ರಾಜ್ಯದಲ್ಲಿ ಎಸ್ಐಆರ್ ವಿರುದ್ಧ ಜಾತ್ಯತೀತ ಪಕ್ಷಗಳು, ಜನಪರ ಸಂಘಟನೆಗಳು ಹಾಗೂ ಪ್ರಗತಿಪರ ವೇದಿಕೆಗಳು ಮೇ 30ರಂದು “ಕರ್ನಾಟಕ ಪ್ರತಿರೋಧ” ಹೆಸರಿನಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಕರೆ ನೀಡಿದ್ದು, ಅದರ ಭಾಗವಾಗಿ ಕಲಬುರಗಿ ನಗರದಲ್ಲೂ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರತಿರೋಧ ವೇದಿಕೆ ಮುಖಂಡರು ತಿಳಿಸಿದ್ದಾರೆ.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎದ್ದೇಳು ಕರ್ನಾಟಕ ವಲಯ ಸಂಚಾಲಕ ಲಕ್ಷ್ಮಣ ಮಂಡಲಗೇರಾ, ‘ಕೇಂದ್ರ ಚುನಾವಣಾ ಆಯೋಗವು ಮತದಾರರ ತೀವ್ರ ಪರಿಷ್ಕರಣೆ (ಎಸ್ಐಆರ್) ಹೆಸರಿನಲ್ಲಿ ಕೋಟ್ಯಾಂತರ ಜನರ ಮತದಾನದ ಹಕ್ಕು ಕಸಿಯಲು ಮುಂದಾಗಿದೆ’ ಎಂದು ಗಂಭೀರ ಆರೋಪ ಮಾಡಿದರು.
‘ಹಲವು ರಾಜ್ಯಗಳಲ್ಲಿ ಈಗಾಗಲೇ ಜಾರಿಗೊಂಡಿರುವ ಎಸ್ಐಆರ್ ಪ್ರಕ್ರಿಯೆಯಿಂದ ಲಕ್ಷಾಂತರ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೆ. ಪ್ರತಿಯೊಬ್ಬ ಮತದಾರರು ಮರುನೋಂದಣಿ ಮಾಡಿಕೊಳ್ಳಬೇಕು ಹಾಗೂ 2002ರ ಮತದಾರರ ಪಟ್ಟಿಯಲ್ಲಿ ಹೆಸರು ಇತ್ತೇ ಎಂಬುದನ್ನು ಸಾಬೀತುಪಡಿಸಬೇಕು ಎನ್ನುವಂತಹ ಸಂಕೀರ್ಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಇದರಿಂದ ಗ್ರಾಮೀಣ ಬಡವರು, ಕೂಲಿ ಕಾರ್ಮಿಕರು, ವಿವಾಹಿತ ಮಹಿಳೆಯರು, ದಲಿತರು, ಆದಿವಾಸಿಗಳು ಹಾಗೂ ಅಲ್ಪಸಂಖ್ಯಾತ ಸಮುದಾಯದ ಜನರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ’ ಎಂದು ದೂರಿದರು.
“ಲಾಜಿಕಲ್ ಡಿಸ್ಕ್ರೆಪೆನ್ಸಿ” ಎಂಬ ಸಾಫ್ಟ್ವೇರ್ ಮೂಲಕ ಸಣ್ಣಪುಟ್ಟ ದಾಖಲೆ ವ್ಯತ್ಯಾಸವನ್ನೇ ಆಧಾರವನ್ನಾಗಿ ಮಾಡಿಕೊಂಡು ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗುತ್ತಿದೆ. ದಾಖಲೆಗಳಲ್ಲಿ ಇರುವ ಸಣ್ಣ ಅಕ್ಷರದ ತಪ್ಪುಗಳು ಅಥವಾ ವಿಳಾಸದ ವ್ಯತ್ಯಾಸಗಳನ್ನೇ ನೆಪವನ್ನಾಗಿ ಮಾಡಿಕೊಂಡು ಜನರ ಮತದಾನದ ಹಕ್ಕು ಕಸಿಯಲಾಗುತ್ತಿದೆ’ ಎಂದು ಅವರು ಆರೋಪಿಸಿದರು.
‘ಎಸ್ಐಆರ್ ಪ್ರಕ್ರಿಯೆಯ ನಿಜವಾದ ಉದ್ದೇಶ ನುಸುಳುಕೋರರನ್ನು ಪತ್ತೆಹಚ್ಚುವುದು ಅಲ್ಲ. ವಿರೋಧ ಪಕ್ಷಗಳಿಗೆ ಬೆಂಬಲ ನೀಡುವ ಸಮುದಾಯಗಳ ಮತಗಳನ್ನು ಕಡಿತಗೊಳಿಸುವ ರಾಜಕೀಯ ಹುನ್ನಾರವೇ ಇದರ ಹಿಂದೆ ಅಡಗಿದೆ’ ಎಂದು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
‘ಜನವಿರೋಧಿ ಎಸ್ಐಆರ್ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು. ಮತದಾರರ ಪಟ್ಟಿಯನ್ನು ಸಂಪೂರ್ಣ ಪಾರದರ್ಶಕವಾಗಿ ಸಾರ್ವಜನಿಕ ಪರಿಶೀಲನೆಗೆ ಲಭ್ಯ ಮಾಡಬೇಕು. ಗ್ರಾಮಸಭೆ ಹಾಗೂ ವಾರ್ಡ್ ಸಭೆಗಳ ಮೂಲಕ ಸ್ಥಳೀಯ ಮಟ್ಟದಲ್ಲಿ ಪರಿಶೀಲನೆ ನಡೆಸಬೇಕು. ಅಲ್ಲದೆ ಮತದಾರರಿಗೆ ಆಕ್ಷೇಪಣೆ ಹಾಗೂ ಅಪೀಲು ಸಲ್ಲಿಸಲು ಕನಿಷ್ಠ ಆರು ತಿಂಗಳ ಕಾಲಾವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.
‘ರಾಜ್ಯ ಸರ್ಕಾರವು ಅಗತ್ಯವಿದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗಿ ರಾಜ್ಯದ ಮತದಾರರ ಹಕ್ಕುಗಳನ್ನು ರಕ್ಷಿಸಬೇಕು. ಜೊತೆಗೆ ವಿಶೇಷ ಗ್ರಾಮಸಭೆ ಹಾಗೂ ವಾರ್ಡ್ ಸಭೆಗಳನ್ನು ನಡೆಸಿ ಎಲ್ಲಾ ಅರ್ಹ ಮತದಾರರಿಗೆ “ಸ್ಮಾರ್ಟ್ ಕಾರ್ಡ್” ವಿತರಿಸುವ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.
“ಇದು ಬಿಹಾರವೂ ಅಲ್ಲ, ಬಂಗಾಳವೂ ಅಲ್ಲ; ಬಸವಣ್ಣರ ಕರ್ನಾಟಕ” ಎಂಬ ಘೋಷಣೆಯೊಂದಿಗೆ ನಡೆಯಲಿರುವ “ಕರ್ನಾಟಕ ಪ್ರತಿರೋಧ” ಮೇ 30ರಂದು ಪ್ರತಿಭಟನೆಯಲ್ಲಿ ಸಾಹಿತಿಗಳು, ಚಿಂತಕರು, ಕಲಾವಿದರು, ವಿದ್ಯಾರ್ಥಿ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಹಾಗೂ ವಿವಿಧ ಜನಪರ ವೇದಿಕೆಗಳ ಕಾರ್ಯಕರ್ತರು ಭಾಗವಹಿಸಲಿದ್ದಾರೆ’ ಎಂದು ಅವರು ತಿಳಿಸಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಸಿದ್ದರಾಮಯ್ಯ ಬೆಂಬಲಿಸಿ ಪ್ರತಿಭಟನೆ: ವಿಷ ಕುಡಿಯಲು ಯತ್ನಿಸಿದ ಅಭಿಮಾನಿಗಳು
ಸುದ್ದಿಗೋಷ್ಠಿಯಲ್ಲಿ ಸಂವಿಧಾನ ರಕ್ಷಣಾ ಸಮಿತಿ ಮುಖಂಡ ಭೀಮರಾಬ್ ಟಿ.ಟಿ., ರೇಣುಕಾ ಸಿಂಗೆ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಸಲೀಂ ಅಹ್ಮದ್ ಚಿತ್ತಾಪುರ, ಮೈಲಾರಿ ದೊಡ್ಡಮನಿ, ಬಾಲಾಜಿ ಕಾಂಬಳೆ, ಅನುರಾಧ, ಲಕ್ಷ್ಮೀ ಸೇರಿದಂತೆ ಹಲವರು ಉಪಸ್ಥಿತರಿದ್ದರು.





