ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ವಿಶ್ವ ಪೋಲಿಯೋ ದಿನದ ಅಂಗವಾಗಿ ರೋಟರಿ ಸಂಸ್ಥೆಯ ವತಿಯಿಂದ ಪಲ್ಸ್ ಪೋಲಿಯೋ ಜಾಗೃತಿ ಜಾಥಾ ಆಯೋಜಿಸಲಾಗಿತ್ತು.
ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿಯ ಹೆದ್ದಾರಿ ವೃತ್ತದಿಂದ ಆರಂಭವಾದ ಜಾಥಾವು ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಯವರೆಗೆ ಸಾಗಿತು. ಜಾಥಾದಲ್ಲಿ ರೋಟರಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡು, ಪೋಲಿಯೋ ಮುಕ್ತ ಸಮಾಜ ನಿರ್ಮಾಣದ ಪರ ಘೋಷಣೆಗಳನ್ನು ಕೂಗುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ರೋಟರಿ ಸಂಸ್ಥೆಯ ಅಧ್ಯಕ್ಷ ನಾಗೇಂದ್ರ ಹಾಗೂ ಕಾರ್ಯದರ್ಶಿ ಸರಸ್ವತಿ ಅವರು, ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ತಪ್ಪದೇ ಪೋಲಿಯೋ ಲಸಿಕೆ ಹನಿಗಳನ್ನು ಹಾಕಿಸುವಂತೆ ಪೋಷಕರಲ್ಲಿ ಮನವಿ ಮಾಡಿದರು. ಮಕ್ಕಳ ಆರೋಗ್ಯದ ರಕ್ಷಣೆ ಹಾಗೂ ಪೋಲಿಯೋ ನಿರ್ಮೂಲನೆಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಜಾಥಾದಲ್ಲಿ ಮಾತನಾಡಿದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಹಾಗೂ ಅಚೀವರ್ಸ್ ಅಕಾಡೆಮಿಯ ಅಧ್ಯಕ್ಷ ಡಾ. ರಾಘವೇಂದ್ರ ಮಾತನಾಡಿ, ಭಾರತವನ್ನು ಪೋಲಿಯೋ ಮುಕ್ತ ದೇಶವನ್ನಾಗಿ ಉಳಿಸಿಕೊಳ್ಳಲು ಪ್ರತಿಯೊಬ್ಬ ನಾಗರಿಕರ ಸಹಕಾರ ಅಗತ್ಯ ಎಂದು ಹೇಳಿದರು.
ಪೋಲಿಯೋ ನಿರ್ಮೂಲನೆಗೆ ಜಾಗೃತಿ ಮತ್ತು ಲಸಿಕಾ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳಿಗೆ ನಿಗದಿತ ಸಮಯದಲ್ಲಿ ಪೋಲಿಯೋ ಹನಿಗಳನ್ನು ಹಾಕಿಸುವ ಮೂಲಕ ಮಕ್ಕಳ ಆರೋಗ್ಯದ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬುದ್ಧ, ಬಸವ, ಅಂಬೇಡ್ಕರ್ ತತ್ವಗಳಿಂದ ಸಾಮಾಜಿಕ ಪರಿವರ್ತನೆ ಸಾಧ್ಯ: ಡಿ.ಕೆ. ಶಿವಕುಮಾರ್
ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ನಾಗೇಂದ್ರ, ಕಾರ್ಯದರ್ಶಿ ಸರಸ್ವತಿ, ಸೋಮಶೇಖರ್, ಗುರುಪ್ರಸಾದ್, ರಜತ್ ಗೋಪಿ ಪಿ., ನಾಗೇಶ್ ನಾಯಕ್, ಹರೀಶ್, ಕಿರಣ್, ಹೃದಯ, ಪ್ರಶಾಂತ್, ಚಂದನ್, ಅರ್ಮಿತ್, ವಿಹಾನ್ ಸೇರಿದಂತೆ ರೋಟರಿ ಸಂಸ್ಥೆಯ ಪದಾಧಿಕಾರಿಗಳು, ಮುಖಂಡರು, ಸ್ಥಳೀಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.






