ಇವತ್ತಿಗೂ ತಮ್ಮನ್ನು ತಾವು ಲಂಕೇಶರ ಶಿಷ್ಯರೆಂದು ಗುರುತಿಸಿಕೊಳ್ಳುವ ಸಾವಿರಾರು ಜಾಣಜಾಣೆಯರು ದೊರಕುತ್ತಾರೆ. ವಿಚಾರ ಪ್ರಭಾವದಿಂದ ಮಾತ್ರವಲ್ಲದೆ, ನಾಡಿನ ಮೂಲೆಮೂಲೆಯಲ್ಲಿದ್ದ ಅಂತಹ ಪ್ರತಿಭಾವಂತರನ್ನು ಹುಡುಕಿ, ಅವರಿಗೆ ಬರೆಯುವ ಅವಕಾಶ ಒದಗಿಸಿ ಬೆಳೆಸಿದ ಕಾರಣಕ್ಕೂ ಲಂಕೇಶರು, ಅಂತವರ ಪಾಲಿನ ಮೇಷ್ಟ್ರಾಗಿದ್ದಾರೆ! ಆದರೆ ತಮ್ಮದೇ ಮಡದಿಯ ಈ ಸಾಹಿತ್ಯಪ್ರತಿಭೆಯನ್ನು ಲಂಕೇಶರು ನಿರ್ಲಕ್ಷಿಸಲು ಸಾಧ್ಯವಾದದ್ದು ಹೇಗೆ?
ಒಂದು ಹೆಣ್ಣು ಯಾಕೆ ಮತ್ತು ಹೇಗೆ ಸದಾ ಕಾಲ ಗಂಡಿಗಿಂತ ಶ್ರೇಷ್ಠವಾಗಿ ನಿಲ್ಲುತ್ತಾಳೆ ಎಂಬುದಕ್ಕೆ ಬಹುಶಃ ಇಂದಿರಾ ಲಂಕೇಶ್ ನನಗೆ ಅಳತೆಗೋಲಾಗಿ ಕಾಣುತ್ತಾರೆ. ನಾನು ಅವರೊಂದಿಗೆ ತೀರಾ ನಿಕಟ ಒಡನಾಟ ಹೊಂದಿದವನಲ್ಲ. ಯಾವಾಗಲೋ ಅಪರೂಪಕ್ಕೆ ಕಚೇರಿ ಕಡೆ ಬಂದಾಗ, ಲಂಕೇಶ್ ವಾರ್ಷಿಕ ಕಾರ್ಯಕ್ರಮದಲ್ಲಿ ಮುಖಾಮುಖಿಯಾದಾಗ ಶುಷ್ಕ ಕುಶಲೋಪರಿಯ ಮಾತುಗಳಿಗೆ ಸೀಮಿತವಾಗುತ್ತಿತ್ತು ನಮ್ಮ ಭೇಟಿ. ನಿಜ ಹೇಳಬೇಕೆಂದರೆ, ಇಂದಿರಮ್ಮನ ಕುರಿತು ನಾನು ಅತಿ ಹೆಚ್ಚು ಕೇಳಲ್ಪಟ್ಟಿದ್ದು, ಅವರ ಮೇಲಿನ ದೂರುಗಳ ಮೂಲಕ! ಆ ದೂರುಗಳನ್ನು ಹೇಳುತ್ತಿದ್ದುದು, ಅವರ ಮುದ್ದಿನ ಹಿರಿಮಗಳು ಗೌರಿ ಲಂಕೇಶ್!!
“ಅಯ್ಯೋ, ಮಾರಾಯ, ಇವತ್ತು ನಮ್ಮಮ್ಮಂದು ಒಂದು ರಾಮಾಯಣ….” ತುಂಬಾ ಬೇಸರದಲ್ಲಿದ್ದಾಗ ಹೀಗೆ ಶುರುವಾಗುತ್ತಿತ್ತು ಗೌರಿಯವರ ಮಾತು. ಬಹುಶಃ ನಮ್ಮೆಲ್ಲರಿಗಿಂತ ಹೆಚ್ಚಾಗಿ, ಇಂದಿರಮ್ಮನವರ ಕುರಿತಾದ ಗೌರಿಯವರ ದೂರಿನಂತಹ ಮಾತುಗಳನ್ನು ಕೇಳಿಸಿಕೊಂಡಿದ್ದು ನಮ್ಮ ಕಚೇರಿಯ ಮ್ಯಾನೇಜರ್ ರಾಜು ಅವರು ಅನ್ನಿಸುತ್ತೆ. ಅದು ತಾಯಿ-ಮಗಳ ನಡುವಿನ ಸಹಜ ಕೌಟುಂಬಿಕ ತಾಕಲಾಟಗಳು. `ಜನರೇಷನ್ ಗ್ಯಾಪ್’ ಎನ್ನುವ ಸಂಬಂಧಗಳಲ್ಲಿನ ಬಿರುಕು ತಿಳಿವಳಿಕಸ್ತರು, ಪ್ರಜ್ಞರನ್ನೂ ಹೇಗೆಲ್ಲಾ ಕಾಡುತ್ತದೆ ಅನ್ನೋದಕ್ಕೆ ಅವರಿಬ್ಬರು ಸಾಕ್ಷಿಯಾಗಿದ್ದರು. ಊಟದ ವಿಚಾರಕ್ಕೋ, ಮನೆ ನೀಟಾಗಿಸುವ ಕಾರಣಕ್ಕೋ, ಆರೋಗ್ಯ-ಔಷಧಿಯ ವಿಚಾರಕ್ಕೋ, ಅಕ್ಕ-ತಂಗಿ-ತಮ್ಮಂದಿರ ಸಂಗತಿಗೋ ಹೀಗೆ… ಒಂದು ಕುಟುಂಬದಲ್ಲಿ ಇರಬಹುದಾದ ವಿಚಾರಗಳ ಸುತ್ತ ಆ ದೂರು, ಬೇಸರಗಳು ಆವರಿಸಿಕೊಂಡಿರುತ್ತಿದ್ದವು. ಮತ್ತು ಅಷ್ಟೇ ಬೇಗ ಕರಗಿಯೂ ಹೋಗುತ್ತಿದ್ದವು.

ಯಾಕೆಂದರೆ, ಆ ತಾಕಲಾಟಗಳಲ್ಲಿ ಪರಸ್ಪರ ಕಾಳಜಿ, ಪ್ರೀತಿ ಇರುತ್ತಿತ್ತು. ಆ ಪ್ರೀತಿ ನನಗೆ ಕಂಡದ್ದು ಗೌರಿಯವರು ಅಗಲಿದ ದಿನ. ನಮಗೆಲ್ಲ, ಹೇಗೆ ಪ್ರತಿಕ್ರಿಯಿಸಬೇಕೆಂದೂ ಅರಿಯದಷ್ಟು ನಿರ್ವಾತಕ್ಕೆ ತಳ್ಳಲ್ಪಟ್ಟ ದಿನ ಅದು. ಕಾರಣ, ಗೌರಿ ಮೇಡಂ ನಮಗೆ ಸಂಪಾದಕಿ ಮಾತ್ರ ಆಗಿರಲಿಲ್ಲ; ಕಚೇರಿಯ ಯಜಮಾನಿಯಂತೂ ಮೊದಲೇ ಆಗಿರಲಿಲ್ಲ. ಅದನ್ನು ಮೀರಿದ ಏನೋ ಆಗಿದ್ದರು! ಆ ಏನು? ಅನ್ನುವುದನ್ನು ಕಂಡುಕೊಳ್ಳಲು ಇವತ್ತಿಗೂ ತೊಳಲಾಡುತ್ತಿದ್ದೇನೆ. ಒಮ್ಮೊಮ್ಮೆ ಒಂದು ತೆರನಾಗಿ ಗೋಚರಿಸಿ ಗೊಂದಲಗೊಳಿಸುತ್ತಲೇ ಇದ್ದಾರೆ. ಆದರೆ ಒಬ್ಬ ತಾಯಿಗೆ ತನ್ನ ಮಗಳು ಮಗಳಾಗಿಯೇ ಉಳಿದುಬಿಡುತ್ತಾಳೆ, ಆಕೆಯ ಜೊತೆ ಅದೆಷ್ಟೇ ಜಗಳ-ಮನಸ್ತಾಪಗಳಿದ್ದರು ಕೂಡಾ. ಗೌರಿಯವರ ದೂರುಗಳ ಮೂಲಕವೇ ಇಂದಿರಮ್ಮನವರನ್ನು ಕಲ್ಪಿಸಿಕೊಳ್ಳುತ್ತಾ ಬಂದ ನಾನು ಅವತ್ತು ಇಂದಿರಮ್ಮ ಅನುಭವಿಸಿದ ವೇದನೆ ಕಂಡು ಅವರಿಬ್ಬರ ನಡುವಿನ ಸಂಬಂಧದ ಕುರಿತು ಹೊಸತೇ ಅಭಿಪ್ರಾಯಕ್ಕೆ ಹೊರಳಿಕೊಂಡೆ. ಮುಪ್ಪು ಆವರಿಸಿ, ಬದುಕಿನ ಅನುಭವಗಳ ಕುಲುಮೆಗಳಲ್ಲಿ ಕಾದು ಪೆಡುಸಾದ ನಂತರ ಪರಿಸ್ಥಿತಿಗಳನ್ನು ಎದುರುಗೊಳ್ಳುವಲ್ಲಿ ಒಂದು ಬಗೆಯ ಸಮಚಿತ್ತತೆ ಆವರಿಸುತ್ತದೆ. ಸಾವು-ನೋವುಗಳು ಅಂತವರನ್ನು ಹೆಚ್ಚು ಪ್ರಕಟನಾತ್ಮಕವಾಗಿಸುವುದಿಲ್ಲ. ಅದನ್ನು ವೈರಾಗ್ಯ ಎನ್ನುವುದಕ್ಕಿಂತ, ಧಾರಣಶೀಲತೆ ಎನ್ನಬಹುದೇನೊ. ಸಹಿಸಿಕೊಳ್ಳುವ ಅನುಭವ ದೊಡ್ಡದಾಗಿರುತ್ತದೆ, ಅಭಿವ್ಯಕ್ತಿಸುವ ಭಾವನಾತ್ಮಕ ತೀವ್ರತೆಯೂ ಮಾಗಿರುತ್ತದೆ. ನನ್ನ ದೃಷ್ಟಿಯಲ್ಲಿ ಗೌರಿಯವರ ದೂರುಗಳ ಪ್ರತಿರೂಪವೇ ಆಗಿದ್ದ ಇಂದಿರಮ್ಮ ಅವತ್ತು ತನ್ನ ಮಗಳ ಶವದ ಮುಂದೆ ಎಳೆ ಮಗುವಿನಂತೆ ರೋದಿಸುತ್ತಿದ್ದರು. ಟೌನ್‌ಹಾಲ್ ಪಕ್ಕದಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಗೌರಿಯವರನ್ನು ಇರಿಸಿದ್ದ ಅಷ್ಟೂ ಹೊತ್ತು, ಜಿಟಿಜಿಟಿ ಮಳೆಯ ಕಾಟದ ನಡುವೆಯೂ ಇಂದಿರಮ್ಮ ತಮ್ಮ ಮಗಳನ್ನು ತೊರೆದು ದೂರಾಗಲಿಲ್ಲ. ಮಗಳ ಜೊತೆಗಿರುವ ಕಟ್ಟಕಡೆಯ ಕ್ಷಣಗಳು ಇವು ಎಂದರಿತಿದ್ದ ಅವರ ಕಣ್ಣಾಲಿಗಳು ಮಳೆಗೂ ಸ್ಪರ್ಧೆಯೊಡ್ಡಿದ್ದವು. ಮಗಳ ಮೇಲೆ ಇಷ್ಟೆಲ್ಲಾ ಅಗಾಧ ಪ್ರೀತಿ ಇದ್ದ ಕಾರಣವಾಗಿಯೇ ಅವರಿಬ್ಬರು ಅಷ್ಟು ಜಗಳ ಕಾಯುತ್ತಿದ್ದರೇ? ಈ ಪ್ರೀತಿಯೇ ವಿಚಿತ್ರ; ಅದು ಪ್ರಕಟಗೊಳ್ಳುವ ರೂಪಗಳಂತು ಇನ್ನೂ ವಿಚಿತ್ರ!

ಆದರೆ ನನಗೆ ಇಂದಿರಮ್ಮ ವಿಶೇಷ ಅನ್ನಿಸಿದ್ದು ಈ ಕಾರಣಕ್ಕಲ್ಲ. ‘ಹುಳಿ ಮಾವು ಮತ್ತು ನಾನು’ ಅವರ ಆತ್ಮಕಥೆ. ಅದನ್ನು ಇಂದಿರಮ್ಮನವರ ಆತ್ಮಕಥೆ ಎನ್ನುವುದಕ್ಕಿಂತ ಲಂಕೇಶರ ಆತ್ಮದ ಮತ್ತೊಂದು ಕಥೆ ಎನ್ನಬಹುದು. ಅದು ಪುಸ್ತಕವಾಗುವುದಕ್ಕಿಂತ ಮುಂಚೆ ಕೆಲ ಕಾಲ ನಮ್ಮ `ಗೌರಿ ಲಂಕೇಶ್’ ಪತ್ರಿಕೆಯಲ್ಲಿ ಸರಣಿ ಲೇಖನಗಳಾಗಿ ಪ್ರಕಟವಾಗಿತ್ತು. ಆರಂಭದಲ್ಲಿ ಅನಾಸಕ್ತಿಯಿಂದ ಓದಿದೆ. ಜೀವಮಾನದಲ್ಲಿ ಎಂದೂ ಏನನ್ನೂ ಬರೆಯದ ಇಂದಿರಮ್ಮ ಈಗ ತಮ್ಮ ವೃದ್ದಾಪ್ಯದಲ್ಲಿ ಬರವಣಿಗೆಗೆ ಮುಂದಾದರೆ, ಅದರಲ್ಲಿ ಅಕ್ಷರ ಇರಬಹುದೆ ಹೊರತು ಸಾಹಿತ್ಯ ಇರಲಾರದು ಎಂದುಕೊಂಡಿದ್ದ ನನ್ನನ್ನು ಅವರ ಪ್ರತಿ ಸಂಚಿಕೆಯು ಅಚ್ಚರಿಗೀಡು ಮಾಡುತ್ತಿದ್ದವು. ಒಬ್ಬ ನುರಿತ ಲೇಖಕಿ, ಆ ಒಂದು ಪುಸ್ತಕವನ್ನು ಬರೆಯುವುದಕ್ಕಾಗಿಯೇ ತನ್ನ ಇಡೀ ಜೀವಮಾನದ ಸಾಹಿತ್ಯ ಪ್ರತಿಭೆಯನ್ನು ವೃದ್ಧಾಪ್ಯದವರೆಗೆ ಜತನ ಮಾಡಿಟ್ಟುಕೊಂಡಿದ್ದರೇ ಅನ್ನಿಸಿದ್ದು ಸುಳ್ಳಲ್ಲ. ಸಾಹಿತ್ಯದ ತಕ್ಕಡಿಯಲ್ಲಿ ಕೆಲವರಿಗೆ ಅದು ಸಾಮಾನ್ಯ ಸಾಮಗ್ರಿಯಂತೆ ಕಾಣಬಹುದು. ಆದರೆ ತನ್ನ ಕುಟುಂಬವನ್ನು ಪೊರೆಯುವುದಕ್ಕಾಗಿ ಕಥಾ ಪ್ರಸಂಗದ ಬಡ್ಡಿ ರಂಗವ್ವನಂತೆ ವ್ಯವಹಾರಿಕವಾಗಿ ಬದುಕಿದ ಹೆಣ್ಣೊಬ್ಬಳು, ಬದುಕಿನ ಮುಸ್ಸಂಜೆಯಲ್ಲಿ ಯಾವ ಅನುಭವವೂ ಇಲ್ಲದೆ ಸಾಹಿತಿಯಾಗಿ ರೂಪಾಂತರವಾಗಿ ಬರೆದ ಕೃತಿಯಾಗಿ ಅದನ್ನು ನೋಡಿದರೆ ಆ ಅಚ್ಚರಿ ನಿಮಗರ್ಥವಾಗುತ್ತದೆ.
ಆ ಕ್ಷಣಕ್ಕೆ ನನ್ನ ಕಣ್ಣಿಗೆ ಆರೋಪಿಯಂತೆ ಗೋಚರಿಸಿದ್ದು ಲಂಕೇಶರು! ಇವತ್ತಿಗೂ ತಮ್ಮನ್ನು ತಾವು ಲಂಕೇಶರ ಶಿಷ್ಯರೆಂದು ಗುರುತಿಸಿಕೊಳ್ಳುವ ಸಾವಿರಾರು ಜಾಣಜಾಣೆಯರು ದೊರಕುತ್ತಾರೆ. ವಿಚಾರ ಪ್ರಭಾವದಿಂದ ಮಾತ್ರವಲ್ಲದೆ, ನಾಡಿನ ಮೂಲೆಮೂಲೆಯಲ್ಲಿದ್ದ ಅಂತಹ ಪ್ರತಿಭಾವಂತರನ್ನು ಹುಡುಕಿ, ಅವರಿಗೆ ಬರೆಯುವ ಅವಕಾಶ ಒದಗಿಸಿ ಬೆಳೆಸಿದ ಕಾರಣಕ್ಕೂ ಲಂಕೇಶರು, ಅಂತವರ ಪಾಲಿನ ಮೇಷ್ಟ್ರಾಗಿದ್ದಾರೆ! ಆದರೆ ತಮ್ಮದೇ ಮಡದಿಯ ಈ ಸಾಹಿತ್ಯಪ್ರತಿಭೆಯನ್ನು ಲಂಕೇಶರು ನಿರ್ಲಕ್ಷಿಸಲು ಸಾಧ್ಯವಾದದ್ದು ಹೇಗೆ?
ಅದು ಲಂಕೇಶರ ನಿರ್ಲಕ್ಷ್ಯವಾಗಿತ್ತೊ, ಇಲ್ಲವೋ, ಆದರೆ ಕಟ್ಟುನಿಟ್ಟಾಗಿ ಇಂದಿರಮ್ಮನವರ ಆಯ್ಕೆಯಾಗಿತ್ತು. ಬಂಡಾಯ ಮತ್ತು ಪ್ರಯೋಗಶೀಲ ಗುಣದ ಲಂಕೇಶರು ತಮ್ಮ ಮಧ್ಯವಯಸ್ಸಿನಲ್ಲಿ ಸಾಕಷ್ಟು ಅಭದ್ರತೆ ಮತ್ತು ಏರಿಳಿತಗಳನ್ನು ಕಂಡಂತವರು. ಆ ಏರಿಳಿತಗಳ ಹೊರೆಯನ್ನು ಕುಟುಂಬವೂ ಅನುಭವಿಸಬೇಕಾಗಿತ್ತು. ಅದರಿಂದ ತಮ್ಮ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗಬಾರದು ಹಾಗೂ ಸರೀಕರೆದುರು ಕುಟುಂಬದ ಘನತೆಗೆ ಮುಕ್ಕಾಗಬಾರದು ಎಂಬ ಗೃಹಿಣಿ ಸಹಜ ಅವರನ್ನು ಅವರೆಲ್ಲ ಆಸಕ್ತಿ, ಪ್ರತಿಭೆಗಳಿಂದ ವಿಮುಖಗೊಳಿಸಿದ್ದಿರಬಹುದು. ಇದು ಇಂದಿರಮ್ಮನವರ ಒಬ್ಬರ ಕಥೆಯಲ್ಲ, ಬಹುಪಾಲು ಹೆಣ್ಣುಮಕ್ಕಳು `ಗೃಹಿಣಿ’ ಎನ್ನುವ ಭಾರವನ್ನು ನಿಭಾಯಿಸಲು ಆರಿಸಿಕೊಳ್ಳಲೇಬೇಕಾದ ದುರಂತ!

ಗಂಡಿಗಿಂತ ಹೆಣ್ಣು ಸದಾಕಾಲ ಶ್ರೇಷ್ಠವಾಗುವುದು ಇಂತಹ ಕಾರಣಗಳಿಗೆ. ಇಂದಿರಮ್ಮ ಇರದೇ ಹೋಗಿದ್ದರೆ ಲಂಕೇಶರು, ಲಂಕೇಶರಾಗಿ ರೂಪುಗೊಳ್ಳುತ್ತಿದ್ದರೇನೊ; ಯಾಕೆಂದರೆ, ಆ ವ್ಯಕ್ತಿಯ ಒಳಗಿದ್ದ ಗೆಲ್ಲಬೇಕೆಂಬ ಜಿದ್ದು ಅಂತದ್ದು. ಆದರೆ ಇಂದಿರಮ್ಮನವರು ಇರದೇ ಹೋಗಿರುತ್ತಿದ್ದರೆ, ಕೇವಲ ಲಂಕೇಶರೊಬ್ಬರಿಂದ ಗೌರಿಯವರನ್ನು ‘ಗೌರಿ ಲಂಕೇಶ್’ ಆಗಿ ರೂಪಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಖಡಾಖಂಡಿತವಾಗಿ ಹೇಳಬಹುದು. ಅವತ್ತು ಮಗಳ ಶವದ ಮುಂದೆ ಅವರು ಸುರಿಸಿದ ಕಣ್ಣೀರನ್ನು ಕಣ್ಣಾರೆ ಕಂಡ ನನಗೆ, ಈ ವಿಚಾರದಲ್ಲಿ ಅನುಮಾನವಿಲ್ಲ.
ಇದನ್ನೂ ಓದಿ ಜಿನೀವಾದಲ್ಲಿ 15 ಅಂಶಗಳ ಶಾಂತಿ ಒಪ್ಪಂದಕ್ಕೆ ಅಮೆರಿಕ-ಇರಾನ್ ಸಹಿ; ಏನಿದು ₹28 ಲಕ್ಷ ಕೋಟಿ ಲೆಕ್ಕಾಚಾರ?
`ಲಂಕೇಶ್ ಪತ್ರಿಕೆ’ ಆ ಕುಟುಂಬಕ್ಕೆ ಆರ್ಥಿಕವಾಗಿ ಶಕ್ತಿ ತಂದುಕೊಟ್ಟಿರಬಹುದು, ಆದರೆ ಇಂದಿರಮ್ಮ ನಡೆಸುತ್ತಿದ್ದ ಮಯೂರ ಮ್ಯಾಚಿಂಗ್ ಸೆಂಟರ್ ನ ಆಸರೆ ಇಲ್ಲದಿರುತ್ತಿದ್ದರೆ ಆ ಕುಟುಂಬ ಕೆಲವೊಂದು ಆರ್ಥಿಕ ಬಿಕ್ಕಟ್ಟುಗಳನ್ನು ಹಾದುಬರುವುದು ತುಂಬಾ ದುಸ್ತರವಾಗುತ್ತಿತ್ತು. ಬಹುಶಃ ತನ್ನ ಕುಟುಂಬಕ್ಕಾಗಿ ತಾನು ಯಾವ ಪಾತ್ರ ನಿಭಾಯಿಸಬೇಕೆಂದು ಅವರು ನಿರ್ಧರಿಸಿಕೊಂಡ ಫಲವಾಗಿ, ಅವರೊಳಗಿನ ಬರಹಗಾರ್ತಿ ಮೂಲೆ ಹಿಡಿಯುತ್ತಲೇ ಬಂದಳು. ಕೋಣೆಗೆಲ್ಲ ಬೆಳಕು ಚೆಲ್ಲುವ ದೀಪಕ್ಕೂ, ತನ್ನ ಬುಡದ ಕತ್ತಲೆಯನ್ನು ನೀಗಿಕೊಳ್ಳುವಲ್ಲಿ ಸೋತುಹೋಗುತ್ತದೆ. ಅದು ದೀಪದ ವೈಫಲ್ಯವಲ್ಲ, ಬೆಳಗುವ ಕಾಯಕದ ಅನಿವಾರ್ಯತೆ. ಅದರಿಂದ ಹೊರಬರಬೇಕೆಂಬ ಹಂಬಲ ಇಂದಿರಮ್ಮನವರಲ್ಲೂ ಮೂಡಲಿಲ್ಲ; ಆ ಕತ್ತಲೆಯನ್ನು ಗುರುತಿಸಿ ನೀಗಬೇಕೆಂದು ಬೆಳಗುತ್ತಿದ್ದ ಲಂಕೇಶರಿಗೂ ಅನ್ನಿಸಲಿಲ್ಲ.
ವ್ಯಕ್ತಿಯೆಂದ ಮೇಲೆ ನ್ಯೂನತೆಗಳು ಎಲ್ಲರಲ್ಲೂ ಇರುತ್ತವೆ. ಆದರೆ, ಅಗಲಿಕೆಯ ಈ ಸಂದರ್ಭದಲ್ಲಿ ದೂರದಿಂದ ಗಮನಿಸಿದಂತೆ ಇಂದಿರಮ್ಮನವರ ಕುರಿತು ಇಷ್ಟು ಮಾತ್ರ ನನ್ನನ್ನು ಕಾಡುತ್ತಿದೆ. ಲಂಕೇಶರ ಮುಸ್ಸಂಜೆಯ ಕಥಾ ಪ್ರಸಂಗದ ರಂಗವ್ವ ಅವುಡುಗಚ್ಚಿ ಬದುಕಿದ ಜಿಗುಟು ಸ್ವಭಾವದ ವ್ಯಾವಹಾರಿಕ ಹೆಂಗಸು. ಆದರೆ, ಆಕೆಯ ವ್ಯಕ್ತಿತ್ವದ ವಿಸ್ತಾರ ಅಷ್ಟಕ್ಕೇ ಸ್ಥಗಿತಗೊಳ್ಳುವುದಿಲ್ಲ.




