ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್, ಸರಗೂರು ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಎಚ್.ಡಿ.ಕೋಟೆ ಇವರ ಸಹಯೋಗದಲ್ಲಿ ಉಪಶಮನ ಆರೈಕೆ (Palliative Care) ಕುರಿತು ಕಾರ್ಯಾಗಾರ ನಡೆಯಿತು.
ಕಾರ್ಯಾಗಾರವನ್ನು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ಉದ್ಘಾಟಿಸಿ ಮಾತನಾಡಿ, ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ನೋವು, ರೋಗಲಕ್ಷಣಗಳು ಹಾಗೂ ಮಾನಸಿಕ ಒತ್ತಡದಿಂದ ಪರಿಹಾರ ನೀಡುವಲ್ಲಿ ಉಪಶಮನ ಆರೈಕೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ರೋಗಿ ಹಾಗೂ ಕುಟುಂಬದ ಜೀವನದ ಗುಣಮಟ್ಟವನ್ನು ಸುಧಾರಿಸುವುದು ಉಪಶಮನ ಆರೈಕೆಯ ಮುಖ್ಯ ಉದ್ದೇಶವಾಗಿದೆ. ನೋವು, ಉಸಿರಾಟದ ತೊಂದರೆ, ಆಯಾಸ, ವಾಕರಿಕೆ ಹಾಗೂ ಹಸಿವಿನ ಕೊರತೆಯಂತಹ ಸಮಸ್ಯೆಗಳನ್ನು ನಿಯಂತ್ರಿಸಲು ಇದು ಸಹಕಾರಿಯಾಗಿದೆ. ರೋಗದ ಯಾವುದೇ ಹಂತದಲ್ಲಿಯೂ ಇತರ ಚಿಕಿತ್ಸೆಗಳೊಂದಿಗೆ ಉಪಶಮನ ಆರೈಕೆಯನ್ನು ಪಡೆಯಬಹುದು ಎಂದು ತಿಳಿಸಿದರು.
ವೈದ್ಯರು, ದಾದಿಯರು, ಸಮಾಜ ಸೇವಕರು ಸೇರಿದಂತೆ ವಿವಿಧ ತಜ್ಞರ ತಂಡದಿಂದ ಈ ಆರೈಕೆಯನ್ನು ನೀಡಲಾಗುತ್ತದೆ. ನಮ್ಮ ತಾಲ್ಲೂಕಿನಲ್ಲಿ ಪ್ರಸ್ತುತ ಒಟ್ಟು 432 ರೋಗಿಗಳಿಗೆ ಉಪಶಮನ ಆರೈಕೆ ನೀಡಲಾಗುತ್ತಿದೆ. ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು ಹಾಗೂ ವಯೋವೃದ್ಧರಿಗೆ ಅಗತ್ಯ ಆರೈಕೆ ನೀಡಲಾಗುತ್ತಿದ್ದು, ಇಂತಹ ವ್ಯಕ್ತಿಗಳು ಕಂಡುಬಂದಲ್ಲಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಅವರು ಕರೆ ನೀಡಿದರು.
ಈ ವಿಶೇಷ ಸುದ್ದಿ ಓದಿದ್ದೀರಾ?ಮಳೆಯೂ ಇಲ್ಲ, ಬೆಳೆಯೂ ಇಲ್ಲ; ಕಾವೇರಿ ಹರಿದಿದ್ದು ತಮಿಳುನಾಡಿನತ್ತ-ರೈತನ ಬದುಕಿನ ಮುಂದಿನ ದಾರಿ ಏನು?
ಕಾರ್ಯಕ್ರಮದಲ್ಲಿ ತಾಲ್ಲೂಕು ಆಸ್ಪತ್ರೆಯ ವ್ಯವಸ್ಥಾಪಕರಾದ ಡಾ. ಸಂಧ್ಯಾ, ಸಂಪನ್ಮೂಲ ವ್ಯಕ್ತಿಗಳಾದ ವೆಂಕಟಸ್ವಾಮಿ, ನಂದಿನಿ, ಮಂಜುಳಾ, ಮಮತಾ, ಸಂಯೋಜಕರಾದ ರಾಜೇಶ್ ಹಾಗೂ ಪ್ರವೀಣ್, ಆರೋಗ್ಯ ಕಾರ್ಯಕರ್ತರಾದ ನಂದೀಶ್ ಮತ್ತು ಸಂತೋಷ್, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಿಬ್ಬಂದಿ, ಸಮುದಾಯ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಇದ್ದರು.




