ಧರ್ಮಸ್ಥಳದಲ್ಲಿ ಹೂತು ಹಾಕಲಾಗಿರುವ ನೂರಾರು ಅಪರಿಚಿತ ಶವಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ-ಆರೋಪಿ ಚಿನ್ನಯ್ಯ ಹೊಸ ಹೆಸರುಗಳನ್ನು ಮುನ್ನಲೆಗೆ ತಂದಿದ್ದು, ಹೊಸ ಚರ್ಚೆಗೆ ನಾಂದಿ ಹಾಡಿದೆ. ಬಹುಭಾಷಾ ನಟ ಪ್ರಕಾಶ್ ರಾಜ್ ಮತ್ತು ಚಿತ್ರದುರ್ಗದ ಸಾಮಾಜಿಕ ಹೋರಾಟಗಾರ್ತಿ ರಮಾ ನಾಗರಾಜ್ ಅವರ ಹೆಸರನ್ನು ಹೈಕೋರ್ಟ್ಗೆ ಸಲ್ಲಿಸಲಾದ ರಿಟ್ ಅರ್ಜಿಯಲ್ಲಿ ಚಿನ್ನಯ್ಯ ಉಲ್ಲೇಖಿಸಿರುವುದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ.
ಕೇಸ್ ನಂ. 39/2025 ಇಡೀ ದೇಶದ್ಯಾಂತ ಸಂಚಲನ ಮೂಡಿಸಿತ್ತು. ‘ನೂರಾರು ಶವಗಳನ್ನು ಹೂತು ಹಾಕಿದ್ದೇನೆ’ ಎಂದು ಹೇಳಿ, ನಂತರ ಉಲ್ಟಾ ಹೊಡೆದಿದ್ದ ಚಿನ್ನಯ್ಯ, “ಸೌಜನ್ಯ ಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್, ವಿಠ್ಠಲ್ ಗೌಡ ಅವರು ಈ ಷಡ್ಯಂತ್ರದ ಭಾಗವಾಗಿದ್ದಾರೆ” ಎಂದು ವ್ಯತಿರಿಕ್ತ ಹೇಳಿಕೆ ಕೊಟ್ಟಿದ್ದನು. ಧರ್ಮಸ್ಥಳದ ಬಂಗ್ಲೆಗುಡ್ಡದಲ್ಲಿ ಎಸ್ಐಟಿ (ವಿಶೇಷ ತನಿಖಾ ತಂಡ) ನಡೆಸಿದ ಕಾರ್ಯಾಚರಣೆ ಸಂದರ್ಭದಲ್ಲಿ ಎಂಟು ತಲೆಬುರಡೆಗಳು ಸಿಕ್ಕಿದ್ದವು.
ಈಗ ಎಸ್ಐಟಿಯ ಸಮಗ್ರ ತನಿಖಾ ವರದಿ ಸಲ್ಲಿಕೆಗೆ ಕೋರಿ ಚಿನ್ನಯ್ಯ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ಈವರೆಗೆ ಪ್ರಕರಣದಲ್ಲಿ ಎಲ್ಲಿಯೂ ಕೇಳದಿದ್ದ ಹೊಸ ಹೆಸರುಗಳನ್ನು ಪ್ರಸ್ತಾಪಿಸಿದ್ದಾರೆ.
“ಒಂದು ದಿನ ರಾತ್ರಿ ಸುಮಾರು 8:00 ಗಂಟೆಗೆ ಗಿರೀಶ್ ಮಟ್ಟಣ್ಣವರ್ ನಟ ಪ್ರಕಾಶ್ ರಾಜ್ಗೆ ದೂರವಾಣಿ ಕರೆ ಮಾಡಿ ನನಗೆ ಫೋನ್ ನೀಡಿದರು. ಪ್ರಕಾಶ್ ರಾಜ್ ತಮಿಳಿನಲ್ಲಿ ಮಾತನಾಡಿ, ‘ಗಿರೀಶ್ ಮಟ್ಟಣ್ಣವರ್ ಅವರು ಏನು ಹೇಳಬೇಕೆಂದು ಸೂಚಿಸಿದ್ದಾರೋ ಅದನ್ನು ಅಧಿಕಾರಿಗಳ ಮುಂದೆ ಹೇಳಬೇಕು. ಅವರು ಹೇಳಿದಂತೆ ಕೇಳಿದರೆ ಜೂನ್ 29ರಂದು ಬಂದು ಅಪ್ಪಿಕೊಳ್ಳುತ್ತೇನೆ’ ಎಂದು ಹೇಳಿದ್ದರು” ಎಂದು ಚಿನ್ನಯ್ಯ ತಿಳಿಸಿದ್ದಾರೆ. ಆದರೆ, ಅದೊಂದು ಸೌಜನ್ಯದ ಕರೆಯಷ್ಟೇ ಆಗಿತ್ತು ಎಂದು ಗಿರೀಶ್ ಮಟ್ಟಣ್ಣವರ್ ಹೇಳಿದ್ದಾರೆ.
ಆದಾಗ್ಯೂ, ಚಿನ್ನಯ್ಯ ಬೇರೆಯದ್ದೇ ರೀತಿಯ ವಾದ ಮಾಡುತ್ತಿದ್ದಾರೆ. “ಧರ್ಮಸ್ಥಳದ ವಿರುದ್ಧ ಪಿತೂರಿ ಮಾಡಲು ಒಟ್ಟು 200 ಕೋಟಿ ರೂಪಾಯಿಗಳ ಬಜೆಟ್ ಸಿದ್ಧವಾಗಿತ್ತು. ಈ ಸಂಚಿನ ಭಾಗವಾಗಿ ಚಿನ್ನಯ್ಯನಿಗೆ 50 ಲಕ್ಷ ರೂಪಾಯಿ ಕೊಡುವ ಆಮಿಷವನ್ನು ಮಹೇಶ್ ಶೆಟ್ಟಿ ತಿಮರೋಡಿ ಒಡ್ಡಿದ್ದರು. ಈ ಷಡ್ಯಂತ್ರಕ್ಕಾಗಿ ಕೇರಳದಿಂದ ಹಣ ಬಂದಿತ್ತು. ಇನ್ನು ಚಿತ್ರದುರ್ಗದ ರಮಾ ನಾಗರಾಜ್ ಎಂಬುವವರೂ ಕೂಡ ಇದಕ್ಕೆ ಹಣ ನೀಡಿದ್ದಾರೆ. ತನ್ನ ಪತ್ನಿಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿರುವ ಹಾಗೂ ನಗದು ಹಣದ ವಹಿವಾಟಿನ ಸಂಪೂರ್ಣ ವಿವರಗಳನ್ನು ಚಿನ್ನಯ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ” ಎಂದು ಮಾಧ್ಯಮಗಳು ವರದಿ ಮಾಡಿವೆ.
ಸುದ್ದಿ ದೊಡ್ಡ ಮಟ್ಟದಲ್ಲಿ ಹಬ್ಬಿದ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರತಿಕ್ರಿಯಿಸಿರುವ ಗಿರೀಶ್ ಮಟ್ಟಣ್ಣವರ್, “ರೋಗಿ ಬಯಸಿದ್ದೂ ಹಾಲು-ಅನ್ನ, ಡಾಕ್ಟರ್ ಹೇಳಿದ್ದೂ ಹಾಲು ಅನ್ನ ಎಂಬಂತಾಗಿದೆ” ಎಂದಿದ್ದಾರೆ.
“ಎಸ್ಐಟಿ ವರದಿಯನ್ನು ಹೊರಗಿಡಬೇಕೆಂದು ರಾಜ್ಯ ಸರ್ಕಾರಕ್ಕೆ ಕಳೆದ ಮೂರು ತಿಂಗಳಿಂದ ನಾವು ಒತ್ತಾಯ ಹಾಕುತ್ತಿದ್ದೇವೆ. ರಾಜ್ಯ ಸರ್ಕಾರಕ್ಕೆ ಎಸ್ಐಟಿ ಮೂರು ತಿಂಗಳ ಹಿಂದೆಯೇ ವರದಿ ಕೊಟ್ಟಿದೆ ಎಂಬ ಮಾಹಿತಿ ಬಂದಿತ್ತು. ಆರ್ಟಿಐ ಮೂಲಕ ಕೇಳಿದರೂ ಸರ್ಕಾರ ಏನನ್ನೂ ಪ್ರತಿಕ್ರಿಯಿಸುತ್ತಿರಲಿಲ್ಲ. ನಾವು ಗೋಗರೆಯುತ್ತಿದ್ದೆವು. ನ್ಯಾಯಾಲಯದ ಕದ ತಟ್ಟಬೇಕು ಎಂದು ಯೋಚಿಸುತ್ತಿದ್ದೆವು. ನಾವು ಮಾಡಬೇಕಾದ ಕೆಲಸವನ್ನು, ಚಿನ್ನಯ್ಯನನ್ನು ಲಾಡ್ಜ್ ನಲ್ಲಿಟ್ಟು ಸಾಕಿ ಸಲುಹುತ್ತಿರುವವರು ಮಾಡಿದ್ದಾರೆ. ರಿಟ್ ಅರ್ಜಿ ಹಾಕಿಸಿದವರಿಗೆ ಧನ್ಯವಾದ ಹೇಳುತ್ತೇನೆ” ಎಂದಿದ್ದಾರೆ ಮಟ್ಟಣ್ಣ.
ಮುಂದುವರಿದು, “ಚಿತ್ರದುರ್ಗದ ರಮಾ ನಾಗರಾಜ್ ಅವರು ಹಿರಿಯ ಸಾಮಾಜಿಕ ಹೋರಾಟಗಾರ್ತಿ. ಅವರು 200 ಕೋಟಿ ಕೊಟ್ಟರಂತೆ ಎಂದೆಲ್ಲ ಹಬ್ಬಿಸುತ್ತಿದ್ದಾರೆ. 200 ಕೋಟಿ ರೂಪಾಯಿಯಲ್ಲ, 200 ಹುಣಸೇ ಬೀಜಗಳನ್ನು ಕೊಡುವುದಕ್ಕೂ ಅವರಿಂದ ಆಗುವುದಿಲ್ಲ. ಚಿನ್ನಯ್ಯನ ಮೂಲಕ ಸುಳ್ಳುಗಳನ್ನು ಹೇಳಿಸಿದ್ದಾರೆ. ನಾವು ನ್ಯಾಯಾಲಯದ ಮುಖಾಂತರವೇ ಉತ್ತರ ಕೊಡುತ್ತೇವೆ. ಆರೋಪಿ ಚಿನ್ನಯ್ಯನ ಹೇಳಿಕೆಗೆ ಮಸಾಲೆ ಹಾಕಿ ವರದಿ ಮಾಡುತ್ತಿರುವ ಟಿ.ವಿ. ಚಾನೆಲ್ಗಳು, ಇದೇ ಉತ್ಸಾಹವನ್ನು ಎಸ್ಐಟಿಯವರು ಕೋರ್ಟ್ಗೆ ರಿಪೋರ್ಟ್ ಸಲ್ಲಿಸಿದಾಗ ಮಾಧ್ಯಮಗಳು ತೋರಿಸಬೇಕು” ಎಂದು ಮನವಿ ಮಾಡಿದ್ದಾರೆ.
ರಮಾ ನಾಗರಾಜ್ ಯಾರು?
‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’ (ಎಸ್ಕೆಡಿಆರ್ಡಿಪಿ) ಅಡಿಯಲ್ಲಿ ನಡೆಯುತ್ತಿದ್ದ ಹಗರಣಗಳನ್ನು ನಿರಂತರವಾಗಿ ಪ್ರಶ್ನಿಸುತ್ತಿರುವವರು ರಮಾ ನಾಗರಾಜ್. ಸಂತ್ರಸ್ತರ ಪರವಾಗಿ ಕಾನೂನು ಹೋರಾಟಗಳನ್ನೂ ನಡೆಸುತ್ತಿರುವ ಅವರು, ಹಲವು ಸಮಾಜಮುಖಿ ಚಳವಳಿಗಳಲ್ಲಿ ತೊಡಗಿಕೊಂಡಿದ್ದಾರೆ. ಮಂಡ್ಯ ಮೂಲದವರಾದ ಇವರು ಚಿತ್ರದುರ್ಗಕ್ಕೆ ಸೊಸೆಯಾಗಿದ್ದಾರೆ. ನ್ಯಾಯಾಧೀಶರಾಗಿದ್ದ ಎಚ್.ಎಲ್. ನಾರಾಯಣಗೌಡ ಅವರು ರಮಾ ಅವರ ತಂದೆ.
“ನಾನು ನ್ಯಾಯಾಧೀಶರ ಮಗಳು ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆಯಾಗುತ್ತದೆ. ಇಷ್ಟು ದಿಟ್ಟವಾಗಿ ಮಾತನಾಡಬೇಕಾದರೆ, ನನ್ನ ರಕ್ತದಲ್ಲೇ ನ್ಯಾಯದ ರಕ್ತವಿದೆ. ಇಡೀ ಜಗತ್ತೇ ಒಂದು ಕಡೆ ನಿಂತರೂ ನೀನು ನ್ಯಾಯದ ಪರ ನಿಲ್ಲು ಎಂಬುದು ನಮ್ಮ ತಂದೆಯವರು ಕಲಿಸಿದ ಪಾಠ. ಸತ್ಯದ ಪರ ಹೋರಾಟ ನಿರಂತರವಾಗಿರುತ್ತದೆ” ಎನ್ನುತ್ತಾರೆ.
‘ಈದಿನ.ಕಾಮ್’ಗೆ ಪ್ರತಿಕ್ರಿಯಿಸಿದ ಅವರು, “ನನಗೆ ಚಿನ್ನಯ್ಯ ಯಾರೆಂದು ಗೊತ್ತಿಲ್ಲ. ಅವರ ಹೆಂಡತಿ ಯಾರೆಂದು ಗೊತ್ತಿಲ್ಲ. ಸೌಜನ್ಯಪರ ಹೋರಾಟಗಾರ್ತಿಯಾಗಿ ಮಹೇಶ್ ಶೆಟ್ಟಿ ತಿಮರೋಡಿಯವರ ಮುಂದಾಳತ್ವದ ಚಳವಳಿಯಲ್ಲಿ ನಾನು ಇರುವುದು ಸತ್ಯ. ನ್ಯಾಯ ಸಿಗುವವರೆಗೂ ನಾನು ಹೋರಾಟದಲ್ಲಿ ಭಾಗಿಯಾಗುತ್ತೇನೆ. ಅದರಲ್ಲಿ ಎರಡು ಮಾತಿಲ್ಲ. ನನ್ನ ಹೆಸರನ್ನು ಚಿನ್ನಯ್ಯ ಉಲ್ಲೇಖಿಸಿದ್ದಾನೆ ಎಂದರೆ, ಆರೋಪವನ್ನು ಸಾಬೀತುಪಡಿಸಲಿ” ಎಂದು ಸವಾಲು ಹಾಕಿದರು.
ಈ ಲೇಖನ ಓದಿದ್ದೀರಾ?: ಬಿಡಿಎ- ಬೆಂಗಳೂರಿನ ಗಣಿ; ಅಧಿಕಾರ ರಾಜಕಾರಣದ ಕಾಮಧೇನು!
“ಈ ರೀತಿಯ ಬೆದರಿಕೆಗಳಿಗೆ ಜಗ್ಗುವುದಿಲ್ಲ. ಎಸ್.ಕೆ.ಡಿ.ಆರ್.ಡಿ.ಪಿಗೆ ಸಂಬಂಧಿಸಿದಂತೆ ಒಂದು ಪ್ರಕರಣವನ್ನು ನಾನು ಮಾಡಿಸಿದ್ದೆ. ಹಿರಿಯೂರಿನ ವಿಧವೆಯೊಬ್ಬರು ತಮ್ಮ ಹಣ ಪಡೆಯಲಾಗದೆ ಪರದಾಡುತ್ತಿದ್ದರು. ಆ ಸಂತ್ರಸ್ತೆಯ ಪರ ನಿಂತೆ. ಈ ಕಾರಣಕ್ಕೆ ದಾವಣಗೆರೆಯಲ್ಲಿ ನನ್ನ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದರು. ನಾನು ಎಫ್ಐಆರ್ ಮಾಡಿಸಿದ್ದೆ. ಇಂತಹ ಕಾರಣಗಳಿಂದಾಗಿ ನನ್ನನ್ನು ಚಿನ್ನಯ್ಯನ ಪ್ರಕರಣದಲ್ಲಿ ಸೇರಿಸುವ ಷಡ್ಯಂತ್ರ ಮಾಡಿದ್ದಾರೆ” ಎಂದು ಆರೋಪಿಸಿದರು.
“ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳಲ್ಲಿ ಹಲವು ಪ್ರಕರಣಗಳನ್ನು ದಾಖಲಿಸಿದ್ದೇನೆ. ಕಾನೂನು ಹೋರಾಟ ನನಗೇನೂ ಹೊಸದಲ್ಲ” ಎನ್ನುವ ಅವರು, “ಧರ್ಮಸ್ಥಳ ಎಂಬುದು ಒಂದು ಗ್ರಾಮದ ಹೆಸರು. ಆದರೆ ಧರ್ಮಸ್ಥಳ ಶ್ರೀಕ್ಷೇತ್ರದ ವಿರುದ್ಧ ಹೋರಾಟ ನಡೆಯುತ್ತಿದೆ ಎಂದು ಬಿಂಬಿಸಲಾಗುತ್ತಿದೆ. ನಮ್ಮ ಧಾರ್ಮಿಕ ಕ್ಷೇತ್ರಕ್ಕೆ ಅಪಮಾನವಾದರೆ ನಾನು ಸಹಿಸುವುದಿಲ್ಲ. ನಮ್ಮ ಕುಟುಂಬವು ಶ್ರೀಕ್ಷೇತ್ರಕ್ಕೆ ಹಿಂದಿನಿಂದಲೂ ಭಕ್ತಿಭಾವದಿಂದ ನಡೆದುಕೊಂಡು ಬಂದಿದೆ. ಈ ಕ್ಷೇತ್ರ ಎಲ್ಲ ಹಿಂದೂಗಳಿಗೆ ಸೇರಿದ್ದು. ಕ್ಷೇತ್ರದ ಬಗ್ಗೆ ಮಾತನಾಡುತ್ತಿಲ್ಲ. ಊರಿನಲ್ಲಿ ನಡೆಯುತ್ತಿರುವ ಆಗು ಹೋಗುಗಳ ಕುರಿತು ಮಾತನಾಡುತ್ತಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಕಾಶ್ ರಾಜ್ ಪ್ರತಿಕ್ರಿಯೆ ಏನು?
ಆರೋಪಿ ಚಿನ್ನಯ್ಯ, ತನ್ನ ರಿಟ್ ಅರ್ಜಿಯಲ್ಲಿ ಪ್ರಕಾಶ್ ರಾಜ್ ಅವರ ಹೆಸರು ಪ್ರಸ್ತಾಪಿಸಿದ ಕೂಡಲೇ, ಮಾಧ್ಯಮಗಳು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿವೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಪ್ರಕಾಶ್ ರಾಜ್, “ಎಲ್ಲರಿಗೂ ನಮಸ್ಕಾರ, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ ಕೆಲವು ಸುದ್ದಿಗಳು ಚರ್ಚೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಇದು ಅತ್ಯಂತ ಸೂಕ್ಷ್ಮವಾದ ವಿಷಯವಾಗಿರುವುದರಿಂದ ಮತ್ತು ಕೋಟ್ಯಂತರ ಭಕ್ತರ ನಂಬಿಕೆಗೆ ಸಾಕ್ಷಿಯಾಗಿರುವುದರಿಂದ, ಇಂತಹ ಅನುಮಾನಗಳಿಗೆ ಉತ್ತರಿಸುವುದು ನನ್ನ ಕರ್ತವ್ಯವೂ ಆಗಿದೆ” ಎಂದು ತಿಳಿಸಿದ್ದಾರೆ.
“ನಾನು ಸದ್ಯ ಊರಿನಲ್ಲಿ ಇಲ್ಲ. ಇನ್ನೆರಡು ದಿನಗಳಲ್ಲಿ ನಾನೇ ಖುದ್ದಾಗಿ ಬಂದು ಮಾಧ್ಯಮ ಮಿತ್ರರ ಮೂಲಕ ಇದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಲಿದ್ದೇನೆ. ಅಲ್ಲಿಯವರೆಗೆ ಗಾಳಿ ಸುದ್ದಿಗಳನ್ನು ದಯವಿಟ್ಟು ಯಾರೂ ನಂಬಬೇಡಿ” ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಕಾಶ್ ರಾಜ್ ಅವರ ಹೆಸರು ಚಿನ್ನಯ್ಯನ ಬಾಯಿಯ ಮೂಲಕ ಬಂದಿದ್ದು ಹೇಗೆ? ಯಾಕೆ ಬಂದಿತು ಎಂಬುದರ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಿವೆ. ಸತ್ಯ ಯಾವುದೆಂದು ತನಿಖೆಯಿಂದಲೇ ಬಯಲಾಗಬೇಕಿದೆ.




