ಬೆಳಗಾವಿ ನಗರದ ಉದ್ಯಮಭಾಗ ಕೈಗಾರಿಕಾ ಪ್ರದೇಶದಲ್ಲಿ ಕಸದ ರಾಶಿಯಲ್ಲಿ 59 ಬಳಕೆಯಾದ ಗುಂಡುಗಳು ಪತ್ತೆಯಾಗಿದ್ದು, ಕೆಲಕಾಲ ಪೌರಕಾರ್ಮಿಕರು ಹಾಗೂ ಪೊಲೀಸರಲ್ಲಿ ಆತಂಕ ಮತ್ತು ಕುತೂಹಲ ಮೂಡಿಸಿದ ಘಟನೆ ನಡೆದಿದೆ.
ಕಸ ವಿಂಗಡಣೆ ಮಾಡುತ್ತಿದ್ದ ವೇಳೆ ಪೌರಕಾರ್ಮಿಕರಿಗೆ ಗುಂಡುಗಳು ಕಂಡುಬಂದಿದ್ದು, ತಕ್ಷಣ ಉದ್ಯಮಭಾಗ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಕಸದ ರಾಶಿಯಲ್ಲಿ ಒಂದೇ ಕಡೆ ಇಷ್ಟೊಂದು ಗುಂಡುಗಳು ಪತ್ತೆಯಾಗಿರುವುದನ್ನು ಕಂಡು ಅಚ್ಚರಿಗೊಂಡರು. ಗುಂಡುಗಳು ಎಲ್ಲಿಂದ ಬಂದಿವೆ, ಯಾವುದೇ ಅಕ್ರಮ ಚಟುವಟಿಕೆಗೆ ಸಂಬಂಧವಿದೆಯೇ ಎಂಬ ಅನುಮಾನಗಳು ಮೂಡಿದ್ದರಿಂದ ಪೊಲೀಸರು ತಕ್ಷಣ ತನಿಖೆ ಆರಂಭಿಸಿದರು.
ಆರಂಭಿಕ ತನಿಖೆಯಲ್ಲೇ ಈ ಪ್ರಕರಣ ಕುತೂಹಲಕಾರಿ ತಿರುವು ಪಡೆದಿದೆ. ವಿಜಯಪುರ ಮೂಲದ ಮಾಜಿ ಸೈನಿಕನೊಬ್ಬ ತನ್ನ ಸಂಬಂಧಿಕರ ಮಕ್ಕಳಿಗೆ ತೋರಿಸಲು ಬಳಕೆಯಾದ ಗುಂಡುಗಳನ್ನು ಬೆಳಗಾವಿಯಲ್ಲಿರುವ ಸಂಬಂಧಿಕರ ಮನೆಗೆ ತಂದಿದ್ದಾನೆ. ಆದರೆ ಮನೆಗೆ ಮರಳುವಾಗ ಅವುಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾನೆ ಎನ್ನಲಾಗಿದೆ.
ಕೆಲ ತಿಂಗಳ ನಂತರ ಮನೆ ಖಾಲಿ ಮಾಡುವ ಸಂದರ್ಭದಲ್ಲಿ ಗುಂಡುಗಳ ಮಹತ್ವ ಅರಿಯದ ಮನೆಯವರು ಅವುಗಳನ್ನು ಇತರೆ ಕಸದೊಂದಿಗೆ ತಿಪ್ಪೆಗೆ ಎಸೆದಿದ್ದಾರೆ. ಬಳಿಕ ಅದೇ ಗುಂಡುಗಳು ಕಸದ ರಾಶಿಯಲ್ಲಿ ಪತ್ತೆಯಾಗಿದ್ದು, ಅನಗತ್ಯ ಆತಂಕಕ್ಕೆ ಕಾರಣವಾಗಿವೆ.
ಪೊಲೀಸರ ಪರಿಶೀಲನೆಯಲ್ಲಿ ಪತ್ತೆಯಾದ ಎಲ್ಲಾ 59 ಗುಂಡುಗಳೂ ಈಗಾಗಲೇ ಬಳಕೆಯಾದ ಖಾಲಿ ಕಾರ್ಟ್ರಿಡ್ಜ್‌ಗಳಾಗಿದ್ದು, ಅವುಗಳಿಂದ ಯಾವುದೇ ಅಪಾಯ ಇಲ್ಲ ಎಂಬುದು ಗೊತ್ತಾಗಿದೆ. ಆದರೂ ಅವು ಮಾಜಿ ಸೈನಿಕನ ಬಳಿ ಹೇಗೆ ಬಂದವು, ಸಂಗ್ರಹಿಸಿಟ್ಟಿದ್ದಕ್ಕೆ ಕಾರಣವೇನು ಎಂಬ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
ಒಂದು ಹಂತದಲ್ಲಿ ಪೊಲೀಸರನ್ನೇ ಬೆಚ್ಚಿಬೀಳಿಸಿದ ಈ ಪ್ರಕರಣ ಕೊನೆಗೆ ನಿರ್ಲಕ್ಷ್ಯದಿಂದ ನಡೆದ ಘಟನೆ ಎಂಬುದು ಬೆಳಕಿಗೆ ಬಂದಿದ್ದು, ಸದ್ಯ ಪ್ರಕರಣದ ತನಿಖೆ ಮುಂದುವರಿದಿದೆ.



