ರಾಜ್ಯದಲ್ಲಿ ಬಿಜೆಪಿ ಪಕ್ಷದವರು ಹಣ ಹಾಗೂ ಧರ್ಮದ ಹೆಸರಿನಲ್ಲಿ ನ್ಯಾಯವನ್ನು ಸೋಲಿಸಲು ಮುಂದಾಗುತ್ತಿದ್ದಾರೆ. ಇದಕ್ಕೆ, ಜನರು ಆಸ್ಪದ ಕೊಡಬಾರದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧುಬಂಗಾರಪ್ಪ ಹೇಳಿದರು.
ಸವಳಂಗ ರಸ್ತೆಯ ಕುಂಚೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ನಮ್ಮೂರ ಹುಡುಗ ಡಾ.ಶಿವರಾಜಕುಮಾರ್ ಹಾಗೂ ಗೀತಾ ಶಿವರಾಜಕುಮಾರ್ ಅವರು ಬಂಜಾರ ಸಮುದಾಯದೊಂದಿಗೆ ಶೀರ್ಷಿಕೆಯಡಿ ಯುಗಾದಿ ಹಬ್ಬ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಬಿಜೆಪಿ ಪಕ್ಷದವರು ದೇವರನ್ನು ಬೀದಿಗೆ ತಂದು ಮತ ಕೇಳುತ್ತಿದ್ದಾರೆ. ಇದು ರಾಜಕೀಯದಲ್ಲಿ ಸಲ್ಲದು. ನಾವೂ ಕೂಡ ದೇವರ ಭಕ್ತರೆ. ಇಲ್ಲಿ ನ್ಯಾಯ, ನೀತಿ, ಸತ್ಯ, ಧರ್ಮ ಮಾತ್ರ ಗೆಲ್ಲಬೇಕು. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ಬಡವರ ಹಸಿವು ನೀಗಿಸಲಾಗುತ್ತಿದೆ. ಇಲ್ಲಿ ಕಷ್ಟಕ್ಕೆ ಸ್ಪಂದಿಸಿದವರಿಗೆ ಮತ ಚಲಾಯಿಸಬೇಕು ಎಂದರು.
ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರಿಗೆ ಕುಂಚೇಹಳ್ಳಿಯಲ್ಲಿ ಅಭಿಮಾನಿ ಬಳಗ ಹೆಚ್ಚು. ನನಗೆ ಹಾಗೂ ಗೀತಕ್ಕಗೆ ಈಗ ತಂದೆ ಇಲ್ಲ. ಆದ್ದರಿಂದ ನೀವೇ ನಮ್ಮ ತಂದೆ-ತಾಯಿ. ಇಂದಿನಿಂದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಬಂಗಾರಪ್ಪ ಅವರಿಗೆ ನೀಡಿದ್ದ ಪ್ರೋತ್ಸಾಹ ಗೀತಾ ಶಿವರಾಜಕುಮಾರ್ ಅವರಿಗೂ ನೀಡಿ ಎಂದು ಕೋರಿದರು.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಮೂಲ ಉದ್ದೇಶ ಬಡತನ ನಿರ್ಮೂಲನೆ ಹಾಗೂ ಬಡ ಕುಟುಂಬಗಳ ಹಸಿವು ನೀಗಿಸುವುದು. ಅದೇ, ಉದ್ದೇಶದಿಂದ ಲೋಕಸಭಾ ಚುನಾವಣೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಜನ ಸಾಮಾನ್ಯರಿಗೆ ಪೂರಕವಾದ ಯೋಜನೆಗಳನ್ನು ಘೋಷಿಸಲಾಗಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ ಮಾತನಾಡಿ, ಕಂಚೇನಹಳ್ಳಿಗೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಹಾಗೂ ನಟ ರಾಜ್ ಕುಮಾರ್ ಕುಟುಂಬ ಸದಸ್ಯರು ಭೇಟಿ ನೀಡಿದ್ದಾರೆ. ಇದು, ನಮ್ಮ ಸೌಭಾಗ್ಯ ಎಂದ ಅವರು, ದೇಶದಲ್ಲಿ ಬಿಕ್ಷಾಟನೆ ನಡೆಸದೆ ಸ್ವಾಭಿಮಾನದ ಬದುಕನ್ನು ಬಂಜಾರ ಸಮುದಾಯ ಸಾಗಿಸುತ್ತಿದೆ. ಇಲ್ಲಿನ ಸಮಸ್ಯೆಗಳನ್ನು ನೀಗಿಸಲು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಇಲ್ಲ ಎನ್ನುವುದನ್ನು ತೊಡೆದು ಹಾಕಿ, ಅವರ ಸ್ಥಾನವನ್ನು ಗೀತಾ ಶಿವರಾಜಕುಮಾರ್ ಅವರು ತುಂಬಲಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡರಾದ ಶ್ರೀನಿವಾಸ ಕರಿಯಣ್ಣ ಮಾತನಾಡಿ, ಬಡವರಿಗೆ ನೆರವಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಆ ಎಲ್ಲಾ ಯೋಜನೆಗಳು ಜನಸಾಮಾನ್ಯರಿಗೆ ಸಮರ್ಪಕವಾಗಿ ತಲುಪಲು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರಿಗೆ ಬೆಂಬಲಿಸಬೇಕಿದೆ ಎಂದರು.
ನಟ ಶಿವರಾಜಕುಮಾರ್ ಮಾತನಾಡಿದರು. ಅದೇ ರೀತಿ, ದುರ್ಗಿಗುಡಿಯ ಗಣಪತಿ ದೇವಸ್ಥಾನ ಬಳಿಯಲ್ಲಿ ಗೀತಾ ಶಿವರಾಜಕುಮಾರ್ ಪರ ಪ್ರಚಾರ ಸಭೆ ನಡೆಸಿದರು.
ಕುಂಚೇಹಳ್ಳಿಯ ಸೇವಾಲಾಲ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರು, ತೆರೆದ ವಾಹನದಲ್ಲಿ ವೇದಿಕೆ ಬಳಿಗೆ ಸಾಗಿದರು. ಬಂಜಾರ ಸಮುದಾಯದ ಮಹಿಳೆಯರು ಗೀತಾ ಶಿವರಾಜಕುಮಾರ್ ಅವರನ್ನು ಪ್ರೀತಿಯಿಂದ ಬರ ಮಾಡಿಕೊಂಡು ಆರತಿ ಬೆಳಗಿ ಸ್ವಾಗತಿಸಿದರು.
ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ಎಚ್.ಸಿ. ಯೋಗೀಶ್, ಅನಿತಾ ಕುಮಾರಿ, ಎಂ.ಶ್ರೀಕಾಂತ್, ಎನ್.ರಮೇಶ್, ರವಿಕುಮಾರ್, ಕಲಗೋಡು ರತ್ನಾಕರ್, ಎಸ್.ಕೆ. ಮರಿಯಣ್ಣ, ಜಗದೀಶ್ ಸೇರಿ ಬಂಜಾರದ ಸಮುದಾಯದ ಮುಖಂಡರು ಇದ್ದರು.