ಈ ವರ್ಷದ ಮುಂಗಾರು ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ಪರಿಷ್ಕರಿಸಿದೆ. ಈ ಹಿಂದೆ ಅಂದಾಜು ಮಾಡಿದ್ದಕ್ಕಿಂತಲೂ ಈ ಬಾರಿ ಮಳೆಯ ಪ್ರಮಾಣ ಇನ್ನಷ್ಟೂ ಕಡಿಮೆಯಾಗಲಿದೆ ಎಂದು ಶುಕ್ರವಾರ ಮುನ್ಸೂಚನೆಯಲ್ಲಿ ತಿಳಿಸಿದೆ.
ಈ ಹಿಂದೆ ಏಪ್ರಿಲ್ 13ರಂದು ಹೊರಡಿಸಲಾದ ಮುಂಗಾರು ಮುನ್ಸೂಚನೆಯಲ್ಲಿ ದೀರ್ಘಾವಧಿಯ ಸರಾಸರಿ (LPA) ಮಳೆಯ ಶೇ.92ರಷ್ಟು ಮುಂಗಾರು ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿತ್ತು. ಆದರೆ ಈಗ ಈ ಶೇಕಡವಾರು ಪ್ರಮಾಣವನ್ನು ಹವಾಮಾನ ಇಲಾಖೆ ಇನ್ನಷ್ಟು ಕಡಿಮೆ ಮಾಡಿದೆ. ಈ ಮುಂಗಾರಿನಲ್ಲಿ ದೀರ್ಘಾವಧಿಯ ಸರಾಸರಿ ಮಳೆ ಪ್ರಮಾಣದ ಶೇ.90ರಷ್ಟು ಮಾತ್ರ ಮಳೆಯಾಗಲಿದೆ ಎಂದು ಹೇಳಿದೆ.
ಇದನ್ನು ಓದಿದ್ದೀರಾ? ಎರಡು ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
ಇನ್ನು ಐಎಂಡಿ ಪ್ರಕಾರ ಈಶಾನ್ಯ ಭಾರತದಲ್ಲಿ ಈ ಮುಂಗಾರಿನಲ್ಲಿ ಸಾಮಾನ್ಯ ಮಳೆಯಾಗುವ ನಿರೀಕ್ಷೆಯಿದೆ. ಆದರೆ ದೇಶದ ಇತರ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲಿದೆ.
ದೇಶದಲ್ಲಿ ಕೃಷಿ ಮತ್ತು ಜಲ ಸಂಪನ್ಮೂಲಗಳಿಗೆ ನಿರ್ಣಾಯಕವಾದ ಮುಂಗಾರು ಸಾಮಾನ್ಯವಾಗಿ ಜೂನ್ನಿಂದ ಸೆಪ್ಟೆಂಬರ್ವರೆಗೆ ಇರುತ್ತದೆ. 2025ರ ಮುಂಗಾರು ಅವಧಿಯು ಅಧಿಕೃತವಾಗಿ ನಾಲ್ಕು ತಿಂಗಳುಗಳ ಕಾಲ (ಜೂನ್ನಿಂದ ಸೆಪ್ಟೆಂಬರ್) ಇತ್ತು. ಆದರೆ ಮುಂಗಾರು ಮಾರುತಗಳ ಆರಂಭ ಮತ್ತು ನಿರ್ಗಮನದ ಪ್ರಕ್ರಿಯೆಯನ್ನು ಪರಿಗಣಿಸಿದರೆ ಕಳೆದ ವರ್ಷ ಸುಮಾರು ಐದು ತಿಂಗಳಿಗೂ ಹೆಚ್ಚು ಕಾಲ ಮುಂಗಾರು ಸಕ್ರಿಯವಾಗಿತ್ತು.
ಸಾಮಾನ್ಯವಾಗಿ ಜೂನ್ 1ಕ್ಕೆ ಆರಂಭವಾಗಬೇಕಿದ್ದ ಮುಂಗಾರು, 2025ರಲ್ಲಿ ಎಂಟು ದಿನ ಮುಂಚಿತವಾಗಿ ಅಂದರೆ ಮೇ 24ಕ್ಕೆ ಕೇರಳ ಕರಾವಳಿಯನ್ನು ಪ್ರವೇಶಿಸಿತ್ತು. ಜೂನ್ 29ರ ವೇಳೆಗೆ ಇಡೀ ದೇಶವನ್ನು ಆವರಿಸಿಕೊಂಡಿತ್ತು. ವಾಯುವ್ಯ ಭಾರತದಿಂದ ಸೆಪ್ಟೆಂಬರ್ 14ರಂದು ಮುಂಗಾರು ಮಾರುತಗಳು ನಿರ್ಗಮಿಸಲು ಆರಂಭಿಸಿದ್ದು ಅಕ್ಟೋಬರ್ 16ರ ವೇಳೆಗೆ ಸಂಪೂರ್ಣವಾಗಿ ನಿರ್ಗಮಿಸಿದವು.
ಆದರೆ ಈ ಬಾರಿ ಮುಂಗಾರು ಜೂನ್ 2 ರಿಂದ ಜೂನ್ 4ರ ನಡುವೆ ಕೇರಳ ಕರಾವಳಿಯನ್ನು ಪ್ರವೇಶಿಸುವ ಸಾಧ್ಯತೆಯಿದೆ. ಆರಂಭದಲ್ಲಿ ಮೇ 26ರಂದೇ ಮುಂಗಾರು ಪ್ರವೇಶಿಸಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಬಂಗಾಳ ಕೊಲ್ಲಿಯಲ್ಲಿ ಉಂಟಾದ ಹವಾಮಾನ ವೈಪರೀತ್ಯ ಮತ್ತು ಗಾಳಿಯ ದಿಕ್ಕಿನ ಬದಲಾವಣೆಯಿಂದಾಗಿ ಮುಂಗಾರು ಪ್ರವೇಶ ಕೊಂಚ ವಿಳಂಬವಾಗಿದೆ.




