ನಿಗದಿಪಡಿಸಿರುವ ಅರ್ಹತಾ ಮಾನದಂಡಗಳು ಇಲ್ಲದೇ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (KSCPCR) ಅಧ್ಯಕ್ಷರು ಮತ್ತು ಸದಸ್ಯರಾಗಿ ನೇಮಿಸಿರುವ ಅಧಿಸೂಚನೆಯನ್ನು ಹಿಂತೆಗೆದುಕೊಳ್ಳುವಂತೆ, ಕಾನೂನಿನ ಪ್ರಕಾರ ಅರ್ಹ ಅಭ್ಯರ್ಥಿಗಳನ್ನು ನೇಮಿಸುವಂತೆ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಡೆಯಿಂದ ಹಾವೇರಿ ಜಿಲ್ಲಾಧಿಕಾರಿ ವಿಜಯಮಹಾಂತೇಶ ಬಿ ದಾನಮ್ಮನವರ್‌ಗೆ ಮನವಿ ಸಲ್ಲಿಸಲಾಯಿತು.
“ಅಭ್ಯರ್ಥಿಗಳು ಮಕ್ಕಳ ಕಲ್ಯಾಣ ಮತ್ತು ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಕನಿಷ್ಠ ಹತ್ತು ವರ್ಷಗಳ ವೃತ್ತಿಪರ ಹಾಗೂ ಅಸಾದಾರಣ ಅನುಭವ ಹೊಂದಿರಬೇಕು. ಇದರಲ್ಲಿ ಶಿಕ್ಷಣದ ಹಕ್ಕು, ಮಕ್ಕಳ ಅಭಿವೃದ್ಧಿ, ಬಾಲ ನ್ಯಾಯ, ಮಕ್ಕಳ ಆರೈಕೆ ಮತ್ತು ರಕ್ಷಣೆ, ಬಾಲ ಕಾರ್ಮಿಕ ನಿರ್ಮೂಲನೆ, ಮಕ್ಕಳ ಮನೋವಿಜ್ಞಾನ, ಆರೋಗ್ಯ, ಶಿಕ್ಷಣ, ಕಾನೂನು ಹಾಗೂ ಇತರ ಸಂಬಂಧಿತ ಕ್ಷೇತ್ರಗಳು ಸೇರಿವೆ. ಜೊತೆಗೆ, ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿ ಗಮನಾರ್ಹ ಸಾಧನೆಗಳನ್ನು ಮಾಡಿರುವ ವ್ಯಕ್ತಿಗಳನ್ನು ನೇಮಕ ಮಾಡಬೇಕೆಂದು ತಿಳಿದಿದ್ದೂ ಅರ್ಹತೆ ಇಲ್ಲದ ವ್ಯಕ್ತಿಗಳನ್ನು ನೇಮಕ ಮಾಡಲಾಗಿದೆ” ಎಂದು ಆರೋಪಿಸಿದರು.
“ಕಲಬುರಗಿ ಜಿಲ್ಲೆಯ ಆದರ್ಶ ನಗರ ನಿವಾಸಿ ಸಂತೋಷ ಕುಮಾರ್ ಅವರನ್ನು ಅಧ್ಯಕ್ಷರಾಗಿ ನೇಮಿಸಲಾಗಿದೆ. ಲಭ್ಯ ಮಾಹಿತಿಯ ಪ್ರಕಾರ ಅವರು ವ್ಯವಹಾರ ಚಟುವಟಿಕೆಗಳಲ್ಲಿ ತೊಡಗಿರುವ ಸೇವಾ ಪೂರೈಕೆದಾರರಾಗಿದ್ದು, ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಯಾವುದೇ ಗಮನಾರ್ಹ ಕಾರ್ಯ ನಿರ್ವಹಿಸಿರುವ ಮಾಹಿತಿ ಲಭ್ಯವಿಲ್ಲ. ಕಲಬುರಗಿ ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕರಿಗೆ ಅವರ ಹೆಸರು ಕೂಡ ಪರಿಚಿತವಾಗಿಲ್ಲ. ಹೀಗಾಗಿ ಇವರ ನೇಮಕಾತಿ ಬಗ್ಗೆ ನಮಗೆ ಸಂಶಯ ಮೂಡಿದೆ” ಎಂದು ತಿಳಿಸಿದರು.
“ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಶ್ರೀ ಸತ್ಯನಾರಾಯಣ ಶೆಟ್ಟಿ ಅವರನ್ನು ಸದಸ್ಯರಾಗಿ ನೇಮಿಸಲಾಗಿದೆ. ಅವರು ಆಕ್ಸ್ ಫರ್ಡ್ ಶಿಕ್ಷಣ ಸಂಸ್ಥೆಗಳ ಸಮೂಹದ ಸ್ಥಾಪಕರಾಗಿದ್ದಾರೆ. ಶಿಕ್ಷಣದ ಹಕ್ಕು ಕಾಯ್ದೆ, 2009ರ ಅನುಷ್ಠಾನ ಮೇಲ್ವಿಚಾರಣೆ ಸೇರಿದಂತೆ ಮಕ್ಕಳ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ದೂರುಗಳನ್ನು ಪರಿಶೀಲಿಸುವ ಜವಾಬ್ದಾರಿ KSCPCRಗೆ ಇರುವುದರಿಂದ, ಖಾಸಗಿ ಶಿಕ್ಷಣ ಸಂಸ್ಥೆಯ ಪ್ರತಿನಿಧಿಯೊಬ್ಬರನ್ನು ಸದಸ್ಯರನ್ನಾಗಿ ನೇಮಿಸುವುದು ಹಿತಾಸಕ್ತಿ ಸಂಘರ್ಷ (Conflict of Interest) ಉಂಟುಮಾಡುವ ಸಾಧ್ಯತೆಯಿದೆ” ಎಂದು ಮನವಿ ಮಾಡಿದ್ದಾರೆ.
“ಇದೇ ರೀತಿ, ಬೀದರ್ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ಶ್ರೀ ಜಗನ್ನಾಥ ಹಲಮಡಗಿ ಅವರನ್ನು ಸದಸ್ಯರಾಗಿ ನೇಮಿಸಿರುವುದಾಗಿ ತಿಳಿದುಬಂದಿದೆ. ಅವರು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸದಸ್ಯರಾಗಿದ್ದು, 2022ರಿಂದ ನ್ಯಾಯಾಂಗ ಪ್ರಕ್ರಿಯೆಗಳ ಕಾರಣದಿಂದ ಆ ಸಂಸ್ಥೆ ನಿಷ್ಕ್ರಿಯವಾಗಿದೆ ಎಂದು ವರದಿಯಾಗಿದೆ. ಜೊತೆಗೆ, ಅವರು CJ.B. ಶಿಕ್ಷಣ ಸಂಸ್ಥೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ವಿವಿಧ ಶಿಕ್ಷಣ ಸಂಸ್ಥೆಗಳ ನಿರ್ವಹಣೆ ಮತ್ತು ಅಭಿವೃದ್ಧಿಯಲ್ಲಿ ಪಾತ್ರವಹಿಸಿದ್ದಾರೆ” ಎಂದರು ಹೇಳಿದರು.
“ಅರ್ಹತಾ ಮಾನದಂಡಗಳನ್ನು ಸಮರ್ಪಕವಾಗಿ ಪರಿಗಣಿಸದೆ ನೇಮಕಾತಿ ಮಾಡಿರುವುದರಿಂದ, ಇದು ಆಯೋಗದ ಕಾರ್ಯಕ್ಷಮತೆ ಹಾಗೂ ವಿಶ್ವಾಸಾರ್ಹತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮನವಿ ಸಂಧರ್ಭದಲ್ಲಿ ಪ್ರಗತಿಪರ ಚಿಂತಕರು ಬಸವರಾಜ ಪೂಜಾರ, ವಿಭೂತಿ ಶೆಟ್ಟಿ, ಸಂಸುದ್ದೀನ್, ಉಡಚಪ್ಪ ಮಾಳಗಿ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.





