ಎಸ್‌ಐಆರ್ ವಿರೋಧಿ ಜಾತ್ಯತೀತ ಪಕ್ಷಗಳು, ಕರ್ನಾಟಕ ಜನಪರ ಸಂಘಟನೆಗಳ ಒಕ್ಕೂಟ ಹಾಗೂ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ಎಸ್‌ಐಆರ್ ವಿರೋಧಿ ಪ್ರತಿಭಟನಾ ಜಾಥಾ ನಡೆಯಿತು.
ಪುರಭವನ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ಜಮಾಯಿಸಿದ ಪ್ರತಿಭಟನಾಕಾರರು ಎಸ್‌ಐಆರ್ (ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ) ಪ್ರಕ್ರಿಯೆಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿ, ಅಲ್ಲಿಂದ ಗಾಂಧಿ ವೃತ್ತದವರೆಗೆ ಪಾದಯಾತ್ರೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಬಿ.ಜೆ. ವಿಜಯ್ ಕುಮಾರ್, ಎಸ್‌ಐಆರ್ ಪ್ರಕ್ರಿಯೆಯು ಅಸಾಂವಿಧಾನಿಕ, ಅಪ್ರಜಾತಾಂತ್ರಿಕ, ಅಪಾರದರ್ಶಕ ಹಾಗೂ ಅವೈಜ್ಞಾನಿಕವಾಗಿದ್ದು, ಮತದಾರರ ಪಟ್ಟಿಯ ಮರುಪರಿಷ್ಕರಣೆ ಹೆಸರಿನಲ್ಲಿ ಜನರ ಮತದಾನದ ಹಕ್ಕನ್ನು ಕಸಿಯುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು. ಆದ್ದರಿಂದ ಈ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.
ಮತದಾನದ ಹಕ್ಕು ಕಳೆದುಕೊಳ್ಳುವವರಲ್ಲಿ ಮಹಿಳೆಯರು, ವಲಸೆ ಕಾರ್ಮಿಕರು, ಅಲೆಮಾರಿ ಸಮುದಾಯಗಳು, ಆದಿವಾಸಿಗಳು, ದಲಿತರು ಹಾಗೂ ಅಲ್ಪಸಂಖ್ಯಾತರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಮಾಜದ ಅಂಚಿನಲ್ಲಿರುವ ವರ್ಗಗಳ ಮೇಲೆ ಇಂತಹ ಪ್ರಜಾಪ್ರಭುತ್ವ ವಿರೋಧಿ ಕ್ರಮಗಳನ್ನು ಹೇರಲಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ನುಸುಳುಕೋರರನ್ನು ಪತ್ತೆಹಚ್ಚುವ ಹೆಸರಿನಲ್ಲಿ ಎಸ್‌ಐಆರ್ ಜಾರಿಗೊಳಿಸಲಾಗುತ್ತಿದೆ ಎನ್ನಲಾಗುತ್ತಿದ್ದರೂ, ಆ ಉದ್ದೇಶವನ್ನು ಸಾಧಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು. ಎಸ್‌ಐಆರ್ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಿ, ಈಗಾಗಲೇ ನಡೆದಿರುವ ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಮರುಪರಿಶೀಲನೆ ಮಾಡಬೇಕು. ಜೊತೆಗೆ ಎಸ್‌ಐಆರ್‌ನ ಸಂವಿಧಾನಿಕ ಮಾನ್ಯತೆ ಕುರಿತಂತೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಚುನಾವಣಾ ಪ್ರಕ್ರಿಯೆಯು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆಯಬೇಕು. ಎಲ್ಲ ಅರ್ಹ ಮತದಾರರನ್ನು ಪಟ್ಟಿಯಲ್ಲಿ ಒಳಗೊಂಡ ನಂತರವೇ ಯಾವುದೇ ಚುನಾವಣಾ ಪ್ರಕ್ರಿಯೆಯನ್ನು ಮುಂದುವರಿಸಬೇಕು ಎಂದು ಅವರು ಹೇಳಿದರು.
ಎಸ್‌ಐಆರ್ ಪ್ರಕ್ರಿಯೆಯನ್ನು ಮುಂದುವರಿಸಬೇಕಾದರೆ, ನಿಯಂತ್ರಕ ಮತ್ತು ಮಹಾಲೇಖಪರಿಶೋಧಕರ (CAG) ಸೂಚನೆಗಳಿಗೆ ಅನುಗುಣವಾಗಿ ಮತದಾರರ ಪರಿಶೀಲನೆಗೆ ಅಗತ್ಯವಾದ ಪೂರ್ವಸಿದ್ಧತೆ ಹಾಗೂ ಸ್ಪಷ್ಟ ನಿಯಮಾವಳಿಗಳನ್ನು ರೂಪಿಸಬೇಕು. ಗ್ರಾಮಸಭೆಗಳು ಹಾಗೂ ವಾರ್ಡ್ ಸಭೆಗಳ ಮೂಲಕ ಕರಡು ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದನ್ನು ಕಡ್ಡಾಯಗೊಳಿಸಬೇಕು. ಇದೇ ವಿಧಾನವನ್ನು ಈಗಾಗಲೇ ಎಸ್‌ಐಆರ್ ಪೂರ್ಣಗೊಂಡಿರುವ ರಾಜ್ಯಗಳಲ್ಲಿಯೂ ಅನುಸರಿಸಬೇಕು ಎಂದು ಆಗ್ರಹಿಸಿದರು.

ಚುನಾವಣಾ ಆಯೋಗದ ನಡವಳಿಕೆ ನಿಷ್ಪಕ್ಷಪಾತವಾಗಿಲ್ಲ ಹಾಗೂ ಅದು ಆಳುವ ಪಕ್ಷದ ಪರವಾಗಿ ನಡೆದುಕೊಳ್ಳುತ್ತಿದೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಆದ್ದರಿಂದ ಚುನಾವಣಾ ಆಯೋಗದಲ್ಲಿ ಸಮಗ್ರ ಸುಧಾರಣೆ ಮಾಡಿ, ಸಂಸತ್ತಿನ ಮೇಲ್ವಿಚಾರಣೆಯಲ್ಲಿ ನ್ಯಾಯಸಮ್ಮತ ಹಾಗೂ ಸ್ವತಂತ್ರ ಚುನಾವಣಾ ಆಯೋಗವನ್ನು ರಚಿಸಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ?ಮತದಾರರ ಹಕ್ಕುಗಳ ರಕ್ಷಣೆಗೆ ಒತ್ತಾಯ: ಹೆಗ್ಗಡದೇವನಕೋಟೆಯಲ್ಲಿ ಎಸ್‌ಐಆರ್ ವಿರೋಧಿ ಸಾರ್ವಜನಿಕ ಸಭೆ
ಜಾಥಾದಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರಾದ ಕಾಳಚನ್ನೇಗೌಡ, ಡಾ. ಮ.ಪು. ಪೂರ್ಣಾನಂದ, ರತಿರಾವ್, ಶ್ರೀನಿವಾಸ್ ನಟೇಕರ್, ರಂಗಕರ್ಮಿ ಸಿ. ಬಸವಲಿಂಗಯ್ಯ, ಸಾಹಿತಿ ನಾ. ದಿವಾಕರ್, ಭೂಮಿಗೌಡ, ಕಮಲ್ ಗೋಪಿನಾಥ್, ಪ್ರೊ. ವಿ.ಎಸ್. ಶ್ರೀಧರ್, ಎಂ.ಎಫ್. ಕಲೀಮ್, ಪಿ. ಮರಂಕಯ್ಯ, ಪಿ.ಎಸ್. ಸಂಧ್ಯಾ, ಶಂಭುಲಿಂಗಸ್ವಾಮಿ ಸೇರಿದಂತೆ ವಿವಿಧ ಜನಪರ ಸಂಘಟನೆಗಳ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.




