ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ನೂತನ ಸಚಿವ ಪ್ರಿಯಾಂಕ್ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಖಾತೆಯ ಜವಾಬ್ದಾರಿ ವಹಿಸಿಕೊಂಡ ಮೊದಲ ದಿನವೇ ಮಾನವೀಯತೆ ಮೆರೆದಿದ್ದಾರೆ.
ವಿಶೇಷಚೇತನ ಬಸವರಾಜು ಎಂಬ ವ್ಯಕ್ತಿ ಸೋಮವಾರ ಬೆಳಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿಯಾಗಿ, “ಸ್ವಉದ್ಯೋಗ ಮಾಡಲು, ಅನುವು ಮಾಡಿಕೊಡಿ” ಎಂದು ಮನವಿ ಮಾಡಿಕೊಂಡರು.
ಬಸವರಾಜು ಮನವಿ ಸ್ವೀಕರಿಸಿದ ಸಚಿವರು, “ಸಮಾಜದಲ್ಲಿ ಇಂತಹ ಲಕ್ಷಾಂತರ ವಿಶೇಷಚೇತನರು ನಮ್ಮೊಂದಿಗೆ ಜೀವನ ಸಾಗಿಸುತ್ತಿದ್ದಾರೆ, ಅವರಿಗೆ ಸ್ವಲ್ಪ ಬೆನ್ನುತಟ್ಟಿದರೆ ಸಾಕು ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳುತ್ತಾರೆ. ಶೀಘ್ರದಲ್ಲಿಯೇ ಅವರ ಕನಸಿನ ಚಿಲ್ಲರೆ ಅಂಗಡಿಗೆ ತೆರೆಯಲು ಸಹಾಯ ಮಾಡುತ್ತೇನೆ” ಎಂದು ಭರವಸೆ ನೀಡಿದ್ದಾರೆ.
“ಮೂಲತಃ ನಮ್ಮ ಚಿತ್ತಾಪುರದವರಾಗಿದ್ದು ಬೆಂಗಳೂರಿನ ಮಾಗಡಿ ರಸ್ತೆಯ ಸುಂಕದಕಟ್ಟೆ ಬಸ್ ನಿಲ್ದಾಣದ ಬಳಿ ಜೀವನೋಪಯೋಗಕ್ಕಾಗಿ, ಚಿಲ್ಲರೆ ಅಂಗಡಿ ಹಾಕಿಕೊಳ್ಳಬೇಕು, ಯಾರ ಮೇಲೂ ಅವಲಂಬಿತರಾಗಬಾರದು ಎಂಬ ಅವರ ಉದ್ದೇಶ ನನ್ನಲ್ಲಿ ಸ್ಪೂರ್ತಿ ತುಂಬಿದೆ” ಎಂದು ಸಚಿವರು ತಿಳಿಸಿದ್ದಾರೆ.
