ದ್ವಿತೀಯ ಪಿಯುಸಿ ಪರೀಕ್ಷೆಯ ಕಲಾ ವಿಭಾಗದಲ್ಲಿ ನಗರದ ಸೃಷ್ಟಿ ಮಲ್ಲಿನಾಥ ಅವರು 600ಕ್ಕೆ 598 ಅಂಕಗಳನ್ನು ಪಡೆದು ರಾಜ್ಯ ಮಟ್ಟದಲ್ಲಿ ಟಾಪರ್ ಆಗಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ನಗರದ ಪ್ರತಿಷ್ಠಿತ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿಯಾಗಿರುವ ಸೃಷ್ಟಿ, ಈ ಸಾಧನೆಯ ಮೂಲಕ ಕಾಲೇಜಿನ ಇತಿಹಾಸದಲ್ಲೇ ಮೊದಲ ಬಾರಿಗೆ ಟಾಪರ್ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿನಿಯ ಈ ಸಾಧನೆಯನ್ನು ಗುರುತಿಸಿ ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಜಿಲ್ಲಾಡಳಿತದಿಂದ ಸನ್ಮಾನಿಸಿ ಪ್ರೋತ್ಸಾಹಿಸಿದರು.
ನಗರದ ಗಾಜಿಪುರ ನಿವಾಸಿಗಳಾದ ಹೋಟೆಲ್ ಉದ್ಯಮಿಗಳಾದ ಮಲ್ಲಿನಾಥ ಪಾಟೀಲ್ ಮತ್ತು ಸವಿತಾ ದಂಪತಿಯ ಪುತ್ರಿಯಾಗಿರುವ ಸೃಷ್ಟಿ, ಪಿಯು ಫಲಿತಾಂಶದಲ್ಲಿ ಹಿಂದುಳಿದಿದ್ದ ಜಿಲ್ಲೆಗೆ ಹೊಸ ಉತ್ಸಾಹ ತುಂಬಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | “ಮಾರಿಜಪ್ಪ” ಕಾದಂಬರಿ ಲೋಕಾರ್ಪಣೆ ಕಾರ್ಯಕ್ರಮ
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಶಶೀಲ್ ಜಿ. ನಮೋಶಿ, ಉಪಾಧ್ಯಕ್ಷ ರಾಜಾ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ. ಕೈಲಾಶ್ ಪಾಟೀಲ್, ಕಾಲೇಜಿನ ಸಂಯೋಜಕ ನಾಗಣ್ಣ ಘಂಟಿ, ಪ್ರಾಚಾರ್ಯ ಡಾ. ಮೋಹನರಾಜ್ ಪತ್ತಾರ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ವಿದ್ಯಾರ್ಥಿನಿಯ ಸಾಧನೆಗೆ ಅಭಿನಂದನೆ ತಿಳಿಸಿದ್ದಾರೆ.





