- ಗಡಿಪಾರು ಮಾಡಿ ಆದೇಶ ಹೊರಡಿಸಿದ್ದ ಜಿಲ್ಲಾಧಿಕಾರಿ
- ನ್ಯಾ, ಎಸ್ ವಿಶ್ವಜಿತ್ ಶೆಟ್ಟಿ ಅವರ ಪೀಠದಿಂದ ಅರ್ಜಿ ವಿಚಾರಣೆ
ಮಂಡ್ಯ ಜಿಲ್ಲೆಯಾದ್ಯಂತ ನಿರಂತರವಾಗಿ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿ ಪೊಲೀಸರಿಗೆ ತಲೆನೋವಾಗಿದ್ದ ರೌಡಿಶೀಟರ್ ಅಶೋಕ್ ಪೈ ಗಡಿಪಾರು ಆದೇಶಕ್ಕೆ ತಡೆ ನೀಡಿ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.
ಮಂಡ್ಯ ಜಿಲ್ಲೆಯ ಅಶೋಕ್ ಪೈ ಹಲವು ದಿನಗಳಿಂದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆಂದು ಆರೋಪಿಸಲಾಗಿದೆ. ಆತನನ್ನು 2023ರ ಮಾ.15ರಿಂದ ಜು.15ರವರೆಗೆ ಮಂಡ್ಯ ಜಿಲ್ಲೆಯಿಂದ ಗಡಿಪಾರು ಮಾಡಿ ಮಂಡ್ಯ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.
ತನ್ನನ್ನು ಗಡಿಪಾರು ಮಾಡಿದ್ದ ಆದೇಶವನ್ನು ಪ್ರಶ್ನಿಸಿ ಮತ್ತು ಆದೇಶವನ್ನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಅಶೋಕ್ ಪೈ ಕ್ರಿಮಿನಲ್ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರ ಪರ ವಕೀಲ ಸಿ.ಎನ್ ರಾಜು “ಅಶೋಕ್ ಪೈ ಇದುವರೆಗೂ ಯಾವುದೇ ಅಪರಾಧ ಚಟುವಟಿಕೆಯಲ್ಲಿ ಪಾಲ್ಗೊಂಡಿಲ್ಲ. ಆದರೂ, ಕೂಡ ಮಂಡ್ಯ ಪೊಲೀಸ್ ವರಿಷ್ಠಧಿಕಾರಿ ಅಶೋಕ್ ಪೈ ವಿರುದ್ಧ ವರದಿ ಸಿದ್ಧಪಡಿಸಿದ್ದು, ಇದರಲ್ಲಿ ಕೂಡ ಯಾವುದೇ ಸೂಕ್ತ ಸಾಕ್ಷ್ಯಧಾರಗಳು ಇಲ್ಲ” ಎಂದು ತಿಳಿಸಿದ್ದರು.
ಈ ಸುದ್ದಿ ಓದಿದ್ದೀರಾ?: ಕರ್ನಾಟಕ-ಮಹಾರಾಷ್ಟ್ರ ಗಡಿಜನರಿಗೆ ವಿಮೆ | ಉದ್ಧಟತನದ ಪರಮಾವಧಿ ಎಂದ ಸಿಎಂ ಬೊಮ್ಮಾಯಿ
“ಈ ಬಗ್ಗೆ ಜಿಲ್ಲಾಧಿಕಾರಿಗಳು ನೋಟಿಸ್ ನೀಡಿದಾಗ ಅರ್ಜಿದಾರರು ಅವರ ಮುಂದೆ ಹಾಜರಾಗಿ ಅಗತ್ಯ ವಿವರಣೆ ಮತ್ತು ಸಾಕ್ಷ್ಯಗಳನ್ನು ಒದಗಿಸಿದ್ದಾರೆ. ಅಲ್ಲದೆ, ಆಕ್ಷೇಪಣೆ ಕೂಡ ಸಲ್ಲಿಸಿದ್ದಾರೆ. ಆದರೂ, ಇದ್ಯಾವುದನ್ನು ಪರಿಗಣಿಸದ ಜಿಲ್ಲಾಧಿಕಾರಿಗಳು ಗಡುಪಾರು ಆದೇಶ ಮಾಡಿದ್ದರು” ಎಂದು ವಾದಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ, ಅರ್ಜಿಯಲ್ಲಿ ಪ್ರತಿವಾದಿಗಳಾದ ಮಂಡ್ಯ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅರ್ಜಿ ಕುರಿತ ಮುಂದಿನ ವಿಚಾರಣೆವರೆಗೆ ಅರ್ಜಿದಾರರ ವಿರುದ್ಧದ ಗಡಿಪಾರು ಆದೇಶಕ್ಕೆ ತಡೆಯಾಜ್ಞೆ ನೀಡಿದ್ದು, ವಿಚಾರಣೆಯನ್ನು ಮುಂದೂಡಿದ್ದಾರೆ.