ಕಾಂಗ್ರೆಸ್ಸಿಗರನ್ನು ತುಂಡು ತುಂಡಾಗಿ ಕತ್ತರಿಸಿ ಅರಬ್ಬಿ ಸಮುದ್ರಕ್ಕೆ ಎಸೆಯಬೇಕು ಎಂಬ ಹೇಳಿಕೆ ನೀಡಿರುವ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಕೊಲೆ ಬೆದರಿಕೆ ಪ್ರಕರಣ ದಾಖಲಿಸುವಂತೆ ಕೋಲಾರ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ವಿ.ಗೌತಮ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೋಲಾರದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿ ಜೀವ ಬೆದರಿಕೆಯೊಡ್ಡಿದ್ದಾರೆ. ಕೂಡಲೇ ಎಫ್ ಐ ಆರ್ ದಾಖಲಿಸಿಕೊಂಡು ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಎಂ.ಎಲ್. ಅನಿಲ್ ಕುಮಾರ್ ಮಾತನಾಡಿ, ಛಲವಾದಿ ನಾರಾಯಣಸ್ವಾಮಿ ನೀಡಿರುವ ಹೇಳಿಕೆ ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ಧಕ್ಕೆ ತರುವಂತದ್ದಾಗಿದೆ. ವ್ಯಕ್ತಿಯೊಬ್ಬರನ್ನು ಕತ್ತರಿಸುವುದಾಗಿ ಹೇಳಿಕೆ ನೀಡಿದರೆ ಯಾವ ಸೆಕ್ಷನ್ ಅಡಿ ಪ್ರಕರಣ ದಾಖಲಾಗುತ್ತದೆ ಹೇಳಿ? ಅವರ ವಿರುದ್ಧ ಕೊಲೆ ಬೆದರಿಕೆ ಹಾಗೂ ರಾಷ್ಟ್ರಪತಿ ಅಂಗಳದಲ್ಲಿರುವ ದ್ವೇಷಭಾಷಣ ತಡೆ ಕಾಯ್ದೆಯಡಿ ಕಠಿಣ ಮೊಕದ್ದಮೆ ಹೂಡಬೇಕು. ಈ ಸಂಬಂಧ ಠಾಣೆಯಲ್ಲಿ ಒಟ್ಟು 3 ದೂರುಗಳನ್ನು ನೀಡಲಾಗಿದೆ ಎಂದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇವರಿಬ್ಬರ ಮಾತುಗಳನ್ನು ಕೇಳಿದರೆ ನಿಜವಾದ ಅರಾಜಕತೆ ಬಿಜೆಪಿಯಲ್ಲಿದೆ ಎಂಬುದು ಸ್ಪಷ್ಟವಾಗುತ್ತದೆ. ನಾಲಿಗೆ ಹರಿಬಿಡುವ ಇಂತಹ ನಾಯಕರ ವಿರುದ್ಧ ಸೂಕ್ತ ಕ್ರಮ ಜರುಗಿಸದಿದ್ದರೆ ಕಾಂಗ್ರೆಸ್ ಪಕ್ಷದಿಂದ ದೇಶದಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಕೇಳುವುದು ತಪ್ಪೇ? ಬ್ಯಾಲೆಟ್ ಪೇಪರ್ ನಲ್ಲಿ ಲೋಕಸಭಾ ಚುನಾವಣೆ ನಡೆಸಿ ಎಂದು ಆಗ್ರಹಿಸುವುದರಲ್ಲಿ ತಪ್ಪೇನಿದೆ? ಇದರಲ್ಲಿ ಅರಾಜಕತೆ ಎಲ್ಲಿದೆ? 2024ರ ಲೋಕಸಭಾ ಚುನಾವಣೆಯ ಅಕ್ರಮಗಳ ಸರಣಿ ಬಹಿರಂಗವಾಗಿದ್ದು, ಧೈರ್ಯವಿದ್ದರೆ ಬ್ಯಾಲೆಟ್ ಪೇಪರ್ ಮೂಲಕವೇ ಲೋಕಸಭೆಗೆ ಮರು ಚುನಾವಣೆ ನಡೆಸಲಿ ಎಂದು ಸವಾಲು ಹಾಕಿದರು.
ಛಲವಾದಿ ನಾರಾಯಣಸ್ವಾಮಿ ಇತ್ತೀಚಿನ ದಿನಗಳಲ್ಲಿ ನಾಲಿಗೆ ಹರಿಬಿಡುತ್ತಿದ್ದಾರೆ. ಬಿಜೆಪಿಯವರು ಯಾರ ವಿರುದ್ಧ ಪಾದಯಾತ್ರೆ ಮಾಡುತ್ತಿದ್ದಾರೆ. ಕಾಂಗ್ರೆಸ್ ವಿರುದ್ಧವೋ ಕೇಂದ್ರ ಸರ್ಕಾರದ ವಿರುದ್ಧವೋ ಎಂದು ಪ್ರಶ್ನಿಸಿದ ಅವರು ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರ ಮನೆ ಬಾಗಿಲಲ್ಲಿಯೇ ಸದಾ ಇರುತ್ತಿದ್ದರು. ಈಗ ಯಾರನ್ನೋ ಮೆಚ್ಚಿಸಲು ಈ ರೀತಿ ಬೇಜವಾಬ್ದಾರಿ ಮಾತುಗಳನ್ನು ಆಡುತ್ತಿದ್ದಾರೆ ಎಂದು ಟೀಕಿಸಿದರು.
ಕೆ.ವಿ.ಗೌತಮ್ ಮಾತನಾಡಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆಯಲು ನಮ್ಮ ಹೋರಾಟ ಸಾಗಿದೆ. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ನೆಪ ಮಾಡಿಕೊಂಡು ಬಿಜೆಪಿಗೆ ವೋಟು ಹಾಕದ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ. 2024ರ ಲೋಕಸಭಾ ಚುನಾವಣೆಯಿಂದ ಹಿಡಿದು ಇಲ್ಲಿಯವರೆಗೆ ಬಿಜೆಪಿ ಅಕ್ರಮ ಮತ್ತು ಮೋಸದಿಂದಲೇ ಚುನಾವಣೆ ಗೆಲ್ಲುತ್ತಿದೆ ಹೊರತು ನ್ಯಾಯಯುತವಾಗಿ ಗೆದ್ದಿಲ್ಲ. ತಾವು ಗೆಲ್ಲಲು ಇತರರನ್ನು ಸೋಲಿಸುವ ತಂತ್ರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶವನ್ನು ಸರ್ವಾಧಿಕಾರಿ ರಾಷ್ಟ್ರವನ್ನಾಗಿ ಮಾಡಲಾಗಿದೆ. ಬಿಜೆಪಿಗೆ ವೋಟ್ ಹಾಕದವರನ್ನು ದೇಶದ್ರೋಹಿಗಳು ಎಂಬ ಹಣೆಪಟ್ಟಿ ಕಟ್ಟಿ ಜೈಲಿಗೆ ಹಾಕುವ ಕೆಲಸ ನಡೆಯುತ್ತಿದೆ. ಕೇಂದ್ರ ತನಿಖಾ ಸಂಸ್ಥೆ ಇ.ಡಿ ನಡೆಸುತ್ತಿರುವ ಶೇ 90ರಷ್ಟು ದಾಳಿಗಳು ವಿರೋಧ ಪಕ್ಷಗಳ ನಾಯಕರ ಮೇಲೆಯೇ ನಡೆಯುತ್ತಿವೆ. ನೀಟ್ ಹಗರಣದ ವಿರುದ್ಧ ದೇಶದಲ್ಲಿ ಜೆನ್ ಝೀ ಬೃಹತ್ ಚಳವಳಿ ನಡೆಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಯ ಶುರುವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನು ಓದಿದ್ದೀರಾ..? ಶ್ರೀನಿವಾಸಪುರ | ರೈತರ ಮೇಲೆ ದೌರ್ಜನ್ಯ ಆರೋಪ, ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಆಗ್ರಹ
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ ಶಿವಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೈಲಾಂಡಹಳ್ಳಿ ಮುರಳಿ, ಸೈಯದ್ ಅಫ್ಸರ್, ಜಿಲ್ಲಾ ಎಸ್ ಟಿ ಘಟಕದ ಅಧ್ಯಕ್ಷ ಎನ್.ಅಂಬರೀಶ್, ಮುಖಂಡರಾದ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಅನ್ವರ್ ಪಾಷ, ಸಂಗೀತಾ, ಖಾದ್ರಿಪುರ ಬಾಬು ಇದ್ದರು.





