ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೊಡಗು ಅರೇಬಿಕಾ ಮತ್ತು ಮಂಡ್ಯ ತಂಡಗಳು ಜಂಟಿ ಚಾಂಪಿಯನ್ ಪ್ರಶಸ್ತಿ ಪಡೆದವು.
ಮಡಿಕೇರಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆದ ಪಂದ್ಯಾವಳಿಯ ಅಂತಿಮ ಹಂತದಲ್ಲಿ ಭಾರಿ ಮಳೆ ಹಾಗೂ ಕತ್ತಲಿನಿಂದ ಪ್ಲೇ ಆಫ್ ಪಂದ್ಯಗಳನ್ನು ನಡೆಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಫೈನಲ್ ಪ್ರವೇಶಿಸಿದ್ದ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಯಿತು.
ಚಾಂಪಿಯನ್ ಟ್ರೋಫಿ ನಿರ್ಧರಿಸಲು ಕಾರುಗಳ ಹೆಡ್‌ಲೈಟ್ ಬೆಳಕಿನಲ್ಲಿ ಬಾಲ್ ಔಟ್ ಪ್ರಕ್ರಿಯೆ ನಡೆಸಲಾಯಿತು. ಇದರಲ್ಲಿ 1-0 ಅಂತರದಲ್ಲಿ ಮಂಡ್ಯ ತಂಡ ಗೆದ್ದು ಟ್ರೋಫಿ ತನ್ನದಾಗಿಸಿಕೊಂಡಿತು. ವಿಜೇತ ಹಾಗೂ ರನ್ನರ್ ಅಪ್ ತಂಡಗಳಿಗೆ ನಿಗದಿಯಾಗಿದ್ದ ₹1.50 ಲಕ್ಷ ನಗದು ಬಹುಮಾನವನ್ನು ಸಮಾನವಾಗಿ ಹಂಚಲಾಯಿತು. ಬಾಗಲಕೋಟೆ ತೃತೀಯ ಹಾಗೂ ಚಿಕ್ಕಬಳ್ಳಾಪುರ ಚತುರ್ಥ ಸ್ಥಾನ ಪಡೆದವು. ಕೊಡಗಿನ ಎರಡು ತಂಡಗಳು ಸೇರಿದಂತೆ ಒಟ್ಟು 24 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.
ಬಹುಮಾನ ವಿತರಣಾ ಸಮಾರಂಭದಲ್ಲಿ ಶಾಸಕರಾದ ಎ.ಎಸ್. ಪೊನ್ನಣ್ಣ ಹಾಗೂ ಡಾ. ಮಂತರ್ ಗೌಡ ಮಾತನಾಡಿ, ಪತ್ರಕರ್ತರು ಸಂಘಟಿತರಾಗಿ ಸಮಾಜದ ಸದೃಢತೆಗೆ ಶ್ರಮಿಸಬೇಕು. ಕ್ರೀಡೆ ಜಾತಿ, ಭೇದಗಳಿಲ್ಲದೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿಯಾಗಿದೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಡಗು ಜಿಲ್ಲೆ ಅತ್ಯಂತ ವ್ಯವಸ್ಥಿತವಾಗಿ ಪಂದ್ಯಾವಳಿ ಆಯೋಜಿಸಿದೆ. ಹವಾಮಾನ ವೈಪರೀತ್ಯದ ನಡುವೆಯೂ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿರುವುದು ಶ್ಲಾಘನೀಯ ಎಂದರು.
ರಿಪಬ್ಲಿಕ್ ನೆಟ್‌ವರ್ಕ್ ಅಧ್ಯಕ್ಷ ಚೇರಂಡ ಕಿಶನ್ ಮಾದಪ್ಪ, ಮಾಜಿ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಉದ್ಯಮಿಗಳಾದ ಅವರೆಮಾದಂಡ ಶರಣ್ ಪೂಣಚ್ಚ, ಎಡಿಕೇರಿ ಪ್ರಸನ್ನ ಮಾತನಾಡಿದರು.
ಫೈನಲ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಮಂಡ್ಯದ ದಿಲೀಪ್, ಉತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನು ಹಾಸನದ ಅಭಿಜಿತ್, ಉತ್ತಮ ಬೌಲರ್ ಪ್ರಶಸ್ತಿಯನ್ನು ಬಾಗಲಕೋಟೆಯ ಪರಶುರಾಮ್ ಸನಗಿ, ಉತ್ತಮ ಕ್ಯಾಚ್ ಪ್ರಶಸ್ತಿಯನ್ನು ಕೊಡಗು ಅರೇಬಿಕಾದ ಅಖಿಲೇಶ್, ಉತ್ತಮ ವಿಕೆಟ್ ಕೀಪರ್ ಪ್ರಶಸ್ತಿಯನ್ನು ಮಂಡ್ಯದ ನಂದನ್ ರಾಮಕೃಷ್ಣ ಹಾಗೂ ಉತ್ತಮ ಫೀಲ್ಡರ್ ಪ್ರಶಸ್ತಿಯನ್ನು ಕೊಡಗು ಅರೇಬಿಕಾದ ಇಸ್ಮಾಯಿಲ್ ಕಂಡಕರೆ ಪಡೆದರು. ಚಿಕ್ಕಮಗಳೂರು ತಂಡ ಉತ್ತಮ ತಂಡ ಪ್ರಶಸ್ತಿ ಪಡೆದರೆ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಬಾಗಲಕೋಟೆಯ ಮುತ್ತು ಪಡೆದುಕೊಂಡರು.
ಈ ವಿಶೇಷ ವರದಿ ಓದಿದ್ದೀರಾ? ಕಬ್ಬು ಬೆಳೆಗಾರರ ಬದುಕಿಗೆ ಸಿಹಿಯಾಗದ ಕಬ್ಬಿನ ಬೆಲೆ!
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಶಶಿಧರ್, ವಾರ್ತಾಧಿಕಾರಿ ಚಿನ್ನಸ್ವಾಮಿ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ಸೇರಿದಂತೆ ಪದಾಧಿಕಾರಿಗಳು ಇದ್ದರು.





