ರಾಜ್ಯದಲ್ಲೂ ಎಸ್ಐಆರ್ ಪ್ರಕ್ರಿಯೆಗೆ ದಿನ ಗಣನೆ ಶುರುವಾಗಿದ್ದು, ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಸಂವಿಧಾನ ಮತ್ತು ದೇಶ ವಿರೋಧಿಯಾಗಿರುವ ಕೇಂದ್ರ ಚುನಾವಣಾ ಆಯೋಗದ SIR ರದ್ದಾಗಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಬೃಹತ್ ಹೋರಾಟಕ್ಕೆ ಕೊಪ್ಪಳ ಜಿಲ್ಲೆ ಸಜ್ಜಾಗಿದೆ. ಇದೇ ತಿಂಗಳ 30ರಂದು ಶನಿವಾರ ಬೆಳಿಗ್ಗೆ 10ರ ಸುಮಾರಿಗೆ ಕೊಪ್ಪಳದ ಗಡಿಯಾರ ಕಂಬದಿಂದ ಅಶೋಕ ಸರ್ಕಲ್ವರಗೆ ಬೃಹತ್ ಪ್ರತಿಭಟನೆ ರ್ಯಾಲಿ ನಡೆಯಲಿದೆ.
ಎಸ್ಐಆರ್ ಎನ್ನುವುದು ಪ್ರತಿ ರಾಜ್ಯದಲ್ಲಿ ಕ್ಷುಲ್ಲಕ ಕಾರಣ ನೀಡಿ ಲಕ್ಷಾಂತರ ಜನರನ್ನು ಮತದಾನದ ಪಟ್ಟಿಯಿಂದ ಹೊರಗಿಡುವ ಕುತಂತ್ರವಾಗಿದೆ. ಎಸ್ಐಆರ್ ಪ್ರಕ್ರಿಯೆ ಮೂಲಕ ಅಲ್ಪಸಂಖ್ಯಾರು ಹಾಗೂ ಜಾತ್ಯತೀತ ಮತದಾರರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಹೀಗಾಗಿ, ಜನ ವಿರೋಧಿ ಎಸ್ಐಆರ್ ಪ್ರಕ್ರಿಯೆಯನ್ನು ನಿಲ್ಲಿಸಬೇಕು. ಜನಸ್ನೇಹಿ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯನ್ನು ಜಾರಿಗೆ ತರಬೇಕು. ಕರಡು ಪಟ್ಟಿ ತಯಾರಾದ ಮೇಲೆ ಕಡ್ಡಾಯವಾಗಿ ಗ್ರಾಮಸಭೆ ಮತ್ತು ವಾರ್ಡ್ ಸಭೆಗಳನ್ನು ಕರೆದು, ಆ ಪಟ್ಟಿ ಸಾರ್ವಜನಿಕ ಪರಿಶೀಲನೆಗೆ ಒಳಪಡಬೇಕು. ಮುಕ್ತವಾಗಿ ತಿದ್ದುಪಡಿಗಳನ್ನು ಸಂಗ್ರಹಿಸಿದ ನಂತರವೇ ಅಂತಿಮಗೊಳಿಸಬೇಕು. ಜನರು ದೂರದ ಊರುಗಳಿಗೆ ದುಡಿಯಲು ಹೋಗಿರುವುದರಿಂದ ಕೂಡಲೇ ದಾಖಲೆಗಳನ್ನು ಪಡೆಯುವುದು ಸಾಧ್ಯವಿಲ್ಲ. ಹೀಗಾಗಿ, ಅಪೀಲ್ ಸಲ್ಲಿಕೆಗೆ ಮತ್ತು ಪರಿಶೀಲನೆಗೆ ಕನಿಷ್ಠ ಆರು ತಿಂಗಳು ಸಮಯಾವಕಾಶ ಇರಬೇಕು ಎಂದು ಹೋರಾಟಗಾರರು ಆಗ್ರಹಿಸಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಸವಕಲ್ಯಾಣ | ಎಸ್ಐಆರ್ ವಿರೋಧಿಸಿ ಮೇ 30ಕ್ಕೆ ಪ್ರತಿಭಟನೆ : ಸಂದೀಪ ಮುಕಿಂದೆ
ಕೊಪ್ಪಳದಲ್ಲಿ ನಡೆಯುವ ಈ ಬೃಹತ್ ಚಳವಳಿಯಲ್ಲಿ ಸಾಹಿತಿಗಳು, ಚಿಂತಕರು, ಪ್ರಗತಿಪರ ಸಂಘಟನೆಗಳು, ಜಾತ್ಯತೀತ ಪಕ್ಷಗಳ ಮುಖಂಡರು ಸೇರಿದಂತೆ ಸಾವಿರಾರು ಜನರು ಭಾಗಿಯಾಗಲಿದ್ದಾರೆ.




