ವೈದ್ಯೆಯೊಬ್ಬರಿಗೆ ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಅನಿಲ್ ಶ್ರೀವಾಸ್ತವ ಎಂಬಾತ ಲೈಂಗಿಕ ದೌರ್ಜನ್ಯ ಎಸಗಿ, ಅದನ್ನು ವಿರೋಧಿಸಿದಾಗ ಗುಂಡು ಹಾರಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ ಘಟನೆ ಮಧ್ಯಪ್ರದೇಶದ ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ನಡೆದಿದೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು ಜೂನಿಯರ್ ವೈದ್ಯರ ಸಂಘ (ಜೆಯುಡಿಎ) ಆರೋಪಿಯನ್ನು 24 ಗಂಟೆಗಳ ಒಳಗೆ ಬಂಧಿಸದಿದ್ದರೆ ರಾಜ್ಯಾದ್ಯಂತ ಮುಷ್ಕರ ನಡೆಸುವುದಾಗಿ ಎಚ್ಚರಿಸಿದೆ.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಪ್ರಕರಣ | ಬಿಜೆಪಿ ಮುಖಂಡ ದೇವರಾಜೇಗೌಡ ಮತ್ತೆ ನ್ಯಾಯಾಂಗ ಬಂಧನಕ್ಕೆ
ಆರೋಪಿ, ಬಿಜೆಪಿ ನಾಯಕ ಅನಿಲ್ ಶ್ರೀವಾಸ್ತವ ಮತ್ತು ಅವರ ಸಹಚರರ ವಿರುದ್ಧ ಸಾಗರ್ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ಮುಂಜಾನೆ ಸಾಗರ್‌ನ ಬುಂದೇಲ್‌ಖಂಡ್ ವೈದ್ಯಕೀಯ ಕಾಲೇಜಿನಲ್ಲಿ (ಬಿಎಂಸಿ) ಈ ಘಟನೆ ನಡೆದಿದೆ. ಲಕ್ಷ್ಮಿ ತಿವಾರಿ ಎಂಬ ಮಹಿಳಾ ರೋಗಿಯೊಬ್ಬರು ಬೆಳಗಿನ ಜಾವ 2 ಗಂಟೆ ಸುಮಾರಿಗೆ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತರಲಾಗಿತ್ತು. ರೋಗಿಯು ಆಸ್ಪತ್ರೆಗೆ ತಲುಪುವ ಮೊದಲೇ ಆಕೆಯ ಚಿಕಿತ್ಸೆಯ ಬಗ್ಗೆ ಪದೇ ಪದೇ ಫೋನ್ ಕರೆಗಳು ಬರುತ್ತಿತ್ತು. ಚಿಕಿತ್ಸೆಯ ಸಮಯದಲ್ಲಿ, ರೋಗಿಯ ಜೊತೆಗಿದ್ದ ಇಬ್ಬರು ಪುರುಷರು ವೈದ್ಯಕೀಯ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದ್ದರು ಎಂದು ಆರೋಪಿಸಲಾಗಿದೆ.
ವೈದ್ಯೆ ಈ ಇಬ್ಬರ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದಾಗ, ಆರೋಪಿಗಳಲ್ಲಿ ಒಬ್ಬನಾದ ಅನಿಲ್ ಶ್ರೀವಾಸ್ತವ ವೈದ್ಯೆಯ ಖಾಸಗಿ ಭಾಗಗಳನ್ನು ಮುಟ್ಟಲು ಪ್ರಯತ್ನಿಸಿದ್ದಾರೆ. ನಂತರ ಆಸ್ಪತ್ರೆ ಆವರಣದಿಂದ ಹೊರಗೆ ಕಾಲಿಟ್ಟ ತಕ್ಷಣ ಗುಂಡು ಹಾರಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಬಂಧನ
ಸದ್ಯ ಬಿಜೆಪಿ ನಾಯಕ ಮತ್ತು ಆತನ ಸಹಚರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ವೈದ್ಯೆಯ ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಗಳ ಗಂಭೀರತೆಯನ್ನು ಪರಿಗಣಿಸಿ, ಇಬ್ಬರೂ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನರೇಂದ್ರ ಸೋಲಂಕಿ ಹೇಳಿದ್ದಾರೆ.
ಸದ್ಯ ಬಿಜೆಪಿ ಮುಖಂಡರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವೈದ್ಯಕೀಯ ಕಾಲೇಜಿನೊಳಗೆ ವಿದ್ಯಾರ್ಥಿಗಳು ಪ್ರತಿಭಟಿಸಿದ್ದಾರೆ. ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿ ಕೆಲಸ ನಿಲ್ಲಿಸಿ, ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಘಟನೆಯ ನಂತರ ಪೊಲೀಸರು ಮತ್ತು ಆಸ್ಪತ್ರೆ ಆಡಳಿತಕ್ಕೆ ತಕ್ಷಣ ಮಾಹಿತಿ ನೀಡಲಾಗಿದೆ. ಆದರೆ ಅಷ್ಟರಲ್ಲೇ ಆರೋಪಿ ಆಸ್ಪತ್ರೆಯಿಂದ ಹೊರಹೋಗಿದ್ದಾರೆ. ಪೊಲೀಸರು ಯಾವುದೆ ಕ್ರಮಕೈಗೊಂಡಿಲ್ಲ ಎಂದು ಪ್ರತಿಭಟನಾಕಾರ ವೈದ್ಯರು ಆರೋಪಿಸಿದ್ದಾರೆ.




