ಬಡವರಿಗೆ ಸೂರು ಒದಗಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಪ್ರಧಾನಮಂತ್ರಿ ಆವಾಸ್ ಯೋಜನೆ ಹಲವಾರು ಬಡ ಕುಟುಂಬಗಳಿಗೆ ಆಶ್ರಯವಾಗಬೇಕಿತ್ತು. ಆದರೆ ಈ ಯೋಜನೆಯಡಿ ಜೇವರ್ಗಿ ತಾಲೂಕಿನಲ್ಲಿ ಮನೆಗಳ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದ್ದು, ಗುತ್ತಿಗೆದಾರರ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳ ಮೌನದಿಂದ, ಇಂದು ನೂರಾರು ಬಡ ಕುಟುಂಬಗಳು ಮನೆ ಕಳೆದುಕೊಂಡು ಬಾಡಿಗೆ ಮನೆಗಳಲ್ಲಿ ಹಾಗೂ ಶೆಡ್‌ಗಳಲ್ಲಿ ದಿನ ಕಳೆಯುವಂತಾಗಿದೆ. ಮನೆ ಸಿಗುವ ಭರವಸೆಯಲ್ಲಿ ಹಳೆಯ ಮನೆಗಳನ್ನು ಕೆಡವಿದ ಫಲಾನುಭವಿಗಳು ಈಗ ತಮ್ಮ ಜೀವನದ ದೊಡ್ಡ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಜೇವರ್ಗಿ ತಾಲೂಕಿಗೆ 750 ಮನೆಗಳು ಮಂಜೂರಾಗಿದ್ದರೂ, ಮೂರು ವರ್ಷಗಳಾದರೂ ಅನೇಕ ಮನೆಗಳು ಇನ್ನೂ ಪೂರ್ಣಗೊಂಡಿಲ್ಲ. ಯೋಜನೆಯಡಿ ಸರ್ಕಾರದಿಂದ ಮನೆ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿದ್ದರೂ, ಗುತ್ತಿಗೆದಾರರು ಮತ್ತು ಕೆಲ ಅಧಿಕಾರಿಗಳು ಸೇರಿ ಅವ್ಯವಹಾರ ನಡೆಸಿದ್ದಾರೆ ಎಂದು ಫಲಾನುಭವಿಗಳು ಗಂಭೀರ ಆರೋಪ ಮಾಡಿದ್ದಾರೆ.
ಈ ದಿನ.ಕಾಮ್ನೊಂದಿಗೆ ಭೀಮ್ ಆರ್ಮಿ ಮುಖಂಡ ವಿಶ್ವರಾಧ್ಯ ಗೋಪಾಲಕರ್ ಮಾತನಾಡಿ, “ಮನೆ ನಿರ್ಮಾಣ ಸಾಮಗ್ರಿಗಳ ದರದಲ್ಲಿ ಭಾರೀ ಅಕ್ರಮ ನಡೆದಿದೆ. ಒಂದು ಟ್ರ್ಯಾಕ್ಟರ್ ಮರಳಿಗೆ ₹8,000ದಿಂದ ₹10,000ದ ವರೆಗೆ ಬಿಲ್ ಮಾಡಲಾಗುತ್ತಿದೆ. ₹300 ಮೌಲ್ಯದ ಸಿಮೆಂಟ್ ಚೀಲಕ್ಕೆ ₹400 ಬಿಲ್, ₹2,000 ಮೌಲ್ಯದ ಕಾಂಕ್ರೀಟ್‌ಗೆ ₹4,000ದಿಂದ ₹5,000ದ ವರೆಗೆ ಬಿಲ್ ತೋರಿಸಿ ಸರ್ಕಾರದ ಹಣ ದುರುಪಯೋಗ ನಡೆದಿದೆ ಎನ್ನಲಾಗಿದೆ. ಮನೆ ನಿರ್ಮಾಣಕ್ಕೆ ಬೇಕಾದ ಸಾಮಗ್ರಿಗಳನ್ನು ಸರಿಯಾಗಿ ಒದಗಿಸದೇ, ಕಡಿಮೆ ಪ್ರಮಾಣದ ಸಾಮಗ್ರಿ ನೀಡಿ ಬಜೆಟ್ ಮುಗಿದಿರುವುದಾಗಿ ಫಲಾನುಭವಿಗಳಿಗೆ ಹೇಳಲಾಗುತ್ತಿದೆ” ಎಂದು ಆರೋಪಿಸಿದರು.
ಇದರ ಜತೆಗೆ, ʼಮರಳು, ಸಿಮೆಂಟ್, ಕಾಂಕ್ರೀಟ್ ನಾವು ಕೊಡುತ್ತೇವೆ, ಆದರೆ ಕೂಲಿ, ಸೆಂಟರಿಂಗ್ ಹಾಗೂ ಇತರ ವೆಚ್ಚಗಳನ್ನು ನೀವು ಭರಿಸಬೇಕುʼ ಎಂದು ಗುತ್ತಿಗೆದಾರರು ಫಲಾನುಭವಿಗಳಿಗೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಬಡ ಕುಟುಂಬಗಳು ಸರ್ಕಾರವೇ ಸಂಪೂರ್ಣ ಮನೆ ಕಟ್ಟಿಕೊಡುತ್ತದೆ ಎಂಬ ನಿರೀಕ್ಷೆಯಲ್ಲಿ ಇದ್ದಾಗ, ಮಧ್ಯದಲ್ಲಿ ಈ ರೀತಿಯ ಹೆಚ್ಚುವರಿ ಖರ್ಚು ಹೊರಿಸಲು ಹೇಳುವುದರಿಂದ ಅವರು ಸಾಲದ ಹೊರೆ ಹೊತ್ತು ಮನೆ ಕಟ್ಟಿಕೊಳ್ಳುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಈ ದಿನ.ಕಾಮ್ ಜತೆಗೆ ಮಾತನಾಡಿದ ಸಿದ್ದು ಮುದಬಾಳ್, “750 ಮನೆಗಳಿಗೆ ಟೆಂಡರ್ ನೀಡಲಾಗಿದೆ. ಆದರೆ ಗುತ್ತಿಗೆದಾರರು ಬಡವರನ್ನು ಮೋಸಗೊಳಿಸಿದ್ದಾರೆ. ಮನೆ ಮಂಜೂರಾಗಿದೆ ಎಂಬ ನಂಬಿಕೆಯಲ್ಲಿ ಫಲಾನುಭವಿಗಳು ಹಳೆಯ ಮನೆಗಳನ್ನು ಕೆಡವಿ ಬಾಡಿಗೆ ಮನೆ ಸೇರಿದ್ದಾರೆ. ಬಳಿಕ ‘ನೀವೇ ಮನೆ ಕಟ್ಟಿಕೊಳ್ಳಿ, ನಂತರ ಹಣ ಕೊಡುತ್ತೇವೆ’ ಎಂದು ಹೇಳಿ ಬಡವರನ್ನು ಯಾಮಾರಿಸಿದ್ದಾರೆ. ಹಲವರು ಸಾಲ ಸೂಲ ಮಾಡಿ ಮನೆ ನಿರ್ಮಿಸಿಕೊಂಡಿದ್ದಾರೆ. ಬಡವರಿಗೆ ಸಿಗಬೇಕಿದ್ದ ಮನೆಗಳು ಗುತ್ತಿಗೆದಾರರ ಹಿತೈಷಿಗಳಿಗೆ ಅನುಕೂಲವಾಗುವಂತೆ ಮಾಡಲಾಗಿದೆ” ಎಂದು ಆರೋಪಿಸಿದರು.
ಫಲಾನುಭವಿ ಸೊಕ್ಕುಬಾಯಿ ತಮ್ಮ ನೋವು ಹಂಚಿಕೊಂಡು, “ಮೂರೂವರೆ ಲಕ್ಷ ರೂ. ಬಜೆಟ್ ಇದ್ದರೂ, ಎರಡು ಟ್ರ್ಯಾಕ್ಟರ್ ಮರಳು, ಎರಡು ಟ್ರಾಕ್ಟರ್ ಕಾಂಕ್ರೀಟ್ ಮತ್ತು 30 ಸಿಮೆಂಟ್ ಚೀಲ ಕೊಟ್ಟು ‘ಇದರಲ್ಲೇ ಮನೆ ಕಟ್ಟಿಕೊಳ್ಳಿ’ ಎನ್ನುತ್ತಾರೆ. ಮನೆ ನಿರ್ಮಾಣ ಅರ್ಧಕ್ಕೇ ನಿಂತರೂ ‘ನಿಮ್ಮ ಬಜೆಟ್ ಮುಗಿದಿದೆ’ ಎಂದು ಹೇಳುತ್ತಾರೆ. ನಾವು ಪ್ರಶ್ನಿಸಿದರೆ ‘ಅಷ್ಟು ತುರ್ತು ಇದ್ದರೆ ನೀವು ಸ್ವಂತ ಖರ್ಚಿನಲ್ಲಿ ಮನೆ ಕಟ್ಟಿಕೊಳ್ಳಿ’ ಎಂದು ಗುತ್ತಿಗೆದಾರರು ನಿರ್ಲಕ್ಷ್ಯವಾಗಿ ಉತ್ತರಿಸುತ್ತಾರೆ” ಎಂದರು.
ಮನೆ ಮಂಜೂರಾಗಿ ಮೂರು ವರ್ಷಗಳಾದರೂ ಮನೆ ನಿರ್ಮಾಣವಾಗದೆ ಬಾಡಿಗೆ ಮನೆಯಲ್ಲಿ ವಾಸಿಸುವ ಚನ್ನಮ್ಮ, “ಒಂದು ವರ್ಷದೊಳಗೆ ಮನೆ ಕಟ್ಟಿಕೊಡುತ್ತೇವೆಂದು ಹೇಳಿ ನಮ್ಮ ಹಳೆಯ ಮನೆ ಕೆಡವಿಸಿದರು. ಈಗ ಮೂರು ವರ್ಷವಾದರೂ ಮನೆ ಪೂರ್ಣಗೊಂಡಿಲ್ಲ. ಬಾಡಿಗೆ ಮನೆಗೆ ಹಣ ಕಟ್ಟುತ್ತ ಬದುಕು ದುಸ್ತರವಾಗಿದೆ. ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ” ಎಂದು ಕಣ್ಣೀರಿಟ್ಟರು.
ಇನ್ನೊಬ್ಬ ಫಲಾನುಭವಿ ಪಾರ್ವತಿ ಮಾತನಾಡಿ, “₹30,000 ಡಿಡಿ ಕಟ್ಟಿಸಿಕೊಂಡರು. ಆದರೆ ಮನೆ ನಿರ್ಮಾಣ ಮಾಡಿಲ್ಲ. ಕೇಳಿದರೆ ಗುತ್ತಿಗೆದಾರರು ಉಲ್ಟಾ ಮಾತಾಡುತ್ತಾರೆ. ನಾವು ಮೂರು ವರ್ಷಗಳಿಂದ ಶೆಡ್‌ನೊಳಗೆ ಹಾವು-ಚೇಳಿನ ಭಯದಲ್ಲಿ ಜೀವನ ನಡೆಸುತ್ತಿದ್ದೇವೆ” ಎಂದು ಬೇಸರ ವ್ಯಕ್ತಪಡಿಸಿದರು.
ಕಲಬುರಗಿ ಬ್ರಹ್ಮಪುರ ನಿವಾಸಿ ರಮೇಶ್ ಎಂ. ಸರಡಗಿ ಮಾತನಾಡಿ, “ಮನೆ ಮಂಜೂರಾಗಿದೆ ಎಂದು ಹೇಳಿ ಹಳೆಯ ಮನೆ ಕೆಡವಿಸಿದರು. ಈಗ ನಾವು ಬೀದಿಪಾಲಾಗಿದ್ದೇವೆ. ಗುತ್ತಿಗೆದಾರರಿಗೆ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಕಚೇರಿಗೆ ಅಲೆದಾಡಿದರೂ ಅಧಿಕಾರಿಗಳು ಸ್ಪಂದಿಸುವುದಿಲ್ಲ. ಕಳಪೆ ಕಾಮಗಾರಿಗೂ ಅಧಿಕಾರಿಗಳು ಕಣ್ಣುಮುಚ್ಚಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಫಲಾನುಭವಿಗಳ ಪ್ರಕಾರ, “ಗುತ್ತಿಗೆದಾರರು ಮತ್ತು ಅಧಿಕಾರಿಗಳ ಮಧ್ಯೆ ಸಂಧಾನದಿಂದ ಕಳಪೆ ಕಾಮಗಾರಿ ನಡೆಯುತ್ತಿದೆ. ಕಟ್ಟಿದ ಮನೆಗಳ ಗುಣಮಟ್ಟ ಪರಿಶೀಲನೆ ಮಾಡದೆ ಬಿಲ್ ಪಾಸ್ ಮಾಡಲಾಗುತ್ತಿದೆ. ಬಡವರ ಹೆಸರಿನಲ್ಲಿ ಬಿಡುಗಡೆಯಾಗುವ ಸರ್ಕಾರದ ಅನುದಾನವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ” ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ಕುರಿತು ಅನೇಕ ಬಾರಿ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಫಲಾನುಭವಿಗಳು ದೂರಿದ್ದಾರೆ. “ಮೇನ್ ಕಾಂಟ್ರ್ಯಾಕ್ಟರ್ ಮತ್ತು ಸಬ್ ಕಾಂಟ್ರ್ಯಾಕ್ಟರ್ ಇಬ್ಬರೂ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಸ್ಲಂ ಬೋರ್ಡ್ ಕಚೇರಿಗೆ ಹೋದರೂ ಪ್ರಯೋಜನವಿಲ್ಲ” ಎಂಬುದು ಅವರ ಅಳಲು.
ಬಡವರಿಗೆ ಮನೆ ನೀಡುವ ಉದ್ದೇಶದ ಯೋಜನೆ, ಮಧ್ಯವರ್ತಿಗಳ ದುರುಪಯೋಗದಿಂದ ಬಡವರ ಬದುಕನ್ನೇ ಹಾಳು ಮಾಡುತ್ತಿದೆ. ಮನೆ ಸಿಗುತ್ತದೆ ಎಂಬ ಭರವಸೆಯಲ್ಲಿ ಹಳೆಯ ಮನೆ ಕಳೆದುಕೊಂಡ ಫಲಾನುಭವಿಗಳು ಇಂದು ಬಾಡಿಗೆ ಮನೆಗಳಲ್ಲಿ, ಶೆಡ್‌ಗಳಲ್ಲಿ ಮತ್ತು ಅಸುರಕ್ಷಿತ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಸರ್ಕಾರದ ಜನಪರ ಯೋಜನೆಗಳು ಜಾರಿಗೆ ಬಂದಾಗ, ಅವುಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಇಲ್ಲದಿದ್ದರೆ, ಅದರ ನೇರ ಹೊರೆ ಬಡ ಜನರ ಮೇಲೆಯೇ ಬೀಳುತ್ತದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ.
ಇದನ್ನೂ ಓದಿದ್ದೀರಾ? NRLM ಯೋಜನೆ | ಮೃತರ ಸಹಿ ಬಳಸಿ ಲಕ್ಷಾಂತರ ರೂ. ವಿತ್‌ಡ್ರಾ: ಕಣ್ಮುಚ್ಚಿ ಕುಳಿತರೇ ಬ್ಯಾಂಕ್ ಮ್ಯಾನೇಜರ್?
ಹೀಗಾಗಿ, ಪ್ರಧಾನಮಂತ್ರಿ ಆವಾಸ್ ಯೋಜನೆ ಮನೆ ನಿರ್ಮಾಣದಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಲೋಕಾಯುಕ್ತ ಅಥವಾ ಉನ್ನತ ಮಟ್ಟದ ತನಿಖೆ ನಡೆಸಿ, ಗುತ್ತಿಗೆದಾರರು ಹಾಗೂ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಜತೆಗೆ ಬಡ ಕುಟುಂಬಗಳಿಗೆ ತಕ್ಷಣ ಮನೆ ನಿರ್ಮಾಣ ಸಂಪೂರ್ಣಗೊಳಿಸಿ ನ್ಯಾಯ ಒದಗಿಸಬೇಕು ಎಂಬುದು ಫಲಾನುಭವಿಗಳ ಆಗ್ರಹವಾಗಿದೆ.

ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.




