ರಾಮನಗರದಲ್ಲಿ ಸಾಲ ವಾಪಾಸ್ ಕೇಳಿದ 75 ವರ್ಷದ ವೃದ್ಧ ಮಹಿಳೆಯನ್ನು ಮಹಿಳೆ ಮತ್ತು ಆಕೆಯ ಪ್ರಿಯಕರ ಸೇರಿಕೊಂಡು ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮಹಿಳೆ ಮತ್ತು ಆಕೆಯ ಪ್ರಿಯಕರ ವೃದ್ಧೆ ಧರಿಸಿದ್ದ ಚಿನ್ನಾಭರಣವನ್ನು ಕದ್ದು ಉಸಿರುಗಟ್ಟಿಸಿ ಕೊಂದಿದ್ದಾರೆ. ರಾಮನಗರ ತಾಲೂಕಿನ ಸಂಗಬಸವನದೊಡ್ಡಿಯ ಸುಶೀಲಮ್ಮ ಕೊಲೆಯಾದ ಮಹಿಳೆ. ಕೃತ್ಯ ಎಸಗಿದ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ರಾಮನಗರ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಅದೇ ಗ್ರಾಮಕ್ಕೆ ಸೇರಿದ ಗಿರಿಜಾ (36), ಮಹೇಶ (42) ಸದ್ಯ ಜೈಲು ಸೇರಿದ್ದಾರೆ. ವೃದ್ಧೆಯನ್ನು ಕೊಂದ ಬಳಿಕ ಶವವನ್ನು ರೈಲು ಹಳಿಗೆ ಎಸೆದು ಬಂದಿದ್ದಾರೆ ಎಂಬುದು ಪ್ರಾಥಮಿಕ ವಿಚಾರಣೆಯ ವೇಳೆ ತಿಳಿದುಬಂದಿದೆ. ಆರೋಪಿಗಳಿಂದ 5.45 ಲಕ್ಷ ಮೌಲ್ಯದ 39 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಬಡ್ಡಿ ಹಣ ಕೇಳಲು ಜೂನ್ 15ರಂದು ಸುಶೀಲಮ್ಮ ಗಿರಿಜಾ ಮನೆಗೆ ಹೋಗಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ತಾರಕಕ್ಕೇರಿದೆ. ಗಿರಿಜಾ ವೃದ್ಧೆಯ ಉಸಿರುಗಟ್ಟಿಸಿ ಕೊಂದು ಬಳಿಕ ಶವ ಸಾಗಿಸಲು ಪ್ರಿಯಕರ ಮಹೇಶನಿಗೆ ಕರೆ ಮಾಡಿ ಕರೆಸಿದ್ದಳು. ಆತನ ಸಹಾಯದಿಂದ ಶವವನ್ನು ಚೀಲಕ್ಕೆ ತುಂಬಿ ಕತ್ತಲಾಗುವುದನ್ನು ಕಾದು ರೈಲು ಹಳಿಯ ಬಳಿ ಶವ ಎಸೆದು ಬಂದಿದ್ದಾರೆ.
ಕೃತ್ಯ ನಡೆದ ಐದು ದಿನಗಳ ಬಳಿಕ ಕೊಳೆತ ಸ್ಥಿತಿಯಲ್ಲಿ ರೈಲು ಹಳಿಯ ಬಳಿ ಶವ ಬಿದ್ದಿರುವುದನ್ನು ಕಂಡ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ ಇಲ್ಲದಿರುವುದನ್ನು ಗಮನನಿಸಿದ ಪುತ್ರ ಕೊಲೆ ಗುಮಾನಿ ವ್ಯಕ್ತಪಡಿಸಿದ್ದು, ಯುಡಿಆರ್ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೊಲೆಗಾರರ ಜಾಡು ಹಿಡಿದಿದ್ದಾರೆ.





