ಮೈಸೂರು ನಗರದ ಜೆಎಸ್‌ಎಸ್-ಎಸ್‌ಟಿಯುನಲ್ಲಿ ಪುರುಷರಿಗಾಗಿ ಆಯೋಜಿಸಿರುವ ನಾಲ್ಕನೇ ಆವೃತ್ತಿಯ ಅಂತರ್‌ಸಂಸ್ಥೆಗಳ ಕ್ರಿಕೆಟ್ ಪಂದ್ಯಾವಳಿಗೆ ಗುರುವಾರ ಚಾಲನೆ ದೊರೆಯಿತು.
ಜೆಎಸ್‌ಎಸ್-ಎಸ್‌ಟಿಯು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ ಹಾಗೂ ಎಸ್‌ಜೆಸಿಇ ಸಹಯೋಗದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿಗೆ ವಿಶ್ವವಿದ್ಯಾಲಯದ ಕುಲಪತಿ ಡಾ. ಎ.ಎನ್. ಸಂತೋಷ್ ಕುಮಾರ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ವಿಶ್ವವಿದ್ಯಾಲಯದಲ್ಲಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲು ಮಾಡುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದರು. ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವ ಕ್ರೀಡಾಪಟುಗಳಿಗೆ ಶುಭ ಹಾರೈಸಿದ ಅವರು, ಗೆಲುವು-ಸೋಲು ಕ್ರೀಡೆಯ ಸಹಜ ಭಾಗ. ಆದರೆ, ಕ್ರೀಡೆಯಲ್ಲಿ ಭಾಗವಹಿಸುವಿಕೆ ಮತ್ತು ಕ್ರೀಡಾಸ್ಫೂರ್ತಿ ಅತ್ಯಂತ ಮುಖ್ಯ ಎಂದು ತಿಳಿಸಿದರು.
ವಿವಿಧ ಜೆಎಸ್‌ಎಸ್ ಸಂಸ್ಥೆಗಳ ವಿದ್ಯಾರ್ಥಿಗಳಲ್ಲಿ ಕ್ರೀಡಾಸ್ಫೂರ್ತಿ, ತಂಡಭಾವನೆ, ಶಿಸ್ತು ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮನೋಭಾವ ಬೆಳೆಸುವ ಉದ್ದೇಶದಿಂದ ಪಂದ್ಯಾವಳಿ ಆಯೋಜಿಸಲಾಗಿದೆ. ಕ್ರೀಡೆ ಕೇವಲ ಮನರಂಜನೆಯ ಸಾಧನವಲ್ಲ, ಅದು ಜೀವನದ ಅವಿಭಾಜ್ಯ ಅಂಗವಾಗಿದೆ. ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವನ್ನೂ ಕಾಪಾಡುವ ಶಕ್ತಿ ಕ್ರೀಡೆಗಿದೆ. ಶಿಸ್ತು, ಸಮಯಪ್ರಜ್ಞೆ, ಆತ್ಮವಿಶ್ವಾಸ, ತಾಳ್ಮೆ ಹಾಗೂ ನಾಯಕತ್ವದ ಗುಣಗಳನ್ನು ಕ್ರೀಡೆ ಬೆಳೆಸುತ್ತದೆ ಎಂದರು.
ಗೆಲುವು ಸಂತೋಷ ನೀಡಿದರೆ, ಸೋಲು ಜೀವನದ ಸವಾಲುಗಳನ್ನು ಎದುರಿಸುವ ಪಾಠ ಕಲಿಸುತ್ತದೆ. ತಂಡವಾಗಿ ಆಡುವ ಕ್ರೀಡೆಗಳು ಒಗ್ಗಟ್ಟು, ಸಹಕಾರ ಮತ್ತು ಪರಸ್ಪರ ಗೌರವದ ಮಹತ್ವವನ್ನು ತಿಳಿಸುತ್ತವೆ. ಇಂದಿನ ಮೊಬೈಲ್ ಮತ್ತು ಕಂಪ್ಯೂಟರ್ ಯುಗದಲ್ಲಿ ಮಕ್ಕಳು ಆಟದ ಮೈದಾನಗಳಿಂದ ದೂರವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಓದಿನಷ್ಟೇ ಕ್ರೀಡೆಗೂ ಆದ್ಯತೆ ನೀಡಬೇಕು. ಪ್ರತಿಯೊಬ್ಬರೂ ದಿನನಿತ್ಯ ಸ್ವಲ್ಪ ಸಮಯವನ್ನಾದರೂ ಕ್ರೀಡೆಗೆ ಮೀಸಲಿಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಈ ವಿಶೇಷ ಲೇಖನ ಓದಿದ್ದೀರಾ? ಗಾಂಧೀಯ ‘ರಾಮ’-ಮನುವಾದಿಗಳ ‘ಶ್ರೀರಾಮ’ನಲ್ಲ
ಕ್ರಿಕೆಟ್ ಜನಪ್ರಿಯ ಕ್ರೀಡೆಯಾಗಿದ್ದು, ಬಹುತೇಕ ಎಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಕ್ರಿಕೆಟ್ ಆಡಿದ ಅನುಭವ ಹೊಂದಿರುತ್ತಾರೆ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾಗಿ ಸಮಯ ಕಳೆಯುವುದನ್ನು ಕಡಿಮೆ ಮಾಡಿ, ತಮ್ಮ ಸಮಯ ಮತ್ತು ಶಕ್ತಿಯನ್ನು ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ವಿನಿಯೋಗಿಸಬೇಕು ಎಂದು ಸಲಹೆ ನೀಡಿದರು.
ಈ ವಿಶೇಷ ಲೇಖನ ಓದಿದ್ದೀರಾ? ಹೊರಗೆ ‘ರಾಮ’-ಒಳಗೆ ‘ನಾಥೂರಾಮ’: ಗಾಂಧೀಜಿಯವರ ತಾತ್ವಿಕತೆಯ ಮುಂದೆ ಬಲಪಂಥೀಯ ರಾಜಕಾರಣದ ಆತಂಕ
ಕಾರ್ಯಕ್ರಮದಲ್ಲಿ ಎಸ್‌ಜೆಸಿಇ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ. ಎಂ.ಎಸ್. ಸುನಿಲ್ ಕುಮಾರ್ ಹಾಗೂ ಜೆಎಸ್‌ಎಸ್-ಎಸ್‌ಟಿಯು ದೈಹಿಕ ಶಿಕ್ಷಣ ನಿರ್ದೇಶಕ ಡಾ. ಸಿ. ರೇವಣ್ಣ ಇದ್ದರು.




