'ಬಿಜೆಪಿ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರಗಳನ್ನು ತನಿಖೆ ಮಾಡುತ್ತೇವೆ' ಎಂದಿದೆ ಕಾಂಗ್ರೆಸ್ ಸರ್ಕಾರ. ಆದರೆ, ಬಿಜೆಪಿ ಅವಧಿಯಲ್ಲಿ ನಡೆದಿರುವ ಕೆಕೆಆರ್‌ಡಿಬಿ ಅನುದಾನವನ್ನು ರಾಯಚೂರು ವಿಶ್ವವಿದ್ಯಾಲಯ ದುರುಪಯೋಗ ಪಡಿಸಿಕೊಂಡಿರುವ ಹಗರಣದ ಬಗ್ಗೆ ಕಾಂಗ್ರೆಸ್ ಸರ್ಕಾರ ಕ್ರಮ ಜರುಗಿಸುವುದೇ ಎನ್ನುವ ಬಗ್ಗೆ ಅನುಮಾನಗಳಿವೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ನೀಡಿದ ಅನುದಾನವನ್ನು ನಿಯಮಗಳಿಗೆ ವಿರುದ್ಧವಾಗಿ ಮತ್ತು ದುಬಾರಿಯಾಗಿ ರಾಯಚೂರು ವಿಶ್ವವಿದ್ಯಾಲಯ ಬಳಸಿರುವುದು ಬೆಳಕಿಗೆ ಬಂದಿದೆ.
ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ್ ನೇತೃತ್ವದ ಸಮಿತಿ ಕೈಗೊಂಡ ಪರಿಶೀಲನೆಯಿಂದಾಗಿ ಹಗರಣ ಹೊರಬಿದ್ದಿದ್ದು, ಬಿಜೆಪಿ ಅಧಿಕಾರಾವಧಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಸರ್ಕಾರ ನಿರಾಸಕ್ತಿ ತೋರಿರುವ ಅನುಮಾನಗಳು ವ್ಯಕ್ತವಾಗುತ್ತಿವೆ.
ಕೆಕೆಆರ್‌ಡಿಬಿ ನೀಡಿದ ಅನುದಾನವನ್ನು ಬೇಕಾಬಿಟ್ಟಿ ಬಳಸಿ, ಸ್ಮಾರ್ಟ್ ಕ್ಲಾಸ್, ಸಿಸಿಟಿವಿ ಖರೀದಿ ಹೆಸರಲ್ಲಿ ಅಕ್ರಮ ಎಸಗಲಾಗಿದೆ. ವಿಶ್ವವಿದ್ಯಾಲಯ ಖರೀದಿಸಿರುವ ಸಾಮಗ್ರಿಗಳ ಬೆಲೆ ಮಾರುಕಟ್ಟೆಯಲ್ಲಿ ಕಡಿಮೆ ಇದ್ದರೂ ವಿವಿ ಮಾತ್ರ ದುಬಾರಿ ವೆಚ್ಚವನ್ನು ಭರಿಸಿದೆ. ಅವಕ್ಕೆ ಸರಾಸರಿ ಶೇ.223ರಷ್ಟು ಹೆಚ್ಚುವರಿ ಬೆಲೆ ನಿಗದಿಯಾಗಿರುವುದು ತನಿಖೆಯಲ್ಲಿ ಕಂಡುಬಂದಿದೆ.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಮುಖಾಂತರ ಸರ್ಕಾರದ ವಿವೇಚನಾ ಕೋಟಾದ ಅಡಿಯಲ್ಲಿ ಮಂಜೂರಾದ 20,08,60,000 (ಇಪ್ಪತ್ತು ಕೋಟಿ ಎಂಟು ಲಕ್ಷದ ಅರವತ್ತು ಸಾವಿರ) ರೂ.ಗಳನ್ನು ವಿಶ್ವವಿದ್ಯಾಲಯದ ವಿವಿಧ ಕಾರ್ಯಗಳಿಗೆ ವಿನಿಯೋಗಿಸಲು ರಾಯಚೂರು ವಿವಿ ಸಿಂಡಿಕೇಟ್ 23.08.2022 ರಂದು ನಿರ್ಧರಿಸಿತ್ತು.
ಕೆಕೆಆರ್‌ಡಿಬಿ ಅನುದಾನದಲ್ಲಿ ವಿವಿಯು ನಡೆಸಿರುವ ಸಿಸಿಟಿವಿ ಖರೀದಿ ವ್ಯವಹಾರ ಸಂಬಂಧ ವರದಿ ಸಲ್ಲಿಸುವಂತೆ ದಿನಾಂಕ 26.06.2023ರಂದು ಕೆಕೆಆರ್‌ಡಿಬಿ ಕಾರ್ಯದರ್ಶಿಯವರು ರಾಯಚೂರು ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಅದರನ್ವಯ ದಿನಾಂಕ 17.07.2023ರಂದು ವರದಿಯನ್ನು ಜಿಲ್ಲಾಧಿಕಾರಿಯವರು ಸಲ್ಲಿಸಿದ್ದು, 89,49,977 ರೂ. ಹೆಚ್ಚುವರಿಯಾಗಿ ವಿನಿಯೋಗಿಸಿರುವುದು ಸ್ಪಷ್ಟವಾಗಿದೆ. ಈ ಸಂಬಂಧ ಸರ್ಕಾರಕ್ಕೆ ಜಿಲ್ಲಾಧಿಕಾರಿ ಸಲ್ಲಿಸಿರುವ ವರದಿಯ ಪ್ರತಿ ʼಈದಿನ.ಕಾಂʼಗೆ ಲಭ್ಯವಾಗಿದೆ.
ಮೇಲಿನ ವಿಷಯ ಸಂಬಂಧ ಸರ್ಕಾರದ ವಿವೇಚನೆಯ ಕೋಟಾದಿಂದ ರೂ. 985.00 ಲಕ್ಷಗಳ ಅನುದಾನವನ್ನು ಕೆಕೆಆರ್‌ಡಿಬಿ ಮಂಜೂರು ಮಾಡಿದ್ದು, ಅದರಲ್ಲಿ 738.75 ಲಕ್ಷ ರೂ.ಗಳನ್ನು ವಿಶ್ವವಿದ್ಯಾಲಯಕ್ಕೆ ಬಿಡುಗಡೆ ಮಾಡಲಾಗಿದೆ. ಈಗ ಖರೀದಿಸಿರುವ ಉಪಕರಣಗಳಿಗೆ ನೀಡಿರುವ ಬೆಲೆಗೂ ಮತ್ತು ಮಾರುಕಟ್ಟೆ ಬೆಲೆಗೂ ವ್ಯತ್ಯಾಸವಿದೆಯೇ ಎಂಬುದನ್ನು ತಿಳಿಸುವಂತೆ ಕೆಕೆಆರ್‌ಡಿಬಿ ಕಾರ್ಯದರ್ಶಿ ಸೂಚಿಸಿದ್ದರು. ಅದರನ್ವಯ ಜಿಲ್ಲಾಧಿಕಾರಿಯವರ ನೇತೃತ್ವದ ಸತ್ಯ ಪರಿಶೀಲನಾ ತಂಡ ವಿವಿಗೆ ದಿನಾಂಕ 05.07.2023ರಂದು ಭೇಟಿ ನೀಡಿ ಮಾಹಿತಿ ಪಡೆದಿದೆ. ಖರೀದಿಯಲ್ಲಿ ಆಗಿರುವ ನಿಯಮ ಉಲ್ಲಂಘನೆ, ದುಬಾರಿ ವೆಚ್ಚ ಭರಿಸಿರುವುದನ್ನು ವರದಿಯಲ್ಲಿ ದಾಖಲಿಸಿದ್ದಾರೆ.
ವಿವಿಗೆ ಭೇಟಿ ನೀಡಿರುವ ಸತ್ಯ ಶೋಧನಾ ತಂಡ, ಟೆಂಡರ್ ದಾಖಲೆಗಳು ಮತ್ತು ಖರೀದಿಸಿದ ವಸ್ತುಗಳ ಪರಿಶೀಲನೆ ಮಾಡಿದೆ. 985.00 ಲಕ್ಷ ರೂ.ಗಳಲ್ಲಿ ಸ್ಮಾರ್ಟ್ ಕ್ಲಾಸ್, ಸಿಸಿ ಕ್ಯಾಮೆರಾ ಮತ್ತು ಪೀಠೋಪಕರಣಗಳಿಗಾಗಿ ರಾಯಚೂರು ವಿಶ್ವವಿದ್ಯಾಲಯದ ಕ್ರಿಯಾ ಯೋಜನೆಗೆ ಕರ್ನಾಟಕ ಸರ್ಕಾರ ಅಸ್ತು ಎಂದಿತ್ತು. (ದಾಖಲೆ- PDS75HKD2022 ದಿನಾಂಕ 22-04-2022 & 22-04-2022). ಮಂಜೂರಾತಿ ಮಾಡಲಾದ 985.00 ಲಕ್ಷ ರೂ.ಗಳ ಪೈಕಿ, 738.75 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲು ದಿನಾಂಕ 22.08.2022ರಂದು ಕೆಕೆಆರ್‌ಡಿಬಿ ಆದೇಶ ಹೊರಡಿಸಿತ್ತು.
ಪೀಠೋಪಕರಣಗಳು ಮತ್ತು ಫಿಕ್ಚರ್‌ಗಳಿಗೆ 550.00 ಲಕ್ಷ ರೂ., ಭದ್ರತಾ ಕಣ್ಗಾವಲು ವ್ಯವಸ್ಥೆಗೆ 231.40 ಲಕ್ಷ ರೂ., ಸಿಸಿಟಿವಿ ಸಲಕರಣೆಗಳ ಖರೀದಿಗೆ 48.38 ಲಕ್ಷ ರೂ. ಅಂದಾಜಿಸಲಾಗಿತ್ತು. ಕೆಕೆಆರ್‌ಡಿಬಿಯಿಂದ ನೇರವಾಗಿ ವಿಶ್ವವಿದ್ಯಾಲಯಕ್ಕೆ ಹಣವನ್ನು ಬಿಡುಗಡೆ ಮಾಡಲಾಗಿತ್ತು.
13.10.2022 ರಂದು ವಿಶ್ವವಿದ್ಯಾಲಯ ವರ್ಕ್ ಆರ್ಡರ್ ನೀಡಿತ್ತು. ಸಿಂಡಿಕೇಟ್ ಅನುಮೋದನೆಯ ಅನ್ವಯ ಜೊತೆಗೆ ಆಡಳಿತಾತ್ಮಕ ಮತ್ತು ತಾಂತ್ರಿಕ ಅನುಮೋದನೆಯೂ ಸಿಕ್ಕಿತ್ತು. ವಿವಿಯ ಕುಲಸಚಿವರು ಸಹಿ ಮಾಡಿದ್ದರು.
ಕೆಕೆಆರ್‌ಡಿಬಿಯಿಂದ ಬಂದಿರುವ 2008.60 ಲಕ್ಷ ರೂ. ಅನುದಾನದ ಸಂಬಂಧ ದಿನಾಂಕ 23.09.2022 ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಲಾಗಿತ್ತು. 985.00 ಲಕ್ಷ ರೂ.ಗಳನ್ನು ಸ್ಮಾರ್ಟ್ ಕ್ಲಾಸ್, ಸಿಸಿಟಿವಿಗೆ ಮತ್ತು 923.60 ಲಕ್ಷ ರೂ.ಗಳನ್ನು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ಗೆ ಬಳಸಲು ಮುಂದಾಗಲಾಗಿತ್ತು.
“ಆದರೆ ಇದು ಕೆಕೆಆರ್‌ಡಿಬಿಯ ಆಡಳಿತಾತ್ಮಕ ಅನುಮೋದಿತ ಮೊತ್ತದೊಂದಿಗೆ ಹೊಂದಿಕೆಯಾಗುವುದಿಲ್ಲ. ಯಾವುದೇ ನಿರ್ದಿಷ್ಟ ಕಾಮಗಾರಿಗಳ ಬಗ್ಗೆ ಸಿಂಡಿಕೇಟ್ ಪ್ರಸ್ತಾಪಿಸಿರಲಿಲ್ಲ ಮತ್ತು ಪ್ರಕ್ರಿಯೆಗಳ ಬಗ್ಗೆ ಉಲ್ಲೇಖಿಸಿರುವ ಶಂಕರರೆಡ್ಡಿ ವರದಿಯು ಈ ಕೆಲಸಕ್ಕೆ ಸಂಬಂಧಿಸಿದ್ದಾಗಿ ಹೇಳಿಲ್ಲ. ಆದ್ದರಿಂದ ಮೇಲಿನ ಕಾಮಗಾರಿಗಳಿಗೆ ಅದನ್ನು ಆಡಳಿತಾತ್ಮಕ ಮಂಜೂರಾತಿ ಎಂದು ಪರಿಗಣಿಸಲಾಗುವುದಿಲ್ಲ. ಯಾವುದೇ ವಿವರವಾದ ಯೋಜನಾ ವರದಿ (ಡಿಪಿಆರ್) ಇಲ್ಲಿಲ್ಲʼʼ ಎಂದು ತನಿಖೆ ಅಭಿಪ್ರಾಯಪಟ್ಟಿದೆ.
ಜಿಇಎಂ (ಗವರ್ನ್ಮೆಂಟ್ ಇ ಮಾರ್ಕೆಟ್ ಪ್ಲೇಸ್) ವೆಬ್ ಪೋರ್ಟಲ್‌ನಲ್ಲಿ ಮಾರಾಟಗಾರರು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕೆಂಬ ಸಾಮಾನ್ಯ ಷರತ್ತುಗಳಿವೆ. ಅದರ ಪ್ರಕಾರ ಇಎಎಂಡಿ ವಿನಾಯಿತಿ ಕೋರಲು ಅಗತ್ಯ ದಾಖಲೆಗಳನ್ನು ನೀಡಬೇಕು. ಸರಕುಗಳ ತಯಾರಕರು ಮತ್ತು ಸೇವೆಗಳಿಗೆ ಸೇವಾ ಪೂರೈಕೆದಾರರು ಮಾತ್ರ ಇಎಂಡಿಯಿಂದ ವಿನಾಯಿತಿಗೆ ಅರ್ಹರಾಗಿರುತ್ತಾರೆ.
ಓಇಎಂ (ಮೂಲ ಸಲಕರಣೆ ತಯಾರಕರು) ನೀಡಿದ ಪತ್ರದಲ್ಲಿ ಸಿಪಿ ಪ್ಲಸ್ ಉತ್ಪನ್ನಗಳ ಮಾರಾಟದ ಕುರಿತು ಉಲ್ಲೇಖಿಸಲಾಗಿದೆ. ಎಂ/ಎಸ್ ನಂದಿ ಎಂಟರ್‌ಪ್ರೈಸಸ್‌ನವರು ಆದಿತ್ಯ ಇನ್ಫೋಟೆಕ್ ಲಿಮಿಟೆಡ್‌ನಿಂದ ಉತ್ಪನ್ನಗಳನ್ನು ಖರೀದಿಸುವ ಸಂಬಂಧ ಉಲ್ಲೇಖಿಸಲಾಗಿದೆ. ಆದರೆ ನಂದಿ ಎಂಟರ್ಪ್ರೈಸಸ್‌ನವರಿಗೆ ಆದಿತ್ಯ ಇನ್ಫೋಟೆಕ್ ಲಿಮಿಟೆಡ್‌ನವರು ಒಇಎಂ ಆಗಿಲ್ಲ.
ಬಿಡ್‌ದಾರರ ಸರಾಸರಿ ವಹಿವಾಟು 400 ಲಕ್ಷ ರೂ.ಗಳಾಗಿದ್ದರೆ, ಸಿಎ ಪ್ರಮಾಣ ಪತ್ರದ ಪ್ರಕಾರ ವಹಿವಾಟು 294.88 ಲಕ್ಷ ರೂ.ಗಳಾಗಿದೆ ಎಂಬುದನ್ನೂ ಪರಿಶೀಲನೆಯಲ್ಲಿ ಗಮನಿಸಲಾಗಿದೆ. ತಾಂತ್ರಿಕವಾಗಿ ಅರ್ಹತೆ ಪಡೆಯಲು ಇದನ್ನು ಹೇಗೆ ಅನುಮತಿಸಲಾಗಿದೆ ಎಂಬುದು ಸ್ಪಷ್ಟಪಡಿಸಲಾಗಿಲ್ಲ ಎಂದಿದೆ ತನಿಖಾ ತಂಡ.
“ಮೇಲಿನ ಮೌಲ್ಯಮಾಪನ ಮಾನದಂಡಗಳು ಮತ್ತು ಪರಿಶೀಲನೆಗಾಗಿ ಒದಗಿಸಲಾದ ದಾಖಲೆಗಳ ಆಧಾರದ ಮೇಲೆʼʼ ಲೋಪಗಳನ್ನು ಗುರುತಿಸಿರುವ ಸತ್ಯ ಪರಿಶೀಲನೆಯು, “ರಾಯಚೂರು ವಿಶ್ವವಿದ್ಯಾಲಯದ ಬಿಡ್ ಡಾಕ್ಯುಮೆಂಟ್‌ನಲ್ಲಿ ಉಲ್ಲೇಖಿಸಿರುವ ತಾಂತ್ರಿಕ ಅರ್ಹತಾ ಮಾನದಂಡಗಳನ್ನು ಬಿಡ್ಡರ್ ಎಂ/ಎಸ್ ನಂದಿ ಎಂಟರ್‌ಪ್ರೈಸಸ್‌ನವರು ಪೂರೈಸಿರುವುದಿಲ್ಲʼʼ ಎಂದು ಉಲ್ಲೇಖಿಸಿದೆ.
ಸಮಿತಿಯು ಪರಿಶೀಲಿಸಿದ ಮಾರುಕಟ್ಟೆ ದರಗಳಿಗೆ ಹೋಲಿಸಿದರೆ ಅಂದಾಜುಗಳಲ್ಲಿ ಪರಿಗಣಿಸಲಾದ ದರಗಳು ತುಂಬಾ ದುಬಾರಿಯಾಗಿವೆ. ಟೆಂಡರ್ ಆಹ್ವಾನಿಸುವಾಗ ಈಗಾಗಲೇ ಮಾರುಕಟ್ಟೆಯಲ್ಲಿ ಇದೇ ರೀತಿ ಲಭ್ಯವಿರುವ ಇಂತಹದ್ದೇ ಐಟಂಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ, ದುಬಾರಿಯಾಗಿರುವುದನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಮಾರುಕಟ್ಟೆಯಲ್ಲಿನ ದರದ ಅನ್ವಯ ವೆಚ್ಚವನ್ನು ತಗ್ಗಿಸುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನವನ್ನು ಮಾಡಿಲ್ಲ.
231.40 ಲಕ್ಷ ರೂ.ಗಳ ಬಿಡ್ ಮೊತ್ತವನ್ನು ಹೊಂದಿರುವ ಎಲ್1 ಬಿಡ್ಡರ್ ನಂದಿ ಎಂಟರ್‌ಪ್ರೈಸಸ್‌ನವರು ಇಎಂಡಿ ವಿನಾಯಿತಿಯನ್ನು ಕೋರಿದ್ದಾರೆ. ಟೆಂಡರ್ ಷರತ್ತಿನ ಪ್ರಕಾರ ಅವರು ಅರ್ಹರಲ್ಲದಿದ್ದರೂ ವಿನಾಯಿತಿಯನ್ನು ನೀಡಲಾಗಿದೆ.
“ನಾವು 8 ಐಟಂಗಳ ಮಾದರಿ ಪರಿಶೀಲನೆಯನ್ನು ಮಾಡಿದ್ದೇವೆ. ಮಾರುಕಟ್ಟೆ ದರಗಳೊಂದಿಗೆ ಖರೀದಿ ದರಗಳನ್ನು ಹೋಲಿಸಿದ್ದೇವೆ. 200% ರಿಂದ 900% ವರೆಗೆ ದೊಡ್ಡ ಪ್ರಮಾಣದ ಬೆಲೆ ವ್ಯತ್ಯಾಸಗಳನ್ನು ಕಂಡುಕೊಂಡಿದ್ದೇವೆʼʼ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
“ರಾಯಚೂರು ವಿಶ್ವವಿದ್ಯಾಲಯ ಸಂಗ್ರಹಿಸಿದ ವಸ್ತುಗಳ ತುಲನಾತ್ಮಕ ದರವು ಅಂದಾಜು ಬೆಲೆ ಮತ್ತು ಸರಬರಾಜು ಬೆಲೆಯಲ್ಲಿ -7.25% ರಿಂದ 268% ವರೆಗೆ ವ್ಯತ್ಯಾಸ ಹೊಂದಿದೆ. ಮೇಕ್ ಇನ್ ಇಂಡಿಯಾ (MII) ಆಯ್ಕೆಯೊಂದಿಗೆ ವಿಶ್ವವಿದ್ಯಾಲಯವು ದುಬಾರಿ ಗುಣಮಟ್ಟದ ವಸ್ತುಗಳನ್ನು ಆಯ್ಕೆ ಮಾಡಿದೆ ಎಂದು ಇಲ್ಲಿ ಗಮನಿಸಬಹುದು. ಆದಾಗ್ಯೂ, ಸರಬರಾಜು ಮಾಡಿದ ವಸ್ತುಗಳನ್ನು ಪರಿಶೀಲಿಸಿದಾಗ, ಉತ್ಪನ್ನಗಳ ಮೇಲೆ ಮುದ್ರಿತವಾದ ಎಂಆರ್‌ಪಿಗಿಂತ ಬಿಡ್ ಬೆಲೆ ಹೆಚ್ಚು ಇದೆ ಎಂದು ಸ್ಪಷ್ಟವಾಗಿ ಕಂಡುಬಂದಿದೆ. ಕೆಲವು ಉತ್ಪನ್ನಗಳು ಚೀನಾದಲ್ಲಿ ತಯಾರಾಗಿರುವುದು ಸ್ಪಷ್ಟವಾಗಿದೆ. ಅವುಗಳು ಮೇಕ್ ಇನ್ ಇಂಡಿಯಾ ಅಲ್ಲ. ಉತ್ತಮ ಗುಣಮಟ್ಟಕ್ಕಾಗಿ ದುಬಾರಿ ದರ ತೆರಲು ವಿಶ್ವವಿದ್ಯಾಲಯ ಹೋಗಿದ್ದರೂ ಪರಿಶೀಲಿಸಲ್ಪಟ್ಟ ಮಾದರಿಗಳಲ್ಲಿ ಗುಣಮಟ್ಟ ಇರುವುದಿಲ್ಲʼʼ ಎಂದಿದೆ ತನಿಖೆ.
ವಿಶ್ವವಿದ್ಯಾಲಯವು ಪ್ರತಿ 65 ಇಂಚಿನ ಅಲ್ಟ್ರಾ ಎಚ್ಡಿ ಟಿವಿಗೆ ರೂ. 2,13,696 ಪಾವತಿಸಿದೆ. ಆದರೆ ಅದರ ಎಂಆರ್‌ಪಿ ಬೆಲೆ ರೂ. 1,35,900. ಪ್ರತಿ 32 ಇಂಚಿನ ಅಲ್ಟ್ರಾ ಎಚ್ಡಿ ಸ್ಮಾರ್ಟ್ ಟಿವಿಗೆ 82,586 ರೂ. ನೀಡಿದ್ದರೆ, ಅದರ ಎಂಆರ್‌ಪಿ 23,900 ರೂ. ಹೀಗೆ 57% ರಿಂದ 245% ಹೆಚ್ಚುವರಿ ಮೊತ್ತವನ್ನು ತೆರಲಾಗಿದೆ.
ಡೆಸ್ಕ್‌ಟಾಪ್ ವಿಚಾರಕ್ಕೆ ಬಂದರೆ, AIO ಗಾಗಿ ಪ್ರತಿ ಯುನಿಟ್ ಅಂದಾಜು ವೆಚ್ಚ ರೂ. 2,00,000 ಇತ್ತು. ಪೂರೈಕೆ ಬೆಲೆ ರೂ. 3,07,434 ಇದೆ. ಡೆಲ್ ಮೌಸ್ ಮತ್ತು ಕೀಬೋರ್ಡ್ ನೊಂದಿಗೆ ಲಭ್ಯವಿರುವ ಬ್ರಾಂಡೆಡ್ ಅಲ್ಲದ ಡೆಸ್ಕ್ಟಾಪ್ ಖರೀದಿಸಿದ್ದಾರೆ. ಅದರ ಬೆಲೆ ಮಾರುಕಟ್ಟೆಯಲ್ಲಿ ರೂ. 1,25,000ಗಿಂತ ಕಡಿಮೆ ಇರುತ್ತದೆ.
32 ಇಂಚಿನ ಎಲ್ಸಿಡಿಯ ವಿಚಾರವಾಗಿ ಹೇಳುವುದಾದರೆ ಅನ್ವಯವಾಗುವ ಜಿಎಸ್ಟಿ ದರವು 18%. ಆದರೆ ಮಾರಾಟಗಾರನು 28% ಬಿಲ್ ಮಾಡಿದ್ದಾನೆ. ಹೆಚ್ಚುವರಿಯಾಗಿ 51,616 ಜಿಎಸ್ಟಿ ಸಂಗ್ರಹಿಸಿದಂತಾಗಿದೆ. ಒಟ್ಟಾರೆಯಾಗಿ ಹೆಚ್ಚುವರಿಯಾಗಿ ರೂ. 89,49,977 ತೆರಲಾಗಿದೆ. ಅಂದರೆ 223%ರಷ್ಟು ಹಣ ದುಬಾರಿಯಾಗಿ ವಿನಿಯೋಗಿಸಲಾಗಿದೆ.
13-10-2022ರಂದು ನೀಡಲಾದ ಕೆಲಸದ ಆದೇಶದ ಪ್ರಕಾರ ಸಿಸಿಟಿವಿ ಸಿಸ್ಟಮ್‌ಗಳ ಪೂರೈಕೆ ಮತ್ತು ಇನ್ಸ್ಟಾಲೇಷನ್ 60 ದಿನಗಳಲ್ಲಿ ಮುಗಿದಿರಬೇಕು. ಅಂದರೆ 11-01-2023 ಕ್ಕಿಂತ ಮೊದಲು ಕೆಲಸ ಆಗಿರಬೇಕು. ವಿತರಣೆಯ ಅಂತಿಮ ದಿನಾಂಕದ ನಂತರ 165ಕ್ಕೂ ಹೆಚ್ಚು ದಿನಗಳು ಕಳೆದಿವೆ. ಆದರೆ ಸುಮಾರು 50% ವಸ್ತುಗಳನ್ನು ಮಾತ್ರ ಸರಬರಾಜು ಮಾಡಲಾಗಿದೆ ಮತ್ತು ಯಾವುದೇ ಇನ್ಸ್ಟಾಲೇಷನ್ ಆಗಿರಲಿಲ್ಲ ಎಂದು ದಿನಾಂಕ 05.07.2023 ರಂದು ಪರಿಶೀಲನೆ ನಡೆಸಿದ ತಂಡವು ಬಹಿರಂಗಪಡಿಸಿದೆ.
ʼಈದಿನ.ಕಾಂʼನೊಂದಿಗೆ ಮಾತನಾಡಿದ ಕೆಕೆಆರ್‌ಡಿಬಿ ಕಾರ್ಯದರ್ಶಿ ಅನಿರುದ್ಧ ಶ್ರವಣ್ ಪಿ., “ಅನುದಾನವನ್ನು ದುಬಾರಿಯಾಗಿ ಖರ್ಚು ಮಾಡಿರುವ ಸಂಬಂಧ ಸರ್ಕಾರಕ್ಕೆ ಇತ್ತೀಚೆಗೆ ವರದಿಯನ್ನು ಸಲ್ಲಿಸಿದ್ದೇವೆ. ಸರ್ಕಾರದ ಕ್ರಮವನ್ನು ನಿರೀಕ್ಷಿಸುತ್ತಿದ್ದೇವೆ. ಕೆಕೆಆರ್‌ಡಿಬಿ ಯೋಜನಾ ಇಲಾಖೆಗೆ ಒಳಪಟ್ಟಿದೆ. ವಿವಿಯು ಉನ್ನತ ಶಿಕ್ಷಣ ಇಲಾಖೆಗೆ ಸಂಬಂಧಿಸಿದೆ. ಹೀಗಾಗಿ ಸರ್ಕಾರದ ವತಿಯಿಂದ ಎರಡು ಇಲಾಖೆಗಳ ನಡುವೆ ಸಮನ್ವಯ ನಡೆಯಬೇಕಿದೆ. ವಿಶ್ವವಿದ್ಯಾನಿಲಯ ಟೆಂಡರ್ ಕರೆದಿತ್ತು. ಯಾರ್ಯಾರಿಗೆ ಟೆಂಡರ್ ನೀಡಿದ್ದಾರೆ, ಅನರ್ಹರು ಯಾರಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಈ ಲೋಪಗಳು ಯಾಕೆ ಆಗಿದೆ ಎಂಬುದನ್ನು ಪ್ರಶ್ನಿಸಿ ಕ್ರಮ ಜರುಗಿಸಬೇಕಾಗುತ್ತದೆʼʼ ಎಂದು ತಿಳಿಸಿದರು.
ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್ ಅವರನ್ನು ʻಈದಿನ.ಕಾಂʼ ಸಂಪರ್ಕಿಸಿದಾಗ, “ಇದರ ಬಗ್ಗೆ ಮಾಹಿತಿ ಇಲ್ಲ. ಈ ಸಂಬಂಧ ವಿಶ್ವವಿದ್ಯಾಲಯವನ್ನು ಕೇಳಬೇಕಾಗಿದೆʼʼ ಎಂದರು.
‘ಬಿಜೆಪಿ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರಗಳನ್ನು ತನಿಖೆ ಮಾಡುತ್ತೇವೆ’ ಎಂದಿರುವ ಕಾಂಗ್ರೆಸ್ ಸರ್ಕಾರ, ಈ ಪ್ರಕರಣವನ್ನು ಕೈಗೆತ್ತಿಕೊಳ್ಳುತ್ತದೆಯೋ, ಮೂಲೆಗೆ ತಳ್ಳುತ್ತದೆಯೋ, ಕಾದು ನೋಡೋಣ.
ಯತಿರಾಜ್ ಬ್ಯಾಲಹಳ್ಳಿ
ಪತ್ರಕರ್ತ, ಲೇಖಕ