ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅವರನ್ನು ವಜಾ ಮಾಡಿರುವುದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲೆಯ ಮುಸ್ಲಿಂ ಉಲಮಾಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಲಾರ ನಗರದ ಚಿಕ್ಕಬಳ್ಳಾಪುರ ರಸ್ತೆಯ ಮೊಮಿನ್ ಬಡಾವಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮುದಾಯದ ಸಾವಿರಾರು ಮಂದಿ ಭಾಗವಹಿಸಿದ್ದರು.
ಮೌಲಾನಾ ಅತೀಕ್ ಉರ್ ರೆಹಮಾನ್ ಮಾತನಾಡಿ, ‘ಮುಂಬರುವ ವಿಧಾನಸಭೆ ಚುನಾವಣೆಗೆ ಕೆಲವೇ ವರ್ಷ ಬಾಕಿ ಇದೆ. ಅಲ್ಪಸಂಖ್ಯಾತ ಮುಖಂಡರ ವಿರುದ್ಧ ಇದೇ ರೀತಿಯ ವರ್ತನೆ ಮುಂದುವರಿಸಿದರೆ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲು ಮುಂದಾಗುತ್ತೇವೆ’ ಎಂದು ಎಚ್ಚರಿಕೆ ನೀಡಿದರು. ಕಾಂಗ್ರೆಸ್ ಪಕ್ಷ ಜಾತ್ಯತೀತವಾಗಿದ್ದು ಎಲ್ಲರಿಗೂ ಸಮಾನ ಅವಕಾಶ ನೀಡುತ್ತಿದೆ ಎಂಬ ಕಾರಣಕ್ಕೆ ಮುಸ್ಲಿಮರು ಈ ಪಕ್ಷವನ್ನು ಬೆಂಬಲಿಸಿಕೊಂಡು ಬಂದಿದ್ದಾರೆ. ಮುಸ್ಲಿಮರ ಹಕ್ಕುಗಳಿಗೆ ಘಾಸಿಯಾದಾಗ ಕಾಂಗ್ರೆಸ್ ಸುಮ್ಮನಿದ್ದ ಕಾರಣ ಆ ಪಕ್ಷ ಹಿಂದೆ ಅಧಿಕಾರ ಕಳೆದುಕೊಂಡಿದ್ದೂ ಉಂಟು. 2023 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂ ಉಲಮಾಗಳು ಬೆಂಬಲ ನೀಡಿ ಅಧಿಕಾರಕ್ಕೆ ತಂದರು ಎಂದರು.
ಕೋಲಾರದಲ್ಲಿ ಕಾಂಗ್ರೆಸ್ ಪಕ್ಷದ ಹೆಸರು ಹೇಳಿದರೆ ನಮ್ಮ ಬಾಯಿಯಿಂದ ಬರುವುದೇ ನಸೀರ್ ಅಹಮದ್ ಅವರ ಹೆಸರು. ಅವರು ಜಿಲ್ಲೆ ಹಾಗೂ ರಾಜ್ಯದ ಮೂಲೆಮೂಲೆಗಳಲ್ಲಿ ಸುತ್ತಾಡಿ ಕಾಂಗ್ರೆಸ್ ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ತಮ್ಮ ಶ್ರಮಕ್ಕೆ ತಕ್ಕಂತೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಲಭಿಸಿತ್ತು. ಆ ಸ್ಥಾನದಲ್ಲಿ ಬಹಳ ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಕಾಂಗ್ರೆಸ್ ಪಕ್ಷ ಕೇವಲ ಒಂದು ಕುಟುಂಬಕ್ಕಾಗಿ ಇಡೀ ಮುಸ್ಲಿಂ ಸಮುದಾಯದ ವಿರೋಧ ಕಟ್ಟಿಕೊಂಡಿದೆ. ಶಾಮನೂರು ಶಿವಶಂಕರ್ ಅವರ ಪುತ್ರ ಶಾಸಕ ಹಾಗೂ ಸಚಿವರಾಗಿದ್ದಾರೆ, ಸೊಸೆ ಸಂಸದರಾಗಿದ್ದಾರೆ. ಈ ನಡುವೆ ಮೊಮ್ಮಗನಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದ್ದು ಸರಿಯಲ್ಲ. ಆ ಕ್ಷೇತ್ರದ ಸ್ಥಳೀಯರಿಗೆ ಟಿಕೆಟ್ ಕೊಡಬೇಕಿತ್ತು, ಶಾಮನೂರು ಅವರೇ ಮುಂದೆ ಮುಸ್ಲಿಮರನ್ನು ಅಭ್ಯರ್ಥಿ ಮಾಡುವುದಾಗಿ ಹೇಳಿದ್ದರು. ಆದರೆ ಆ ಕೆಲಸ ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇವಲ ಐದು ಗ್ಯಾರಂಟಿಗಳಿಂದ ಅಧಿಕಾರಕ್ಕೆ ಬಂದಿರುವ ಭ್ರಮೆಯಲ್ಲಿ ಕಾಂಗ್ರೆಸ್ ಪಕ್ಷವಿದೆ. ಆ ಪಕ್ಷಕ್ಕೆ ವೋಟ್ ಹೆಚ್ಚಾಗಿ ನೀಡಿದ್ದು ಮುಸ್ಲಿಂ ಸಮುದಾಯ. ಅದನ್ನು ಆ ಪಕ್ಷದ ವರಿಷ್ಠರು ಗಮನಿಸಬೇಕು ಎಂದು ಹೇಳಿದರು.
ಮೌಲಾನಾ ಅಪ್ಸರ್ ಅಲಿ ಮಾತನಾಡಿ, ಕಾಂಗ್ರೆಸ್ ಪಕ್ಷ ಯಾವಾಗೆಲ್ಲಾ ಮುಸ್ಲಿಂ ಸಮುದಾಯದವರನ್ನು ದೂರ ಮಾಡಿದೆ ಆಗ ಅಧಿಕಾರ ಕಳೆದುಕೊಂಡಿದೆ. ಇದನ್ನು ಗಮನಿಸಿ ತಕ್ಷಣವೇ ನಸೀರ್ ಅಹಮದ್ ಅವರಿಗೆ ರಾಜಕೀಯ ಸ್ಥಾನಮಾನ ನೀಡಬೇಕು’ ಎಂದು ಆಗ್ರಹಿಸಿದರು.
ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ಉಲಮಾಗಳಿಗೆ ಎಚ್.ಡಿ.ದೇವೇಗೌಡರು ಬಹಳ ಗೌರವ ನೀಡುತ್ತಿದ್ದರು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಉಲಮಾಗಳಿಗೆ ಬಹಳ ಗೌರವ ನೀಡುತ್ತಿದ್ದಾರೆ. ಈಗ ಉದ್ಭವಿಸಿರುವ ಗೊಂದಲದ ಪರಿಸ್ಥಿತಿಯನ್ನು ಬೇಗನೇ ಬಗೆ ಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಿಲಾಲ್ ಮಸೀದಿ ಇಮಾಮ್ ಸಾಬ್ ಖಲೀಲ್ ಉಲ್ ರಶಾದಿ ಮಾತನಾಡಿ, ‘ರಾಜ್ಯದ ಎಲ್ಲಾ ಉಲಮಾಗಳು ಹೇಳಿದ ಮಾತಿನಿಂದ ಸಮುದಾಯದವರು ಮತನೀಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲಾಗಿದೆ. ಇದನ್ನು ಕಾಂಗ್ರೆಸ್ ಹೈಕಮಾಂಡ್ ಗಮನಿಸಬೇಕು. ನಿಮ್ಮಿಂದ ನಾವು ಅಲ್ಲ, ನಮ್ಮಿಂದ ನೀವು ಎಂಬುದನ್ನು ಗಮನಿಸಬೇಕು’ ಎಂದರು.
ಕಾಂಗ್ರೆಸ್ ಸರ್ಕಾರವು ಮುಸ್ಲಿಮ್ ಸಮುದಾಯದವರಲ್ಲಿ ಕ್ಷಮೆ ಕೇಳಬೇಕು. ನಸೀರ್ ಅಹಮದ್ ಅವರಿಗೆ ಮತ್ತೆ ಅದೇ ಹುದ್ದೆ ನೀಡಬೇಕು. ಸಮುದಾಯದ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಮೌಲಾನಾ ವಜೀರ್ ಹಜರತ್ ಮಾತನಾಡಿ, ‘ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯದ ನಾಯಕರನ್ನು ವಜಾ ಮಾಡಿದ್ದು ಸರಿಯಲ್ಲ. ಕೂಡಲೇ ಹುದ್ದೆ ನೀಡಬೇಕು ಹಾಗೂ ಸಮುದಾಯಕ್ಕೆ ನೀಡಿದ ಭರವಸೆಗಳನ್ನು ಈಡೇರಿಸಬೇಕು’ ಎಂದು ಆಗ್ರಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮೌಲಾನಾ ಕಲೀಂಮುಲ್ಲಾ ಮಾತನಾಡಿ, ‘ಇಡೀ ರಾಜ್ಯದ ಜನರು ಕಾಂಗ್ರೆಸ್ ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಇದರ ಕುರಿತು ನಾವು ಸಮಾವೇಶಗಳು, ಹೋರಾಟಗಳು ಮಾಡುತ್ತೇವೆ. ಕಾಂಗ್ರೆಸ್ ಹೈಕಮಾಂಡ್ ಈ ಕೂಡಲೇ ಸಮುದಾಯದ ಕ್ಷಮೆ ಕೇಳಬೇಕು. ನಸೀರ್ ಅವರಿಗೆ ಮತ್ತೆ ಸ್ಥಾನಮಾನ ನೀಡಬೇಕು’ ಎಂದರು.
ಎಲ್ಲಾ ತೀರ್ಮಾನಗಳನ್ನು ಹೈಕಮಾಂಡ್ ತೆಗೆದುಕೊಂಡಿದೆ ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಾರೆ. ಪಕ್ಷದ ನಿಯಮದ ಪ್ರಕಾರ ನೋಟಿಸ್ ನೀಡಿ ಉತ್ತರ ಕೊಡಲು ಅವಕಾಶ ನೀಡಬೇಕಿತ್ತು. ಆದರೆ ಆ ಪ್ರಕ್ರಿಯೆಯನ್ನೇ ಅನುಸರಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಚುನಾವಣೆಗೂ ಮುಂಚೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಮಗೆ ಸಾಕಷ್ಟು ಭರವಸೆ ನೀಡಿತ್ತು. ಆದರೆ, ಅದನ್ನು ಸರಿಯಾದ ನಿಟ್ಟಿನಲ್ಲಿ ಜಾರಿ ಮಾಡಿಲ್ಲ ಎಂದು ಹೇಳಿದರು. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಮತದಾರರು 80 ಸಾವಿರ ಇದ್ದು, ಅಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಬೇಕು ಎಂದು ಉಲಮಾಗಳು ಆಗ್ರಹಿಸಿದರು.
ಇದನ್ನು ಓದಿದ್ದೀರಾ..? ಕೋಲಾರ |ಗ್ರಾಪಂ ನೌಕರರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
ಈ ಸಂದರ್ಭದಲ್ಲಿ ಉಲಮಾಗಳಾದ ಯಾಸೀನ್, ಮೌಲಾನಾ ಮಾಜ್, ಮೌಲಾನಾ ಮುದಸ್ಸಿರ್, ಮೌಲಾನ ಜವಾದ್, ಕಾಂಗ್ರೆಸ್ ಮುಖಂಡರು ಹಾಗೂ ಸಾರ್ವಜನಿಕರು ಇದ್ದರು.
ಕೋಲಾರ | ನಸೀರ್ ಅಹಮದ್ ವಜಾ ಮಾಡಿದ್ದಕ್ಕೆ ಉಲಮಾಗಳ ಆಕ್ರೋಶ
<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>
ಪೋಸ್ಟ್ ಹಂಚಿಕೊಳ್ಳಿ:




