ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತು. ಇಶಾನ್ ಕಿಶನ್ ಮತ್ತು ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ನಡುವಿನ ರನ್‌ಔಟ್ ಗೊಂದಲವು ಮೈದಾನದಲ್ಲಿ ತೀವ್ರ ಹತಾಶೆಗೆ ಕಾರಣವಾಯಿತು. ಅಂತಿಮವಾಗಿ ಬಿಡದೆ ಸುರಿದ ಮಳೆಯಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು.
ಇಶಾನ್ ಕಿಶನ್ ಕ್ರೀಸ್‌ಗೆ ಬಂದ ಕೇವಲ ಎರಡನೇ ಎಸೆತದಲ್ಲೇ ಈ ಘಟನೆ ಜರುಗಿತು. ಚೆಂಡನ್ನು ಮಿಡ್-ವಿಕೆಟ್ ಕಡೆಗೆ ತಳ್ಳಿ ತ್ವರಿತ ಸಿಂಗಲ್ ಕದಿಯಲು ಕಿಶನ್ ಓಡಿದರು. ಆದರೆ, ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್ ಚೆಂಡನ್ನು ತಡೆಯುವುದನ್ನು ಗಮನಿಸಿದ ನಾನ್-ಸ್ಟ್ರೈಕರ್‌ನಲ್ಲಿದ್ದ ಅಭಿಷೇಕ್ ಶರ್ಮಾ ರನ್ ಓಡಲು ನಿರಾಕರಿಸಿದರು. ಕಿಶನ್ ಕ್ರೀಸ್‌ಗೆ ಮರಳಲು ಹತಾಶೆಯಿಂದ ಡೈವ್ ಮಾಡಿದರೂ, ಅಷ್ಟರಲ್ಲೇ ಇಂಗ್ಲೆಂಡ್ ಆಟಗಾರರು ರನೌಟ್ ಮಾಡಿದ್ದರು. ಐರ್ಲೆಂಡ್ ವಿರುದ್ಧದ ಹಿಂದಿನ ಟಿ20 ಪಂದ್ಯದಲ್ಲೂ ಇಶಾನ್ ಕಿಶನ್ ರನೌಟ್ ಆಗಿದ್ದರು ಎಂಬುದು ಗಮನಾರ್ಹ.
ರನೌಟ್ ತೀರ್ಪನ್ನು ಮೂರನೇ ಅಂಪೈರ್ ಪರಿಶೀಲಿಸುತ್ತಿದ್ದಾಗ, ಅಭಿಷೇಕ್ ಶರ್ಮಾ ಅವರ ಮುಖದಲ್ಲಿ ಅಸಮಾಧಾನ ಎದ್ದು ಕಾಣುತ್ತಿತ್ತು. ಈ ವೇಳೆ ಇಶಾನ್ ಬಳಿ ಬಂದ ಅಭಿಷೇಕ್, “ತೂ ಪಹುಂಚಾ ಕಿ ನಹೀಂ ಪಹುಂಚಾ, ಕ್ಯಾ ಕರ್ ರಹಾ ಹೈ ಯಾರ್ ಇಶಾನ್? (ನೀನು ತಲುಪಿದೆಯಾ ಇಲ್ಲವಾ, ಏನು ಮಾಡ್ತಿದ್ದೀಯಾ ಗುರು?)” ಎಂದು ಕೇಳಿದ್ದು ಕಂಡುಬಂದಿತು. ಈ ಗೊಂದಲದ ಪರಿಣಾಮ ಭಾರತ ಮೊದಲ ಎರಡು ಓವರ್‌ಗಳಲ್ಲೇ ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಇದನ್ನು ಓದಿದ್ದೀರಾ? ದೇಶದ ರಿಯಲ್ ಎಸ್ಟೇಟ್ ಮೇಲೆ ಯುದ್ಧದ ಕಾರ್ಮೋಡ: 7 ನಗರಗಳಲ್ಲಿ ವಸತಿ ಮಾರಾಟ ಕುಸಿತ
ಆರಂಭಿಕ ಆಘಾತದ ಹೊರತಾಗಿಯೂ, ಅತ್ಯದ್ಭುತವಾಗಿ ಪುಟಿದೆದ್ದ ಅಭಿಷೇಕ್ ಶರ್ಮಾ ಕೇವಲ 24 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 59 ರನ್ ಸಿಡಿಸಿದರು. ನಾಯಕ ಶ್ರೇಯಸ್ ಅಯ್ಯರ್ (47 ಎಸೆತಗಳಲ್ಲಿ 68 ರನ್) ಅವರೊಂದಿಗೆ ಸೇರಿ 82 ರನ್‌ಗಳ ಪ್ರಮುಖ ಜೊತೆಯಾಟವಾಡಿದರು. ಇದೇ ವೇಳೆ, ಎದುರಿಸಿದ ಎಸೆತಗಳ ಲೆಕ್ಕಾಚಾರದಲ್ಲಿ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 100 ಸಿಕ್ಸರ್‌ಗಳನ್ನು ಪೂರೈಸಿದ ಆಟಗಾರ ಎಂಬ ಐತಿಹಾಸಿಕ ದಾಖಲೆಗೂ ಅಭಿಷೇಕ್ ಪಾತ್ರರಾದರು.
ಅಂತ್ಯದಲ್ಲಿ ಶಿವಂ ದುಬೆ ಅವರ ಸ್ಫೋಟಕ ಬ್ಯಾಟಿಂಗ್ (21 ಎಸೆತಗಳಲ್ಲಿ ಅಜೇಯ 42 ರನ್) ನೆರವಿನಿಂದ ಭಾರತ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 189 ರನ್‌ಗಳ ಪೈಪೋಟಿಯ ಮೊತ್ತ ಕಲೆಹಾಕಿತು. ಇಂಗ್ಲೆಂಡ್ ಪರ ಸಾಕಿಬ್ ಮಹಮೂದ್ 33 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು.
ಭಾರತದ ಇನಿಂಗ್ಸ್ ಮುಕ್ತಾಯದ ಹಂತದಲ್ಲಿ ಆರಂಭವಾದ ಮಳೆ ಬಿಡುವು ನೀಡಲೇ ಇಲ್ಲ. ಹೀಗಾಗಿ ಇಂಗ್ಲೆಂಡ್ ತನ್ನ ಬ್ಯಾಟಿಂಗ್ ಆರಂಭಿಸಲು ಸಾಧ್ಯವಾಗಲಿಲ್ಲ. ವಾತಾವರಣ ಸುಧಾರಿಸದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಗಿದೆ ಎಂದು ಘೋಷಿಸಲಾಯಿತು. ಸರಣಿಯ ಎರಡನೇ ಟಿ20 ಪಂದ್ಯ ಜುಲೈ 4 ರಂದು ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ.




