ರಾಜ್ಯ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ‘ಕಾವೇರಿ 2.0’ ಪೋರ್ಟಲ್ ಮೂಲಕ ಕಾಗದರಹಿತ ನೋಂದಣಿ ವ್ಯವಸ್ಥೆಯನ್ನು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಚಾಮರಾಜನಗರ ಪಟ್ಟಣದ ಉಪನೋಂದಣಿ ಕಚೇರಿಯಲ್ಲಿ ಶುಕ್ರವಾರ ಪ್ರಾರಂಭಿಸಿದೆ.
ನಗರದ ತಾಲೂಕು ಕಚೇರಿ ಆವರಣದಲ್ಲಿರುವ ಉಪನೋಂದಣಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರಾದ ಎಂ.ಪಿ. ಮುಲೈ ಮುಹಿಲನ್ ಅವರು ಕಂಪ್ಯೂಟರ್ ಬಟನ್ ಒತ್ತುವ ಮೂಲಕ ಈ ನೂತನ ವ್ಯವಸ್ಥೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಗದರಹಿತ ನೋಂದಣಿ ವ್ಯವಸ್ಥೆ ನಾಗರಿಕ ಕೇಂದ್ರಿತ, ಪಾರದರ್ಶಕ ಮತ್ತು ಪರಿಣಾಮಕಾರಿ ಸೇವೆಗಳ ಒದಗಿಕೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದು ತಿಳಿಸಿದರು. ಸಾಂಪ್ರದಾಯಿಕ ಕಾಗದ ಆಧಾರಿತ ವ್ಯವಸ್ಥೆಯಿಂದ ಸಂಪೂರ್ಣ ಡಿಜಿಟಲ್ ವ್ಯವಸ್ಥೆಗೆ ಆಗುತ್ತಿರುವ ಪರಿವರ್ತನೆ ಆಸ್ತಿ ನೋಂದಣಿ ವಿಧಾನದಲ್ಲಿ ಮಹತ್ತರ ಬದಲಾವಣೆ ತರಲಿದೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸಲಿದೆ ಎಂದು ಹೇಳಿದರು.
ಹಳೆಯ ಕೈಚಾಲಿತ ವ್ಯವಸ್ಥೆಯಲ್ಲಿ ದಾಖಲೆ ನಕಲಿ, ಅಕ್ಷರ ಬದಲಾವಣೆ, ಪುಟ ಬದಲಾವಣೆ ಹಾಗೂ ತಿದ್ದುಪಡಿ ಸಮಸ್ಯೆಗಳು ಸಾಮಾನ್ಯವಾಗಿದ್ದವು. ಪರಿಶೀಲನೆ ಕೈಚಾಲಿತವಾಗಿರುವುದರಿಂದ ದೋಷಗಳ ಸಾಧ್ಯತೆ ಹೆಚ್ಚಿತ್ತು. ಆದರೆ ನೂತನ ವ್ಯವಸ್ಥೆಯಲ್ಲಿ ಡಿಜಿಟಲ್ ದಾಖಲೆಗಳು ಎನ್ಕ್ರಿಪ್ಷನ್, ಆಡಿಟ್ ಟ್ರೇಲ್ ಹಾಗೂ ಹ್ಯಾಶ್ ಆಧಾರಿತ ಪರಿಶೀಲನೆಯ ಮೂಲಕ ಸುರಕ್ಷಿತವಾಗಿರುತ್ತವೆ. ಡಿಜಿಟಲ್ ಸಹಿ ಮಾಡಿದ ನಂತರ ಯಾವುದೇ ಬದಲಾವಣೆ ತಕ್ಷಣ ಪತ್ತೆಯಾಗುತ್ತದೆ ಎಂದು ಅವರು ವಿವರಿಸಿದರು.
ಚಾಮರಾಜನಗರ ಜಿಲ್ಲೆಯಿಂದಲೇ ಈ ಯೋಜನೆಗೆ ಚಾಲನೆ ನೀಡಲಾಗಿದ್ದು, ಮುಂದಿನ ಎರಡು ರಿಂದ ಮೂರು ತಿಂಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಹಂತ ಹಂತವಾಗಿ ವಿಸ್ತರಿಸಲಾಗುವುದು. ಸಾರ್ವಜನಿಕರು ಆಧಾರ್ ಆಧಾರಿತ ವ್ಯವಸ್ಥೆಯಡಿ ನೇರವಾಗಿ ತಮ್ಮ ಆಸ್ತಿಗಳನ್ನು ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ ಎಂದು ಹೇಳಿದರು.
ಕಾವೇರಿ 2.0 ಪೋರ್ಟಲ್ ಅಡಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಈ ವ್ಯವಸ್ಥೆ ಸರಳ, ಪಾರದರ್ಶಕ ಹಾಗೂ ಸಮಯ ಉಳಿತಾಯವಾಗುವಂತೆ ರೂಪಿಸಲಾಗಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ಸಾರ್ವಜನಿಕ ಸೇವೆಗಳನ್ನು ಸುಧಾರಿಸುವಲ್ಲಿ ಸರ್ಕಾರದ ಬದ್ಧತೆಯನ್ನೂ ಇದು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಗುಂಡ್ಲುಪೇಟೆ | ಬಂಡೀಪುರದಲ್ಲಿ ಅರಣ್ಯ ಇಲಾಖೆ ಹಂಗಾಮಿ ನೌಕರರಿಂದ ಅನಿರ್ಧಿಷ್ಟಾವಧಿ ಮುಷ್ಕರ
ಇದೇ ವೇಳೆ ಜಿಲ್ಲಾ ಪತ್ರ ಬರಹಗಾರರ ಸಂಘದ ಪದಾಧಿಕಾರಿಗಳು ತಮ್ಮ ಬೇಡಿಕೆಗಳ ಕುರಿತ ಮನವಿಯನ್ನು ಆಯುಕ್ತರಿಗೆ ಸಲ್ಲಿಸಿದರು.
ಈ ವಿಶೇಷ ಸುದ್ದಿ ಓದಿದ್ದೀರಾ?ಮೈಸೂರು | ಚೆಲುವಾಂಬ ಆಸ್ಪತ್ರೆಯಲ್ಲಿ ಶಿಶುಗಳ ಸರಣಿ ಸಾವು: ವ್ಯವಸ್ಥೆಯ ವೈಫಲ್ಯವೇ?
ಕಾರ್ಯಕ್ರಮದಲ್ಲಿ ನೋಂದಣಿ ಉಪ ಮಹಾ ಪರಿವೀಕ್ಷಕ ಎಚ್.ಎನ್. ಪ್ರಭಾಕರ್, ಚಾಮರಾಜನಗರ ಜಿಲ್ಲಾ ನೋಂದಣಾಧಿಕಾರಿ ಕಿರಣ್, ಮಂಡ್ಯ ಜಿಲ್ಲಾ ನೋಂದಣಾಧಿಕಾರಿ ಎಸ್. ಸಿದ್ದೇಶ್, ಕೇಂದ್ರ ಸ್ಥಾನಿಕ ಸಹಾಯಕ ಬಿ.ಜಿ. ಮಂಜುನಾಥ್, ಉಪನೋಂದಣಾಧಿಕಾರಿ ರಾಘವೇಂದ್ರ, ಗುಂಡ್ಲುಪೇಟೆ ಉಪನೋಂದಣಾಧಿಕಾರಿ ಆರ್. ರಾಜೇಂದ್ರ ಪ್ರಸಾದ್, ತಾಲೂಕು ಪತ್ರ ಬರಹಗಾರರ ಸಂಘದ ಅಧ್ಯಕ್ಷ ನಂದೀಶ್ವರಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ ಸೇರಿದಂತೆ ಹಲವರು ಇದ್ದರು.




