ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಕೋಲಾರ ಜಿಲ್ಲೆಯ ಸಾರ್ವಜನಿಕರ ಜೀವ ಮತ್ತು ಆಸ್ತಿಪಾಸ್ತಿಗಳ ರಕ್ಷಣೆಗೆ ಜಿಲ್ಲಾಡಳಿತ ಮೊದಲ ಆದ್ಯತೆ ನೀಡಿದೆ ಎಂದು ಕೋಲಾರ ಜಿಲ್ಲಾಧಿಕಾರಿಗಳಾದ ಡಾ. ಎಂ.ಆರ್. ರವಿ ಅವರು ತಿಳಿಸಿದ್ದಾರೆ.
ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಅವರು, “ಜಿಲ್ಲೆಯ ಹಲವು ಭಾಗಗಳಲ್ಲಿ ಹಳೆಯ ಹಾಗೂ ಶಿಥಿಲಗೊಂಡ ವಸತಿ ಸಮುಚ್ಚಯಗಳು, ವಾಣಿಜ್ಯ ಸಂಕೀರ್ಣಗಳು, ಸರ್ಕಾರಿ ಕಚೇರಿಗಳು ಹಾಗೂ ಶಾಲಾ-ಕಾಲೇಜು ಕಟ್ಟಡಗಳು ಅಪಾಯಕಾರಿ ಸ್ಥಿತಿಯಲ್ಲಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಮಳೆಯಿಂದಾಗಿ ಇಂತಹ ಕಟ್ಟಡಗಳು ಕುಸಿದು ಸಂಭವಿಸಬಹುದಾದ ಭೀಕರ ಅಪಘಾತಗಳನ್ನು ತಡೆಯಲು ಜಿಲ್ಲೆಯ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು” ಎಂದು ಸೂಚನೆ ನೀಡಿದ್ದಾರೆ.
ಕೋಲಾರ ಜಿಲ್ಲಾ ವ್ಯಾಪ್ತಿಯಲ್ಲಿರುವ ಎಲ್ಲಾ ಖಾಸಗಿ ಮತ್ತು ಸಾರ್ವಜನಿಕ ಶಿಥಿಲಗೊಂಡ ಕಟ್ಟಡಗಳನ್ನು ತುರ್ತಾಗಿ ಗುರುತಿಸಬೇಕು. ಸಾರ್ವಜನಿಕರ ವಾಸಕ್ಕೆ ಯೋಗ್ಯವಲ್ಲದ ಹಾಗೂ ಅಪಾಯಕಾರಿಯಾಗಿರುವ ಕಟ್ಟಡಗಳ ಮಾಲೀಕರಿಗೆ ಅಥವಾ ಬಳಕೆದಾರರಿಗೆ ತಕ್ಷಣವೇ ಕಟ್ಟಡ ಖಾಲಿ ಮಾಡಲು ಅಥವಾ ಸೂಕ್ತ ದುರಸ್ತಿ ಕ್ರಮಗಳನ್ನು ಕೈಗೊಳ್ಳಲು ನೋಟಿಸ್ ಜಾರಿಗೊಳಿಸಲಾಗುವುದು. ಅಲ್ಲದೆ, ಇಂತಹ ಕಟ್ಟಡಗಳ ವಿರುದ್ಧ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಸಂಪೂರ್ಣ ವರದಿಯನ್ನು ಮುಂದಿನ 15 ದಿನಗಳೊಳಗಾಗಿ ಲೋಕೋಪಯೋಗಿ ಇಲಾಖೆಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಗಡುವು ವಿಧಿಸಿದ್ದಾರೆ.
ಇದನ್ನು ಓದಿದ್ದೀರಾ..? ಕೋಲಾರ | ಶಾಸಕ ಕೊತ್ತೂರು ಮಂಜುನಾಥ್ ತಮ್ಮ ಕಛೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ
ಕೋಲಾರ ಜಿಲ್ಲೆಯ ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಅಥವಾ ವಾಸವಿರುವ ಪ್ರದೇಶಗಳಲ್ಲಿ ಯಾವುದೇ ಹಳೆಯ, ಅತ್ಯಂತ ಜರ್ಜರಿತ ಅಥವಾ ಅಪಾಯಕಾರಿ ಸ್ಥಿತಿಯಲ್ಲಿರುವ ಖಾಸಗಿ ಅಥವಾ ಸಾರ್ವಜನಿಕ ಕಟ್ಟಡಗಳು ನಿಮ್ಮ ಗಮನಕ್ಕೆ ಬಂದಲ್ಲಿ, ತಕ್ಷಣವೇ ಸ್ಥಳೀಯ ಆಡಳಿತ ಕಚೇರಿ ಅಥವಾ ಜಿಲ್ಲಾ ಮಟ್ಟದ ತುರ್ತು ನಿಯಂತ್ರಣ ಕೊಠಡಿ ದೂ.ಸಂ:08152-243506 / 1077 /9740050061/9606241449 ಗೆ ಮಾಹಿತಿ ನೀಡಿ. ಸಾರ್ವಜನಿಕರ ಜಾಗರೂಕತೆ ಮತ್ತು ಸಹಕಾರದಿಂದ ಮಾತ್ರ ದೊಡ್ಡ ಅನಾಹುತಗಳನ್ನು ತಡೆಯಲು ಸಾಧ್ಯ. ಜಿಲ್ಲಾಡಳಿತದೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು,” ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಕೋರಿದ್ದಾರೆ.




