಪಿಐ(ಎಂ) ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಅವರು ಆರೋಪಿಸಿದ್ದಾರೆ.





