ಕೃತಿ: The Buddha and His Dhamma (ಬುದ್ಧ ಮತ್ತು ಆತನ ಧಮ್ಮ)
ಮೊದಲ ಮುದ್ರಣ: 1957, People’s Education Society
ಮಹಾರಾಷ್ಟ್ರ ಸರ್ಕಾರದ ಪ್ರಕಟಣೆ: 1992
ಇಂಗ್ಲಿಷ್ ಸಂಪುಟ- 11
ಕನ್ನಡ ಸಂಪುಟ- 10
Prabhat Prakashan Edition: 2025
ಸಾಗರದಷ್ಟು ವಿಸ್ತಾರವಾದ ಬೌದ್ಧ ಸಾಹಿತ್ಯವನ್ನು ಸಾಮಾನ್ಯ ಧಮ್ಮಾಸಕ್ತ ಓದಿ ಅರಗಿಸಿಕೊಳ್ಳುವುದು ಕಷ್ಟ. ಹೀಗಾಗಿ ಎಲ್ಲರಿಗೂ ಧಮ್ಮದ ತತ್ವಗಳು ದಕ್ಕುವಂತೆ ಬೈಬಲ್ ಮಾದರಿಯಲ್ಲಿ ಬುದ್ಧನ ಸಂಕ್ಷಿಪ್ತ ಜೀವನ, ಆತನ ಪ್ರಮುಖ ಸಂಭಾಷಣೆಗಳು, ಬೌದ್ಧ ಆಚರಣೆಗಳು, ಹುಟ್ಟು, ದೀಕ್ಷೆ, ವಿವಾಹ, ಸಾವು ಮುಂತಾದ ವಿಷಯಗಳನ್ನೊಳಗೊಂಡ ಕೃತಿ ರಚಿಸಬೇಕೆಂದು ಬಾಬಾಸಾಹೇಬರು ಬಯಸಿದರು. ಭಾರತ, ಬರ್ಮಾ ಮತ್ತು ಸಿಲೋನ್ ದೇಶಗಳಲ್ಲಿದ್ದ ಹಲವು ಬೌದ್ಧ ವಿದ್ವಾಂಸರೊಂದಿಗೆ ಸಂಪರ್ಕ ಬೆಳೆಸಿ ಬೌದ್ಧಧರ್ಮ ಹಾಗೂ ಅದರ ಆಚರಣೆಗೆ ಸಂಬಂಧಿಸಿದ ಅಪಾರ ಸಾಹಿತ್ಯವನ್ನು ಸಂಗ್ರಹಿಸಿ ರೂಪಿಸಿದ ಕೃತಿಯೇ ‘ದಿ ಬುದ್ಧ ಅಂಡ್ ಹಿಸ್ ಧಮ್ಮ’. ಬುದ್ಧನ ಮೂಲತತ್ವಗಳ ಕುರಿತು ಬೆಳಕು ಚೆಲ್ಲುವ ಈ ಕೃತಿ, ಹೊಸ ಚರ್ಚೆಗಳಿಗೂ ನಾಂದಿ ಹಾಡಿತು. ಸಿದ್ಧಾರ್ಥ ರಾತ್ರೋರಾತ್ರಿ ಹೆಂಡತಿ ಮಕ್ಕಳನ್ನು ಬಿಟ್ಟು ಹೋದನೆಂಬ ಕತೆಯನ್ನು ಅಲ್ಲಗಳೆಯುವ ಅಂಬೇಡ್ಕರ್ ಅವರು, ಶಾಕ್ಯರು ಮತ್ತು ಕೋಲಿಯರ ನಡುವೆ ರೋಹಿಣಿ ನದಿ ವಿಚಾರವಾಗಿ ನಡೆಯುತ್ತಿದ್ದ ಸಂಘರ್ಷವೇ ಸಿದ್ಧಾರ್ಥನು ಅರಮನೆ ತೊರೆಯಲು ಕಾರಣ ಎನ್ನುತ್ತಾರೆ. ಬುದ್ಧನ ಅನಾತ್ಮವಾದ, ಪುನರ್ಜನ್ಮ ಪರಿಕಲ್ಪನೆಯ ಆಳಗಳನ್ನು ಶೋಧಿಸುತ್ತಾರೆ. ಧಮ್ಮಕ್ಕೂ ಮತ್ತು ಧರ್ಮಕ್ಕೂ ಇರುವ ವ್ಯತ್ಯಾಸಗಳ ಕುರಿತು ಈ ಕೃತಿ ಬೆಳಕು ಚೆಲ್ಲುತ್ತದೆ. ಬೌದ್ಧಧರ್ಮ ಮಾತ್ರ ಸಾರ್ವತ್ರಿಕ ನೈತಿಕ ನಿಯಮಗಳನ್ನು ಪ್ರತಿಷ್ಠಾಪಿಸಬಲ್ಲದು ಮತ್ತು ಜಗತ್ತಿನ ಮರುನಿರ್ಮಾಣಕ್ಕೆ ಪರಿಹಾರಗಳನ್ನು ನೀಡಬಲ್ಲದು ಎಂಬುದನ್ನು ಈ ಕೃತಿಯ ಮೂಲಕ ಬಾಬಾಸಾಹೇಬರು ಸ್ಪಷ್ಟವಾಗಿ ಪ್ರತಿಪಾದಿಸಿದ್ದಾರೆ.
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬದುಕಿನ ಕೊನೆಯ ದಿನದವರೆಗೂ ಬರೆಯುತ್ತಾ ಹೋದ ‘ಬುದ್ಧ ಮತ್ತು ಅವನ ಧಮ್ಮ’ ಗ್ರಂಥವು ಅವರ ಬರಹಗಳಲ್ಲಿಯೇ ಬಹಳ ಮಹತ್ವದ್ದು. ಅವರೇ ಹೇಳುವಂತೆ ಸುಮಾರು ಐದೂವರೆ ವರ್ಷಗಳ ಕಾಲದ ಅಧ್ಯಯನ, ಶೋಧನೆ ಮತ್ತು ಚಿಂತನೆಯ ಫಲ ಈ ಪುಸ್ತಕ. ಭಾರತೀಯ ಸಮಾಜ ಪ್ರಜಾಸತ್ತಾತ್ಮಕ ಪ್ರಗತಿಯ ಪಥದಲ್ಲಿ ಸಾಗಬೇಕಾದರೆ ಬೌದ್ಧ ತತ್ವವೇ ಸರಿಯಾದ ಮಾರ್ಗ ಎಂದು ಅಂಬೇಡ್ಕರ್ ಅವರಿಗೆ ಅನಿಸಿದ್ದರಿಂದ ಬೌದ್ಧ ಧರ್ಮವನ್ನು ಮರು ವ್ಯಾಖ್ಯಾನಿಸುವ ಮತ್ತು ಪುನಶ್ಚೇತನಗೊಳಿಸುವ ಪ್ರಯತ್ನವನ್ನು ತಮ್ಮ ಅನಾರೋಗ್ಯದ ನಡುವೆಯೂ ಮುಂದುವರಿಸುತ್ತಾರೆ. ಮೂವತ್ತೈದು ವರ್ಷಗಳ ಕಾಲ ಧರ್ಮದ ಬಗೆಗೆ ಅಧ್ಯಯನ ಮಾಡಿದ್ದಾಗಿ ಪುಸ್ತಕದ ಪೀಠಿಕೆಯಲ್ಲಿ ಹೇಳುವ ಅಂಬೇಡ್ಕರ್, ‘ವಿಜ್ಞಾನ ತಿಳಿದಿರುವ ಒಬ್ಬ ಆಧುನಿಕ ಮನುಷ್ಯನಿಗೆ ಧರ್ಮವೊಂದು ಬೇಕಾದಲ್ಲಿ ಅವನು ಸ್ವೀಕರಿಸಬಹುದಾದ ಏಕೈಕ ಧರ್ಮವೆಂದರೆ ಬೌದ್ಧಧರ್ಮ’ ಎಂಬ ಖಚಿತ ಅಭಿಪ್ರಾಯಕ್ಕೆ ಬರುತ್ತಾರೆ. ಆದಷ್ಟು ಬೇಗ ಪುಸ್ತಕವನ್ನು ಪ್ರಕಟಿಸಬೇಕೆಂಬ ಅವರ ಎಲ್ಲ ಪ್ರಯತ್ನಗಳೂ ಹಣದ ಕೊರತೆಯಿಂದಾಗಿ ವಿಫಲವಾದವು. 1956ರ ಡಿಸೆಂಬರ್ 5ರ ರಾತ್ರಿ ಪೀಠಿಕೆಯನ್ನು ಕೊನೆಯದಾಗಿ ತಿದ್ದಿ ವಿರಮಿಸಿದ ಅಂಬೇಡ್ಕರ್ ಚಿರನಿದ್ರೆಗೆ ಜಾರಿದರು. ಅವರೇ ಮುಂಬೈನಲ್ಲಿ ಸ್ಥಾಪಿಸಿದ್ದ ಸಿದ್ಧಾರ್ಥ ಕಾಲೇಜು 1957ರಲ್ಲಿ ಆ ಪುಸ್ತಕವನ್ನು ಪ್ರಕಟಿಸಿತು.
ಪ್ರಾಥಮಿಕ ಶಾಲೆಯಲ್ಲಿದ್ದಾಗಲೆ ಅಂಬೇಡ್ಕರ್ ಅವರಿಗೆ ಬುದ್ಧನ ಪರಿಚಯವಾಗುತ್ತದೆ. ಅವರು ನಾಲ್ಕನೇ ತರಗತಿಯ ಇಂಗ್ಲಿಷ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದಾಗ ಉಡುಗೊರೆಯಾಗಿ ಸಿಕ್ಕ ಕೃತಿ ಬುದ್ಧನ ಕುರಿತದ್ದಾಗಿರುತ್ತದೆ. ಅಂಬೇಡ್ಕರ್ ಅವರ ತಂದೆಯ ಸ್ನೇಹಿತರಾದ ದಾದ ಕೆಲೂಸ್ಕರ್ ಅವರೇ ಬರೆದಿದ್ದ ಬುದ್ಧನ ಜೀವನ ಕುರಿತ ಪುಸ್ತಕ ಅವರ ಕೈ ಸೇರಿರುತ್ತದೆ. ಅತೀವ ಆಸಕ್ತಿಯಿಂದ ಪುಸ್ತಕ ಓದಿದ ಅಂಬೇಡ್ಕರ್, ‘ನನ್ನ ತಂದೆ ನನಗೇಕೆ ಬೌದ್ಧ ಸಾಹಿತ್ಯವನ್ನು ಪರಿಚಯಿಸಲಿಲ್ಲ’ ಎಂದುಕೊಳ್ಳುತ್ತಾರೆ. ‘ಬ್ರಾಹ್ಮಣರನ್ನು ಮತ್ತು ಕ್ಷತ್ರಿಯರ ಶ್ರೇಷ್ಠತೆಯನ್ನು ನಿರೂಪಿಸುವ ಹಾಗೂ ಶೂದ್ರರನ್ನು, ಅಸ್ಪೃಶ್ಯರನ್ನು ಅವಮಾನಿಸುವ ಮಹಾಭಾರತ ಮತ್ತು ರಾಮಾಯಣವನ್ನು ಓದಬೇಕೆಂದು ಏಕೆ ಒತ್ತಾಯಿಸುತ್ತಿದ್ದೀರಿ’ ಎಂಬ ಪ್ರಶ್ನೆಯನ್ನು ಬಾಲಕ ಅಂಬೇಡ್ಕರ್ ತಂದೆಗೆ ಕೇಳುತ್ತಾರೆ. ಆ ಪುರಾಣಗಳಲ್ಲಿನ ಕೆಲವು ಕೆಳ ಸಮುದಾಯದ ಪಾತ್ರಗಳು ಉನ್ನತ ಸ್ಥಾನಕ್ಕೇರಿದ್ದನ್ನು ತಿಳಿದು ನಮ್ಮಲ್ಲಿರುವ ಕೀಳರಿಮೆಯಿಂದ ಹೊರಬರಬಹುದೆಂಬ ಅವರ ತಂದೆಯವರ ಉತ್ತರದಿಂದ ಸಮಾಧಾನವಾಗುವುದಿಲ್ಲ. ಮಹಾಭಾರತದ ಯಾವ ಪಾತ್ರವೂ ಅವರಿಗೆ ಇಷ್ಟವಾಗುವುದಿಲ್ಲ. ವಾಲಿ-ಸುಗ್ರೀವ ಮತ್ತು ಸೂರ್ಪನಕ ಪ್ರಕರಣಗಳಲ್ಲಿ ರಾಮನ ವರ್ತನೆ ಹಾಗೂ ಅವನು ಸೀತೆಯೊಂದಿಗೆ ನಡೆದುಕೊಂಡ ರೀತಿ ಬಾಲಕ ಅಂಬೇಡ್ಕರ್ ಅವರಿಗೆ ಹಿಡಿಸುವುದಿಲ್ಲ. ಬೌದ್ಧ ಧರ್ಮದಲ್ಲಿ ಅವರಿಗೆ ಆಸಕ್ತಿ ಬೆಳೆಯುತ್ತಾ ಹೋದಂತೆ ಹಲವು ಪುಸ್ತಕಗಳನ್ನು ಮತ್ತು ಪಾಳಿ, ಸಂಸ್ಕೃತ ಹಾಗೂ ಟಿಬೆಟನ್ ಮೂಲಗಳ ಪಠ್ಯಗಳನ್ನು ಅಧ್ಯಯನ ಮಾಡುತ್ತಾರೆ. ತಮ್ಮ ಬಳಿ ಇದ್ದ ಪುಸ್ತಕಗಳ ಸಂಗ್ರಹಕ್ಕಾಗಿ ದೊಡ್ಡ ಗ್ರಂಥಾಲಯ ಮತ್ತು ಮನೆಯನ್ನು ಬಾಂಬೆಯ ದಾದರ್‌ನಲ್ಲಿ 1933ರಲ್ಲಿ ಕಟ್ಟುತ್ತಾರೆ. ಆ ಮನೆಗೆ ‘ರಾಜಗೃಹ’ ಎಂದು ಹೆಸರಿಡುತ್ತಾರೆ. ಬುದ್ಧನ ಬೋಧನೆಗಳು ಮೊದಲು ಸಂಗ್ರಹವಾದದ್ದು ಮತ್ತು ಅವನು ಹಲವು ಬಾರಿ ಉಳಿದುಕೊಂಡಿದ್ದು, ಉಪದೇಶ ನೀಡಿದ್ದು ಮಗಧ ರಾಜ್ಯದ ರಾಜಧಾನಿಯಾಗಿದ್ದ ಈ ಪ್ರಾಚೀನ ನಗರದಲ್ಲಿ (ಅಂದರೆ ರಾಜಗೃಹದಲ್ಲಿ).

ಕೊಲ್ಕತ್ತಾದ ಮಹಾಬೋಧಿ ಸಮಾಜ ಪ್ರಕಟಿಸುತ್ತಿದ್ದ ‘ದಿ ಮಹಾಬೋಧಿ’ ನಿಯತಕಾಲಿಕೆಗೆ 1950ರಲ್ಲಿ ಬರೆದ ‘ಬುದ್ಧ ಮತ್ತು ಅವನ ಧರ್ಮದ ಭವಿಷ್ಯ’ ಎಂಬ ಶೀರ್ಷಿಕೆಯ ಲೇಖನದಲ್ಲಿ, ‘ವೈಜ್ಞಾನಿಕ ಅರಿವಿರುವ ಸಮಾಜ ಒಪ್ಪಿಕೊಳ್ಳಬಹುದಾದ ಒಂದೇ ಧರ್ಮವೆಂದರೆ ಬೌದ್ಧಧರ್ಮವೆಂದೂ, ಇಲ್ಲದಿದ್ದರೆ ಅಂತಹ ಸಮಾಜ ಅವನತಿ ಹೊಂದುತ್ತದೆ ಎಂದೂ ಮತ್ತು ಈ ಆಧುನಿಕ ಜಗತ್ತು ತನ್ನನ್ನು ತಾನು ಪಾರುಮಾಡಿಕೊಳ್ಳಬೇಕಾದರೆ ಬೌದ್ಧಧರ್ಮ ಅಗತ್ಯವೆಂದು’ ಅವರು ವಾದಿಸಿದ್ದರು. ಬೌದ್ಧಧರ್ಮದ ಮೂಲತತ್ವವನ್ನು ತಿಳಿದುಕೊಳ್ಳಬಯಸುವ ವ್ಯಕ್ತಿ ಸಾಗರದಷ್ಟು ವಿಸ್ತಾರವಾದ ಬೌದ್ಧ ಸಾಹಿತ್ಯವನ್ನು ಓದುತ್ತಾನೆಂದು ನಿರೀಕ್ಷಿಸಲು ಸಾಧ್ಯವಿಲ್ಲದಿರುವುದರಿಂದ ಬೈಬಲ್‌ನಂತಹ ಗ್ರಂಥವೊಂದರ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಂತಹ ಗ್ರಂಥದಲ್ಲಿ ಬುದ್ಧನ ಸಂಕ್ಷಿಪ್ತ ಜೀವನ, ಚೀನಾದ ಧಮ್ಮಪದ, ಬುದ್ಧನ ಕೆಲವು ಪ್ರಮುಖ ಸಂಭಾಷಣೆಗಳು, ಬೌದ್ಧ ಆಚರಣೆಗಳು, ಹುಟ್ಟು, ದೀಕ್ಷೆ, ವಿವಾಹ, ಸಾವು ಮುಂತಾದ ವಿಷಯಗಳಿರಬೇಕೆಂದು ಹೇಳಿದ್ದರು. ಲೇಖನ ಪ್ರಕಟವಾದ ನಂತರ ಅಂತಹದೊಂದು ಪುಸ್ತಕ ಬರೆಯಬೇಕೆಂಬ ಕೋರಿಕೆಗಳಿಗೆ ಸ್ಪಂದಿಸಿದ ಅಂಬೇಡ್ಕರ್ ಅದರ ರಚನಾ ಕಾರ್ಯವನ್ನು ಆರಂಭಿಸುತ್ತಾರೆ.
ಇದನ್ನೂ ಓದಿರಿ: ಬಾಬಾಸಾಹೇಬರು ಬಿಡಿಸಿಟ್ಟ ‘ರಾಮ-ಕೃಷ್ಣರ ಒಗಟು’ ವಿವಾದ ಹುಟ್ಟುಹಾಕಿದ್ದೇಕೆ?
ಅಂಬೇಡ್ಕರ್ ಅವರು ಪಾಶ್ಚಿಮಾತ್ಯ ಮತ್ತು ಭಾರತೀಯ ಮೂಲಗಳನ್ನು ಬಳಸುತ್ತಾರೆ. ಭಾರತ, ಬರ್ಮಾ ಮತ್ತು ಸಿಲೋನ್ ದೇಶಗಳಲ್ಲಿದ್ದ ಹಲವು ಬೌದ್ಧ ವಿದ್ವಾಂಸರೊಂದಿಗೆ ಸಂಪರ್ಕ ಬೆಳೆಸಿ ಬೌದ್ಧಧರ್ಮ ಹಾಗೂ ಅದರ ಆಚರಣೆಗೆ ಸಂಬಂಧಿಸಿದ ಅಪಾರ ಸಾಹಿತ್ಯವನ್ನು ಸಂಗ್ರಹಿಸುತ್ತಾರೆ. ಅವರು ಬಹಳ ಇಷ್ಟಪಟ್ಟಿದ್ದು ಪಿ ಲಕ್ಷ್ಮೀನರಸು ಅವರ ‘ದಿ ಎಸ್ಸೆನ್ಸ್ ಆಫ್ ಬುದ್ಧಿಸಂ’ ಪುಸ್ತಕವನ್ನು. ಅದರ ಮೂರನೇ ಆವೃತ್ತಿಯನ್ನು 1948ರಲ್ಲಿ ಮರುಪ್ರಕಟಣೆ ಮಾಡುವ ಅಂಬೇಡ್ಕರ್, ನರಸುರವರ ದೃಷ್ಟಿಕೋನವನ್ನು ಮತ್ತು ವಿಷಯ ಮಂಡನೆಯನ್ನು ತಮ್ಮ ಮುನ್ನುಡಿಯಲ್ಲಿ ಪ್ರಶಂಸಿಸುತ್ತಾರೆ. ‘ಬುದ್ಧ ಮತ್ತು ಅವನ ಧಮ್ಮ’ ಕೂಡ ನರಸುರವರ ಪುಸ್ತಕದ ಮಾದರಿಯಲ್ಲಿದೆ. ಕೆಲವು ಘಟನೆಗಳ ಕಥಾನಕಗಳಲ್ಲಿ ಅಶ್ವಘೋಷನ ಬುದ್ಧಚರಿತದ ಭಾಷೆಯನ್ನು ಎರವಲು ಪಡೆದಿರುವುದಾಗಿ ಹೇಳುತ್ತಾರೆ.
ಸರಳತೆ ಮತ್ತು ಸ್ಪಷ್ಟತೆ ಈ ಪುಸ್ತಕದ ಪ್ರಮುಖ ಲಕ್ಷಣಗಳು. ಪಂಡಿತರಿಗಾಗಿ ಮತ್ತು ಸಾಮಾನ್ಯ ಜನರಿಗೆ ನಿಲುಕದಂತೆ ಬರೆಯಲಾಗಿದ್ದ ಹಿಂದೂ ಧಾರ್ಮಿಕ ಪಠ್ಯಗಳಿಗಿಂತ ಭಿನ್ನವಾಗಿ, ಎಲ್ಲರೂ ಓದಬೇಕೆಂಬ ಉದ್ದೇಶದಿಂದ ರಚಿತವಾದ ಬೈಬಲ್ ಅಂಬೇಡ್ಕರ್ ಅವರಿಗೆ ಮಾದರಿ.
ಪುಸ್ತಕ ಪ್ರಕಟವಾದ ನಂತರ ಸಂಪ್ರದಾಯವಾದಿ ಬೌದ್ಧರಿಂದ ಟೀಕೆಗಳು ಬಂದವು. ಬೌದ್ಧಧರ್ಮದ ತತ್ವ ಮತ್ತು ಅಧ್ಯಾತ್ಮವನ್ನು ಕೇವಲ ಒಂದು ಸಾಮಾಜಿಕ ವ್ಯವಸ್ಥೆಯನ್ನಾಗಿ ನೋಡಲಾಗಿದೆ ಎಂಬ ಆರೋಪ ಮಾಡಲಾಯಿತು. ಬುದ್ಧ ಮತ್ತು ಅವನ ಧಮ್ಮವನ್ನು ಹಿಂದಿ ಭಾಷೆಗೆ ಅನುವಾದಿಸಿರುವ ಹಾಗೂ ಅದರ ಪಾಳಿ ಮೂಲಗಳನ್ನು ಪರಿಶೀಲಿಸಿರುವ ಬೌದ್ಧ ಸನ್ಯಾಸಿ, ಚಿಂತಕ, ಬರಹಗಾರ ಭಾದಂತ್ ಆನಂದ್ ಕೌಸಲ್ಯಾಯನ್, ‘ಅಂಬೇಡ್ಕರ್ ರವರ ಪ್ರಮಾಣಪೂರ್ವಕವಾದ ನಿರೂಪಣೆಯ ನೆಲೆ ಭಿನ್ನವಾಗಿದೆಯೇ ಹೊರತು ಮೂಲ ಬೌದ್ಧ ತತ್ವಗಳನ್ನು ಅವರು ವಿರೂಪಗೊಳಿಸಿಲ್ಲ’ ಎಂದು ಖಚಿತವಾಗಿ ಹೇಳುತ್ತಾರೆ.
ಬುದ್ಧ ಮತ್ತು ಅವನ ಧಮ್ಮದ ಮೂಲ ಆವೃತ್ತಿಯಲ್ಲಿ ಉಲ್ಲೇಖಗಳಾಗಲೀ, ಆಕಾರಾದಿಯಾಗಲೀ ಇರಲಿಲ್ಲ. ಕೆಲವು ಲೇಖಕರು, ‘ಅಂಬೇಡ್ಕರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಕೊನೆಯ ದಿನಗಳಲ್ಲಿ ಪುಸ್ತಕವನ್ನು ಸಿದ್ಧಪಡಿಸಿದ್ದರಿಂದ ಉಲ್ಲೇಖಗಳನ್ನು ಒದಗಿಸಲು ಸಮಯವಿರಲಿಲ್ಲ’ ಎಂದು ಹೇಳಿದರೆ ಇತರರು, ‘ಆ ಪುಸ್ತಕವು ಜನಸಾಮಾನ್ಯರು ಓದಬಹುದಾದ ಬೈಬಲ್ ಮಾದರಿಯಲ್ಲಿ ಬರೆಯಲ್ಪಟ್ಟಿದ್ದರಿಂದ ಉಲ್ಲೇಖಗಳ ಮತ್ತು ಅಡಿಪಟ್ಟಿಗಳ ಭಾರವನ್ನು ಓದುಗರ ಮೇಲೆ ಹೇರಲು ಅಂಬೇಡ್ಕರ್ ಇಚ್ಛಿಸಲಿಲ್ಲ’ ಎಂದು ಹೇಳುತ್ತಾರೆ. ಕೌಸಲ್ಯಯಾನ್ ಅವರು ಪುಸ್ತಕದ ಹಿಂದಿ ಆವೃತ್ತಿಗೆ ಬರೆದ ಮುನ್ನುಡಿಯಲ್ಲಿ ಅಂಬೇಡ್ಕರ್ ಅವರ ಉಲ್ಲೇಖಗಳನ್ನು ನೀಡದಿದ್ದದ್ದು ಉದ್ದೇಶಪೂರ್ವಕವಾಗಿತ್ತೆಂದು ಹೇಳಿದ್ದರೂ ಮೂಲಗಳ ಬಗ್ಗೆ ಕುತೂಹಲವುಳ್ಳ ಓದುಗರಿಗಾಗಿ ಉಲ್ಲೇಖಗಳನ್ನು ನೀಡಿದ್ದರು. ಉಲ್ಲೇಖಗಳ ಸೇರ್ಪಡೆ ಯಾವುದೇ ರೀತಿಯಲ್ಲಿ ಉಪಯುಕ್ತವೂ ಅಲ್ಲ, ಸೂಕ್ತವೂ ಅಲ್ಲ ಎಂಬುದು ಕೆಲವರ ಅಭಿಪ್ರಾಯ. ಆದರೆ ಶೈಕ್ಷಣಿಕ ವಲಯದಲ್ಲಿ ಬೌದ್ಧಧರ್ಮದ ಬಗ್ಗೆ ನಡೆಯುತ್ತಿದ್ದ ಚರ್ಚೆಗಳಿಂದ ಬಹಳ ದಿನಗಳ ಕಾಲ ಈ ಪುಸ್ತಕವನ್ನು ಹೊರಗಿಡಲಾಗಿತ್ತೆಂಬುದು ನಿಜ. ಆಕಾಶ್ ಸಿಂಗ್ ರಾಥೋರ್ ಮತ್ತು ಅಜಯ ವರ್ಮರವರು ಸಂಪಾದಿಸಿದ 2011ರ ವಿಮರ್ಶಾ ಆವೃತ್ತಿಯಲ್ಲಿ ಮೂಲಗಳನ್ನು ಸೇರಿಸಲಾಗಿದೆ ಹಾಗೂ ಅಗತ್ಯ ವಿವರಣೆಗಳನ್ನು, ಟಿಪ್ಪಣಿಗಳನ್ನು ನೀಡಲಾಗಿದೆ.

ರಚನೆ ಮತ್ತು ನಿರೂಪಣೆ
ಬಹುತೇಕ ಕಾಲಾನುಕ್ರಮದ ಮಾದರಿಯಲ್ಲಿರುವ ಈ ಪುಸ್ತಕದಲ್ಲಿ ಎಂಟು ಪರ್ವಗಳಿದ್ದು ಅವುಗಳನ್ನು ಖಂಡಗಳು, ವಿಭಾಗಗಳು ಮತ್ತು ಅಧ್ಯಾಯಗಳೆಂದು ಕರೆಯಬಹುದಾದ ಉಪವಿಭಾಗಗಳು ಹಾಗೂ ಸಂಖ್ಯೆಗಳಿರುವ ಪಂಕ್ತಿಗಳು ಇವೆ. ಅವರ ವಿಭಾಗೀಕರಣ ವಿಧಾನ ಓದನ್ನು ಸುಗಮಗೊಳಿಸುತ್ತದೆ ಮತ್ತು ನಿರ್ದಿಷ್ಟ ಉಪದೇಶಗಳ ಪುನರ್ವಾಚನಕ್ಕೆ ಸಹಾಯಕವಾಗಿದೆ. ಒಂದನೇ ಪರ್ವದಲ್ಲಿ ಸಿದ್ಧಾರ್ಥ ಗೌತಮನ ಹುಟ್ಟು, ಜೀವನ, ಜ್ಞಾನೋದಯ ಮತ್ತು ಹಿಂದೂಧರ್ಮಕ್ಕೆ ಭಿನ್ನವಾದ ಧಮ್ಮದ ನಿರೂಪಣೆ ಇದೆ. ಬುದ್ಧ ಒಪ್ಪಿಕೊಂಡದ್ದೇನು, ಬದಲಾಯಿಸಿದ್ದೇನು ಮತ್ತು ತಿರಸ್ಕರಿಸಿದ್ದೇನು ಎಂಬ ಅವಲೋಕನವನ್ನು ನೀಡಲಾಗಿದೆ. ಎರಡನೇ ಪರ್ವದಲ್ಲಿ ಪರಿವ್ರಾಜಕರಿಂದ ಹಿಡಿದು ಅಪರಾಧಿಗಳವರೆಗೆ ನಡೆದ ಮತಾಂತರ ಮತ್ತು ಮತಾಂತರಪೂರ್ವ ಸಂವಾದದ ವಿವರಣೆಗಳಿವೆ. ಶ್ರೇಣೀಕೃತ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿರುವ ಮೇಲ್ವರ್ಗದವರು, ಕೆಳವರ್ಗದವರು, ಮಹಿಳೆಯರು, ದಾರಿತಪ್ಪಿದವರು ಮತ್ತು ಅಪರಾಧಿಗಳ ಮತಪರಿವರ್ತನೆಯನ್ನು ಅಂಬೇಡ್ಕರ್ ಇಲ್ಲಿ ವಿವರಿಸುತ್ತಾರೆ. ಪ್ರಾಯೋಗಿಕ ಕಾರಣಗಳಿಗಾಗಿ ಮಹಿಳೆಯರನ್ನು ಸಂಘಕ್ಕೆ ಸೇರಿಸಿಕೊಳ್ಳಲು ಮೊದಲು ಮನಸ್ಸಿಲ್ಲದಿದ್ದರೂ ಶಿಷ್ಯ ಆನಂದನ ಬೇಡಿಕೆಯನ್ನು ಮನ್ನಿಸಿ ಅವರನ್ನು ಸಂಘಕ್ಕೆ ಷರತ್ತುಗಳೊಂದಿಗೆ ಬರಮಾಡಿಕೊಳ್ಳಲು ಒಪ್ಪುತ್ತಾನೆ. ಬೌದ್ಧ ಧಮ್ಮ ಕೆಳ ಜಾತಿಗಳ ಜನರೂ ಬಿಕ್ಕುಗಳಾಗಲು ಅವಕಾಶ ನೀಡಿತೆಂಬುದನ್ನು ಚಂಡಾಲ ಸಮುದಾಯಕ್ಕೆ ಸೇರಿದ ಪ್ರಕೃತಿಯೆಂಬ ಹೆಣ್ಣುಮಗಳು ಬಿಕ್ಕುನಿಯಾಗುವ ದೃಷ್ಟಾಂತದೊಂದಿಗೆ ವಿವರಿಸುತ್ತಾರೆ.
ಇದನ್ನೂ ಓದಿರಿ: ಬಟವಾಡೆಯಾಗದ ಭಾಷಣ ‘ಅನಾಇಲೇಷನ್ ಆಫ್ ಕಾಸ್ಟ್’
ಮೂರನೇ ಪರ್ವದಲ್ಲಿ ಧಮ್ಮದಲ್ಲಿ ಬುದ್ಧ ಬೋಧಿಸಿದ್ದೇನು, ಅಲ್ಲಿ ಬುದ್ಧನ ಸ್ಥಾನವೇನು, ಧಮ್ಮದ ವಿವಿಧ ದೃಷ್ಟಿಕೋನಗಳಾವುವು, ಯಾವುದು ಧಮ್ಮ, ಯಾವುದು ಧಮ್ಮವಲ್ಲ ಮತ್ತು ಸುಧಮ್ಮ ಎಂದರೇನು ಎಂಬ ವಿಶ್ಲೇಷಣೆ ಇದೆ. ನಾನು ದೇವಪುತ್ರ ಎಂದು ಹೇಳಿಕೊಳ್ಳುವ ಕ್ರಿಸ್ತ, ನಾನು ದೇವರು ಕಳುಹಿಸಿದ ಪ್ರವಾದಿ ಎಂದು ಹೇಳಿಕೊಳ್ಳುವ ಮೊಹಮದ್ ಮತ್ತು ನಾನೇ ದೇವರು ಎಂದು ಹೇಳಿಕೊಳ್ಳುವ ಕೃಷ್ಣ- ಇವರಿಗಿಂತ ಭಿನ್ನವಾಗಿ ತಾನು ಕೇವಲ ಮನುಷ್ಯನೆಂದೇ ಹೇಳಿಕೊಳ್ಳುವ ಗೌತಮನ ತಾತ್ವಿಕ ವೈಶಿಷ್ಟ್ಯತೆಯನ್ನು ವಿವರಿಸುತ್ತಾರೆ. ನಾಲ್ಕನೆಯ ಪರ್ವದಲ್ಲಿ ಧರ್ಮ ಮತ್ತು ಧಮ್ಮಕ್ಕಿರುವ ವ್ಯತ್ಯಾಸಗಳ ವಿಸ್ತೃತ ಚರ್ಚೆ ಇದೆ. ಹಿಂದೂ ಧರ್ಮ ಮತ್ತು ಬೌದ್ಧಧರ್ಮದಲ್ಲಿ ಬಳಕೆಯಾಗುವ ಒಂದೇ ತೆರನಾದ ಪರಿಭಾಷೆ ಮೂಲಭೂತ ವ್ಯತ್ಯಾಸಗಳನ್ನು ಹೇಗೆ ಮರೆಮಾಚುತ್ತದೆ ಎಂಬುದನ್ನು ಅಂಬೇಡ್ಕರ್ ಪರಿಶೀಲಿಸುತ್ತಾರೆ. ಬುದ್ಧನ ಕಲ್ಪನೆಯ ಧರ್ಮ, ಪುನರ್ಜನ್ಮ, ಕರ್ಮ, ಅಹಿಂಸೆ ಮತ್ತು ಬೌದ್ಧ ಜೀವನಮಾರ್ಗದ ವಿಶ್ಲೇಷಣೆ ಇಲ್ಲಿದೆ.
ಐದನೆಯ ಪರ್ವದಲ್ಲಿ ಸಂಘದ ರಚನೆ, ಯಾವುದೇ ತಾರತಮ್ಯವಿಲ್ಲದೆ ಸಂಘಕ್ಕೆ ಪ್ರವೇಶ ನೀಡುತ್ತಿದ್ದ ಬಗೆ, ಬುದ್ಧನ ಬಿಕ್ಕುವಿನ ಕಲ್ಪನೆ, ಬಿಕ್ಕುವಿನ ಕರ್ತವ್ಯಗಳು, ಪ್ರತಿಜ್ಞೆಗಳು, ಬಿಕ್ಕುಗಳು ಮತ್ತು ಸಾಮಾನ್ಯ ಜನರ ನಡುವಿನ ಸಂಬಂಧದ ವಿವರಣೆಗಳಿವೆ. ಆರನೇ ಪರ್ವವು ಬುದ್ಧನ ಸಮಕಾಲೀನರು, ಅವನಿಗೆ ಉಪಕಾರ ಮಾಡಿದವರು, ಶತ್ರುಗಳು, ಅವನ ತತ್ವದ ವಿರೋಧಿಗಳು, ಸ್ನೇಹಿತರು ಮತ್ತು ಅಭಿಮಾನಿಗಳೊಂದಿಗಿನ ಸಂವಾದವನ್ನು ನಡೆಸುವ ಮತ್ತು ಅವರಲ್ಲಿ ವಿವೇಕವನ್ನು ಮೂಡಿಸುವ ವರ್ಣನೆಯನ್ನು ನೀಡುತ್ತದೆ. ಬ್ರಾಹ್ಮಣರ ಪ್ರತಿರೋಧ, ಜೈನರು ಬುದ್ಧನ ಮೇಲೆ ಆರೋಪಗಳನ್ನು ಹೊರಿಸಲು ಮಾಡಿದ ಪ್ರಯತ್ನಗಳು ಮತ್ತು ಮಡಿವಂತಿಕೆಯ ತಿರಸ್ಕಾರವನ್ನು ನಿರೂಪಿಸಲಾಗಿದೆ. ಏಳನೇ ಪರ್ವವು ಬುದ್ಧನ ಜೀವನಚರಿತ್ರೆಗೆ ಹಿಂದಿರುಗುತ್ತದೆ. ಅವನ ಕೊನೆಯ ದಿನಗಳು ಮತ್ತು ಸಾವಿಗೆ ಸಬಂಧಿಸಿದ ವಿಚಾರಗಳು ಇಲ್ಲಿವೆ. ಬುದ್ಧನ ಆಸ್ತಿ ನಮಗೇ ಸಿಗಬೇಕೆಂದು ಹಲವರು ಬಯಸಿದ್ದು ಮತ್ತು ಅದು ಎಂಟು ಭಾಗವಾಗಿ ಹಂಚಿಕೆಯಾಗಿ ವಿವಾದ ಬಗೆಹರಿದ ಬಗೆಯನ್ನು ನಿರೂಪಿಸಲಾಗಿದೆ. ಎಂಟನೇ ಪರ್ವವು ಸಿದ್ಧಾರ್ಥ ಗೌತಮನ ಚರ್ಯೆ, ವ್ಯಕ್ತಿತ್ವ, ನಾಯಕತ್ವದ ಗುಣ, ಮಾನವೀಯತೆ, ಸಹನಶೀಲತೆ, ಸಮಾನತೆಯ ಭಾವ ಮತ್ತು ಇಷ್ಟಾನಿಷ್ಟಗಳ ವಿವರಣೆಗಳಿವೆ. ಬೆನ್ನುಡಿಯಲ್ಲಿ ಜಗತ್ತಿನ ಆಧುನಿಕ ಚಿಂತಕರು, ವಿಜ್ಞಾನಿಗಳು ಬೌದ್ಧ ಧರ್ಮದ ವೈಶಿಷ್ಟ್ಯ ಮತ್ತು ಅದರ ಉದಾರ ತತ್ವಗಳ ಕುರಿತು ನೀಡಿದ ಹೇಳಿಕೆಗಳಿವೆ.
ಚಿಂತಕ, ಸಾಮಾಜಿಕ ಹೋರಾಟಗಾರ ಮತ್ತು ಬರಹಗಾರರಾದ ಆನಂದ್ ತೇಲ್ತುಂಬ್ಡೆಯವರು 2024ರಲ್ಲಿ ಪ್ರಕಟಿಸಿದ ‘ಐಕನೋಕ್ಲಾಸ್ಟ್: ಎ ರೆಫ್ಲೆಕ್ಟೀವ್ ಬಯೋಗ್ರಫಿ ಆಫ್ ಡಾ. ಬಾಬಾಸಾಹೇಬ್ ಅಂಬೇಡ್ಕರ್’ ಎಂಬ ಶೀರ್ಷಿಕೆಯ ಜೀವನಚರಿತ್ರೆ ‘ಬುದ್ಧ ಮತ್ತು ಅವನ ಧಮ್ಮ’ದ ವಿಧಾನವನ್ನೇ ಬಳಸುತ್ತದೆ. ಬೌದ್ಧತತ್ವಗಳನ್ನು ಮತ್ತು ಬುದ್ಧನ ಬದುಕನ್ನು ಅಂಬೇಡ್ಕರ್ ವಿಮರ್ಶಿಸುವಂತೆಯೇ ತೇಲ್ತುಂಬ್ಡೆಯವರು ಅಂಬೇಡ್ಕರ್ ಅವರ ಬದುಕು, ಹೋರಾಟ, ಚಿಂತನೆಗಳು ಮತ್ತು ಸಾಧನೆಗಳ ವಿಮರ್ಶಾತ್ಮಕ ವಿಶ್ಲೇಷಣೆಯನ್ನು ಮಾಡುತ್ತಾರೆ. ಧಮ್ಮದಲ್ಲಿ ಎಂಟು ಪರ್ವಗಳಿರುವ ಹಾಗೆಯೇ ಇಲ್ಲಿಯೂ ಅಂಬೇಡ್ಕರ್ ಅವರ ಜೀವನಚರಿತ್ರೆಯನ್ನು ಎಂಟು ಹಂತಗಳಲ್ಲಿ ಚಿತ್ರಿಸಲಾಗಿದೆ. ತೇಲ್ತುಂಬ್ಡೆಯವರು ತಮ್ಮ ಪುಸ್ತಕದ ವಿಧಾನ ಮತ್ತು ರಚನೆಗೆ ‘ಬುದ್ಧ ಮತ್ತು ಅವನ ಧಮ್ಮ’ದ ಮಾದರಿಯನ್ನು ಆಯ್ಕೆ ಮಾಡಿಕೊಂಡಿದ್ದು ಆ ಮಹತ್ತರ ಕೃತಿಗೆ ಹಾಗೂ ಅಂಬೇಡ್ಕರ್ ಅವರಿಗೆ ಸಲ್ಲಿಸಿದ ಗೌರವವಾಗಿದೆ.

ನಾಲ್ಕು ಪ್ರಮುಖ ಸಮಸ್ಯೆಗಳು
ದಶಕಗಳ ಕಾಲ ಬೌದ್ಧಧರ್ಮವನ್ನು ಮತ್ತು ಅದರ ಪ್ರಮುಖ ಪಠ್ಯಗಳನ್ನು ಆಳವಾಗಿ ಅಭ್ಯಸಿಸಿದ ಅಂಬೇಡ್ಕರ್ ಅವರಿಗೆ ಅರ್ಥವಾಗಿದ್ದೇನೆಂದರೆ ಬ್ರಾಹ್ಮಣವಾದವನ್ನು ಅವುಗಳಲ್ಲಿ ತುಂಬಿ ವಿರೂಪಗೊಳಿಸಲಾಗಿತ್ತು ಎಂಬುದು. ಬೌದ್ಧಧರ್ಮದ ಮೂಲತತ್ವಗಳು ಮೌಖಿಕವಾಗಿ ಪ್ರಸಾರವಾಗುತ್ತಾ ಹೋದಂತೆ ಮತ್ತು ಇತರ ಭಾಷೆಗಳಿಗೆ ಅನುವಾದಗೊಂಡಹಾಗೆ ಅನೇಕ ವಿರೂಪಗೊಂಡ ವಿಚಾರಗಳು ಅವುಗಳಲ್ಲಿ ಸೇರಿಕೊಂಡಿದ್ದು ಹಲವು ವಿದ್ವಾಂಸರಿಗೆ ಆತಂಕದ ವಿಚಾರವಾಗಿತ್ತು. ತನ್ನ ಜೀವಿತಕಾಲದಲ್ಲೇ ತನ್ನದೇ ಉಪದೇಶಗಳು ತಪ್ಪಾಗಿ ವರದಿಯಾಗಿದ್ದದ್ದು ಬುದ್ಧನ ಗಮನಕ್ಕೆ ಬಂದಿತು. ಅಂತಹ ಕೆಲವು ನಿದರ್ಶನಗಳನ್ನು ಅಂಬೇಡ್ಕರ್ ನೀಡುತ್ತಾರೆ. ಮಾನವ ಕಲ್ಯಾಣಕ್ಕೆ ಸಂಬಂಧಪಡದ ಯಾವುದೂ ಬುದ್ಧನ ಮಾತಾಗಿರಲು ಸಾಧ್ಯವಿಲ್ಲ ಮತ್ತು ಯಾವುದು ವೈಚಾರಿಕವೋ, ತಾರ್ಕಿಕವೋ ಅದು ಮಾತ್ರ ಅವನ ಉಪದೇಶವಾಗಿರುತ್ತದೆ ಎಂಬುದು ಅಂಬೇಡ್ಕರರ ನಿಲುವಾಗಿತ್ತು. ಹಲವು ಶತಮಾನಗಳ ಕಾಲ ಬುದ್ಧನ ತತ್ವಗಳು ರೂಪಾಂತರಗೊಂಡಾಗ ಅಸಮಂಜಸ ವಿಚಾರಗಳು ನುಸುಳಿಕೊಂಡಿದ್ದವು. ಉದಾಹರಣೆಗೆ ಹುಯೆನ್ಝಾಂಗ್ ಚೀನಾದದಿಂದ ಭಾರತಕ್ಕೆ ಬಂದಿದ್ದೇ ಇಲ್ಲಿ ಬೌದ್ಧ ಬರಹಗಳನ್ನು ಮೂಲರೂಪದಲ್ಲಿ ಓದಿಕೊಳ್ಳಲು ಮತ್ತು ಅವುಗಳ ಪ್ರತಿಗಳನ್ನು ಮಾಡಿಕೊಳ್ಳಲು. ಅವನು ಇಪ್ಪತ್ತು ವರ್ಷಗಳ ಕಾಲ ನಳಂದ ವಿಶ್ವವಿದ್ಯಾಲಯದಲ್ಲಿದ್ದು ಬೌದ್ಧ ಬರಹಗಳ ಪ್ರತಿಗಳನ್ನು ತಯಾರಿಸಿ ಚೀನಾಕ್ಕೆ ತೆಗೆದುಕೊಂಡು ಹೋದ. ದ್ವಂದ್ವಗಳಿಂದ ಕೂಡಿದ್ದ ಸಾಂಪ್ರದಾಯಿಕ ವ್ಯಾಖ್ಯಾನಗಳನ್ನು ತಿರಸ್ಕರಿಸಿ ಮಾನವೀಯತೆ ಮತ್ತು ವೈಜ್ಞಾನಿಕ ನೆಲೆಯಿಂದ ತಮ್ಮ ವಾದಗಳನ್ನು ಅಂಬೇಡ್ಕರ್ ಓದುಗರ ಮುಂದಿಡುತ್ತಾರೆ. ಸಮಾನತೆ, ಸ್ವಾತಂತ್ರ‍್ಯ ಮತ್ತು ಭ್ರಾತೃತ್ವದ ಸಂದೇಶವನ್ನು ಪರಿಣಾಮಕಾರಿಯಾಗಿ ಸಂವಹನಿಸಬಲ್ಲ ಬುದ್ಧನ ಜೀವನ ಹಾಗೂ ಆಯ್ದ ಘಟನೆಗಳ ಮೂಲಕ ಬೌದ್ಧಧರ್ಮದ ದರ್ಶನ ನೀಡುತ್ತಾರೆ.
ಬುದ್ಧನ ಬದುಕು ಮತ್ತು ಬೋಧನೆಗಳು ನಿರೂಪಿತವಾಗಿರುವ ಬಗ್ಗೆ ಪುಸ್ತಕದ ಪೀಠಿಕೆಯಲ್ಲಿ ನಾಲ್ಕು ಸಮಸ್ಯೆಗಳನ್ನು ಅಂಬೇಡ್ಕರ್ ಓದುಗರ ಮುಂದಿಡುತ್ತಾರೆ. ಅವರು ಪರಿಹಾರ ಬಯಸುವ ಈ ಪ್ರಶ್ನೆಗಳೇ ಅವರ ಅನ್ವೇಷಣೆಯ ತಾತ್ವಿಕ ಮಾದರಿಯನ್ನು ಸೂಚಿಸುತ್ತವೆ. ಅತೀಂದ್ರಿಯ ಮತ್ತು ಆಧ್ಯಾತ್ಮಿಕ ನೆಲೆಗಳನ್ನು ಬದಿಗಿಟ್ಟು ನೈತಿಕ ಮತ್ತು ಸಾಮಾಜಿಕ ನೆಲೆಗಳಲ್ಲಿ ಬೌದ್ಧ ತತ್ವಸಿದ್ಧಾಂತವನ್ನು ನಿರ್ಮಿಸುವ ಬಗೆ ವಿಶಿಷ್ಟವಾದದ್ದು. ಸಮಸ್ಯೆಗಳನ್ನು ಮಂಡಿಸುವ ವಿಧಾನದಲ್ಲಿಯೇ ಉತ್ತರಗಳು ಏನಿರಬಹುದೆಂಬ ಸೂಚನೆ ದೊರೆಯುತ್ತದೆ.
ಇದನ್ನೂ ಓದಿರಿ: ಬಾಬಾಸಾಹೇಬರ ಕಣ್ಣಲ್ಲಿ ಭಗವದ್ಗೀತೆ; ಸತ್ಯ ಮರೆಯಲಾದೀತೆ?
ಅವರು ಪರಿಹಾರ ಬಯಸುವ ಮೊದಲ ಪ್ರಶ್ನೆ ಎಂದರೆ ಸಿದ್ಧಾರ್ಥ ಪರಿವ್ರಾಜಕ ಆಗಿದ್ದು ಏಕೆ ಎಂಬುದು. ಸಾಂಪ್ರದಾಯಿಕ ಉತ್ತರ ಏನೆಂದರೆ ಸಾವು, ಮುಪ್ಪು ಮತ್ತು ರೋಗವನ್ನು ನೋಡಿದ್ದರಿಂದ ಲೌಕಿಕ ಬದುಕನ್ನು ತ್ಯಜಿಸಿ ಪರಿವ್ರಾಜಕನಾದ ಎಂಬುದು. ಅಂಬೇಡ್ಕರ್ ಅವರ ಪ್ರಕಾರ ಇದು ವಿವೇಚನಾಶೂನ್ಯವಾದ ವಿವರಣೆ. ಏಕೆಂದರೆ ಸಿದ್ಧಾರ್ಥ ಪರಿವ್ರಾಜಕನಾಗಿ ಹೊರಟದ್ದು 29ನೆಯ ವಯಸ್ಸಿನಲ್ಲಿ ಮತ್ತು ದಿನನಿತ್ಯವೂ ಕಾಣಬಹುದಾದ ರೋಗ, ಮುಪ್ಪು, ಸಾವು ‘ಅಲ್ಲಿಯತನಕ ಅವನಿಗೆ ಕಂಡಿರಲಿಲ್ಲ ಎನ್ನುವುದೇ ಅಸಂಗತ ಮತ್ತು ಅರ್ಥವಿಲ್ಲದ್ದು.’ ಆದ್ದರಿಂದ ‘ಬುದ್ಧ ಪರಿವ್ರಾಜಕನಾಗಲು ಬೇರೆ ಕಾರಣಗಳಿರಬಹುದಲ್ಲವೆ’ ಎಂಬುದು ಅವರ ಪ್ರಶ್ನೆ. ಬೌದ್ಧಧರ್ಮದ ಎರಡನೆಯ ಸಮಸ್ಯೆ ನಾಲ್ಕು ಆರ್ಯ ಅಥವಾ ಶ್ರೇಷ್ಠ ಸತ್ಯಗಳಿಗೆ ಸಂಬಂಧಿಸಿದ್ದು. ಬದುಕು ದುಃಖ, ಸಾವು ದುಃಖ, ಪುನರ್ಜನ್ಮ ದುಃಖ ಮತ್ತು ನಂತರ ಎಲ್ಲದರ ಅಂತ್ಯ ಇದೆ ಎಂದು ನಿರಾಶಾ ಸಿದ್ಧಾಂತವನ್ನು ಮುಂದಿಡುವ ಈ ಸತ್ಯಗಳು ಬುದ್ಧನ ಮೂಲ ಬೋಧನೆಗಳ ಭಾಗವಾಗಿದ್ದವೇ ಅಥವಾ ನಂತರದಲ್ಲಿ ಸನ್ಯಾಸಿಗಳು ಸೇರಿಸಿದ್ದೇ ಎಂಬುದು ಅವರ ಪ್ರಶ್ನೆ. ಮೂರನೆಯ ಸಮಸ್ಯೆ ಆತ್ಮ, ಕರ್ಮ ಮತ್ತು ಪುನರ್ಜನ್ಮಕ್ಕೆ ಸಂಬಂಧಿಸಿದ್ದು. ಆತ್ಮದ ಅಸ್ತಿತ್ವವನ್ನು ನಿರಾಕರಿಸುವ ಬುದ್ಧ, ಕರ್ಮ ಮತ್ತು ಪುನರ್ಜನ್ಮವನ್ನು ಒಪ್ಪುತ್ತಾನೆಂದಾದರೆ ಆ ಎರಡು ಶಬ್ದಗಳನ್ನು ಯಾವ ಅರ್ಥದಲ್ಲಿ ಬಳಿಸಿದ ಎಂಬುದು ಅಂಬೇಡ್ಕರ್ ಅವರ ಪ್ರಶ್ನೆ. ನಾಲ್ಕನೆಯ ಸಮಸ್ಯೆ ಬಿಕ್ಕುಗಳಿಗೆ ಸಂಬಂಧಪಟ್ಟಿದ್ದು. ‘ಬೌದ್ಧ ಬಿಕ್ಕುಗಳನ್ನು ಸೃಷ್ಟಿಸುವ ಉದ್ದೇಶ ಪರಿಪೂರ್ಣ ಮನುಷ್ಯನನ್ನು ಸೃಷ್ಟಿಸುವುದಾಗಿತ್ತೆ ಅಥವಾ ಸಮಾಜ ಸೇವಕನನ್ನು ಸೃಷ್ಟಿಸುವುದಾಗಿತ್ತೆ’ ಎಂದು ಅಂಬೇಡ್ಕರ್ ಪ್ರಶ್ನಿಸುತ್ತಾರೆ. ಏಕೆಂದರೆ ಅವರ ಪ್ರಕಾರ ಪರಿಪೂರ್ಣ ಮನುಷ್ಯ ಸ್ವಾರ್ಥಸಾಧಕನಾಗಿರುತ್ತಾನೆ ಮತ್ತು ಅವನಿಂದ ಬೌದ್ಧಧರ್ಮ ಪ್ರಚಾರಕ್ಕೆ ಏನೂ ಪ್ರಯೋಜನವಾಗುವುದಿಲ್ಲ.
ಪುಸ್ತಕದಲ್ಲಿ ಈ ನಾಲ್ಕು ಸಮಸ್ಯೆಗಳಿಗೆ ಉತ್ತರಗಳನ್ನು ಅನ್ವೇಷಿಸುತ್ತಾ ಹೋಗುತ್ತಾರೆ ಅಂಬೇಡ್ಕರ್. ಅವರು ಪ್ರಶ್ನೆಗಳನ್ನು ಕೇಳುವ ಬಗೆ ಮತ್ತು ಅವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ವಿಧಾನಗಳು ಸಾಮಾಜಿಕ ಸಂಶೋಧಕರಿಗೆ ತಮ್ಮ ಸಂಶೋಧನಾ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗಿವೆ. ಸಾರ್ವತ್ರಿಕ ಸತ್ಯವೆಂದು ಒಪ್ಪಿತವಾಗಿರುವ ಸಂಗತಿಗಳನ್ನು ವಿವೇಚನೆ ಮತ್ತು ವೈಜ್ಞಾನಿಕ ದೃಷ್ಟಿಯಿಂದ ಪರಿಶೀಲಿಸುವ, ಮರುವಿಶ್ಲೇಷಣೆಗೆ ಒಳಪಡಿಸುವ ಮಾರ್ಗವನ್ನು ಅಂಬೇಡ್ಕರ್ ತೋರಿಸಿದ್ದಾರೆ. ವೇದಗಳು ಅಪೌರುಷೇಯ ಮತ್ತು ಅವುಗಳು ಸಾರ್ವಕಾಲಿಕ ಸತ್ಯವನ್ನು ಹೇಳುವ ಪವಿತ್ರ ಗ್ರಂಥಗಳಾಗಿರುವುದರಿಂದ ಅವುಗಳಲ್ಲಿರುವ ಏನನ್ನೂ ಪ್ರಶ್ನೆ ಮಾಡಬಾರದೆಂಬ ವಾದವನ್ನು ತಿರಸ್ಕರಿಸುವ ಬುದ್ಧನ ತಾತ್ವಿಕ ಚಿಂತನೆಗಳನ್ನು ಅಂಬೇಡ್ಕರ್ ಸರಳವಾಗಿ ನಮ್ಮ ಮುಂದಿಡುತ್ತಾರೆ.
ಯುದ್ಧ ವಿರೋಧಿ ಸಿದ್ಧಾರ್ಥ ರಾಜ್ಯ ತೊರೆದದ್ದು
ಒಬ್ಬ ರೋಗಿ, ಒಬ್ಬ ವೃದ್ಧ ಮತ್ತು ಒಂದು ಸಾವನ್ನು ನೋಡಿದ್ದರ ಪರಿಣಾಮ ಲೌಖಿಕ ಬದುಕಿನ ಬಗ್ಗೆ ಬೇಸತ್ತ ಸಿದ್ಧಾರ್ಥನು ತಂದೆ ಶುದ್ಧೋದನ, ಪತ್ನಿ ಯಶೋಧರಾ ಸೇರಿದಂತೆ ಯಾರಿಗೂ ಹೇಳದೆ ರಾತೋರಾತ್ರಿ ಕಪಿಲವಸ್ತುವನ್ನು ತೊರೆದು ಹೋದನೆಂಬ ಜನಪ್ರಿಯ ದಂತಕಥೆಗೆ ಭಿನ್ನವಾದ ವೈಚಾರಿಕ ಮತ್ತು ವೈಜ್ಞಾನಿಕ ನೆಲೆಯ ಐತಿಹಾಸಿಕ ವಿವರಣೆಯನ್ನು ಅಂಬೇಡ್ಕರ್ ನೀಡುತ್ತಾರೆ. ಸಿದ್ಧಾರ್ಥ ಅರಮನೆಯನ್ನು ಬಿಟ್ಟು ಹೊರಟದ್ದು ಹಲವು ವರ್ಷಗಳಿಂದ ಪಡೆದ ತಿಳಿವಳಿಕೆ, ಅನುಭವ, ತಾತ್ವಿಕ ಚಿಂತನೆ ಮತ್ತು ಬದುಕಿನ ವಾಸ್ತವದ ಅರಿವಿನ ಕಾರಣಕ್ಕೆ ಎನ್ನುವ ನಿರೂಪಣೆ ಅಂಬೇಡ್ಕರ್ ಅವರದ್ದು. ಅದು ಹಠಾತ್ತಾದ ಮತ್ತು ಭಾವಾವೇಶಕ್ಕೊಳಗಾಗಿ ತೆಗೆದುಕೊಂಡ ನಿರ್ಧಾರವಲ್ಲ. ಚಿಕ್ಕವನಾಗಿದ್ದಾಗಲೇ ಹಿಂಸೆ, ಸಂಘರ್ಷ, ಅನ್ಯಾಯವನ್ನು ಒಪ್ಪದವನಾಗಿದ್ದ ಸಿದ್ಧಾರ್ಥ ಕರುಣೆ, ಪ್ರೀತಿ, ಸ್ನೇಹ, ಸಂಯಮದಂತಹ ಮೌಲ್ಯಗಳ ಅಗತ್ಯವನ್ನು ತಿಳಿದಿದ್ದನೆಂಬುದಕ್ಕೆ ನಿದರ್ಶನಗಳಿವೆ.

ಗಾಯಗೊಂಡ ಹಕ್ಕಿಗೆ ನೀರು ನೀಡಿ ಅದರ ಶುಶ್ರೂಷೆ ಮಾಡುವ ಸಿದ್ಧಾರ್ಥ, ಹಕ್ಕಿಯು ಅದನ್ನು ಹೊಡೆದುರುಳಿಸಿದವನ ಸ್ವತ್ತು ಎಂಬ ತನ್ನ ಸೋದರ ಸಂಬಂಧಿ ದೇವದತ್ತನ ವಾದವನ್ನು ತಿರಸ್ಕರಿಸುತ್ತಾನೆ. ಆಚರಣೆಯಾಗಿ ನಡೆಸುತ್ತಿದ್ದ ಪ್ರಾಣಿ ಬೇಟೆಯಲ್ಲಿ ಭಾಗವಹಿಸಲು ನಿರಾಕರಿಸುವ ಸಿದ್ಧಾರ್ಥ ಯಾವುದೇ ಜೀವಿಗೆ ಹಿಂಸೆ ಕೊಡುವುದನ್ನು ವಿರೋಧಿಸುತ್ತಾನೆ. ರಾಜ್ಯ ರಕ್ಷಣೆಗಾಗಿ ಯುದ್ಧ ಮಾಡುವುದು ಕ್ಷತ್ರಿಯರ ಕರ್ತವ್ಯ ಎನ್ನುವ ತಾಯಿಗೆ ಎಲ್ಲ ಕ್ಷತ್ರಿಯರೂ ಒಬ್ಬರನ್ನೊಬ್ಬರು ಪ್ರೀತಿಸಿದರೆ ಯಾರನ್ನೂ ಕೊಲ್ಲದೆ ರಾಜ್ಯ ರಕ್ಷಣೆ ಮಾಡಬಹುದಲ್ಲ ಎಂದು ಕೇಳುತ್ತಾನೆ. ಅಂಬೇಡ್ಕರ್ ಬಣ್ಣಿಸುವಂತೆ ಯುವಕ ಸಿದ್ಧಾರ್ಥ ಅವನ ತಂದೆಯ ತೋಟದಲ್ಲಿ ಅರೆಬಟ್ಟೆ ತೊಟ್ಟು ಸುಡು ಬಿಸಿಲಲ್ಲಿ ಕೆಲಸಮಾಡುವ ಕಾರ್ಮಿಕರನ್ನು ನೋಡಿ ಮರುಕಪಡುತ್ತಾನೆ, ಬಡವರನ್ನು ಶೋಷಣೆ ಮಾಡುವ ಹಕ್ಕನ್ನು ಪ್ರಶ್ನಿಸುತ್ತಾನೆ. ‘ಒಳ್ಳೆಯ ವಿಚಾರಗಳ ಕುರಿತು ಧ್ಯಾನ ಮಾಡುವುದರಿಂದ ಸಾರ್ವತ್ರಿಕ ಪ್ರೀತಿ ಬೆಳೆಯುತ್ತದೆ’ ಎನ್ನುತ್ತಾನೆ.
ಆಗಿನ ಪದ್ಧತಿಯಂತೆ ಇಪ್ಪತ್ತನೇ ವರ್ಷಕ್ಕೆ ಶಾಕ್ಯ ಸಂಘದ ಸದಸ್ಯನಾಗುವ ಸಿದ್ಧಾರ್ಥನಿಗೆ ಅವನ ತಾತ್ವಿಕ ನಿಲುವುಗಳನ್ನು ಪರೀಕ್ಷೆಗೊಡ್ಡುವ ಸವಾಲೊಂದು ಎದುರಾಗುತ್ತದೆ. ಶಾಕ್ಯ ಮತ್ತು ಅದರ ನೆರೆಯ ರಾಜ್ಯವಾದ ಕೋಲಿಯಾ ನಡುವೆ ಹರಿಯುತ್ತಿದ್ದ ರೋಹಿಣಿ ನದಿಯ ನೀರನ್ನು ಯಾರು ಮೊದಲು ಪಡೆಯಬೇಕು ಮತ್ತು ಎಷ್ಟು ಪ್ರಮಾಣದಲ್ಲಿ ಎಂಬ ಬಗ್ಗೆ ಹಲವು ವರ್ಷಗಳಿಂದಲೂ ಘರ್ಷಣೆಗಳು ನಡೆಯುತ್ತಿದ್ದವು. ಶಾಕ್ಯ ರಾಜ್ಯದ ಸೇನಾಧಿಪತಿ ಈ ವ್ಯಾಜ್ಯವನ್ನು ಶಾಶ್ವತವಾಗಿ ಪರಿಹರಿಸಬೇಕೆಂಬ ವಾದ ಮಂಡಿಸಿ, ಯುದ್ಧದ ಹೊರತಾಗಿ ಬೇರೆ ಮಾರ್ಗವಿಲ್ಲ ಎಂಬ ತೀರ್ಮಾನಕ್ಕೆ ಬರುತ್ತಾನೆ. ಸಿದ್ಧಾರ್ಥ ಈ ತೀರ್ಮಾನವನ್ನು ವಿರೋಧಿಸುತ್ತಾನೆ. ಈ ವಿಷಯ ಶಾಕ್ಯ ಸಂಘದ ಸಭೆಯಲ್ಲಿ ಮಂಡಿತವಾಗುತ್ತದೆ. ಶಾಕ್ಯ ಮತ್ತು ಕೋಲಿಯಾ ಎರಡೂ ಕಡೆಗಳಿಂದ ತಪ್ಪುಗಳಾಗಿರುವುದರಿಂದ ಕೋಲಿಯಾರನ್ನು ಸಹೋದರರೆಂದು ಪರಿಗಣಿಸಿ ಸಂಧಾನದ ಮೂಲಕ ವಿವಾದವನ್ನು ಬಗೆಹರಿಸಿಕೊಳ್ಳಬೇಕೆಂಬ ಸಲಹೆಯನ್ನು ಸಿದ್ಧಾರ್ಥ ನೀಡುತ್ತಾನೆ. ಎರಡೂ ಕಡೆಯಿಂದ ಐವರು ಪ್ರತಿನಿಧಿಗಳನ್ನು ಕಳುಹಿಸಿ ಮಾತುಕತೆ ನಡೆಸಬೇಕೆಂಬ ಅವನ ತೀರ್ಮಾನವನ್ನು ಸಂಘ ಒಪ್ಪುವುದಿಲ್ಲ. ಸಿದ್ಧಾರ್ಥನನ್ನು ಬಿಟ್ಟು ಉಳಿದವರೆಲ್ಲ ಯುದ್ಧದ ಪರವಾಗಿ ಮತ ಚಲಾಯಿಸುತ್ತಾರೆ. ಸಂಘದ ನಿಯಮಗಳ ಪ್ರಕಾರ ಬಹುಮತದ ನಿರ್ಧಾರವನ್ನು ವಿರೋಧಿಸಿದಕ್ಕೆ ಶಿಕ್ಷೆಯಾಗಿ ಮೂರು ಆಯ್ಕೆಗಳನ್ನು ಸಿದ್ಧಾರ್ಥನಿಗೆ ನೀಡಲಾಗುತ್ತದೆ. ಮೊದಲನೆಯದು ಬಹುಮತದ ನಿರ್ಧಾರಕ್ಕೆ ಮಣಿದು ಯುದ್ಧದಲ್ಲಿ ಪಾಲ್ಗೊಳ್ಳುವುದು. ಎರಡನೆಯದು ಶುದ್ಧೋದನನ ಕುಟುಂಬವನ್ನು ಬಹಿಷ್ಕರಿಸಿ ಅವನ ಆಸ್ತಿಯನ್ನು ವಶಪಡಿಸಿಕೊಳ್ಳುವುದು. ಮೂರನೆಯದು ಗಡಿಪಾರು ಮಾಡುವುದು. ಆದರೆ ಸಂಘದಿಂದ ಗಡಿಪಾರಾದ ಸುದ್ದಿ ಕೋಸಲ ಸಾಮ್ರಾಜ್ಯಕ್ಕೆ ತಲುಪಿದರೆ ಶಾಕ್ಯ ರಾಜ್ಯ ಸಾಮ್ರಾಟರ ಅವಕೃಪೆಗೆ ಗುರಿಯಾಗಬೇಕಾಗುತ್ತದೆಂಬ ಕಾರಣಕ್ಕೆ ಸಿದ್ಧಾರ್ಥ ಸ್ವಯಿಚ್ಛೆಯಿಂದ ಪರಿವ್ರಾಜಕನಾಗಿ ರಾಜ್ಯದಿಂದ ಹೊರಹೋಗುವ ನಿರ್ಧಾರಕ್ಕೆ ಬರುತ್ತಾನೆ.
ಇದನ್ನೂ ಓದಿರಿ: ‘ರೂಪಾಯಿಯ ಸಮಸ್ಯೆ’ಯ ಮೂಲಕ್ಕೆ ಬಾಬಾಸಾಹೇಬರ ಮಲಾಮು
ತಂದೆ ಶುದ್ಧೋದನ ಮತ್ತು ತಾಯಿ ಪ್ರಜಾಪತಿ ಗೌತಮಿ ಇಬ್ಬರೂ ತಾವೂ ರಾಜ್ಯಬಿಟ್ಟು ಸಿದ್ಧಾರ್ಥನೊಟ್ಟಿಗೆ ಹೊರಡುವುದಾಗಿ ಹೇಳುತ್ತಾರೆ. ಅವರ ಇಚ್ಛೆಯನ್ನು ಸಿದ್ಧಾರ್ಥ ಒಪ್ಪದೆ ಅವರು ಕಪಿಲವಸ್ತುವಿನಲ್ಲಿ ಉಳಿಯಬೇಕಾದ ಅಗತ್ಯವನ್ನು ಮನವರಿಕೆ ಮಾಡಿಕೊಡುತ್ತಾನೆ. ಪತ್ನಿ ಯಶೋಧರಾ ಸಿದ್ಧಾರ್ಥನ ನಿರ್ಧಾರವನ್ನು ಒಪ್ಪುತ್ತಾಳೆ. ವಿದಾಯ ಹೇಳಲು ಕಪಿಲ ವಸ್ತುವಿನ ಜನರೆಲ್ಲ ಸಿದ್ಧಾರ್ಥನ ಹಿಂದೆ ಬರುತ್ತಾರೆ. ತನ್ನ ಹಿಂದೆ ಬರಬಾರದೆಂದೂ, ಅವರಿಗೆ ತನ್ನ ಮೇಲೆ ಗೌರವವಿದ್ದರೆ ಸಹೋದರರಾದ ಕೋಲಿಯಾ ವಿರುದ್ಧ ಯುದ್ಧ ಮಾಡದೆ ರೋಹಿಣಿ ನದಿ ವಿವಾದವನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕೆಂಬ ಸಲಹೆ ನೀಡಿ ಹೊರಡುತ್ತಾನೆ. ಸಿದ್ಧಾರ್ಥ ರಾಜ್ಯ ತೊರೆಯುವುದು ದೊಡ್ಡ ಸಾರ್ವಜನಿಕ ಘಟನೆಯಾಗುತ್ತದೆ.

ಮಗಧ ರಾಜ್ಯದ ರಾಜಧಾನಿ ರಾಜಗೃಹದಲ್ಲಿ ಜನರ ಗುಂಪಿನೊಡಗಿದ್ದ ಬುದ್ಧನನ್ನು ಬಿಂಬಿಸಾರ ನೋಡುತ್ತಾನೆ. ಬುದ್ಧನ ಸ್ಥಿತಿಯನ್ನು ನೋಡಿ ಆತಂಕಗೊಂಡ ಬಿಂಬಿಸಾರ, ‘ರಾಜ್ಯದ ಒಂದು ಭಾಗವನ್ನು ಕೊಡುತ್ತೇನೆ, ಸನ್ಯಾಸಿಯಾಗಬೇಡ’ ಎಂದು ವಿನಂತಿಸುತ್ತಾನೆ. ‘ನನ್ನ ಸೈನ್ಯವನ್ನಾದರೂ ಸೇರು’ ಎಂದು ಬಿಂಬಿಸಾರ ಕೇಳುತ್ತಾನೆ. ಅದೆಲ್ಲವನ್ನೂ ನಿರಾಕರಿಸುವ ಬುದ್ಧ ತನ್ನ ದಾರಿಯಲ್ಲಿ ಮುಂದುವರಿಯುವುದಾಗಿ ಹೇಳುತ್ತಾನೆ. ನಂತರ ಐದು ಪರಿವ್ರಾಜಕರು ಭಿಕ್ಷಾಪಾತ್ರೆ ಹಿಡಿದು ನಡೆಯುತ್ತಿದ್ದ ಬುದ್ಧನನ್ನು ಭೇಟಿಯಾಗಿ ರೋಹಿಣಿ ನದಿಯ ವಿವಾದ ಶಾಂತಿಯುತವಾಗಿ ಬಗೆಹರಿದ ಬಗೆಯನ್ನು ವಿವರಿಸುತ್ತಾರೆ. ಕಪಿಲವಸ್ತುವುನಿಂದ ಸಿದ್ಧಾರ್ಥ ನಿರ್ಗಮಿಸಿದ ಮೇಲೆ ಅಲ್ಲಿಯ ಯುವಕರು, ಯುವತಿಯರು, ಮಕ್ಕಳು, ಮಹಿಳೆಯರೆಲ್ಲರೂ ಕೋಲಿಯಾ ಜನರು ತಮ್ಮ ಸಹೋದರರೆಂದೂ, ಅವರೊಂದಿಗೆ ಯುದ್ಧ ಕೂಡದೆಂದೂ ಪ್ರತಿಭಟಿಸುತ್ತಾರೆ. ಕೋಲಿಯಾ ಮತ್ತು ಶಾಕ್ಯ ರಾಜ್ಯಗಳೆರಡನ್ನೂ ಪ್ರತಿನಿಧಿಸುವ ಹತ್ತು ಜನರ ಸಮಿತಿಯು ನೀರಿನ ಹಂಚಿಕೆಗೆ ಶಾಶ್ವತ ಸೂತ್ರವನ್ನು ಪ್ರಕಟಿಸುತ್ತದೆ. ‘ಈ ನೀರು ನಮ್ಮದು, ರಕ್ತ ಕೊಟ್ಟೇವು ನೀರು ಬಿಡೆವು’ ಎಂದೆಲ್ಲ ಉಗ್ರವಾಗಿ ಪ್ರತಿಭಟಿಸುವ ಗುಂಪುಗಳು ಇಂತಹ ಪ್ರಾಚೀನ ಒಪ್ಪಂದದಿಂದ ಕಲಿಯುವುದಿದೆ.
ರೋಹಿಣಿ ನದಿಯ ನೀರಿನ ವ್ಯಾಜ್ಯ ಯುದ್ಧವಿಲ್ಲದೆ ಅಂತ್ಯಗೊಂಡ ಕಾರಣ ಬುದ್ಧ ಕಪಿಲವಸ್ತುವಿಗೆ ಮರಳಬೇಕೆಂದು ಆ ಐದು ಪರಿವ್ರಾಜಕರು ಹೇಳುತ್ತಾರೆ. ಆದರೆ ಬುದ್ಧನ ದೃಷ್ಟಿ ಆಗಲೇ ಸಮಾಜದಲ್ಲಿನ ಕುಲೀನ-ಮಲಿನ, ಉಚ್ಚ-ನೀಚ, ಮೇಲು-ಕೀಳು ಎಂಬ ಅಸಮಾನತೆಯನ್ನು ತೊಡೆದು ಹಾಕುವ ಕಡೆಗೆ ನೆಟ್ಟಿದ್ದರಿಂದ ತನ್ನ ದಾರಿಯಲ್ಲಿ ಮುಂದುವರಿಯುತ್ತಾನೆ.
ನಿರಾಶಾವಾದದ ತಿರಸ್ಕಾರ
ಬುದ್ಧನ ಬೋಧನೆಗಳ ಸಾರವೆಂದೂ ಮತ್ತು ಅತ್ಯಂತ ಪವಿತ್ರವೆಂದು ತಿಳಿಯಲಾಗಿದ್ದ ನಾಲ್ಕು ಆರ್ಯ ಸತ್ಯಗಳ ಬಗೆಗಿನ ಸಾಂಪ್ರದಾಯಿಕ ದೃಷ್ಟಿಕೋನವನ್ನು ಅಂಬೇಡ್ಕರ್ ನಿರಾಕರಿಸುತ್ತಾರೆ. ಮೊದಲ ಸತ್ಯ ಈ ಜಗತ್ತು ದುಃಖದಿಂದ ಕೂಡಿದೆ ಎಂಬುದು. ಎರಡನೆಯದು ಆ ದುಃಖಕ್ಕೆ ಆಸೆಯೇ ಕಾರಣ ಎಂಬುದು. ಮೂರನೆಯದು ದುಃಖವನ್ನು ಕೊನೆಗೊಳಿಸಬಹುದು ಎಂಬುದು. ನಾಲ್ಕನೆಯದು ದುಃಖವನ್ನು ಕೊನೆಗೊಳಿಸಲು ಅಷ್ಟಾಂಗಮಾರ್ಗದಲ್ಲಿ ನಡೆದು ನಿರ್ವಾಣ ಅಥವಾ ಜ್ಞಾನವನ್ನು ಪಡೆಯಬಹುದು ಎಂಬುದು. ಬುದ್ಧನ ಪ್ರಕಾರ ಅತಿಯಾದ ಲೋಲುಪತೆ ಮತ್ತು ಕಠೋರವಾದ ಆತ್ಮನಿಗ್ರಹ ಎರಡೂ ನಿರ್ವಾಣವನ್ನು ಪಡೆಯಲು ಸಹಾಯಕವಾಗುವುದಿಲ್ಲವಾದ್ದರಿಂದ ಅವೆರಡರಿಂದಲೂ ದೂರವಿದ್ದು ಎಂಟು ತತ್ವಗಳ ಅಷ್ಟಾಂಗಮಾರ್ಗವನ್ನು ಅನುಸರಿಸಬೇಕು. ಅದೇ ಮಧ್ಯಮ ಮಾರ್ಗ. ಸರಿಯಾದ ದೃಷ್ಟಿ, ಸರಿಯಾದ ಉದ್ದೇಶ, ಸರಿಯಾದ ಮಾತು, ಸರಿಯಾದ ಕಾರ್ಯ, ಸರಿಯಾದ ಜೀವನೋಪಾಯ, ಸರಿಯಾದ ಪ್ರಯತ್ನ, ಸರಿಯಾದ ಸಾವಧಾನತೆ ಮತ್ತು ಸರಿಯಾದ ಏಕಾಗ್ರತೆ- ಇವೇ ಆ ಎಂಟು ತತ್ವಗಳು. ನಾಲ್ಕನೆಯ ಸತ್ಯವು ಸಂಪೂರ್ಣವಾಗಿ ಲೌಖಿಕ ಮತ್ತು ಸ್ವಾಭಾವಿಕ ವಿದ್ಯಮಾನವಾಗಿರುವುದರಿಂದ ಅಂಬೇಡ್ಕರ್ ಅದನ್ನು ಒಪ್ಪುತ್ತಾರೆ.
ಇದನ್ನೂ ಓದಿರಿ: ವರ್ತಮಾನದ ಬಿಕ್ಕಟ್ಟಿಗೆ ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ಯ ಮದ್ದು
ಬೌದ್ಧ ಸಿದ್ಧಾಂತವು ವ್ಯಕ್ತಿಗಳ ನಡುವಿನ ಸಾಮಾಜಿಕ ಸಂಬಂಧಗಳಿಗೆ ಪ್ರಾಮುಖ್ಯತೆ ನೀಡುತ್ತದೆ. ಅಂಬೇಡ್ಕರ್ ಅವರ ಪ್ರಕಾರ ದುಃಖವು ಲೌಖಿಕವಾಗಿದ್ದು ಬಡತನ ಕೂಡ ದುಃಖದ ಕಾರಣಗಳಲ್ಲೊಂದು. ಅಂದರೆ ಬಡತನ ಮತ್ತು ಲೌಖಿಕ ದುಃಖ ಮಾನವ-ನಿರ್ಮಿತವೇ ಹೊರತು ನೈಸರ್ಗಿಕ ಕಾರಣಗಳಿಂದ ಸೃಷ್ಟಿಯಾದವುಗಳಲ್ಲ. ಸಾಮಾಜಿಕ ಅನ್ಯಾಯ, ಆರ್ಥಿಕ ಅಸಮಾನತೆ ಮತ್ತು ಮಾನವ ಸಂಘರ್ಷ ದುಃಖಕ್ಕೆ ಕಾರಣವಾಗುತ್ತವೆ. ಸಾಂಪ್ರದಾಯಿಕ ಕಥನದ ಪ್ರಕಾರ, ಬುದ್ಧ ತನ್ನ ಜ್ಞಾನೋದಯದ ನಂತರ ನೀಡಿದ ಮೊದಲ ಉಪದೇಶದಲ್ಲಿ ನಾಲ್ಕು ಸತ್ಯಗಳನ್ನು ಐದು ಪರಿವ್ರಾಜಕರಿಗೆ ಹೇಳಿದ್ದನು. ಆ ಉಪದೇಶದಲ್ಲಿ ಹುಟ್ಟು ದುಃಖ, ಮುಪ್ಪು ದುಃಖ, ಸಾವು ದುಃಖ ಎಂದು ಹೇಳಿದನೆಂದು ವರದಿಯಾಗಿದ್ದರಿಂದ ಅದನ್ನು ಉತ್ಫ್ರೇಕ್ಷಿಸಿ ಮೂಲತತ್ವದಲ್ಲಿ ಇಲ್ಲದ ಆಳವಾದ ನಿರಾಶಾವಾದದ ಬಣ್ಣವನ್ನು ಅವನ ಧಮ್ಮಕ್ಕೆ ಬಳಿಯಲಾಯಿತು ಎಂದು ಅಂಬೇಡ್ಕರ್ ಹೇಳುತ್ತಾರೆ. ನಾಲ್ಕು ಸತ್ಯಗಳೆಂಬುದು ಬುದ್ಧನ ಮರಣಾನಂತರದ ಸುಳ್ಳು ಸೃಷ್ಟಿಯಾಗಿದ್ದರಿಂದ ಅವುಗಳನ್ನು ಕೈಬಿಟ್ಟು ಬೌದ್ಧ ಬಿಕ್ಕುಗಳಿಗೆ ಹೊಸದೊಂದು ಕಾರ್ಯಸೂಚಿಯನ್ನು ನೀಡುತ್ತಾರೆ. ಸಾಂಪ್ರದಾಯಿಕ ಕಥಾನಕವನ್ನು ಬದಿಗಿಟ್ಟು ದುಃಖ ಪರಿಹಾರಕ್ಕಾಗಿ ಬುದ್ಧನ ಬೋಧನೆಯನ್ನು ಶುದ್ಧ ಮಾರ್ಗ, ಸದಾಚರಣ ಮಾರ್ಗ ಮತ್ತು ಶೀಲ ಮಾರ್ಗ ಎಂಬ ಮೂರು ಮಾರ್ಗಗಳ ಮಾದರಿಯಲ್ಲಿ ನಿರೂಪಿಸುತ್ತಾರೆ.
ಬುದ್ಧನ ಕಲ್ಪನೆಯ ಕರ್ಮ ಮತ್ತು ಪುನರ್ಜನ್ಮ
ಬುದ್ಧನ ಕರ್ಮ ಮತ್ತು ಪುನರ್ಜನ್ಮದ ಸಿದ್ಧಾಂತಗಳಿಗೂ ಬ್ರಾಹ್ಮಣರ ಕರ್ಮ ಮತ್ತು ಪುನರ್ಜನ್ಮದ ಸಿದ್ಧಾಂತಗಳಿಗೂ ಇರುವ ಮೂಲಭೂತ ಭಿನ್ನತೆಗಳನ್ನು ಅಂಬೇಡ್ಕರ್ ವಿವರಿಸುತ್ತಾರೆ. ಹಿಂದೂ ಕರ್ಮ ಸಿದ್ಧಾಂತವು ಆತ್ಮದ ಅಸ್ತಿತ್ವದ ಮೇಲೆ ನಿಂತಿದೆ, ಆದರೆ ಬೌದ್ಧ ತತ್ವವು ಆತ್ಮದ ಅಸ್ತಿತ್ವನ್ನು ತಿರಸ್ಕರಿಸುತ್ತದೆ. ಬ್ರಾಹ್ಮಣ ಕರ್ಮ ಸಿದ್ಧಾಂತವು ಕರ್ಮವು ಅನುವಂಶೀಯವಾಗಿದ್ದು ಒಂದು ಜನ್ಮದಿಂದ ಇನ್ನೊಂದು ಜನ್ಮಕ್ಕೆ ಆತ್ಮದ ದೇಹಾಂತರದಿಂದ ಸಾಗಿಸಲ್ಪಡುತ್ತದೆ. ಹಿಂದೂ ಕರ್ಮ ಸಿದ್ಧಾಂತವು ಮನುಷ್ಯನೊಬ್ಬ ತನ್ನ ಹಿಂದಿನ ಜನ್ಮದಲ್ಲಿ ಕೆಟ್ಟ ಕರ್ಮ ಮಾಡಿದ್ದರೆ ಬಡವನಾಗಿಯೂ ಒಳ್ಳೆಯ ಕರ್ಮ ಮಾಡಿದ್ದರೆ ಶ್ರೀಮಂತನಾಗಿಯೂ ಹುಟ್ಟುತ್ತಾನೆ ಎಂದು ಹೇಳುತ್ತದೆ. ಬಿತ್ತಿದ್ದನ್ನು ಪಡೆಯಬೇಕೆಂಬ ಬುದ್ಧನ ಕರ್ಮ ಸಿದ್ಧಾಂತವು ಪ್ರಸ್ತುತ ಲೌಖಿಕ ಬದುಕಿಗೆ ಮಾತ್ರ ಅನ್ವಯವಾಗುತ್ತದೆ ಎಂಬುದನ್ನು ಒತ್ತಿ ಹೇಳುವ ಅಂಬೇಡ್ಕರ್, ಅದನ್ನು ಭೂತ ಮತ್ತು ಭವಿಷ್ಯದ ಜೀವನಕ್ಕೆ ಅನ್ವಯಿಸುವುದನ್ನು ತಿರಸ್ಕರಿಸುತ್ತಾರೆ. ‘ಕುರುಣೆಗೆ ಅಪಾರ ಮಹತ್ವ ನೀಡುವ ಬುದ್ಧ ಸಾಂಪ್ರದಾಯಿಕ ಕರ್ಮ ಸಿದ್ಧಾಂತದ ತರ್ಕವನ್ನು ಒಪ್ಪಲು ಸಾಧ್ಯವಿರಲಿಲ್ಲ’ ಎಂದು ಅವರು ವಾದಿಸುತ್ತಾರೆ.

‘ಆತ್ಮದ ಅಸ್ತಿತ್ವವನ್ನು ತಿರಸ್ಕರಿಸುವ ಬೌದ್ಧತತ್ವ ಪುನರ್ಜನ್ಮವನ್ನು ಏಕೆ ಒಪ್ಪುತ್ತದೆ’ ಎಂಬ ಪ್ರಶ್ನೆಯನ್ನೆತ್ತಿದ್ದ ಅಂಬೇಡ್ಕರ್ ಆತ್ಮವಿಲ್ಲದ ಪುನರ್ಜನ್ಮದ ಕಲ್ಪನೆಗೆ ತಮ್ಮದೇ ವಿವರಣೆ ನೀಡುತ್ತಾರೆ. ಮಾನವ ಶರೀರವು ಪೃಥ್ವಿ, ನೀರು, ಅಗ್ನಿ ಮತ್ತು ವಾಯು ಎಂಬ ನಾಲ್ಕು ಅಂಶಗಳಿಂದ ಮಾಡಿದ್ದಾಗಿದೆ ಎಂದು ಬುದ್ಧ ಹೇಳುತ್ತಾನೆ. ಮಾನವ ದೇಹ ಸತ್ತು ಹೋದಾಗ ಈ ನಾಲ್ಕು ಅಂಶಗಳು ಆಕಾಶದಲ್ಲಿ ತೇಲುತ್ತಿರುವ ಅದೇ ತರಹದ ಅಂಶಗಳೊಂದಿಗೆ ಸೇರಿಕೊಂಡು ಒಂದು ಹೊಸ ಹುಟ್ಟಿಗೆ ಕಾರಣವಾಗುತ್ತವೆ. ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಬುದ್ಧ ಪುನರ್ಜನ್ಮವೆಂದು ಕರೆದಿದ್ದು ಇದನ್ನೇ. ಈ ಅಂಶಗಳು ಒಂದೇ ದೇಹದಿಂದ ಬಾರದೇ ಬೇರೆ ಬೇರೆ ಮೃತ ದೇಹಗಳಿಂದ ಬಂದವುಗಳಾಗಿರಬಹುದು. ಅಂದರೆ ದೇಹವು ಸಾಯುತ್ತದೆ; ಆದರೆ ಅದರ ಅಂಶಗಳು ಉಳಿದುಕೊಂಡು ಹೊಸ ಹುಟ್ಟುಗಳಿಗೆ ಕಾರಣವಾಗುತ್ತವೆ. ಇದು ಹೊಸ ಹುಟ್ಟಷ್ಟೆ, ಸತ್ತುಹೋದ ವ್ಯಕ್ತಿಯ ಪುನರ್ಜನ್ಮವಲ್ಲ. ಮರುಹುಟ್ಟಿನ ಈ ವ್ಯಾಖ್ಯಾನವು ಯಾವುದೇ ಅತಿಮಾನುಷ ಅಂಶಗಳನ್ನು ಹೊಂದದೆ ಇರುವುದರಿಂದ ವಿಜ್ಞಾನದ ತತ್ವಗಳಿಗೆ ಅನುಗುಣವಾಗಿದೆ. ಶಕ್ತಿಯನ್ನು ಸೃಷ್ಟಿಮಾಡಲಾಗಲೀ ನಾಶಪಡಿಸಲಾಗಲೀ ಸಾಧ್ಯವಿಲ್ಲವೆನ್ನುವ ಮತ್ತು ಅದನ್ನು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಮಾರ್ಪಡಿಸಬಹುದಷ್ಟೆ ಎಂದು ಹೇಳುವ ಭೌತಶಾಸ್ತ್ರ ಹಾಗೂ ರಾಸಾಯಶಾಸ್ತ್ರದ ಶಕ್ತಿ ಸಂರಕ್ಷಣಾ ನಿಯಮಕ್ಕೆ ಈ ವ್ಯಾಖ್ಯಾನವು ಸಮಂಜಸವಾಗಿದೆ ಎಂದು ಅಂಬೇಡ್ಕರ್ ಹೇಳುತ್ತಾರೆ.
ಬಿಕ್ಕುಗಳು ಸಮಾಜ ಸೇವಕರು
ಅಂಬೇಡ್ಕರ್ ಅವರ ಪ್ರಕಾರ ಬುದ್ಧನು ಬಿಕ್ಕು ಪರಿಪೂರ್ಣ ಮನುಷ್ಯನಾಗಿರುವುದಕ್ಕಿಂತಲೂ ಸಾಮಾಜಿಕ ಸೇವಕನಾಗಿ ಕೆಲಸಮಾಡಬೇಕೆಂದು ಅಪೇಕ್ಷಿಸುತ್ತಾನೆ. ಬಿಕ್ಕು ಯಾವುದೇ ಜಾತಿಗೆ ಸೇರಿದವನಲ್ಲ, ತಪಸ್ವಿಯೂ ಅಲ್ಲ ಮತ್ತು ಅವನ ತಪ್ಪು ನಡತೆ ಶಿಕ್ಷಾರ್ಹ. ಆತ ಬುದ್ಧನ ಆದರ್ಶ ಸಮಾಜದ ದೀವಟಿಗೆ ಹಿಡಿದ ಮಾರ್ಗದರ್ಶಕ. ಬಿಕ್ಕು ಪ್ರಜ್ಞಾವಂತನಾಗಿ ಸ್ವ-ಸಂಸ್ಕೃತಿಯನ್ನು ಆಚರಿಸಬೇಕು ಮತ್ತು ಜನರ ಸೇವೆಗಾಗಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಅವರ ಸ್ನೇಹಿತನಾಗಿ, ತತ್ವಜ್ಞಾನಿಯಾಗಿ, ಮಾರ್ಗದರ್ಶಕನಾಗಿ ಕೆಲಸಮಾಡಬೇಕು. ಪರಿಪೂರ್ಣ ಮನುಷ್ಯನಾಗಿರುವ ಬಿಕ್ಕು ತನ್ನಷ್ಟಕ್ಕೆ ತಾನಿದ್ದರೆ ಸ್ವಾರ್ಥಿಯಾಗುತ್ತಾನೆ ಮತ್ತು ಆತ ಬೌದ್ಧ ಧಮ್ಮದ ತತ್ವಗಳನ್ನು ಎಲ್ಲವರ್ಗದ ಜನರಿಗೆ ತಲುಪಿಸುವಲ್ಲಿ ವಿಫಲನಾಗುತ್ತಾನೆ. ಮನುಕುಲದ ಕಷ್ಟಗಳ ಬಗ್ಗೆ ಅನಾದಾರ ತೋರಿದ ಬಿಕ್ಕು ಎಷ್ಟೇ ಪರಿಪೂರ್ಣನಾಗಿದ್ದರೂ ನಿಜವಾದ ಬಿಕ್ಕುವಾಗುವುದಿಲ್ಲ ಎಂದು ಅಂಬೇಡ್ಕರ್ ಹೇಳುತ್ತಾರೆ.
ಬಿಕ್ಕು ಕೇವಲ ಧಮ್ಮದ ಉಪದೇಶಕನಾಗದೆ ಉಪಾಸಕರಿಗೆ ಮತ್ತು ಸಾಮಾನ್ಯ ಜನರಿಗೆ ಉತ್ತಮ ನೈತಿಕ ಚಾರಿತ್ರ್ಯದ ಮಾದರಿಯಾಗಬೇಕು, ಕಠಿಣ ನಿಯಮಗಳನ್ನು ಮತ್ತು ನೈತಿಕ ನಡವಳಿಕೆಯನ್ನು ಪಾಲಿಸಬೇಕು ಎಂದು ಬುದ್ಧ ಬಿಕ್ಕುಗಳಿಗೆ ಕರೆ ನೀಡುತ್ತಾನೆ. ಸಂಘವು ಸಮಾಜಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸಬೇಕೆಂಬ ಕಾರಣಕ್ಕೆ ‘ವಿನಯ’ ಎಂದು ಕರೆಯುವ ಶಿಸ್ತಿನ ಕಠಿಣ ನಿಯಮಗಳನ್ನು ಜಾರಿಗೆ ತರುತ್ತಾನೆ. ಅಂಬೇಡ್ಕರ್ ಅವರಿಗೆ ಸಾಮಾನ್ಯ ಜನರೊಂದಿಗಿನ ಬಿಕ್ಕುಗಳ ಸಾಮಾಜಿಕ ಸಂಬಂಧ ಅತ್ಯಂತ ಮಹತ್ವದ್ದಾಗಿ ಕಂಡಿತ್ತು. ಏಕೆಂದರೆ ಬುದ್ಧನ ಸಾಮಾಜಿಕ ಸಂದೇಶವನ್ನು ಪ್ರಚಾರ ಮಾಡುವುದರಲ್ಲಿ ಮತ್ತು ಸಮಾಜವೊಂದನ್ನು ಬಲವಾದ ನೈತಿಕ ಮೌಲ್ಯಗಳ ಆಧಾರದ ಮೇಲೆ ನಿರ್ಮಿಸುವಲ್ಲಿ ಅವರ ಪಾತ್ರ ಹಿರಿದಾಗಿತ್ತು.
ಸಂಪ್ರದಾಯವಾದಿ ‘ಧರ್ಮ’ ಮತ್ತು ವಿವೇಚನಾಶೀಲ ‘ಧಮ್ಮ’
ಪುಸ್ತಕದ ನಾಲ್ಕನೇ ಪರ್ವದಲ್ಲಿ ಧರ್ಮ ಮತ್ತು ಧಮ್ಮದ ನಡುವಿನ ವ್ಯತ್ಯಾಸವನ್ನು ಚರ್ಚಿಸುವ ಸಂದರ್ಭದಲ್ಲಿ ‘ಧರ್ಮ’ ಎಂಬ ಶಬ್ದವನ್ನು ‘ಹಿಂದೂ ಧರ್ಮ’ದ ತತ್ಸಮಾನ ಶಬ್ದವಾಗಿ ಬಳಸುತ್ತಾರೆ. ಬೇರೆಡೆಯಲ್ಲಿ ಆ ಶಬ್ದವನ್ನು ಸಾಮಾನ್ಯವಾಗಿ ‘ಧರ್ಮ’ ಎಂಬ ಅರ್ಥದಲ್ಲಿ ಉಪಯೋಗಿಸುತ್ತಾರೆ. ಧರ್ಮ ಏನನ್ನು ಸೂಚಿಸುತ್ತದೆ ಎಂಬುದನ್ನು ಸರಳವಾಗಿ ಹೀಗೆ ಹೇಳುತ್ತಾರೆ: ‘ದೇವರಲ್ಲಿ ನಂಬಿಕೆ, ಆತ್ಮದಲ್ಲಿ ನಂಬಿಕೆ, ದೇವರ ಆರಾಧನೆ, ಭ್ರಷ್ಟ ಆತ್ಮವನ್ನು ಶುದ್ಧಗೊಳಿಸುವುದು, ಪ್ರಾರ್ಥನೆಗಳು, ಆಚರಣೆಗಳು ಮತ್ತು ಬಲಿಗಳ ಮೂಲಕ ದೇವರನ್ನು ಒಲಿಸಿಕೊಳ್ಳವುದು.’
ಬಡವರು ಮತ್ತು ದಮನಿತರು ತಾವು ಎಷ್ಟೇ ಕಷ್ಟದಲ್ಲಿದ್ದರೂ ವೈಯಕ್ತಿಕ ಸಂತೋಷವನ್ನು ಸಾಧಿಸಬಹುದೆಂಬ ನಂಬಿಕೆಯನ್ನು ಹುಟ್ಟುಹಾಕುವ ಹಿಂದೂ ಧರ್ಮಕ್ಕಿಂತಲೂ ಬಡತನ ಮತ್ತು ಅನ್ಯಾಯವನ್ನು ಸೃಷ್ಟಿಸುವ ಸಾಮಾಜಿಕ ಪರಿಸ್ಥಿತಿಗಳನ್ನು ಬದಲು ಮಾಡಬಹುದೆಂಬ ಭರವಸೆಯನ್ನು ನೀಡುವ ಬೌದ್ಧ ಧಮ್ಮ ಹೆಚ್ಚು ಪ್ರಾಮಾಣಿಕವಾದುದು ಎಂದು ಅಂಬೇಡ್ಕರ್ ಹೇಳುತ್ತಾರೆ.
ಇದನ್ನೂ ಓದಿರಿ: ‘ಹಿಂದೂಧರ್ಮದ ಒಗಟುಗಳು’: ಉತ್ತರ ಸಿಗದ ಪ್ರಶ್ನೆಗಳ ಬೆನ್ನೇರಿ
ಬುದ್ಧನ ಧಮ್ಮ ದೇವರು, ಆತ್ಮ ಮತ್ತು ಜೀವದ ಮರಣೋತ್ತರ ಅಸ್ತಿತ್ವವನ್ನು ತಿರಸ್ಕರಿಸುತ್ತದೆ. ಅಲ್ಲದೆ ಶಾಸ್ತ್ರಗಳಿಗೆ, ವ್ರತಾಚರಣೆಗಳಿಗೆ ಗಮನ ನೀಡುವುದಿಲ್ಲ. ಧರ್ಮವು ವೈಯಕ್ತಿಕ ನಂಬಿಕೆಯಾಗಿದ್ದರೆ ಅದಕ್ಕೆ ತದ್ವಿರುದ್ಧವಾದ ಧಮ್ಮವು ಮೂಲಭೂತವಾಗಿ ಸಾಮಾಜಿಕವಾದುದು. ‘ಇಬ್ಬರು ವ್ಯಕ್ತಿಗಳು ಪರಸ್ಪರ ಬದುಕಬೇಕಾದರೆ ಅವರಿಗೆ ಇಷ್ಟವಿದ್ದರೂ, ಇಲ್ಲದಿದ್ದರೂ ಅವರು ಧಮ್ಮಕ್ಕೆ ಸ್ಥಾನ ನೀಡಲೇಬೇಕು, ಯಾರೊಬ್ಬರೂ ಅದರಿಂದ ತಪ್ಪಿಸಿಕೊಳ್ಳಲಾಗದು’ ಎಂದು ಅಂಬೇಡ್ಕರ್ ಹೇಳುತ್ತಾರೆ. ‘ಧರ್ಮದ ಉದ್ದೇಶ ಈ ಜಗತ್ತಿನ ಉಗಮವನ್ನು ವಿವರಿಸುವುದಾಗಿದೆ, ಆದರೆ ಸಾಮಾಜಿಕ ಬೋಧನೆಯಾಗಿರುವ ಧಮ್ಮದ ಉದ್ದೇಶ ಜಗತ್ತನ್ನು ಮರುನಿರ್ಮಾಣ ಮಾಡುವುದಾಗಿದೆ.’

ಬೇರೆಯ ಧರ್ಮಗಳು ದೇವರು, ಆತ್ಮ ಮತ್ತು ಮರಣೋತ್ತರ ಜೀವನ ಮುಂತಾದ ಕಲ್ಪನೆಗಳಿಂದ ತುಂಬಿಹೋಗಿದ್ದರೆ, ಬೌದ್ಧ ಧಮ್ಮವು ಪ್ರಜ್ಞೆ, ಕರುಣೆ ಮತ್ತು ಸಮತೆಯ ತತ್ವಗಳನ್ನು ನೀಡಿದೆ ಎಂದು ಅಂಬೇಡ್ಕರ್ ಹೇಳುತ್ತಾರೆ. ನವಯಾನ ಬೌದ್ಧ ಸಿದ್ಧಾಂತವನ್ನು ರೂಪಿಸುವ ಸಂದರ್ಭದಲ್ಲಿ ವೈಚಾರಿಕ, ನೈತಿಕ, ಸಾರ್ವತ್ರಿಕ ಮತ್ತು ಜಾತ್ಯತೀತ ಧರ್ಮವೊಂದು ಬೇಕೆನ್ನುವ ನಿರ್ಧಾರಕ್ಕೆ ಅವರು ಬಂದಿದ್ದರು. ಧಮ್ಮವು ಸಾಮಾಜಿಕ ಅಂತಃಸಾಕ್ಷಿಯ ಮಾರ್ಗದರ್ಶಕ ತತ್ವವಾಗಬಹುದು ಎಂದು ಅವರಿಗನಿಸಿತ್ತು. ಯಾವುದು ಧಮ್ಮವಲ್ಲ ಎಂಬುದನ್ನು ಅಂಬೇಡ್ಕರ್ ವಿವರಿಸುತ್ತಾರೆ: ‘ಅಲೌಖಿಕ ಶಕ್ತಿಯನ್ನು ನಂಬುವುದು ಧಮ್ಮವಲ್ಲ, ದೇವರನ್ನು ನಂಬುವುದು ಧಮ್ಮವಲ್ಲ. ಬ್ರಹ್ಮನೊಂದಿಗೆ ಐಕ್ಯವಾಗುವುದರ ಮೇಲೆ ಅವಲಂಬಿತವಾಗಿರುವ ಧಮ್ಮ ಸುಳ್ಳು ಧಮ್ಮ. ಆತ್ಮದಲ್ಲಿ ನಂಬಿಕೆ ಇಡುವುದು ಧಮ್ಮವಲ್ಲ. ಬಲಿ ಕೊಡುವುದರಲ್ಲಿ ನಂಬಿಕೆ ಇಡುವುದು ಧಮ್ಮವಲ್ಲ. ಧಮ್ಮದ ಮೇಲೆ ಪುಸ್ತಕಗಳನ್ನು ಓದುವುದು ಧಮ್ಮವಲ್ಲ ಮತ್ತು ಧಮ್ಮದ ಮೇಲಿನ ಗ್ರಂಥಗಳು ಎಂದೂ ಸುಳ್ಳಾಗುವುದಿಲ್ಲ ಎಂದು ನಂಬುವುದು ಧಮ್ಮವಲ್ಲ.’ ಧಮ್ಮವು ಸುಧಮ್ಮವಾಗಬೇಕಾದರೆ ಅದು ಪ್ರಜ್ಞೆ, ಮೈತ್ರಿ ಮತ್ತು ಕರುಣೆಯನ್ನು ಪೋಷಿಸಬೇಕು. ಧಮ್ಮವು ನೈತಿಕತೆಯನ್ನು ತರ್ಕಾತೀತ ನೆಲೆಯಲ್ಲಿ ಗುರುತಿಸುವುದಿಲ್ಲ. ಧಮ್ಮವೆಂದರೆ ಅಂಧಭಕ್ತಿ ಮತ್ತು ಮೌಢ್ಯವನ್ನು ತಿರಸ್ಕರಿಸಿ ಮನುಷ್ಯರ ನಡುವೆ ಪಾರಸ್ಪರಿಕ ಸಂಬಂಧವನ್ನು ನಿಯಂತ್ರಿಸುವ ನೈತಿಕತೆಯಾಗಿದೆ. ಜನರು ಕುರುಡು ಶಿಷ್ಯರಾಗುವುದನ್ನು ಬುದ್ಧ ಇಷ್ಟಪಡಲಿಲ್ಲ ಎಂಬುದನ್ನು ಅಂಬೇಡ್ಕರ್ ಒತ್ತಿ ಹೇಳಲು ಇಚ್ಛೆಪಡುತ್ತಿದ್ದರು; ಏಕೆಂದರೆ ಅವರಿಗೆ ಬೇಕಾಗಿದ್ದು ಅನುಯಾಯಿಗಳೇ ಹೊರತು ಆರಾಧಕರಲ್ಲ.
ದೇವರ ಅಸ್ತಿತ್ವದ ನಿರಾಕರಣವನ್ನು ಹಲವು ಬಾರಿ ಚರ್ಚಿಸುತ್ತಾರೆ. ಧಮ್ಮದ ಪ್ರಕಾರ ಈ ಜಗತ್ತು ಬ್ರಹ್ಮನ ಸೃಷ್ಟಿ ಅಲ್ಲ. ಕಾರಣವಿಲ್ಲದೆ ಯಾವುದೂ ಅಸ್ತಿತ್ವದಲ್ಲಿರುವುದಿಲ್ಲ. ಎಲ್ಲದಕ್ಕೂ ಕಾರ್ಯಕಾರಣ ಸಂಬಂಧವಿದೆ. ಯಾವುದೂ ದೇವರ ಸೃಷ್ಟಿಯಲ್ಲ. ‘ದೇವರು ಶೂನ್ಯದಿಂದ ಏನಾದರೊಂದನ್ನು ಸೃಷ್ಟಿಸಿದನೇ ಅಥವಾ ಏನಾದರೊಂದನ್ನು ಮತ್ತೊಂದರಿಂದ ಸೃಷ್ಟಿಸಿದನೇ?’ ಎಂಬ ಪ್ರಶ್ನೆಯನ್ನು ಮುಂದಿಡುತ್ತಾರೆ. ‘ದೇವರು ಒಂದರಿಂದ ಇನ್ನೊಂದನ್ನು ಸೃಷ್ಟಿಸಿದ್ದಾನೆ ಎಂದುಕೊಂಡರೂ ಆ ಒಂದು ಇನ್ನೊಂದನ್ನು ಸೃಷ್ಟಿಸುವ ಮೊದಲೇ ಅಸ್ತಿತ್ವದಲ್ಲಿತ್ತು ಎಂದಾಯಿತು. ಎಲ್ಲ ಮನುಷ್ಯರೂ ಬ್ರಹ್ಮನ ಸೃಷ್ಟಿಯಾಗಿದ್ದರೆ, ಅವನೇ ಅವರ ಕಲ್ಯಾಣವನ್ನು ನೋಡಿಕೊಳ್ಳಬೇಕಾಗಿತ್ತಲ್ಲವೆ? ಈಶ್ವರನೇ ಎಲ್ಲವನ್ನೂ ಸೃಷ್ಟಿ ಮಾಡಿದ ಎಂದ ಮೇಲೆ ಎಲ್ಲ ಕಷ್ಟ ದುಃಖಗಳಿಗೆ ಅವನೇ ಕಾರಣವಲ್ಲವೆ?’ ಎಂದು ಬುದ್ಧ ಕೇಳುತ್ತಾನೆ.
ವೇದಗಳು ಪವಿತ್ರ, ಅಂತಿಮ, ದೋಷಾತೀತ ಅಧಿಕಾರಯುತ ವಾಣಿಗಳೆಂಬ ವಾದವನ್ನು ‘ತೆವಿಜ್ಜಸುತ್ತ’ದಲ್ಲಿ ತಿರಸ್ಕರಿಸುವ ಬುದ್ಧ ‘ಅವುಗಳು ನೀರಿಲ್ಲದ ಮರಳುಗಾಡುಗಳು, ದಾರಿಯೇ ಇಲ್ಲದ ಗೊಂಡಾರಣ್ಯ ಮತ್ತು ಆತ್ಮನಾಶಕ’ ಎಂದು ಹೇಳುತ್ತಾನೆ. ಆ ವಾದವನ್ನು ಮುಂದುವರೆಸುವ ಅಂಬೇಡ್ಕರ್, ‘ಬೌದ್ಧಿಕ ಮತ್ತು ನೈತಿಕ ದಾಹವಿರುವವರು ಯಾರೇ ಆದರೂ ತಮ್ಮ ದಾಹವನ್ನು ತೀರಿಸಿಕೊಳ್ಳಲು ವೇದಗಳ ಮೊರೆ ಹೋಗಲಾರ’ ಎನ್ನುತ್ತಾರೆ. ವೇದಗಳು ದೋಷಾತೀತ ಎಂದು ನಂಬುವುದು ಧಮ್ಮವಲ್ಲ. ಧಮ್ಮವೆಂದರೆ ಬೇರೊಬ್ಬರು ಹೇಳಿದಂತೆ ನಡೆಯುವುದನ್ನು ಬಿಟ್ಟು ತನ್ನನ್ನೇ ತಾನು ತಿಳಿದುಕೊಳ್ಳುವುದು.
ಜನರು ತನ್ನ ಮಾರ್ಗದಲ್ಲಿ ನಡೆಯಬೇಕೆಂದು ಬುದ್ಧ ಹೇಳುತ್ತಾನಾದರೂ ತನ್ನಲ್ಲಿ ನಂಬಿಕೆ ಇಡುವುದನ್ನು ನಿಷೇಧಿಸುತ್ತಾನೆ. ಜನರು ವಿಮರ್ಶಾತ್ಮಕ ಜ್ಞಾನವನ್ನು ಬಳಸಿಕೊಂಡು ಅವರದೇ ಸಾಮರ್ಥ್ಯದಲ್ಲಿ, ವೈಚಾರಿಕತೆಯಲ್ಲಿ ಮತ್ತು ವೈಜ್ಞಾನಿಕ ತರ್ಕದಲ್ಲಿ ನಂಬಿಕೆ ಇಡಬೇಕೆಂದು ಹೇಳುತ್ತಾನೆ. ‘ನಾನು ಮೋಕ್ಷದಾತನಲ್ಲ, ಮಾರ್ಗದಾತ’ ಮಾತ್ರ ಎಂದು ಹೇಳುವ ಬುದ್ಧ ಸ್ವಪ್ರಯತ್ನದಿಂದ ಮತ್ತು ಸ್ವಶಕ್ತಿಯಿಂದ ಮಾತ್ರ ಎಲ್ಲ ಆವೇಶಗಳಿಂದ ಮುಕ್ತವಾಗಿ ನಿಬ್ಬಾಣವನ್ನು ಸಾಧಿಸಬಹುದೆಂದು ಹೇಳುತ್ತಾನೆ. ಅಂಬೇಡ್ಕರ್ ಪ್ರಕಾರ ಬೌದ್ಧ ಧಮ್ಮವು ಧರ್ಮವಲ್ಲ, ಅದಕ್ಕಿಂತಲೂ ಶ್ರೇಷ್ಠವಾದದ್ದು. ಧಮ್ಮದ ಸ್ವಾತಂತ್ರ್ಯ , ಸಮಾನತೆ, ನ್ಯಾಯ, ಐಕ್ಯಮತ್ಯ, ಭ್ರಾತೃತ್ವ ಮತ್ತು ಕರುಣೆಯ ತತ್ವಗಳು ಹಿಂದೂ ಧರ್ಮದ ಜಾತಿ ಆಧಾರಿತ ಶ್ರೇಣೀಕೃತ ಸಮಾಜದ ಕಟ್ಟುಪಾಡುಗಳಿಗೆ ವಿರುದ್ಧವಾಗಿವೆ. ಅಸಮಾನ ಸಾಮಾಜಿಕ ವ್ಯವಸ್ಥೆಯು ಹಿಂದೂಧರ್ಮದ ತಳಪಾಯವಾಗಿರುವುದರಿಂದ ಬುದ್ಧನ ವೈಚಾರಿಕತೆ ಮಾತ್ರ ಸಮಸಮಾಜದ ನಿರ್ಮಾಣಕ್ಕೆ ಸಹಾಯಕವಾಗಬಲ್ಲದು.
ಸುಧಮ್ಮವನ್ನು ವಿವರಿಸುತ್ತಾ ಅಂಬೇಡ್ಕರ್ ಅವರು ‘ದುಃಖ ಜನರ ನಡುವಿನ ಅಸಮಾನತೆಯ ಫಲವಾಗಿರುವುದರಿಂದ ನ್ಯಾಯಸಮ್ಮತ ನಡೆ ಮಾತ್ರ ದುಃಖವನ್ನು ಹೋಗಲಾಡಿಸಬಹುದು. ಧಮ್ಮವು ಸುಧಮ್ಮವಾಗಬೇಕಾದರೆ ಮನುಷ್ಯ ಮನುಷ್ಯನ ನಡುವಿನ ಎಲ್ಲ ಸಾಮಾಜಿಕ ಬೇಲಿಗಳನ್ನು ಮುರಿದುಹಾಕಬೇಕು ಮತ್ತು ಸಮಾನತೆಯನ್ನು ಬೆಳೆಸಬೇಕು’ ಎಂದು ವಾದಿಸುತ್ತಾರೆ.
ನೈತಿಕತೆಯೇ ದೇವರು
ಸಮಾಜಶಾಸ್ತ್ರಜ್ಞ ಎಮಿಲ್ ಡುರ್ಕೈಮ್ ಹೇಳಿದಂತೆ ಅಂಬೇಡ್ಕರ್ ಕೂಡ ನೈತಿಕ ಸಂಹಿತೆ ಧರ್ಮದ ಅತ್ಯಗತ್ಯ ಅಂಶವೆಂದೂ ಮತ್ತು ಸಮಾಜವನ್ನು ಒಗ್ಗೂಡಿಸುವ ಕಾರ್ಯವನ್ನು ಅದು ಮಾಡುತ್ತದೆ ಎಂದು ವಾದಿಸುತ್ತಾರೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಉತ್ತೇಜಿಸಲು ಸಮಾಜವೊಂದಕ್ಕೆ ನೈತಿಕ ಬುನಾದಿಯ ಅಗತ್ಯವಿದ್ದು ಅಂತಹ ನೈತಿಕತೆಯನ್ನು ಧರ್ಮ ನೀಡಬಲ್ಲದು ಎಂಬುದು ಅವರ ಸೈದ್ಧಾಂತಿಕ ನಿಲುವಾಗಿತ್ತು. ಧರ್ಮವೆಂಬುದು ಜನಸಮೂಹಗಳ ಅಫೀಮು ಎಂಬ ಕಾರ್ಲ್ ಮಾರ್ಕ್ಸ್‌ನ ನಿರೂಪಣೆಯನ್ನು ಅಂಬೇಡ್ಕರ್ ಒಪ್ಪಲಿಲ್ಲ. ಮಾನವ ಸಮಾಜದಲ್ಲಿ ಧರ್ಮದ ಪ್ರಗತಿಪರ ಮತ್ತು ರಚನಾತ್ಮಕ ಸಾಧ್ಯತೆಗಳ ಬಗ್ಗೆ ಅವರು ಭರವಸೆ ಹೊಂದಿದ್ದರು.

ಮೂಢನಂಬಿಕೆಯ ಬದಲು ವೈಚಾರಿಕತೆಯಲ್ಲಿ ನಂಬಿಕೆ, ಚಾತುರ್ವರ್ಣ ವ್ಯವಸ್ಥೆಯ ತಿರಸ್ಕಾರ ಮತ್ತು ನೈತಿಕತೆ ಎಂಬುದು ಆತ್ಮ ಹಾಗೂ ಪರಮಾತ್ಮನಿಗೆ ಸಂಬಂಧವಿರದ ಮೂಲಭೂತ ಮಾನವೀಯ ಮೌಲ್ಯ ಎಂದು ಒತ್ತಿ ಹೇಳಿದ ಬೌದ್ಧ ತತ್ವಗಳು ಅಂಬೇಡ್ಕರ್ ಅವರನ್ನು ಆಕರ್ಷಿಸಿದ್ದವು. ಅವರ ಪ್ರಕಾರ ಇತರ ಧರ್ಮಗಳು ನೈತಿಕತೆಯನ್ನು ಉಪದೇಶಿಸುತ್ತವೆ, ಆದರೆ ನೈತಿಕತೆಯೇ ಅವುಗಳ ಮೂಲವಲ್ಲ. ಅದು ಸಂದರ್ಭಕ್ಕೆ ತಕ್ಕಂತೆ ಸೇರಿಸುವ ಮತ್ತು ಕಳಚಿಬಿಡುವ ಸಾಮಾನು ಬಂಡಿ. ಅವರ ಪ್ರಕಾರ ನೈತಿಕತೆಯೇ ಧರ್ಮದ ಬೇರು ಮತ್ತು ತಿರುಳು. ಧಮ್ಮದಲ್ಲಿ ದೇವರಿಲ್ಲದಿದ್ದರೂ ನೈತಿಕತೆಗೆ ದೇವರ ಸ್ಥಾನ ನೀಡಲಾಗಿದೆ. ಈಶ್ವರವಾದಿ ಧರ್ಮಗಳು ನೈತಿಕತೆಯನ್ನು ಕರ್ಮಸಿದ್ಧಾಂತದ ನೆಲೆಯಲ್ಲಿ ಸಮರ್ಥಿಸುತ್ತವೆ. ಅದರ ಪ್ರಕಾರ ಉತ್ತಮ ಅಥವಾ ಕೆಟ್ಟ ಕೆಲಸಗಳು ಸುಖಕರ ಅಥವಾ ಯಾತನಾಮಯ ಪರಿಣಾಮಗಳಿಗೆ ಕಾರಣವಾಗುತ್ತವೆ. ಆದರೆ ಅಂಬೇಡ್ಕರ್ ಅವರು ನೈತಿಕತೆಯನ್ನು ಸಾರ್ವತ್ರಿಕ ತರ್ಕಬದ್ಧವಾದದ ನೆಲೆಯಲ್ಲಿ ಸಮರ್ಥಿಸುತ್ತಾರೆ.
ಜಾತಿ ನಿರ್ಮೂಲನೆ, ಸಾಮಾಜಿಕ ಪುನರ್‌ರಚನೆ, ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯವನ್ನೊಳಗೊಂಡ ಜಾತಿರಹಿತ ಆಧುನಿಕ ಹಾಗೂ ಪ್ರಗತಿಪರ ಸಮಾಜವನ್ನು ಮರುನಿರ್ಮಿಸಲು ಅಂಬೇಡ್ಕರ್ ಅವರು ನಡೆಸಿದ ದಶಕಗಳ ಹೋರಾಟದ ಹಿನ್ನೆಲೆಯಲ್ಲಿ ಅವರ ಬೌದ್ಧಧರ್ಮದ ಅಧ್ಯಯನವನ್ನು ನೋಡಬೇಕಾಗಿದೆ. ಅಂಬೇಡ್ಕರ್ ಅವರ ಆಧುನಿಕ ಧರ್ಮದ ಪರಿಕಲ್ಪನೆಯನ್ನು ಅವರ ಗುರುಗಳಾದ ಜಾನ್ ಡೀವಿಯವರ ‘ಜಾತ್ಯತೀತ ಧರ್ಮ’ದ ಕಲ್ಪನೆಗೆ ಹೋಲಿಸಬಹುದಾಗಿದೆ. ಪ್ರಜಾಸತ್ತೆ ಮತ್ತು ಸಮಾನತೆಯನ್ನು ಪ್ರತಿಪಾದಿಸುವ ಧರ್ಮವೊಂದರ ನಿರ್ಮಾಣದ ಅಗತ್ಯವನ್ನು ಮುನ್ನೆಲೆಗೆ ತಂದ ಈ ಇಬ್ಬರು ಚಿಂತಕರ ದಾರಿಗಳು ಮಾತ್ರ ಭಿನ್ನವಾಗಿದ್ದವು. ಜಾನ್ ಡೀವಿಯವರದ್ದು ತನ್ನದೇ ಧಾರ್ಮಿಕ ಪರಿಭಾಷೆ ಮತ್ತು ಸಾಂಸ್ಥಿಕ ಸ್ವರೂಪವಿಲ್ಲದ ನಾಗರಿಕ ಧರ್ಮದ ಕಲ್ಪನೆಯಾಗಿದ್ದರೆ ಅಂಬೇಡ್ಕರ್ ಅವರದ್ದು ಪ್ರಾಚೀನ ಧರ್ಮವೊಂದನ್ನು ತಮ್ಮದೇ ಅನ್ವೇಷಣೆಯ ಮೂಲಕ ವ್ಯಾಖ್ಯಾನಿಸಿ ಅದನ್ನು ಸಾಮಾಜಿಕ ನೈತಿಕತೆಯ ನೆಲೆಯಲ್ಲಿ ಮರುನಿರ್ಮಾಣ ಮಾಡುವ ಯೋಜನೆ. ಹೊಸ ಸಮಾಜವೊಂದರ ನಿರ್ಮಾಣಕ್ಕೆ ಪ್ರಜಾಸತ್ತಾತ್ಮಕ ಗುಣವುಳ್ಳ ಬೌದ್ಧಧರ್ಮವು ನೀಡಿದ ಸಾಮಾಜಿಕ ನೈತಿಕತೆ ಸಾರ್ವತ್ರಿಕವಾದದ್ದು ಎಂಬುದು ಅವರ ನಂಬುಗೆಯಾಗಿತ್ತು. ಬುದ್ಧ ತನ್ನ ಸಂದೇಶ ದೋಷಾತೀತವೆಂದು ಹೇಳಿಕೊಳ್ಳದೆ ಅದನ್ನು ಪರೀಕ್ಷಿಸುವ ಮತ್ತು ಪ್ರಶ್ನಿಸುವ ಸವಾಲನ್ನು ಆಹ್ವಾನಿಸಿದ್ದ. ಬೌದ್ಧಧರ್ಮವು ಒಂದು ಧರ್ಮ ಎನ್ನುವುದಕ್ಕಿಂದಲೂ ಹೆಚ್ಚಾಗಿ ನೈತಿಕತೆ ಮತ್ತು ವೈಜ್ಞಾನಿಕ ನೆಲೆಯ ಮೇಲೆ ನಿಂತ ಸಾಮಾಜಿಕ ತತ್ವವಾಗಿತ್ತು.
ಇದನ್ನೂ ಓದಿರಿ: ‘ಭಾರತದಲ್ಲಿ ಜಾತಿಗಳು’: ಅವುಗಳ ಉತ್ಪತ್ತಿ, ವಿಕಾಸ ಹೇಗಾಯಿತು?
ಬೌದ್ಧಧರ್ಮವು ದೇಹ, ಮಾತು ಮತ್ತು ಮನಸ್ಸನ್ನು ಶುದ್ಧಗೊಳಿಸುವ ಮತ್ತು ನಿಬ್ಬಾಣವನ್ನು ಪಡೆಯುವ ಒಂದು ಸಾಮಾಜಿಕ ಸಂಸ್ಥೆಯಷ್ಟೇ ಅಲ್ಲದೆ ವೈಯಕ್ತಿಕ ಅಸ್ಮಿತೆಯ ಭಾಗವಾದ ವ್ಯಕ್ತಿಗತ ನೈತಿಕತೆಯೂ ಆಗಿತ್ತು. ಅಂಬೇಡ್ಕರ್ ಅವರ ಅನುಶೋಧವೆಂದರೆ ಬುದ್ಧಧರ್ಮವನ್ನು ಜಾತ್ಯತೀತ ಮತ್ತು ಸಂಪ್ರದಾಯ ವಿರೋಧಿ ಧರ್ಮವನ್ನಾಗಿ ಕಂಡುಕೊಂಡಿದ್ದು. ಬೌದ್ಧಧರ್ಮ ಮಾತ್ರ ಸಾರ್ವತ್ರಿಕ ನೈತಿಕ ನಿಯಮಗಳನ್ನು ಪ್ರತಿಷ್ಠಾಪಿಸಬಲ್ಲದು ಮತ್ತು ಜಗತ್ತಿನ ಮರುನಿರ್ಮಾಣಕ್ಕೆ ಪರಿಹಾರಗಳನ್ನು ನೀಡಬಲ್ಲದು ಎಂಬುದು ಅವರ ನಂಬಿಕೆಯಾಗಿತ್ತು.
ಆಧುನಿಕ ಸಮಾಜದ ಮೌಲ್ಯಗಳನ್ನು ಮಾನವನ ಸಾಮುದಾಯಿಕ ಜೀವನದ ನಿರಂತರ ಹುಡುಕಾಟದೊಂದಿಗೆ ಬೆಸೆಯುವ ಪ್ರಯತ್ನವನ್ನು ಅಂಬೇಡ್ಕರ್ ಮಾಡುತ್ತಾರೆ. ಹಾಗೆಯೇ ಬುದ್ಧನ ದುಃಖ ಮುಕ್ತಿ ಮಾರ್ಗವನ್ನು ಮಾರ್ಕ್ಸ್ ಶೋಷಣಾಮುಕ್ತ ಸಮಾಜದ ಯೋಜನೆಯೊಂದಿಗೆ ಬೆಸೆದು ಜಾತಿ ಮತ್ತು ವರ್ಗ ಅಸಮಾನತೆಗಳನ್ನು ನಿರ್ಮೂಲನೆ ಮಾಡುವ ಮಾರ್ಗಗಳನ್ನು ತೋರಿಸುತ್ತಾರೆ. ಕೆಳಸ್ತರದವರನ್ನು ಸಾಮಾಜಿಕ ದಬ್ಬಾಳಿಕೆಯಿಂದ ಬಿಡುಗಡೆಗೊಳಿಸುವ ಮೂಲಕ ಅಸ್ಪೃಶ್ಯರು ಮತ್ತು ಸವರ್ಣೀಯರ ನಡುವಿನ ಸಾಮಾಜಿಕ ಸಂಘರ್ಷದ ಸಮಸ್ಯೆಯನ್ನು ಪರಿಹರಿಸುವ ಉದ್ದೇಶ ಈ ಪುಸ್ತಕಕ್ಕಿದೆ.
ಅಂಬೇಡ್ಕರ್ ಅವರು ಬೌದ್ಧಧರ್ಮಕ್ಕೆ ನೀಡಿದ ನವವ್ಯಾಖ್ಯಾನ ಮುಕ್ತ ಸಮಾಜದ ಹಾಗೂ ಸ್ವಾಭಿಮಾನಿ ದೇಶದ ಕನಸುಗಳಿಗೆ ಸ್ಫೂರ್ತಿ ನೀಡಬಲ್ಲದು. ಧಾರ್ಮಿಕ ಮತೀಯವಾದ ಮತ್ತು ಮೂಲಭೂತವಾದ ಭಾರತೀಯ ಸಮುದಾಯಗಳ ನಡುವೆ ದ್ವೇಷವನ್ನು ಬೆಳೆಸುತ್ತಿರುವ ಈ ಸಂದರ್ಭದಲ್ಲಿ ಬೌದ್ಧ ತತ್ವಗಳು ಹೆಚ್ಚು ಪ್ರಸ್ತುತವಾಗಿವೆ. ಆಧುನಿಕತೆ, ಸಮಾನತೆ ಮತ್ತು ಧರ್ಮನಿರಪೇಕ್ಷತೆಯ ತತ್ವಗಳ ಆಧಾರದ ಮೇಲೆ ನಾಗರಿಕ ಸಮಾಜವನ್ನು ಕಟ್ಟುವ ಹಾಗೂ ಜಗತ್ತನ್ನು ಮರುನಿರ್ಮಾಣ ಮಾಡುವ ಮಾರ್ಗಗಳನ್ನು ಅಂಬೇಡ್ಕರ್ ಓದುಗರಿಗೆ ತೋರಿಸಿದ್ದಾರೆ. ಬುದ್ಧನ ಜೀವನ ಮತ್ತು ಬೋಧನೆಯನ್ನು ಸಮಗ್ರವಾಗಿ ತಿಳಿದುಕೊಳ್ಳ ಬಯಸುವವರು ಅವಶ್ಯಕವಾಗಿ ಓದಲೇಬೇಕಾದ ಪುಸ್ತಕ ಇದು.

ಪ್ರೊ.ಡಿ.ಎಸ್. ಪೂರ್ಣಾನಂದ
ಮಂಗಳೂರು, ಕುವೆಂಪು ವಿಶ್ವವಿದ್ಯಾಲಯಗಳಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಪ್ರೊ.ಡಿ.ಎಸ್.ಪೂರ್ಣಾನಂದ ಅವರು, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಮೇಷ್ಟ್ರು ಹಾಗೂ ಜನಪರ ಚಳವಳಿಗಳಲ್ಲಿ ಗುರುತಿಸಿಕೊಂಡವರು.



