ಉತ್ತರ ಭಾರತದಲ್ಲಿ ವಾಲ್ಮೀಕಿ ಜಯಂತಿ ಎಂದರೆ ಶತಮಾನಗಳಿಂದ ಜಾತಿ ಅವಮಾನ, ಅಸ್ಪೃಶ್ಯತೆ ಹಾಗೂ ಮಲಹೊರುವ ಪದ್ಧತಿಯ ವಿರುದ್ಧ ಸ್ವಾಭಿಮಾನವನ್ನು ಕಟ್ಟಿಕೊಂಡ ಸಮುದಾಯದ ಆಚರಣೆ. ಕರ್ನಾಟಕದಲ್ಲಿ ಅದೇ ವಾಲ್ಮೀಕಿ ಜಯಂತಿ ಎಂದರೆ, ನಾಯಕ/ಬೇಡ ಸಮುದಾಯಗಳ ಸಾಂಸ್ಕೃತಿಕ ಅಸ್ಮಿತೆ, ಬುಡಕಟ್ಟು ಗುರುತು ಹಾಗೂ ರಾಜಕೀಯ ಹಕ್ಕುಗಳ ಪ್ರತೀಕ.
ಭಾರತದಲ್ಲಿ ಜಾತಿ ವ್ಯವಸ್ಥೆ ಎಂಬುದು ಗಾಢವಾಗಿ ಬೇರೋರಿರುವ ವಿಕೃತಿ ಮತ್ತು ಕ್ರೌರ್ಯ. ಆದಾಗ್ಯೂ, ಈ ಜಾತಿ ವ್ಯವಸ್ಥೆಯಲ್ಲಿ ವಿಚಿತ್ರ ವೈರುಧ್ಯಗಳೂ ಇವೆ. ಆ ವೈರುಧ್ಯಗಳನ್ನ ಅರ್ಥಮಾಡಿಕೊಳ್ಳಬೇಕಾದರೆ, ದೇಶದ ಎರಡು ವಿಭಿನ್ನ ಪ್ರದೇಶಗಳಲ್ಲಿ ಆಚರಿಸಲಾಗುವ ವಾಲ್ಮೀಕಿ ಜಯಂತಿಯನ್ನು ಗಮನಿಸಬೇಕು.
ದೆಹಲಿಯ ವಾಲ್ಮೀಕಿ ಕಾಲೊನಿಗಳು, ಪಂಜಾಬ್ನ ವಾಲ್ಮೀಕಿ ಮಂದಿರಗಳು, ಹರಿಯಾಣ ಮತ್ತು ರಾಜಸ್ಥಾನದ ದಲಿತ ಬಡಾವಣೆಗಳಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಗುತ್ತದೆ. ಶತಮಾನಗಳ ಸಾಮಾಜಿಕ ಅವಮಾನವನ್ನು ಎದುರಿಸಿರುವ ಸಮುದಾಯವೊಂದು ತನ್ನ ಸ್ವಾಭಿಮಾನವನ್ನು ಪ್ರತಿಪಾದಿಸುವ ಸಂದರ್ಭವಿದು.
ಅದೇ ದಿನ, ಕರ್ನಾಟಕದಲ್ಲಿಯೂ ವಾಲ್ಮೀಕಿ ಜಯಂತಿ ಆಚರಣೆ ಡನೆಯುತ್ತಿದೆ. ವಾಲ್ಮೀಕಿ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಗುತ್ತದೆ. ನಾಯಕ, ಬೇಡ, ಬೇಡರ ಹಾಗೂ ವಾಲ್ಮೀಕಿ ಸಮುದಾಯದ ಸಂಘಟನೆಗಳು ಮೆರವಣಿಗೆಗಳನ್ನು ನಡೆಸುತ್ತವೆ. ಸಾಮಾಜಿಕ ಹೋರಾಟಗಳ ಇತಿಹಾಸವನ್ನು ಸ್ಮರಿಸುತ್ತವೆ. ಶಿಕ್ಷಣ, ಉದ್ಯೋಗ, ಮೀಸಲಾತಿ ಹಾಗೂ ರಾಜಕೀಯ ಪ್ರಾತಿನಿಧ್ಯದ ಬೇಡಿಕೆಗಳನ್ನು ಮುಂದಿಡುತ್ತವೆ.
ಎರಡೂ ಕಡೆ ವಾಲ್ಮೀಕಿಯೇ ಆರಾಧ್ಯ ವ್ಯಕ್ತಿ. ಎರಡೂ ಸಮುದಾಯಗಳು ತಮ್ಮ ಇತಿಹಾಸವನ್ನು ಅವರೊಂದಿಗೆ ಜೋಡಿಸಿಕೊಂಡಿವೆ. ಆದರೆ, ಅವುಗಳ ಸಾಮಾಜಿಕ ಇತಿಹಾಸ, ಸಾಂಪ್ರದಾಯಿಕ ಉದ್ಯೋಗಗಳು ಹಾಗೂ ಸಂವಿಧಾನಾತ್ಮಕ ವರ್ಗೀಕರಣ ಒಂದೇ ಆಗಿಲ್ಲ. ಉತ್ತರ ಭಾರತದ ವಾಲ್ಮೀಕಿ (ಬಾಲ್ಮೀಕಿ) ಸಮುದಾಯವು ಹಲವು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ್ದರೆ, ಕರ್ನಾಟಕದ ನಾಯಕ–ಬೇಡ–ವಾಲ್ಮೀಕಿ ಸಮುದಾಯವು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿದೆ.
ಇದು ಕೇವಲ ಆಡಳಿತಾತ್ಮಕ ವರ್ಗೀಕರಣದ ವ್ಯತ್ಯಾಸ ಮಾತ್ರವಲ್ಲ, ಭಾರತದ ಸಾಮಾಜಿಕ ಶ್ರೇಣೀಕರಣ, ಪ್ರಾದೇಶಿಕ ಇತಿಹಾಸ, ಸಮುದಾಯದ ಅಸ್ಮಿತೆಯ ವಿಷಯವೂ ಕೂಡ.
ಉತ್ತರ ಭಾರತದ ವಾಲ್ಮೀಕಿಗಳು ಯಾರು?
ಉತ್ತರ ಭಾರತದ ಪಂಜಾಬ್, ಹರಿಯಾಣ, ದೆಹಲಿ, ರಾಜಸ್ಥಾನ ಹಾಗೂ ಉತ್ತರ ಪ್ರದೇಶದ ಹಲವು ಪ್ರದೇಶಗಳಲ್ಲಿ ವಾಲ್ಮೀಕಿ (ಬಾಲ್ಮೀಕಿ) ಎಂಬ ಹೆಸರು ನಿರ್ದಿಷ್ಟ ದಲಿತ ಸಮುದಾಯದ ಸಾಮಾಜಿಕ ಗುರುತು. ಐತಿಹಾಸಿಕವಾಗಿ ಈ ಸಮುದಾಯದ ದೊಡ್ಡ ಭಾಗವನ್ನು ಪೌರ ಕಾರ್ಮಿಕ ಅರ್ಥಾತ್ ಮಲ ಹೊರುವ ಕೆಲಸಗಳಿಗೆ ಕಟ್ಟಿಹಾಕಲಾಗಿತ್ತು. ಇವರನ್ನು ಭಂಗಿ, ಚೂಹ್ರಾ, ಮೆಹ್ತರ್ ಮೊದಲಾದ ಹೆಸರುಗಳಿಂದ ಕರೆಯಲಾಗುತ್ತಿತ್ತು. ಇವುಗಳಲ್ಲಿ ಕೆಲವು ಹೆಸರುಗಳು ಜಾತಿ ಅವಮಾನದ ಇತಿಹಾಸ ಹೊಂದಿವೆ.
ಈ ಸಮುದಾಯಗಳ ಜನರು ಸಾರ್ವಜನಿಕ ಸ್ಥಳಗಳಲ್ಲಿ ಅಸ್ಪೃಶ್ಯತೆ, ವಸತಿ ಪ್ರದೇಶಗಳಲ್ಲಿ ಪ್ರತ್ಯೇಕತೆ, ಶಿಕ್ಷಣ ಮತ್ತು ಉದ್ಯೋಗ ಅವಕಾಶಗಳಿಂದ ವಂಚನೆಗೆ ತುತ್ತಾಗಿದ್ದರು. ಈ ವಂಚನೆಗಳನ್ನ ಮೀರಿ ಮುಂದೆ ಬರಲು ಅವರು ಎದುರಿಸಿದ್ದ ಸಾಂಪ್ರದಾಯಿಕ ಅಡೆತಡೆಗಳು ಅಷ್ಟಿಷ್ಟಲ್ಲ. ಇಂದಿಗೂ ಕೂಡ ಈ ಅಡೆತಡೆಗಳು ಮತ್ತು ಜಾತಿ ಶೋಷಣೆಯ ಪರಿಣಾಮಗಳು ಸಂಪೂರ್ಣವಾಗಿ ಅಳಿದುಹೋಗಿಲ್ಲ. ವರದಿಗಳು ಹೇಳುವಂತೆ, ಉತ್ತರ ಭಾರತದಲ್ಲಿ ಪರಿಶಿಷ್ಟ ಜಾತಿಗಳಲ್ಲಿಯೇ ವಾಲ್ಮೀಕಿ ಸಮುದಾಯವು ತೀವ್ರ ಅಂಚಿನಲ್ಲಿರುವ ಸಮುದಾಯಗಳಲ್ಲಿ ಒಂದಾಗಿದೆ.
ಅವಮಾನಕರ ಜಾತಿ ಹೆಸರಿನಿಂದ ವಾಲ್ಮೀಕಿ ಗುರುತಿನತ್ತ
ಉತ್ತರ ಭಾರತದ ವಾಲ್ಮೀಕಿ ಸಮುದಾಯದ ಸಾಮಾಜಿಕ ಇತಿಹಾಸದಲ್ಲಿ 20ನೇ ಶತಮಾನದಲ್ಲಿ ಪ್ರಮುಖ ಬದಲಾವಣೆಯೊಂದು ಘಟಿಸಿತು. ಯಾರನ್ನು ಸಮಾಜ ಅಸ್ಪೃಶ್ಯರೆಂದು ಗುರುತಿಸಲಾಗಿತ್ತೋ, ಅದೇ ಸಮುದಾಯದ ವಾಲ್ಮೀಕಿಯನ್ನು ರಾಮಾಯಣದ ರಚನಕಾರನೆಂದು ಗೌರವಿಸಲ್ಪಡಲಾಗುತ್ತಿತ್ತು. ತಮ್ಮದೇ ಸಮುದಾಯದ ನಾಯಕನನ್ನು ಗೌರವಿಸುವ ಈ ಸಮಾಜ, ತಮ್ಮನ್ನು ಕೀಳಾಗಿ ಕಾಣುವುದರ ವಿರುದ್ಧ ಸಿಡಿದ ಸಮುದಾಯಗಳು, ಸಮಾಜ ಹೇರಿದ್ದ ಅವಮಾನಕರ ಗುರುತನ್ನು ತಿರಸ್ಕರಿಸಿ, ಸಾಂಸ್ಕೃತಿಕ ಗೌರವವನ್ನು ಪ್ರತಿಪಾದಿಸಲು ಪ್ರಯತ್ನ ನಡೆಸಿದವು.
ಈ ಸಮುದಾಯಗಳು, ತಮ್ಮ ಮೇಲೆ ಹೇರಲಾಗಿದ್ದ ಅವಮಾನಕರ ಜಾತಿ ಹೆಸರುಗಳನ್ನು ತಿರಸ್ಕರಿಸಿ, ಮಹರ್ಷಿ ವಾಲ್ಮೀಕಿಯ ಹೆಸರನ್ನು ಸಮುದಾಯದ ಸ್ವಾಭಿಮಾನದ ಸಂಕೇತವಾಗಿ ಸ್ವೀಕರಿಸಿದವು. “1920–30ರ ದಶಕಗಳಲ್ಲಿ ವಾಲ್ಮೀಕಿ ಹೆಸರು ಉತ್ತರ ಭಾರತದ ಸ್ವಚ್ಛತಾ ಕೆಲಸಕ್ಕೆ ಸಂಬಂಧಿಸಿದ್ದ ಸಮುದಾಯಗಳಲ್ಲಿ ಗೌರವಯುತ ಸಮುದಾಯ ಗುರುತಾಗಿ ನೆಲೆಯೂರಿತು” ಎಂದು ಸಂಶೋಧಕಿ ಮಾಯಾ ಸುಜುಕಿ ಅವರ ಅಧ್ಯಯನ ವರದಿಯೂ ಹೇಳುತ್ತದೆ.
ಇನ್ನು, ಕರ್ನಾಟಕದಲ್ಲಿ ಮಹರ್ಷಿ ವಾಲ್ಮೀಕಿಯನ್ನು ತಮ್ಮ ಮೂಲಪುರುಷನೆಂದು ಗೌರವಿಸುವ ಪ್ರಮುಖ ಸಮುದಾಯ ನಾಯಕ/ಬೇಡ ಸಮುದಾಯ. ಈ ಸಮುದಾಯದ ಸಾಮಾಜಿಕ ಇತಿಹಾಸ ಉತ್ತರ ಭಾರತದ ವಾಲ್ಮೀಕಿ ದಲಿತರ ಇತಿಹಾಸಕ್ಕಿಂತ ವಿಭಿನ್ನವಾಗಿದೆ. ಕರ್ನಾಟಕದ ಬೇಡ, ಬೇಡರ, ನಾಯಕ, ನಾಯಕಮಕ್ಕಳು, ತಳವಾರ ಸಮುದಾಯಗಳ ಕೆಲವು ಗುಂಪುಗಳು ಬೇಟೆ, ಕಾವಲು, ಸೈನಿಕ ಸೇವೆ, ಗ್ರಾಮ ರಕ್ಷಣೆ, ಪಶುಪಾಲನೆ ಹಾಗೂ ಕೃಷಿಯೊಂದಿಗೆ ಸಂಬಂಧ ಹೊಂದಿದ್ದವು. ಕೆಲವು ಕಾಲಘಟ್ಟಗಳಲ್ಲಿ ಒಂದಷ್ಟು ನಾಯಕ ಕುಟುಂಬಗಳು ಸ್ಥಳೀಯ ಆಡಳಿತ, ಪಾಳೇಗಾರಿಕೆ ಹಾಗೂ ಸೈನಿಕ ನಾಯಕತ್ವದಲ್ಲಿಯೂ ಪಾತ್ರ ವಹಿಸಿದ್ದವು. ಆದರೆ, ಸಮುದಾಯದಲ್ಲಿ ಭೂಹೀನ ಕಾರ್ಮಿಕರು, ಸಣ್ಣ ರೈತರು, ಕೃಷಿಕೂಲಿಕಾರರು ಹಾಗೂ ಆರ್ಥಿಕವಾಗಿ ಹಿಂದುಳಿದವರ ಸಂಖ್ಯೆಯೇ ಹೆಚ್ಚು.
ಉತ್ತರ ಭಾರತದಲ್ಲಿ ವಾಲ್ಮೀಕಿ ಜಯಂತಿ: ಆಚರಣೆಗಿಂತ ಮಿಗಿಲಾದ ಸ್ವಾಭಿಮಾನದ ಹೋರಾಟ
ಉತ್ತರ ಭಾರತದ ವಾಲ್ಮೀಕಿ ಜಯಂತಿಯನ್ನು ಕೇವಲ ರಾಮಾಯಣದ ಆದಿಕವಿಗೆ ಸಲ್ಲಿಸುವ ಗೌರವ ಎಂದಷ್ಟೇ ನೋಡಲಾಗುವುದಿಲ್ಲ. ಅನೇಕ ಭಾಗಗಳಲ್ಲಿ ವಾಲ್ಮೀಕಿ ಹೆಸರಿನಲ್ಲಿ ವಿಶೇಷ ಪೂಜೆಗಳು, ಶೋಭಾಯಾತ್ರೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಮುದಾಯ ಸಭೆಗಳು ನಡೆಯುತ್ತವೆ. ವಾಲ್ಮೀಕಿ ಮೂರ್ತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವ ಸಂಪ್ರದಾಯವೂ ದೇಶದ ವಿವಿಧ ಭಾಗಗಳಲ್ಲಿ ಕಂಡುಬರುತ್ತದೆ.
ಇದೆಲ್ಲವೂ ಕೇವಲ ಸಂಭ್ರಮದ ಭಾಗವಲ್ಲ; ಬದಲಾಗಿ, ಶತಮಾನಗಳಿಂದ ತಮ್ಮನ್ನು ಅಸ್ಪೃಶ್ಯರೆಂದು ಪರಿಗಣಿಸಿದ್ದ ಸಮಾಜದ ಎದುರು ತಾವು ಜ್ಞಾನ, ಸಾಹಿತ್ಯ ಹಾಗೂ ಆಧ್ಯಾತ್ಮಿಕ ಪರಂಪರೆಯನ್ನು ಹೊಂದಿರುವ ಸಮುದಾಯವೆಂದು ಪ್ರತಿಪಾದಿಸುವುದರ ಸಂಕೇತವೂ ಆಗಿದೆ ಎಂದು ಸಮುದಾಯ ಭಾವಿಸಿದೆ.
ಕರ್ನಾಟಕದಲ್ಲಿ ವಾಲ್ಮೀಕಿ ಜಯಂತಿ: ಸಾಂಸ್ಕೃತಿಕ ಅಸ್ಮಿತೆ ಮತ್ತು ರಾಜಕೀಯ ಪ್ರಾತಿನಿಧ್ಯ
ಕರ್ನಾಟಕದಲ್ಲಿ ವಾಲ್ಮೀಕಿ ಜಯಂತಿಗೆ ಉತ್ತರ ಭಾರತಕ್ಕಿಂತ ವಿಭಿನ್ನ ಆಯಾಮವಿದೆ. ಇಲ್ಲಿ ನಾಯಕ/ಬೇಡ ಸಮುದಾಯವು ಮಹರ್ಷಿ ವಾಲ್ಮೀಕಿಯನ್ನು ತನ್ನ ಸಾಂಸ್ಕೃತಿಕ ಮೂಲಪುರುಷನಾಗಿ ಗೌರವಿಸುತ್ತದೆ. ಸಮುದಾಯದ ವಿವಿಧ ಸಂಘಟನೆಗಳು ವಾಲ್ಮೀಕಿ ಜಯಂತಿಯನ್ನು ತಮ್ಮ ಇತಿಹಾಸ, ಸಾಮಾಜಿಕ ಅಸ್ಮಿತೆ ಹಾಗೂ ಸಮುದಾಯದ ಒಗ್ಗಟ್ಟನ್ನು ಪ್ರದರ್ಶಿಸುವ ಸಂದರ್ಭವಾಗಿ ಬಳಸುತ್ತವೆ.
ಕರ್ನಾಟಕದಲ್ಲಿ ವಾಲ್ಮೀಕಿ ಜಯಂತಿಯನ್ನು ರಾಜ್ಯ ಸರ್ಕಾರವು ಅಧಿಕೃತವಾಗಿ ಆಚರಿಸುತ್ತದೆ. 2025ರ ಸರ್ಕಾರಿ ರಜಾಪಟ್ಟಿಯಲ್ಲಿಯೂ ಅಕ್ಟೋಬರ್ 7ರಂದು ಮಹರ್ಷಿ ವಾಲ್ಮೀಕಿ ಜಯಂತಿಗೆ ಸಾರ್ವತ್ರಿಕ ರಜೆ ಘೋಷಿಸಲಾಗಿತ್ತು. ವಾಲ್ಮೀಕಿ ಜಯಂತಿಯ ಕಾರ್ಯಕ್ರಮಗಳಲ್ಲಿ ವಾಲ್ಮೀಕಿ ಅವರ ಸಾಹಿತ್ಯಿಕ ಕೊಡುಗೆಯ ಜೊತೆಗೆ ಸಮುದಾಯದ ಶೈಕ್ಷಣಿಕ ಪ್ರಗತಿ, ಉದ್ಯೋಗಾವಕಾಶಗಳು, ಮೀಸಲಾತಿ ಹಾಗೂ ಅಭಿವೃದ್ಧಿ ಕುರಿತೂ ಚರ್ಚೆಗಳು ನಡೆಯುತ್ತವೆ.
ಈ ಲೇಖನ ಓದಿದ್ದೀರಾ?: ಗಡಿಯಲ್ಲಿ ಚೀನಾ ಅತಿಕ್ರಮಣ; ಮೌನಕ್ಕೆ ಸರಿದ 56 ಇಂಚಿನ ಎದೆಯ ಮೋದಿ!
ವಿಶೇಷವಾಗಿ ಪರಿಶಿಷ್ಟ ಪಂಗಡದ ಮೀಸಲಾತಿಯ ಪ್ರಮಾಣ ಹೆಚ್ಚಿಸಬೇಕೆಂಬ ಹೋರಾಟಗಳಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರ ಪಾತ್ರ ಹೆಚ್ಚು. ಈ ಹೋರಾಟಗಳ ಫಲವಾಗಿ, 2022ರಲ್ಲಿ ಕರ್ನಾಟಕ ಸರ್ಕಾರ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು 3%ರಿಂದ 7%ಗೆ ಹೆಚ್ಚಿಸುವ ನಿರ್ಧಾರ ಕೈಗೊಂಡಿತು. ಆದಾಗ್ಯೂ, ನಾನಾ ತೊಡಕುಗಳಿಂದಾಗಿ ಈ ಪರಿಷ್ಕೃತ ಮೀಸಲಾತಿ ಜಾಲ್ತಿಗೆ ಬಂದಿಲ್ಲ.
ವಾಲ್ಮೀಕಿ ಜಯಂತಿಯ ನಿಜವಾದ ಸಂದೇಶವೇನು?
ಉತ್ತರ ಭಾರತದಲ್ಲಿ ವಾಲ್ಮೀಕಿ ಜಯಂತಿಯನ್ನು ಆಚರಿಸುವ ದಲಿತ ಸಮುದಾಯಗಳ ಇತಿಹಾಸವು ಜಾತಿ ಅವಮಾನವನ್ನು ಎದುರಿಸಿ ಗೌರವಯುತ ಬದುಕನ್ನು ಕಟ್ಟಿಕೊಳ್ಳುವ ಹೋರಾಟದೊಂದಿಗೆ ಬೆಸೆದುಕೊಂಡಿದೆ.
ಕರ್ನಾಟಕದಲ್ಲಿ ಅದೇ ಜಯಂತಿ ನಾಯಕ/ಬೇಡ ಸಮುದಾಯದ ಬುಡಕಟ್ಟು ಅಸ್ಮಿತೆ, ಸಾಮಾಜಿಕ ಸಂಘಟನೆ ಹಾಗೂ ರಾಜಕೀಯ ಪ್ರಾತಿನಿಧ್ಯದ ಆಶಯಗಳೊಂದಿಗೆ ಬೆಸೆದುಕೊಂಡಿದೆ. ಎರಡೂ ಆಚರಣೆಗಳು ತಮ್ಮದೇ ಆದ ಮಹತ್ವವನ್ನು ಹೊಂದಿವೆ. ಆದರೆ, ಮಹರ್ಷಿ ವಾಲ್ಮೀಕಿಯ ಹೆಸರಿನಲ್ಲಿ ನಡೆಯುವ ಉತ್ಸವಗಳು ಅವರೊಂದಿಗೆ ಗುರುತಿಸಿಕೊಳ್ಳುವ ಸಮುದಾಯಗಳ ನೈಜ ಬದುಕಿನ ಸಮಸ್ಯೆಗಳನ್ನೂ ಮುನ್ನೆಲೆಗೆ ತರಬೇಕಾಗಿದೆ.
ಉತ್ತರ ಭಾರತದಲ್ಲಿ ವಾಲ್ಮೀಕಿ ಜಯಂತಿಯ ಮೆರವಣಿಗೆಗಳು ನಡೆಯುವಾಗ, ಅದೇ ಸಮುದಾಯದ ಸ್ವಚ್ಛತಾ ಕಾರ್ಮಿಕರು ಅಪಾಯಕಾರಿ ಪರಿಸ್ಥಿತಿಗಳಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ಏಕೆ ಮುಂದುವರಿದಿದೆ ಎಂಬುದನ್ನು ಪ್ರಶ್ನಿಸಬೇಕು. ಕರ್ನಾಟಕದಲ್ಲಿ ವಾಲ್ಮೀಕಿ ಜಯಂತಿಯ ವೇದಿಕೆಗಳಲ್ಲಿ ರಾಜಕೀಯ ನಾಯಕರು ಭಾಷಣ ಮಾಡುವಾಗ, ಸಮುದಾಯದ ಬಡ ಕುಟುಂಬಗಳಿಗೆ ಶಿಕ್ಷಣ, ಭೂಮಿ, ಉದ್ಯೋಗ ಮತ್ತು ಅಭಿವೃದ್ಧಿಯ ಅವಕಾಶಗಳು ಎಷ್ಟು ತಲುಪಿವೆ ಎಂಬುದನ್ನು ಪರಿಶೀಲಿಸಬೇಕು. ಇದು ಮಾನವ ಘನತೆ ಮತ್ತು ಸಮಾನತೆಯ ಆಶಯವೂ ಆಗಿದೆ.





