“ಹಳ್ಳಿಗಳಲ್ಲಿ ಶೌಚಾಲಯಗಳನ್ನು ಕಟ್ಟಿದ್ದೇವೆ, ಕಾಗದದ ಮೇಲೆ ‘ಬಯಲು ಶೌಚಮುಕ್ತ ದೇಶ’ವೆಂದು ಘೋಷಿಸಿಕೊಂಡಿದ್ದೇವೆ. ನಾವು ಶೌಚಾಲಯಗಳ ಆಧಾರದ ಮೇಲೆ ‘ಬಯಲು ಶೌಚಮುಕ್ತ ದೇಶ’ವೆಂದು ಘೋಷಿಸಿಕೊಂಡಿದ್ದೇವೆ. ಆದರೆ ಕಟ್ಟಿದ ಶೌಚಾಲಯವನ್ನು ಪ್ರತಿಯೊಬ್ಬರೂ ಬಳಿಸುತ್ತಿಲ್ಲ, ಅದನ್ನು ಬಳಸಿದಾಗ ಮಾತ್ರ ಅದು ನಿಜವಾದ ಸಾಧನೆ ಆಗುತ್ತದೆ” ಎಂದು ಸಭಾಧ್ಯಕ್ಷ ಜಿ.ಎಸ್.ಪಾಟೀಲ್ ಹೇಳಿದರು.
ಗದಗ ಜಿಲ್ಲೆಯ ರೋಣ ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸ್ವಚ್ಛ ಭಾರತ ಮಿಷನ್ (ಗ್ರಾಮೀಣ), ಜಿಲ್ಲಾ ಪಂಚಾಯತ್ ಗದಗ ಹಾಗೂ ತಾಲ್ಲೂಕು ಪಂಚಾಯತ್ ರೋಣ ವತಿಯಿಂದ, ಶ್ರೀ ಎಸ್.ಆರ್. ಪಾಟೀಲ ಪ್ರತಿಷ್ಠಾನ ರೋಣ ಮತ್ತು ದೆಹಲಿಯ ಫೀಡ್‌ಬ್ಯಾಕ್ ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ODF ಸುಸ್ಥಿರತೆ’ ಯನ್ನು ಸಾಧಿಸಿದ ಕ್ಲಸ್ಟರ್‌ಗಳಲ್ಲಿ ಅನುಷ್ಠಾನ ಕುರಿತು ತಾಲ್ಲೂಕು ಮಟ್ಟದ ದೃಷ್ಟಿಕೋನ ಮತ್ತು ಕಾರ್ಯ ಯೋಜನೆ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು.
“ಪ್ರಾಯೋಗಿಕವಾಗಿ ನನ್ನ ಕ್ಷೇತ್ರದ ಐದು ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಿ ಪರಿವರ್ತನೆಗೊಳಿಸಲಾಗುವುದು” ಎಂದು ಜಿ.ಎಸ್. ಪಾಟೀಲ ಅವರು ಹೇಳಿದರು.
“ಅನೇಕ ಮನೆಗಳಲ್ಲಿ ಶೌಚಾಲಯಗಳು ಸೌದೆ, ಕಾಳು-ಕಡಿ ಇಡುವ ಉಗ್ರಾಣಗಳಾಗಿರುವುದು ಹಾಗೂ ಮಹಿಳೆಯರು ಶೌಚಾಲಯ ಬಳಸಿದರೂ ಗಂಡಸರು ಇಂದಿಗೂ ತಂಬಿಗೆ ಕೈಯಲ್ಲಿ ಹಿಡಕೊಂಡು ಹೊಲದ ಕಡೆ ಹೋಗುತ್ತಿರುವುದು ವಿಷಾದದ ಸಂಗತಿ ಎಂದು ದೆಹಲಿಯ ಫೀಡ್‌ಬ್ಯಾಕ್ ಫೌಂಡೇಶನ್ದ ಅಧ್ಯಕ್ಷರಾದ ಅಜಯ ಸಿನ್ಹಾರವರು ಕಾರ್ಯಾಗಾರ ನಡೆಸಿ” ಎಂದು ಹೇಳಿದರು.
“ಊರಿನ ಒಂದು ಮನೆಯವರು ಬಯಲಿಗೆ ಹೋದರೂ ಇಡೀ ಊರಿನ ಆರೋಗ್ಯ ಅಪಾಯದಲ್ಲಿರುತ್ತದೆ. ಬಯಲಿನ ಮಲದ ಮೇಲೆ ಕೂತ ನೊಣ ನಮ್ಮ ಮಕ್ಕಳ ರೊಟ್ಟಿಯ ಮೇಲೂ ಬಂದು ಕೂರುತ್ತದ” ಎಂದು ಎಚ್ಚರಿಸಿದರು.
ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಕುಲ ಜೈನ್ ಮಾತನಾಡಿ, “ದೆಹಲಿಯ ಫೀಡ್‌ಬ್ಯಾಕ್ ಫೌಂಡೇಶನ್ ಮತ್ತು ಎಸ್.ಆರ್.ಪಾಟೀಲ ಫೌಂಡೇಶನ್ ಗಳು ಆಯ್ಕೆ ಮಾಡಿರುವ 5 ಗ್ರಾಮ ಪಂಚಾಯತಿಗಳ ಮನೆಮನೆ ಸಮೀಕ್ಷೆ ನಡೆಸಿ ಬಳಕೆಯಾಗದ, ಅರ್ಧಕ್ಕೆ ನಿಂತ ಹಾಗೂ ದುರಸ್ತಿಯಲ್ಲಿರುವ ಶೌಚಾಲಯಗಳನ್ನು ಗುರುತಿಸಿ ಕಾಲಮಿತಿಯಲ್ಲಿ ಸರಿಪಡಿಸಲಾಗುವುದು. ಶೌಚಾಲಯದ ಬಳಿ ನೀರಿನ ವ್ಯವಸ್ಥೆಗೆ ಆದ್ಯತೆ ನೀಡಲಾಗುವುದು. ಪ್ರತಿ ಗ್ರಾಮಸಭೆಯಲ್ಲಿ ಶೌಚಾಲಯ ಬಳಕೆಯ ಸ್ಥಿತಿ ಕುರಿತು ಚರ್ಚೆ ನಡೆಸಲಾಗುವುದು” ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್. ಪಾಟೀಲ, ಫೀಡ್‌ಬ್ಯಾಕ್ ಫೌಂಡೇಶನ್‌ನ ಸದಸ್ಯರು, ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕರಾದ ಶ್ರೀ ಎಂ.ವಿ. ಚಳಗೇರಿ, ರೋಣ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರ, ಹೀರಾಲಾಲ ಜೇನಗಿ (ಗದಗ) ಹಾಗೂ ವಿಜಯಕುಮಾರ ಬೆಣ್ಣಿ, ರೋಣ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಿಥುನ್ ಗೌಡ್ರ ಪಾಟೀಲ, ಹಿರಿಯರು ವೀರಣ್ಣ ಶೆಟ್ಟರ್, ಶರಣಪ್ಪ ಬೆಟಗೇರಿ, ಟಿ.ಬಿ. ಅಳಗವಾಡಿ, ಎಸ್.ಆರ್. ಪಾಟೀಲ ಪ್ರತಿಷ್ಠಾನದ ಪ್ರತಿನಿಧಿಗಳು, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿಯ ಅಧಿಕಾರಿಗಳು, ಗ್ರಾಮ ಪಂಚಾಯತಿಗಳ ಮುಖಂಡರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.




