ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಹುಣಸೂರು ತಾಲ್ಲೂಕು ಹಿರಿಕ್ಯಾತನಹಳ್ಳಿ ಗ್ರಾಮದ ಅಗ್ನಿವೀರ್ ನಂದನ್ (24) ಅವರ ಕುಟುಂಬಕ್ಕೆ ಹುಣಸೂರು ಕ್ಷೇತ್ರದ ಶಾಸಕ ಜಿ.ಡಿ. ಹರೀಶ್ ಗೌಡ ಅವರು ವೈಯಕ್ತಿಕವಾಗಿ ₹2 ಲಕ್ಷ ಆರ್ಥಿಕ ನೆರವು ನೀಡಿದರು.
ದೇಶದ ರಕ್ಷಣಾ ಕಾರ್ಯದಲ್ಲಿ ಅಗ್ನಿವೀರ್ ಆಗಿ ಸೇವೆ ಸಲ್ಲಿಸುತ್ತಿದ್ದ ನಂದನ್ ಅವರು 15 ದಿನಗಳ ಹಿಂದೆ ಹಿನಕಲ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು.
ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಜಿ.ಡಿ. ಹರೀಶ್ ಗೌಡ ಅವರು ಮೃತ ನಂದನ್ ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ದೇಶ ಸೇವೆಯಲ್ಲಿ ತೊಡಗಿದ್ದ ಯುವಕನ ಅಕಾಲಿಕ ನಿಧನ ಕುಟುಂಬಕ್ಕೆ ಮಾತ್ರವಲ್ಲದೆ ಸಮಾಜ ಹಾಗೂ ದೇಶಕ್ಕೂ ತುಂಬಲಾರದ ನಷ್ಟವಾಗಿದೆ ಎಂದು ವಿಷಾದಿಸಿದರು.
ಈ ವಿಶೇಷ ಸುದ್ದಿ ಓದಿದ್ದೀರಾ?ಮಳೆಯೂ ಇಲ್ಲ, ಬೆಳೆಯೂ ಇಲ್ಲ; ಕಾವೇರಿ ಹರಿದಿದ್ದು ತಮಿಳುನಾಡಿನತ್ತ-ರೈತನ ಬದುಕಿನ ಮುಂದಿನ ದಾರಿ ಏನು?
ಇದೇ ವೇಳೆ ರಸ್ತೆ ಸುರಕ್ಷತೆಯ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ವಾಹನ ಸವಾರರು ವೇಗಕ್ಕಿಂತ ಸುರಕ್ಷತೆಗೆ ಆದ್ಯತೆ ನೀಡಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹೆಲ್ಮೆಟ್ ಹಾಗೂ ಸೀಟ್‌ಬೆಲ್ಟ್‌ಗಳನ್ನು ಕಡ್ಡಾಯವಾಗಿ ಬಳಸುವುದರೊಂದಿಗೆ ಅತಿವೇಗ ಮತ್ತು ಅಜಾಗರೂಕ ಚಾಲನೆಯನ್ನು ತಪ್ಪಿಸಬೇಕು. ಒಂದು ಕ್ಷಣದ ಎಚ್ಚರಿಕೆ ಒಂದು ಕುಟುಂಬದ ಬದುಕನ್ನು ಉಳಿಸಬಲ್ಲದು ಎಂದು ಮನವಿ ಮಾಡಿದರು.




