ಒಕ್ಕಲಿಗರನ್ನು ದಲಿತರ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಪ್ರತಾಪ್ ಸಿಂಹ ಮಾಡಿದ್ದಾರೆ. ಇನ್ನೊಂದೆಡೆ ಸಾಮಾಜಿಕ ಮಾಧ್ಯಮಗಳಲ್ಲಿ ಅಂಬೇಡ್ಕರ್ ಅವರನ್ನು ನಿಂದಿಸುವ ಹಿಂದುತ್ವ ಖಾತೆಗಳು ಹೆಚ್ಚಾಗುತ್ತಿವೆ.
“ದಲಿತರಿಗೆ ಅವಮಾನಿಸಬೇಕಾದರೆ, ದಲಿತರ ಮಹಾನಾಯಕ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಅವಮಾನಿಸಬೇಕು” ಎಂದು ಹಿಂದುತ್ವ ಗುಂಪಿನ ಮಂದಿ ಹೊರಟಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ನೋಡಿದರೆ, ಇದು ಮತ್ತಷ್ಟು ಸ್ಪಷ್ಟವಾಗುತ್ತದೆ.
ದಲಿತರಿಗೆ ಸ್ವಾಭಿಮಾನ ಮತ್ತು ಘನತೆಯ ಬದುಕನ್ನು ಸಾಂವಿಧಾನಿಕ ಹಕ್ಕುಗಳ ಮೂಲಕ ದೊರಕಿಸಿಕೊಟ್ಟ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಅಗೌರವಿಸುವ ಮೂಲಕ ದಲಿತರ ಮೇಲೆ ವಿಷ ಕಾರಿಕೊಳ್ಳುವ, ದಲಿತರನ್ನು ಮಾನಸಿಕವಾಗಿ ಜರ್ಜರಿತರನ್ನಾಗಿ ಮಾಡುವ ನವ ಮಾದರಿಯ ಅಸ್ಪೃಶ್ಯತೆ ಈಗ ಬಲವಾಗಿ ಬೇರುಬಿಡುತ್ತಿದೆ. ಇದನ್ನು ಬಲಾಢ್ಯ ಜಾತಿ ಗುಂಪಿನ ಕೆಲವು ಮುಖಗಳು ನೇರವಾಗಿಯೇ ಮಾಡುತ್ತಿದ್ದರೆ, ಇನ್ನು ಕೆಲವು ಮುಖಗಳು ಸಾಮಾಜಿಕ ಮಾಧ್ಯಮಗಳ ಮೂಲಕ ವೈಷಮ್ಯ ಬಿತ್ತುವ ಕೆಲಸವನ್ನು ಎಗ್ಗಿಲ್ಲದೆ ನಡೆಸುತ್ತಿವೆ. ಇದರ ನಡುವೆ ಇನ್ನೊಂದು ಮುಖವಿದೆ- ಅದು ಅಪಾಯಕಾರಿಯೂ, ಅಸ್ಪೃಶ್ಯರನ್ನು ಮತ್ತಷ್ಟು ಘಾಸಿಗೊಳಿಸುವಂತಹದ್ದೂ ಆಗಿದೆ- ಅದೆಂದರೆ, ದಲಿತ ಎಂದೇ ಹೇಳಿಕೊಂಡು, ಹಿಂದುತ್ವ ಗುಂಪಿನ ಕ್ರೌರ್ಯಗಳನ್ನು ಸಮರ್ಥಿಸುವ ಗುಂಪು. ಕಟ್ಟರ್ ಜಾತಿವಾದಿ ಹಿಂದುತ್ವದಿಂದ ತಲೆತೊಳೆದುಕೊಂಡು ಕಾಲಾಳಾಗಿ ಸಮರಕ್ಕೆ ಇಳಿವ ಈ ಪಡೆ, ಅಂಬೇಡ್ಕರ್ ವಿಚಾರಗಳ ಪರ ಎಂಬ ಮುಖವಾಡ ಹೊತ್ತು, ಜೀತಗಾರಿಕೆಗೆ ಸಮುದಾಯವನ್ನು ತಳ್ಳಲು ಸನ್ನದ್ಧವಾಗಿದೆ!
‘ಗುಲಾಮರ ಅಪ್ಪ’ ಎಂಬ ಖಾತೆಯ ಮೂಲಕ ‘ಆನಂದ್ ಆಂಜನಪ್ಪ’ ಎಂಬ ಐಟಿ ಉದ್ಯೋಗಿ ನಿರಂತರವಾಗಿ ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕುತ್ತಿದ್ದ. ಹಾಗೆ ನೋಡಿದರೆ, ಪರಿಶಿಷ್ಟ ಪಂಗಡದ ಮೀಸಲಾತಿ ಫಲಾನುಭವಿಯಾಗಿದ್ದ ಈತ, ನಿರಂತರ ಸಾಮಾಜಿಕ ನ್ಯಾಯದ ವಿರುದ್ಧ ಮಾತನಾಡುತ್ತಿದ್ದ. ಅಂಬೇಡ್ಕರ್ ಅವರು ಸಂವಿಧಾನ ರಚನೆಯನ್ನೇ ಮಾಡಿಲ್ಲ ಎಂದು ವಾದ ಮಾಡುತ್ತಿದ್ದ. ಈತನಿಗೆ ದೊಡ್ಡ ಮಟ್ಟದಲ್ಲಿ ಸಂಘಪರಿವಾರದ ಗುಂಪು ಪ್ರೋತ್ಸಾಹ ನೀಡುತ್ತಿತ್ತು. ದಲಿತ ಸಂಘಟನೆಗಳು ಬಲವಾಗಿ ಪಟ್ಟು ಹಿಡಿದ ಬಳಿಕ ‘ಗುಲಾಮರ ಅಪ್ಪ’ ಖಾತೆಯ ಹಿಂದೆ ಇದ್ದ ಆನಂದ ಸೆರೆಸಿಕ್ಕ. ಆದರೆ ಆತನನ್ನು ಜೈಲಿಗೆ ಹಾಕಿದ ಹೋದ ಮೇಲೆ, ‘ಗುಲಾಮರ ಚಿಕ್ಕಪ್ಪ’, ‘ಗುಲಾಮರ ಗಂಡ’- ಹೀಗೆ ತರಹೇವಾರಿ ಫೇಕ್ ಅಕೌಂಟ್‌ಗಳ ಮೂಲಕ ಅದೇ ಹಿಂದುತ್ವ ಗುಂಪುಗಳು ಸಕ್ರಿಯವಾಗಿದ್ದು, ಅಂಬೇಡ್ಕರ್ ವಿಚಾರಧಾರೆಗಳನ್ನು, ದಲಿತರನ್ನು ನಿರಂತರ ಅವಮಾನಿಸುತ್ತಿವೆ. ‘ಗುಲಾಮರ ಚಿಕ್ಕಪ್ಪ’- ಖಾತೆಯಲ್ಲಿ ದಲಿತರ ಬಗ್ಗೆ ನಿಂದನಾತ್ಮಕ ಭಾಷೆಯನ್ನು ದಿನಬೆಳಗಾದರೆ ಬಳಸಲಾಗುತ್ತಿದೆ. ಕರ್ನಾಟಕದಲ್ಲಿ ಸಕ್ರಿಯವಾಗಿರುವ ಇಂತಹ ನೂರಾರು ಫೇಕ್ ಬುಕ್ ಅಕೌಂಟ್‌ಗಳನ್ನು ಪಟ್ಟಿ ಮಾಡಬಹುದು. ಇವೆಲ್ಲವೂ ಬಹುತೇಕ ಫೇಕ್ ಖಾತೆ ಮಾದರಿಯಲ್ಲಿವೆ ಮತ್ತು ಬಿಜೆಪಿ ಬೆಂಬಲಕ್ಕೆ ನಿಂತಿವೆ.
ದಲಿತರ ಮೇಲಿನ ದೌರ್ಜನ್ಯಗಳ ಸಮರ್ಥನೆಗೆ ನಕಲಿ ನರೇಟಿವ್!
ಜಾತಿ ಕಾರಣಕ್ಕೆ ದಲಿತರ ಮೇಲೆ ಹಲ್ಲೆಗಳಾದಾಗ, ಅದರ ಸುತ್ತ ನಕಲಿ ನರೇಟಿವ್ ಕಟ್ಟುವುದು ಹಿಂದುತ್ವ ಗುಂಪಿನ ಮತ್ತೊಂದು ವಿಕೃತಿ. ಉದಾಹರಣೆಗೆ, ಇತ್ತೀಚೆಗೆ ಯಾದಗಿರಿಯಲ್ಲಿ ನಡೆದ ಘಟನೆಯನ್ನೇ ಉದಾಹರಣೆಯಾಗಿ ನೋಡೋಣ. ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ವ್ಯಾಪ್ತಿಗೆ ಬರುವ ಗುರುಸುಣಿಗಿ ಗುಡ್ಡದಲ್ಲಿರುವ ಸುಪ್ರಸಿದ್ಧ ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ತೆರಳಿದ್ದ ದಲಿತರ ಮೇಲೆ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿತ್ತು. ಇದೊಂದು ಜಾತಿ ಕಾರಣಕ್ಕೆ ನಡೆದ ದಾಳಿಯಾಗಿತ್ತು. “ಅಂಬೇಡ್ಕರ್ ಅವರು ಹಿಂದೂ ಧರ್ಮವನ್ನು ತ್ಯಜಿಸಿ, ಬೌದ್ಧಧಮ್ಮಕ್ಕೆ ಮರಳಿದ್ದೇಕೆ ಎಂಬುದು ಈ ಜನರಿಗೆ ಅರ್ಥವಾಗುವುದಿಲ್ಲ” ಎಂದು ಫೇಸ್ ಬುಕ್‌ನಲ್ಲಿ ಈ ವರದಿಯ ಲೇಖಕ ಅಭಿಪ್ರಾಯ ಹಂಚಿಕೊಂಡ ತಕ್ಷಣ, ‘ಮನು ಒಕ್ಕಲಿಗ’ ಎಂಬ ಹಿಂದುತ್ವ ಫೇಕ್ ಖಾತೆಯು- “ದೇವಸ್ಥಾನದ ಒಳಗೆ ಬಂದು ದೇವರ ಬಗ್ಗೆ ಅವಾಚ್ಯ ಶಬ್ದ ಬಳಸಿದರು, ಅದಕ್ಕೆ ಭಕ್ತರು ಕಾಲು ಮುರಿದರು ಅಷ್ಟೆ” ಎಂಬ ನಿರಾಧಾರದ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು. ಅಂದರೆ ದಲಿತರ ಮೇಲೆ ನಡೆಯುವ ದಾಳಿಗಳನ್ನು ಸಮರ್ಥಿಸಿ, ಪಿತೂರಿ ಕಥನಗಳನ್ನು ತೇಲಿಬಿಡುವ ವಿಕೃತಿಯನ್ನು ಹಿಂದುತ್ವ ಗುಂಪುಗಳು ನಿರಂತರವಾಗಿ ಮಾಡುತ್ತಿವೆ.

ಟಿ. ನರಸೀಪುರ ಪ್ರಕರಣ ಮತ್ತು ದಲಿತ ವಿರೋಧಿ ಪ್ರತಾಪ್ ಸಿಂಹ
ರಾಜಕೀಯ ನಿರುದ್ಯೋಗಿ ಎಂದೇ ಕರೆಸಿಕೊಳ್ಳುವ ಪ್ರತಾಪ ಸಿಂಹ, ಸುದ್ದಿ ಆಗುವುದು ವಿವಾದಗಳ ಮೂಲಕ. ತನ್ನ ಅಸ್ತಿತ್ವಕ್ಕಾಗಿ ಮುಸ್ಲಿಮರ ವಿರುದ್ಧ ದ್ವೇಷ ಬಿತ್ತನೆ ಮಾಡಲು ಯತ್ನಿಸುವುದು ಅವರ ಹಳೆಯ ವರಸೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಆತ ನೇರವಾಗಿ ದಲಿತರ ವಿರುದ್ಧ ಫ್ಯೂಡಲ್ ಮನಸ್ಥಿತಿಯನ್ನು ವ್ಯಕ್ತಪಡಿಸುತ್ತಿರುವುದು ಕಂಡುಬರುತ್ತದೆ.
ಇದನ್ನೂ ಓದಿರಿ: ಚಾಮರಾಜ ಕ್ಷೇತ್ರದ ಮೇಲೆ ‘ನಿರುದ್ಯೋಗಿ’ ಪ್ರತಾಪ್ ಸಿಂಹ ಕಣ್ಣು; ಹಿಂದುತ್ವವೇ ಅಸ್ತ್ರ
ಪ್ರತಾಪ್ ಸಿಂಹ ಅವರಲ್ಲಿ ದಲಿತರ ಬಗ್ಗೆ ಎಂತಹ ಮನಸ್ಥಿತಿ ಇದೆ ಎಂಬುದಕ್ಕೆ ಒಂದು ಉದಾಹರಣೆಯನ್ನು ನೋಡಿ. ಆಗ ಪ್ರತಾಪ್ ಸಿಂಹ ಸಂಸದನಾಗಿದ್ದ. ಅದು ದಸರಾಕ್ಕೆ ಸಂಬಂಧಿಸಿದ ಪತ್ರಿಕಾಗೋಷ್ಠಿ. ದಲಿತ ಸಮುದಾಯದ ಹಿರಿಯ ಪತ್ರಕರ್ತರೊಬ್ಬರು “ಮಹಿಷ ದಸರಾ” ಕುರಿತು ಪ್ರಶ್ನೆಯೊಂದನ್ನು ಕೇಳುತ್ತಾರೆ. ಅದಕ್ಕೆ ಪ್ರತಾಪ ಸಿಂಹ, “ನಿಮಗೆ ದಸರಾ ಪಾಸ್ ಕೊಟ್ಟಿದ್ದೇವೆ, ಬಂದು ಊಟ ಮಾಡಿಕೊಂಡು ಹೋಗಿ” ಎನ್ನುತ್ತಾನೆ. ಕೇಳಿದ ಪ್ರಶ್ನೆ ಬೇರೆ, ಕೊಟ್ಟ ಉತ್ತರ ಜಾತಿ ಅಹಂಕಾರದ್ದು. “ದಲಿತರು ಬಿಟ್ಟಿ ಊಟಕ್ಕೆ ಕೂತಿರುತ್ತಾರೆ” ಎನ್ನುವ ಫ್ಯೂಡಲ್ ಮನಸ್ಥಿತಿ ಪ್ರತಾಪ್ ಸಿಂಹರದ್ದು. ಮೊದಲಿನಿಂದಲೂ ಆತನಿಗೆ ದಲಿತರ ಪ್ರತಿರೋಧಗಳು ಹಿಡಿಸುವುದಿಲ್ಲ. ಮೈಸೂರಿನಲ್ಲಿ ‘ಮಹಿಷ ದಸರಾ’ವನ್ನು ಹೊಸದಾಗೇನೂ ಆಚರಿಸುವುದಿಲ್ಲ. ಪ್ರತಾಪ ಸಿಂಹ ಇಲ್ಲಿಗೆ ಸಂಸದನಾಗಿ ಬರುವುದಕ್ಕಿಂತ ಮೊದಲಿನಿಂದಲೂ ಮಹಿಷ ದಸರಾ ಚಾಲ್ತಿಯಲ್ಲಿದೆ. ಆದರೆ ಈ ವಿಚಾರದಲ್ಲಿ ಮೂಗು ತೂರಿಸಿ ಮಹಿಷ ದಸರಾ ಆಚರಿಸುವ ದಲಿತರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿದರು. ಆಗ ದಲಿತರು ತಿರುಗಿಬಿದ್ದರು. ಅಂದಿನಿಂದಲೂ ಆತ ದಲಿತರ ವಿರುದ್ಧ ವಿಷಕಾರುವುದು ನಿಂತಿಲ್ಲ. ತಿ.ನರಸೀಪುರ ಗಣೇಶೋತ್ಸವ ಸಂದರ್ಭದಲ್ಲಿ ಪ್ರತಾಪ್ ಸಿಂಹ ಅವರು ನೀಲಿ ಶಾಲು ಮತ್ತು ಡಿಎಸ್‌ಎಸ್ ಕುರಿತು ಹಗುರವಾಗಿ ಮಾತನಾಡಿದ್ದು ಅವರಲ್ಲಿನ ಹಳೆಯ ದ್ವೇಷದ ಮರುಕಳಿಕೆಯಾಗಿತ್ತಷ್ಟೇ!
ಗಣಪತಿ ಉತ್ಸವದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ತಿ.ನರಸೀಪುರ ಇನ್‌ಸ್ಪೆಕ್ಟರ್ ಧನಂಜಯ್ ಅವರು ಸ್ಥಳೀಯರಿಗೆ ಸೂಚನೆಗಳನ್ನು ನೀಡುವಾಗ, “ಮಸೀದಿ ಮುಂದೆ ಕಳೆದ ಸಲ ಪಟಾಕಿ ಹೊಡೆದಿರುವುದು ತಿಳಿದುಬಂದಿದೆ. ಈ ಸಲ ಕಂಡು ಬಂದರೆ ಗ್ರಹಚಾರ ಬಿಡಿಸುತ್ತೇನೆ” ಎಂದಿದ್ದರು. ಇದನ್ನೇ ದೊಡ್ಡ ವಿವಾದ ಮಾಡಿದ ಬಿಜೆಪಿಯವರು, ತಿ.ನರಸೀಪುರದ ವಾತಾವರಣವನ್ನು ಕೆಡಿಸುವ ಪ್ರಯತ್ನ ಮಾಡಿದರು. “ಪೊಲೀಸ್ ಠಾಣೆಗೆ ನುಗ್ಗುತ್ತೇನೆ” ಎಂದು ಪ್ರತಾಪ ಸಿಂಹ ಧಮ್ಕಿ ಹಾಕಿದ. ಇದೊಂದು ಸಂವಿಧಾನ ವಿರೋಧಿ ನಡೆಯಾಗಿತ್ತು. ದಲಿತ ವ್ಯಕ್ತಿಯಾಗಿದ್ದ ಧನಂಜಯ ಅವರ ಮೇಲೆ ವಿಪರೀತ ದಾಳಿಯಾಗುತ್ತಿದ್ದದ್ದನ್ನು ಮತ್ತು ಅದರಲ್ಲಿ ಯಾವುದೇ ಸದುದ್ದೇಶ ಇಲ್ಲದೆ ಇರುವುದನ್ನು ಗಮನಿಸಿದ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ಪ್ರತಾಪ ಸಿಂಹ ಮತ್ತು ಬಿಜೆಪಿ ನಾಯಕರ ವಿರುದ್ಧ ಬೀದಿಗಿಳಿಯಿತು. ದಲಿತರು ಸಂವಿಧಾನ ಸೌಹಾರ್ದತೆ ನಡಿಗೆ ಹಮ್ಮಿಕೊಂಡರು. ಇದಾದ ಮೇಲೆ ಪ್ರತಾಪ ಸಿಂಹನ ಅಹಂಕಾರ ಜಾಗೃತವಾಯಿತು. “ನಾವು ಏನೇ ಮಾಡಿದರೂ ಡಿಎಸ್‌ಎಸ್‌ನವರು ನೀಲಿ ಶಾಲು ಹಾಕಿಕೊಂಡು ಬಂದು ಬಿಡುತ್ತಾರೆ. ಅಂಬೇಡ್ಕರ್ ಅವರ ಥಾಟ್ಸ್ ಆನ್ ಪಾಕಿಸ್ತಾನ ಕೃತಿ ಓದಿದ್ದಾರಾ? ಡಿಎಸ್‌ಎಸ್‌ನವರು ಮೊದಲು ಅಂಬೇಡ್ಕರ್ ಅವರನ್ನು ಓದಿಕೊಳ್ಳಲಿ” ಎಂದು ಬಿಟ್ಟಿ ಉಪದೇಶವನ್ನೂ ನೀಡಿದ ಪ್ರತಾಪ ಸಿಂಹ, ವ್ಯಕ್ತಪಡಿಸಿದ್ದು ತನ್ನೊಳಗಿರುವ ದಲಿತ ವಿರೋಧಿತನವನ್ನು. ಕರ್ನಾಟಕ ನೆಲದಲ್ಲಿ ದಲಿತರಲ್ಲಿ ಸ್ವಾಭಿಮಾನ, ಘನತೆಯನ್ನು ತುಂಬಿದ ಡಿಎಸ್‌ಎಸ್ ಬಗ್ಗೆ ಕ್ಷುಲ್ಲಕವಾಗಿ ಮಾತನಾಡುವ ಮೂಲಕ ಅಸಹನೆಯನ್ನು ಪ್ರತಾಪ್ ಹೊರಹಾಕಿದರು. ಒಂದು ವೇಳೆ ಡಿಎಸ್‌ಎಸ್ ಈ ನಾಡಿನಲ್ಲಿ ಇರದೆ ಹೋಗಿದ್ದರೆ, ಅಂಬೇಡ್ಕರ್ ವಿಚಾರಗಳನ್ನು ಪ್ರಚಾರ ಮಾಡದೆ ಇದ್ದಿದ್ದರೆ- ಬಲಾಢ್ಯ ಜಾತಿಗಳು ದಲಿತರನ್ನು ಮತ್ತಷ್ಟು ಹಿಂಸಿಸುತ್ತಿದ್ದವು. ಪ್ರತಾಪ್ ಸಿಂಹರಂತಹ ಫ್ಯೂಡಲ್ ಮನಸ್ಥಿತಿಗೆ ಡಿಎಸ್‌ಎಸ್ ಪೆಟ್ಟುಕೊಟ್ಟಿದ್ದು ಸಹಿಸದಾಗಿತ್ತು. ಪ್ರತಾಪ್ ಸಿಂಹನಿಗೆ ದಲಿತರು ಅಂಬೇಡ್ಕರ್ ವಾದದ ಪಾಠ ಹೇಳಲು ಶುರು ಮಾಡಿದರು. ‘ಥಾಟ್ಸ್ ಆನ್ ಪಾಕಿಸ್ತಾನ್ ಮಾತ್ರವಲ್ಲ, ಹಿಂದೂ ಧರ್ಮದ ಒಗಟುಗಳು, ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ, ಶೂದ್ರರು ಯಾರು, ಅಸ್ಪೃಶ್ಯರು ಯಾರು ಮೊದಲಾದ ಕೃತಿಗಳನ್ನು ಅಂಬೇಡ್ಕರ್ ಅವರು ಬರೆದಿದ್ದಾರೆ. ಅವುಗಳನ್ನು ಪ್ರತಾಪ ಓದಿದ್ದಾನಾ? ಚರ್ಚೆಗೆ ಬರಲಿ” ಎಂದು ಸವಾಲು ಹಾಕಿದರು.

ಪ್ರತಾಪ್ ಸಿಂಹ ಅವರು ಡಿಎಸ್‌ಎಸ್ ವಿರುದ್ಧ ಕೇವಲವಾಗಿ ಮಾತನಾಡಿದ್ದು ಏತಕ್ಕೆ? ಅಕ್ಷರಶಃ ದಲಿತರು ಮತ್ತು ಬಲಾಢ್ಯ ಜಾತಿಗಳ ನಡುವೆ ಕಲಹವನ್ನು ಸೃಷ್ಟಿಸುವ ಉದ್ದೇಶವನ್ನು ಪ್ರತಾಪ್ ಹೊಂದಿರುವಂತೆ ಕಾಣುತ್ತದೆ. ಪ್ರತಾಪ್ ಸಿಂಹರ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಾಗಿದ್ದೇ ತಡ, ಒಕ್ಕಲಿಗ ಸಮುದಾಯದ ಒಂದು ಗುಂಪು, ಮಾಧ್ಯಮಗಳ ಎದುರಿಗೆ ಬಂದು, “ಪ್ರತಾಪ್ ಸಿಂಹ ಅವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲವೇ? ಅಧಿಕಾರಿಯನ್ನು ಟೀಕಿಸುವುದು ತಪ್ಪೇ? ಪ್ರತಾಪ್ ಸಿಂಹ ಅವರು ಏನು ತಪ್ಪು ಮಾಡಿದ್ದಾರೆ? ಅಂಬೇಡ್ಕರ್ ಅವರನ್ನು ಓದಿಕೊಳ್ಳಿ ಎಂದಿದ್ದು ತಪ್ಪೇ? ಪ್ರತಾಪ್ ಸಿಂಹ ಅವರ ಹಿಂದೆ ಒಕ್ಕಲಿಗ ಸಮುದಾಯವಿದೆ. ಕೆಲವರು ಪ್ರತಾಪ್ ಮನೆ ಮೇಲೆ ದಾಳಿ ಮಾಡುವುದಾಗಿ ಹೇಳುತ್ತಿದ್ದಾರೆ. ಒಕ್ಕಲಿಗರು ಕೈಕಟ್ಟಿ ಕೂರುವುದಿಲ್ಲ. ಪ್ರಿಯಾಂಕ್ ಖರ್ಗೆಯವರು ಇಂದು ಅಧಿಕಾರದಲ್ಲಿದ್ದಾರೆ. ಒಕ್ಕಲಿಗರಾದ ಕೆಂಗಲ್ ಹನುಮಂತಯ್ಯ ಕಟ್ಟಿದ ವಿಧಾನಸೌಧದಲ್ಲಿ, ಒಕ್ಕಲಿಗರಾದ ಎಸ್.ಎಂ. ಕೃಷ್ಣ ಅವರು ಕಟ್ಟಿದ ವಿಕಾಸ ಸೌಧದದಲ್ಲಿ, ಎಚ್.ಡಿ. ಕುಮಾರಸ್ವಾಮಿಯವರು ಕಟ್ಟಿದ ಸುವರ್ಣ ಸೌಧದಲ್ಲಿ ಅವರು ಕುಳಿತ್ತಿದ್ದಾರೆ” ಎಂದು ಹೇಳಿಕೆ ನೀಡಿದ್ದಾರೆ. ಅಂದರೆ ಪ್ರತಾಪ್ ಸಿಂಹ ಆಡಿರುವ ಅಸೂಕ್ಷ್ಮ ಮಾತುಗಳನ್ನು ಅರಿತುಕೊಳ್ಳದೆ ಕೇವಲ ಜಾತಿ ಕಾರಣಕ್ಕೆ ಆತನ ಬೆಂಬಲಕ್ಕೆ ಬರಲಾಗುತ್ತಿದೆಯೇ? ‘ದಲಿತ ವರ್ಸಸ್ ಒಕ್ಕಲಿಗ’ ಎಂಬ ದ್ವೇಷದ ರಾಜಕೀಯಕ್ಕೆ ಪ್ರತಾಪ್ ಸಿಂಹ ಬುನಾದಿ ಹಾಕಿರುವುದನ್ನು ಜಾತಿ ಗುಂಪುಗಳು ಅರಿಯದಾಗಿವೆಯೇ? ಇಂತಹ ಬೆಳವಣಿಗೆಗಳಿಗೆ ಪ್ರದೀಪ್ ಈಶ್ವರ ಎಂಬ ಅರೆಬೆಂದ ಕಾಂಗ್ರೆಸ್ ಶಾಸಕ ಪ್ರಚೋದನೆಯನ್ನು ನೀಡುತ್ತಿರುವುದು ಮತ್ತೊಂದು ಅಪಾಯಕಾರಿ ಸಂಗತಿ. ಆದರೆ ಇಲ್ಲಿ ಪ್ರಶ್ನೆ ಇರುವುದು- ಪ್ರದೀಪ್ ಈಶ್ವರ್ ವರ್ಸಸ್ ಪ್ರತಾಪ್ ಸಿಂಹ ಅಲ್ಲ. ಇಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಪ್ರತಾಪ್ ಎಳೆದುತಂದಿರುವುದು ಗಂಭೀರ ವಿಚಾರ. ದಲಿತರ್ಯಾರಾದರೂ ಇದೇ ಬಲಾಢ್ಯ ಜಾತಿಯ ಸಂಘ ಸಂಸ್ಥೆಗಳ ವಿರುದ್ಧ ಮಾತನಾಡಿದ್ದರೆ, ಯಾವ ಅರ್ಥ ಬರುತ್ತಿತ್ತು ಎಂಬುದನ್ನು ಸೂಕ್ಷ್ಮವಾಗಿ ನೋಡಬೇಕಾಗುತ್ತದೆ.
ಇದನ್ನೂ ಓದಿರಿ: ಸೂಕ್ತ ಸಮಯಕ್ಕಾಗಿ ಕಾಯುತ್ತಲೇ ಇರುವ ಕುಮಾರಸ್ವಾಮಿ!
ಪ್ರತಾಪ್ ಸಿಂಹನ ವಿರುದ್ಧ ದಲಿತರು ತಿರುಗಿಬಿದ್ದ ತಕ್ಷಣ, ಬಲಾಢ್ಯ ಜಾತಿ ಅಹಮಿಕೆಯು ಹೇಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತಿದೆ ಎಂಬುದು ಮತ್ತೊಂದು ಆಘಾತಕಾರಿ ಸಂಗತಿ. ಚೇತನ್ ಗೌಡ ಎಂಬ ಫೇಸ್‌ಬುಕ್ ಖಾತೆದಾರ ಮಾಡಿರುವ ವಿಡಿಯೊದಲ್ಲಿ ಅಂಬೇಡ್ಕರ್ ಅವರ ಕುರಿತು ಹಗುರವಾಗಿ ಮಾತನಾಡಲಾಗಿದೆ. ಪ್ರತಾಪ್ ಸಿಂಹರನ್ನು ಟೀಕಿಸಿರುವ ಸಂದೇಶ್ ಎಂಬ ದಲಿತ ಹೋರಾಟಗಾರರನ್ನು ನಿಂದಿಸುತ್ತಾ ಚೇತನ್ ಗೌಡ ಹೀಗೆ ಹೇಳುತ್ತಾರೆ: “ಲೋ ಸಂದೇಶ, ಮೊದಲು ಗೌರವ ಕೊಟ್ಟು ಮಾತನಾಡು. ನೀನೇನು ಎಂಎಲ್‌ಎ ಆಗಿದ್ದೀಯ, ಸಿಎಂ ಆಗಿದ್ದೀಯ? ಮಂತ್ರಿ ಆಗಿದ್ದೀಯ? ಏನೂ ಇಲ್ಲ ಪುಟಗೋಸಿ ನೀನು. ಪ್ರತಾಪ್ ಸಿಂಹನ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಲು ನೀನು ಏನು ಆಗಿದ್ದೀಯ? ಪ್ರತಾಪ್ ಸಿಂಹನಾದರೂ ಎರಡು ಸಲ ಎಂಪಿನಾದರೂ ಆಗಿದ್ದಾನೆ. ನಿಮ್ಮ ಅಂಬೇಡ್ಕರ್‌ನ ತಗೋ. ನಾಲ್ಕು ಸಲ ಎಲೆಕ್ಷನ್ ನಿಂತುಕೊಂಡು, ನಾಲ್ಕು ಸಲವೂ ಸೋತರು. ನಿನಗೆ ಅಂಬೇಡ್ಕರ್ ದೊಡ್ಡವರೆಂದರೆ, ಕಂಡವರಿಗೆಲ್ಲ ದೊಡ್ಡವರಾಗುತ್ತಾರಾ? ನಿಮ್ಮಪ್ಪ ನಿನಗೆ ದೊಡ್ಡೋರು, ಕಂಡೋರಿಗೆಲ್ಲ ಅಲ್ಲ. ಗೌಡರು ಹದಿನಾರು ಪರ್ಸೆಂಟ್ ಇದ್ದಾರೆ. 50% ಮೀಸಲಾತಿ ಅಂದರೆ, 8 % ಮೀಸಲಾತಿ ಕೊಡಬೇಕು. 4% ಮಾತ್ರ ಅಂಬೇಡ್ಕರ್ ಏಕೆ ಕೊಟ್ಟಿದ್ದಾರೆ? ನಮ್ಮ ಗೌಡರಿಗೆ ಅಂಬೇಡ್ಕರ್ ಅನ್ಯಾಯ ಮಾಡಿದ್ದಾರೆ. ಮುಂದಿನ ಇಪ್ಪತ್ತರಿಂದ ಮೂವತ್ತು ವರ್ಷದಲ್ಲಿ ಭಗವದ್ಗೀತೆ ಆಧಾರದಲ್ಲಿ ಹೊಸ ಸಂವಿಧಾನ ಬರುತ್ತೆ. ಎಲ್ಲ ಜಾತಿಯ ಬಡವರಿಗೆ ಮೀಸಲಾತಿ ಸಿಗುತ್ತದೆ. ಈಗಿರುವ ಸಂವಿಧಾನ ಬರೀ ಎರಡು ಜಾತಿಗೆ ಮಾತ್ರ ಮೀಸಲಾತಿ ಕೊಡುತ್ತಿದೆ. ಅದನ್ನು ಒಪ್ಪಿಕೊಳ್ಳುವಷ್ಟು ದಡ್ಡರು ನಾವಲ್ಲ. ನಮ್ಮಪ್ಪ, ತಾತ ಒಪ್ಪಿರಬಹುದು. ಈ ಜನರೇಷನ್ ಒಪ್ಪಲ್ಲ. ಅದೇ ಕಾರಣಕ್ಕೆ ಎಲ್ಲ ಕಡೆ ಹೋರಾಟ ನಡೆಯುತ್ತಿದೆ. ನಿಮ್ಮಂಥ ಪುಕ್ಕಟ್ಟೆ ಗಿರಾಕಿಗಳು ಜಾಸ್ತಿ ಆಗಿದ್ದಾರೆಂದು ಹೋರಾಟ ಆಗುತ್ತಿದೆ”- ಇದು ಚೇತನ್ ಗೌಡ ಎಂಬಾತನ ಮಾತುಗಳು. ಮೀಸಲಾತಿಯ ಬಗ್ಗೆ ಯಾವುದೇ ತಿಳಿವಳಿಕೆ ಇಲ್ಲದೆ, ಮಾತನಾಡುವ ಈ ವ್ಯಕ್ತಿ ‘ಗುಲಾಮರ ಅಪ್ಪ’ ಖಾತೆಯ ಕಟ್ಟರ್ ಬೆಂಬಲಿಗ. ದಲಿತರ ವಿರುದ್ಧ ಸಾಕಷ್ಟು ವಿಡಿಯೊಗಳು ಈತನ ಖಾತೆಯಲ್ಲಿ ಕಾಣಸಿಗುತ್ತವೆ.

ಮೀಸಲಾತಿ ಹೆಸರಲ್ಲಿ ದಲಿತರ ಬಗ್ಗೆ ವಿಷಕಾರಿ ಪೋಸ್ಟ್ ಗಳನ್ನು ಹಾಕುವುದು, ಅಂಬೇಡ್ಕರ್ ಅವರನ್ನು ನಿಂದಿಸುವುದು ನಿರಂತರ ನಡೆಯುತ್ತಿದೆ. ಒಂದೆಡೆ ಅಸ್ಪೃಶ್ಯ ಸಮುದಾಯಗಳನ್ನು ಒಡೆದು ಆಳಲು ಕಾಲಾಳುಗಳಂತೆ ಬಳಕೆಯಾಗುತ್ತಿರುವ ಕೆಲವು ದಲಿತ ಮುಖಗಳಿಂದಲೇ ಪ್ರತಾಪ್ ಸಿಂಹರನ್ನು ಸಮರ್ಥಿಸುವ ಕೆಲಸವನ್ನು ಹಿಂದುತ್ವ ಗುಂಪುಗಳು ಮಾಡಿಸುತ್ತಿವೆ. ತೆಲಂಗಾಣದಲ್ಲಿ ‘ರಾಷ್ಟ್ರೀಯ ದಲಿತ ಸೇನಾ’ ಎಂಬ ಹಿಂದುತ್ವ ಸಂಘಟನೆಯ ಅಧ್ಯಕ್ಷ ನಗುಲರಪು ವರಪ್ರಸಾದ್ ಎಂಬಾತ ಮಾಡುತ್ತಿರುವ ಕೆಲಸವನ್ನು ಕೆಲವರು ಕರ್ನಾಟಕದಲ್ಲಿ ‘ದಲಿತ’ ಎಂಬ ಹೆಸರಲ್ಲಿ ನೆರವೇರಿಸುತ್ತಿದ್ದಾರೆ. “ನಾನು ಏನಾದರೂ ಅಂಬೇಡ್ಕರ್ ಕಾಲದಲ್ಲಿ ಇದ್ದಿದ್ದರೆ, ನಾನು ಇನ್ನೊಬ್ಬ ಗೋಡ್ಸೆಯಾಗುತ್ತಿದ್ದೆ ಮತ್ತು ಅಂಬೇಡ್ಕರ್ ಅವರನ್ನು ಕೊಲ್ಲುತ್ತಿದ್ದೆ” ಎಂದು ಹೇಳಿಕೆ ನೀಡಿದ್ದ ಈ ವರಪ್ರಸಾದ್, ‘ಕಲ್ಪಿತ ನಾಯಕುಡು’ ಎಂದು ಅಂಬೇಡ್ಕರ್ ಅವರ ಕುರಿತು ನಿಂದನಾತ್ಮಕ ಕೃತಿಯನ್ನು ಬರೆದಿದ್ದಾನೆ. ಆತನ ವಿರುದ್ಧ ತೆಲಂಗಾಣದಲ್ಲಿ ಆಕ್ರೋಶ ಭುಗಿಲೆದ್ದಿದೆ. ಇತ್ತ ಕರ್ನಾಟಕದ ಹಿಂದುತ್ವ ಗುಂಪುಗಳು ಈ ಕೃತಿಯನ್ನು ಇಲ್ಲಿ ಪ್ರಚಾರ ಮಾಡುತ್ತಿವೆ. ಹೊಸ ಮಾದರಿಯ ಅಸ್ಪೃಶ್ಯತೆ ಆಚರಣೆ, ದಲಿತರ ಮೇಲಿನ ಹಲ್ಲೆಗಳು ಗೊರಿಲ್ಲಾ ಯುದ್ಧತಂತ್ರವನ್ನು ಅಳವಡಿಸಿಕೊಂಡು ಚಾಲ್ತಿಗೆ ಬಂದಿವೆ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.



