ನಕ್ಷೆಯಲ್ಲಿರುವಂತೆ ಕಾನೂನುಬದ್ಧವಾಗಿ ನಮ್ಮ ಸ್ವಂತ ಮನೆಗೆ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ತಾಲ್ಲೂಕಿನ ಚೌಡದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡವಲ್ಲಬಿ ಗ್ರಾಮದ ಎಂ.ಸೋಮಶೇಖರ್ ಆಗ್ರಹಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮನೆ ಬಳಿ ಮೂರು ರಸ್ತೆಗಳಿದ್ದು, ಈ ಪೈಕಿ ಒಂದು ರಸ್ತೆ ಒತ್ತುವರಿ ಆಗಿದೆ. ಇನ್ನು ಎರಡು ರಸ್ತೆಗೆ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಖಾತೆ ಮಾಡಿಕೊಡಲಾಗಿದೆ. ನಮ್ಮ ಮನೆಗೆ ಹೋಗಿ ಬರಲು ಜಾಗವಿಲ್ಲದಂತಾಗಿದೆ. ಅಲ್ಲದೇ, ನಮ್ಮ ಮನೆ ಬಳಿಗೆ ಸರಿಯಾಗಿ ಕಾಲುವೆ ಅಂತ್ಯಗೊಂಡಿದ್ದು, ಮಳೆ ಬಂದಾಗ ನೀರು ಮನೆಯೊಳಗೆ ನುಗ್ಗುತ್ತದೆ ಎಂದರು.
ಈ ಸಂಬಂಧ ನಾನು ನ್ಯಾಯ ಕೋರಿ ಇಲ್ಲಿಗೆ ಬಂದಿದ್ದೇನೆ. ಯಾರ ವಿರುದ್ಧವೂ ನನಗೆ ವೈಯಕ್ತಿಕ ದ್ವೇಷ ಇಲ್ಲ. ಆದರೆ, ಪಿಡಿಒಗಳು ಸರ್ಕಾರಿ ದಾಖಲೆ ತಿದ್ದಿ ಪ್ರಭಾವಿಗಳಿಗೆ ಸಹಕಾರ ಮಾಡಿಕೊಟ್ಟಿದ್ದಾರೆ. ಗ್ರಾಮದ ರಸ್ತೆ ಅಕ್ರಮಿಸಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.
ರಸ್ತೆ ಹಾಗೂ ಚರಂಡಿ ಕಲ್ಪಿಸಿಕೊಡುವಂತೆ ನಾನು ಹಲವಾರು ಬಾರಿ ಮನವಿ ಸಲ್ಲಿಸಿದ್ದೇನೆ. ಈ ಸಂಬಂದ ಮೇಲಧಿಕಾರಿಗಳ ಗಮನಕ್ಕೂ ತಂದಿದ್ದೇನೆ, ಅಕ್ರಮಗಳ ವಿರುದ್ಧ ದನಿ ಎತ್ತಿದ್ದೇನೆ. ಲೋಕಾಯುಕ್ತಕ್ಕೂ ದೂರು ಸಲ್ಲಿಸಿದ್ದೇನೆ. ಆದಾಗ್ಯೂ ಈವರೆಗೆ ಕ್ರಮವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರಿ ರಸ್ತೆಯನ್ನು ಬೇರೆಯವರಿಗೆ ಬರೆದುಕೊಡಲು ಅಧಿಕಾರ ಕೊಟ್ಟಿದ್ದು ಯಾರು? ಇದರಿಂದ ಬೇಸತ್ತು ತಂದೆ ಮುನೇಗೌಡ ಅವರು ದಯಾಮರಣಕ್ಕೆ ಅನುಮತಿ ಕೋರಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಅದಕ್ಕೂ ಯಾವುದೇ ಪ್ರತಿಕ್ರಿಯೆ ಇಲ್ಲವಾಗಿದೆ ಎಂದರು.
ರಸ್ತೆ ಒತ್ತುವರಿ ಮಾಡಿಕೊಂಡು ಮನೆ ಕಟ್ಟಿದವರಿಗೆ ಚೌಡದೇನಹಳ್ಳಿ ಪಂಚಾಯಿತಿ ಅಧಿಕಾರಿಗಳು ಚರಂಡಿ ಮಾಡಿಕೊಡುತ್ತಾರೆ. ಆದರೆ, ಕಾನೂನು ಬದ್ಧವಾಗಿ ಮನೆ ಕಟ್ಟಿಕೊಂಡವರಿಗೆ ರಸ್ತೆಯೂ ಇಲ್ಲ, ಚರಂಡಿಯೂ ಇಲ್ಲ. ಇದ್ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಇದನ್ನು ಓದಿದ್ದೀರಾ..? ಕೋಲಾರ | ಮಾವಿಗೆ ಸೂಕ್ತ ಬೆಂಬಲ ಬೆಲೆಗೆ ಒತ್ತಾಯಿಸಿ ನಗರದಲ್ಲಿ ಜೆಡಿಎಸ್ ಮತ್ತು ರೈತ ಸಂಘದಿಂದ ಪ್ರತಿಭಟನೆ. – ಈ ದಿನ.ಕಾಮ್
ನನ್ನ ಆರೋಪಗಳ ಬಗ್ಗೆ ನಿವೃತ್ತ ನ್ಯಾಯಾಧೀಶ ಸಂತೋಷ ಹೆಗಡೆ ಅವರಿಂದ ತನಿಖೆಯಾಗಲಿ ತಪ್ಪು ಎಂದಾದರೆ ಗಲ್ಲು ಶಿಕ್ಷೆ ಎದುರಿಸಲು ಸಿದ್ಧ. ಹಾಗೆಯೇ ಅಕ್ರಮದಲ್ಲಿ ಭಾಗಿ ಆಗಿರುವ ಪಿಡಿಒ ಹಾಗೂ ಇನ್ನಿತರ ಅಧಿಕಾರಿಗಳನ್ನು ವಜಾ ಮಾಡಿ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.




