ಹೂವಿನಹಳ್ಳಿ ನಾಗರಾಜ ಅವರ “ಮಾರಿಜಪ್ಪ” ಕಾದಂಬರಿಯನ್ನು ಲೋಕಾರ್ಪಣೆ ಕಾರ್ಯಕ್ರಮವನ್ನು ಗುರುವಾರ ನಗರದ ಹಳೆ ಜೇವರ್ಗಿ ರಸ್ತೆಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಚಕೋರ ಸಾಹಿತ್ಯ ವೇದಿಕೆ ಸಹಯೋಗದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಹೂವಿನಹಳ್ಳಿ ನಾಗರಾಜ ಅವರ “ಮಾರಿಜಪ್ಪ” ಕಾದಂಬರಿಯನ್ನು ಲೋಕಾರ್ಪಣೆ ಮಾಡಿ ದ್ವಿಭಾಷಾ ಕವಿ ಡಾ. ಬಸವ ಪಾಟೀಲ ಜಾವಳಿ ಅವರು ಮಾತನಾಡಿ ‘ಪುಸ್ತಕಗಳ ಓದು ವ್ಯಕ್ತಿಯನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಬದುಕಿನ ಪರೀಕ್ಷೆಯಲ್ಲಿ ಪಾಸಾಗಲು ಓದುವುದು ಅತ್ಯಗತ್ಯ’ ಎಂದು ಹೇಳಿದರು.
‘ಇಂದಿನ ಮಕ್ಕಳು ಕನಸುಗಳಿಂದ ದೂರವಾಗುತ್ತಿದ್ದಾರೆ. ಮೌಲ್ಯಗಳ ಕುಸಿತವಾಗುತ್ತಿದ್ದು, ಮೊಬೈಲ್ ಮಾಯಾಲೋಕದಲ್ಲಿ ಮುಳುಗುತ್ತಿದ್ದಾರೆ. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅಕ್ಷರ ಬಿತ್ತುವುದು ಇಂದಿನ ಸವಾಲಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.
ಶಿವಶರಣ ಪಾಟೀಲ ಜಾವಳಿ ಅವರ ಕಾವ್ಯ ಕುರಿತು ವಿಶೇಷ ಉಪನ್ಯಾಸ ನೀಡಿದ ಡಾ. ಸೂರ್ಯಕಾಂತ ಪಾಟೀಲ, ‘ಹಸಿವು, ಬಡತನ, ಮಹಿಳಾ ಶೋಷಣೆ ಹಾಗೂ ಜಾತಿ ವ್ಯವಸ್ಥೆಯ ಕರಾಳತೆಯನ್ನು ತಮ್ಮ ಕವಿತೆಗಳಲ್ಲಿ ಪ್ರಬಲವಾಗಿ ಚಿತ್ರಿಸಿರುವ ಶಿವಶರಣ ಪಾಟೀಲ ಜಾವಳಿ ಈ ಭಾಗದ ಪ್ರಥಮ ಬಂಡಾಯ ಕವಿ’ ಎಂದು ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಸಿದ್ದರಾಮ ಹೊನ್ಕಲ್ ಆಶಯ ನುಡಿಗಳನ್ನಾಡಿದರು. ಚಕೋರ ಸಾಹಿತ್ಯ ವೇದಿಕೆ ಜಿಲ್ಲಾ ಸಂಚಾಲಕ ಡಾ. ಗವಿಸಿದ್ದಪ್ಪ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿದ್ಯಾರ್ಥಿನಿಯರಾದ ಜಯಶ್ರೀ ಹಾಗೂ ಕನ್ಯಾಕುಮಾರಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಕಾಶ ಮೋರಗೆ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಪ್ರಿಯದರ್ಶಿನಿ ಸ್ವಾಗತಿಸಿದರು, ಪ್ರೊ. ಸಿದ್ರಾಮಪ್ಪ ಬಣಗಾರ ಕಾರ್ಯಕ್ರಮ ನಿರೂಪಿಸಿದರು, ಡಾ. ಸುವರ್ಣಾ ಹಿರೇಮಠ ಅತಿಥಿಗಳ ಪರಿಚಯ ಮಾಡಿದರು, ಡಾ. ಅನುಸೂಯಾ ಪಾಟೀಲ ವಂದಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಟ್ಯಾಕ್ಟರ್ ಪಲ್ಟಿ: ಚಾಲಕ ಸ್ಥಳದಲ್ಲೇ ಸಾವು
ಕಾರ್ಯಕ್ರಮದಲ್ಲಿ ಲೇಖಕ ಹೂವಿನಹಳ್ಳಿ ನಾಗರಾಜ, ಡಿ.ಎಂ. ನದಾಫ್, ಡಾ. ರಾಜಕುಮಾರ ಮಾಳಗೆ, ಡಾ. ಶ್ರೀಶೈಲ ಮದಾನೆ, ಡಾ. ಶರಣಮ್ಮ ಪಾಟೀಲ, ಡಾ. ಆನಂದ ಸಿದ್ದಾಮಣಿ, ಡಾ. ಲಕ್ಷ್ಮೀಕಾಂತ ಹೂಗಾರ, ಪ್ರೊ. ಸುನಂದಾ ಶಂಕರ, ಡಾ. ಪದ್ಮರಾಜ ರಾಸಣಗಿ ಸೇರಿದಂತೆ ಕಾಲೇಜಿನ ಪ್ರಾಧ್ಯಾಪಕರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





