ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಮಕ್ಕಳಿಗೆ ಓದಲು, ಬರೆಯಲು ಬರುತ್ತಿಲ್ಲ ಎಂದು ದೂರುವ ನಾವು, ಮೊದಲು ಶಿಕ್ಷಕರೇ ಇಲ್ಲದ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹೇಗೆ ಸಿಗಲು ಸಾಧ್ಯ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕು ಎಂದು ಶಿಕ್ಷಣ ತಜ್ಞ ಹಾಗೂ ಸಂಘಟಕ ಸೈಯದ್ ಹಫೀಜುಲ್ಲಾ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಯೋಜಿಸಿದ್ದ ‘ಶೈಕ್ಷಣಿಕ ವ್ಯವಸ್ಥೆ ಮತ್ತು ಸವಾಲುಗಳು’ ಕುರಿತ ಗೋಷ್ಠಿಯಲ್ಲಿ ‘ಸರ್ಕಾರಿ ಕನ್ನಡ ಶಾಲೆಗಳು, ಕನ್ನಡಿಗರ ಹೊಣೆಗಾರಿಕೆ’ ವಿಷಯದ ಕುರಿತು ಅವರು ಮಾತನಾಡಿದರು.
ರಾಜ್ಯದಲ್ಲಿ ಸಾವಿರಾರು ಸರ್ಕಾರಿ ಶಾಲೆಗಳಿದ್ದು, ಅವುಗಳಲ್ಲಿ ಅನೇಕ ಶಾಲೆಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ ಇಂತಹ ಶಾಲೆಗಳ ಸಾಧನೆ ಮತ್ತು ಕಾರ್ಯವೈಖರಿಯ ಪರಿಚಯ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಇದು ವಿಷಾದನೀಯ ಸಂಗತಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಸರ್ಕಾರಿ ಶಾಲೆಗಳ ಗುಣಮಟ್ಟದ ಶಿಕ್ಷಣದ ಕುರಿತು ಚರ್ಚಿಸುವಾಗ ಶಿಕ್ಷಕರ ಕೊರತೆ, ಮೂಲಸೌಕರ್ಯ ಹಾಗೂ ಮಕ್ಕಳ ಕಲಿಕಾ ವಾತಾವರಣದ ಬಗ್ಗೆಯೂ ಗಮನಹರಿಸಬೇಕು. ಶಿಕ್ಷಕರ ನೇಮಕ ಮತ್ತು ಸರ್ಕಾರಿ ಶಾಲೆಗಳ ಬಲವರ್ಧನೆಗೆ ಆದ್ಯತೆ ನೀಡಿದಾಗ ಮಾತ್ರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಸಾಧ್ಯ ಎಂದು ಹೇಳಿದರು.
ಕೆಪಿಎಸ್‌ಸಿ ಮಾದರಿಯ ವಸತಿ ಅಥವಾ ಮಾದರಿ ಶಾಲೆಗಳನ್ನು ಆರಂಭಿಸುವುದಕ್ಕೂ ಮುನ್ನ ಅಸ್ತಿತ್ವದಲ್ಲಿರುವ ಸಾವಿರಾರು ಸರ್ಕಾರಿ ಶಾಲೆಗಳ ಸ್ಥಿತಿಗತಿ ಸುಧಾರಿಸಬೇಕು. ಒಂದು ಕಡೆ ದೊಡ್ಡ ಕಟ್ಟಡ, ಹೆಚ್ಚಿನ ಸಂಖ್ಯೆಯ ಶಿಕ್ಷಕರು ಹಾಗೂ ಅತ್ಯುತ್ತಮ ಸೌಲಭ್ಯಗಳಿರುವ ಶಾಲೆಗಳನ್ನು ನಿರ್ಮಿಸಿ, ಮತ್ತೊಂದೆಡೆ ಗ್ರಾಮೀಣ ಪ್ರದೇಶದ ಸಾಮಾನ್ಯ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಮುಂದುವರಿದರೆ ಶಿಕ್ಷಣದಲ್ಲಿ ಅಸಮಾನತೆ ಹೆಚ್ಚುತ್ತದೆ.
ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಕೊರತೆ ದೊಡ್ಡ ಸಮಸ್ಯೆಯಾಗಿದೆ. ಸಾವಿರಾರು ಹುದ್ದೆಗಳು ಖಾಲಿ ಇರುವ ಸಂದರ್ಭದಲ್ಲಿ ಗುಣಮಟ್ಟದ ಶಿಕ್ಷಣದ ಬಗ್ಗೆ ಮಾತ್ರ ಮಾತನಾಡುವುದರಿಂದ ಪ್ರಯೋಜನವಿಲ್ಲ. ಮೊದಲು ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು.
ಶಿಕ್ಷಣ ಪಡೆಯುವುದು ಪ್ರತಿಯೊಬ್ಬ ಮಗುವಿನ ಹಕ್ಕು. ಶಿಕ್ಷಣ ಹಕ್ಕು ಕಾಯ್ದೆಯ ಆಶಯದಂತೆ ಕಟ್ಟಕಡೆಯ ಮಗುವಿಗೂ ಸಮಾನ ಹಾಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಗ್ರಾಮೀಣ ಪ್ರದೇಶದ ಮಕ್ಕಳು ದೂರದ ದೊಡ್ಡ ಶಾಲೆಗಳಿಗೆ ಹೋಗಲು ಸಾಧ್ಯವಾಗದ ಪರಿಸ್ಥಿತಿಯನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು ಎಂದರು.
ಸರ್ಕಾರಿ ಶಾಲೆಗಳನ್ನು ಉಳಿಸುವ ಜವಾಬ್ದಾರಿ ಸರ್ಕಾರದಷ್ಟೇ ಅಲ್ಲ, ಸಮಾಜದ ಪ್ರತಿಯೊಬ್ಬರದ್ದಾಗಿದೆ. ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು, ಜನಪ್ರತಿನಿಧಿಗಳು ಹಾಗೂ ನಾಗರಿಕ ಸಂಘಟನೆಗಳು ಒಟ್ಟಾಗಿ ಸರ್ಕಾರಿ ಶಾಲೆಗಳ ಪರವಾಗಿ ನಿಲ್ಲಬೇಕು. ಪ್ರತಿಯೊಂದು ಹಳ್ಳಿಯಲ್ಲಿರುವ ಶಾಲೆಯೂ ಗುಣಮಟ್ಟದ ಶಿಕ್ಷಣದ ಕೇಂದ್ರವಾಗಬೇಕು. ಇದೇ ನಮ್ಮ ಹೋರಾಟದ ಮುಖ್ಯ ಉದ್ದೇಶವಾಗಬೇಕು ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸೂಫಿ ಸಂತರು, ಶರಣರು ಹಾಗೂ ಚಿಂತಕರ ನೆಲದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ: ಡಾ. ಅಜಯ್ ಧರ್ಮಸಿಂಗ್
ಗಡಿನಾಡು ಕನ್ನಡ ಸಂಘದ ಮುಖಂಡರಾದ ಅಮರದಿಕ್ಷಿತ ಕೃಷ್ಣಾ, ನಿಜಾಮುದ್ದೀನ್, ಚುಕ್ಕಿ ಸೂಗಪ್ಪ ಸಾಹು, ತಿರುಪತಿ ಸೂಗೂರು, ಹಿರಿಯ ಸಾಹಿತಿ ವಿ.ಎನ್ ಅಕ್ಕಿ, ಮಂಜುನಾಥ ಪಾಟೀಲ ವಟಗಲ್, ರಾಮಲಿಂಗಪ್ಪ ಕುಣ್ಸಿ, ಚನ್ನಬಸವ ಜಾನೇಕಲ್, ರಫೀಕ್ ಅಹ್ಮದ್ ಹಾಗೂ ಸಂಗಮೇಶ ಮುಧೋಳ್ ಉಪಸ್ಥಿತರಿದ್ದರು.



