ಸಿದ್ದಾಪುರ: ತಾಲೂಕಿನ ಕಾನಸೂರ ಗ್ರಾಮದ ಇಂದಿರಾಗಾಂಧಿ ವಸತಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಗೋಕುಲ ಕೃಷ್ಣ ಗೌಡನ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ, ಶಾಲೆಯ ಶಿಕ್ಷಕರೊಬ್ಬರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.
ಮೃತ ವಿದ್ಯಾರ್ಥಿಯ ತಾಯಿ, ಹುತ್ತಗಾರ-ಹಾರ್ಸಿಕಟ್ಟಾ ನಿವಾಸಿ ಜಯಶ್ರೀ ಕೃಷ್ಣ ಗೌಡ ಅವರು ನೀಡಿದ ದೂರಿನನ್ವಯ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ವಿದ್ಯಾರ್ಥಿ ತಾಯಿಯಾದ ಜಯಶ್ರೀ ಅವರ ಪ್ರಕಾರ, ಗೋಕುಲ ಕೃಷ್ಣ ಕಳೆದ ಎರಡು ವರ್ಷಗಳಿಂದ ಈ ವಸತಿ ಶಾಲೆಯಲ್ಲಿ ಓದುತ್ತಿದ್ದು, ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯವಾಗಿದ್ದನು. ಇತ್ತೀಚೆಗೆ ಮಗನನ್ನು ನೋಡಲು ಶಾಲೆಗೆ ಹೋಗಿದ್ದಾಗ ಆತನ ಕುತ್ತಿಗೆ ಭಾಗ ಊದಿಕೊಂಡಿರುವುದನ್ನು ಗಮನಿಸಿ ವಿಚಾರಿಸಿದ್ದರು. ಈ ವೇಳೆ ಶಾಲೆಯ ಶಿಕ್ಷಕರೊಬ್ಬರು ತನ್ನ ಕುತ್ತಿಗೆ ಹಿಡಿದು ಎತ್ತಿರುವುದಾಗಿ ಗೋಕುಲ ತಿಳಿಸಿದ್ದನೆಂದು ದೂರಿನಲ್ಲಿ ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ? ಯಲ್ಲಾಪುರ | ಅಡಿಕೆ ಬೆಳೆಗಾರರ ಬದುಕಿನೊಂದಿಗೆ ಚೆಲ್ಲಾಟ ಬೇಡ: ಶಾಸಕ ಶಿವರಾಮ ಹೆಬ್ಬಾರ್
ಅಲ್ಲದೆ, ಏಪ್ರಿಲ್ ತಿಂಗಳ ರಜೆಯಲ್ಲಿ ಮನೆಗೆ ಬಂದಿದ್ದ ಸಂದರ್ಭದಲ್ಲಿ ಗೋಕುಲ ತನ್ನ ತಾಯಿಯ ಬಳಿ ಶಾಲೆಯ ಘಟನೆಯೊಂದನ್ನು ಹಂಚಿಕೊಂಡಿದ್ದನು. ಶಾಲೆಯ ಹಿಂದಿ ಶಿಕ್ಷಕರಾದ ಅಬ್ಬು ಸರ್ ಅವರು 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ಜೊತೆ ಶೌಚಾಲಯದ ಬಳಿ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ತಾನು ನೋಡಿದ್ದಾಗಿ ಆತ ತಿಳಿಸಿದ್ದನು. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಶಿಕ್ಷಕರು ಕುತ್ತಿಗೆ ಒತ್ತಿ ತನಗೆ ಜೀವಬೆದರಿಕೆ ಹಾಕಿದ್ದರು ಎಂದು ಗೋಕುಲ ಅಳಲು ತೋಡಿಕೊಂಡಿದ್ದನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದೇ ಶಿಕ್ಷಕರು ಈ ಹಿಂದೆ ಹಾರ್ಸಿಕಟ್ಟಾದ ಮುರಾರ್ಜಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೂ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ವರ್ಗಾವಣೆಗೊಂಡಿದ್ದರು ಎಂಬ ಮಾಹಿತಿ ತಮ್ಮ ಹಿರಿಯ ಮಗನ ಮೂಲಕ ತಿಳಿದುಬಂದಿದೆ ಎಂದು ತಾಯಿ ದೂರಿನಲ್ಲಿ ವಿವರಿಸಿದ್ದಾರೆ.
ಜೂನ್ 9ರಂದು ಶಾಲೆಯಿಂದ ಕರೆ ಮಾಡಿ ಗೋಕುಲನ ಆರೋಗ್ಯ ಗಂಭೀರವಾಗಿದೆ ಎಂದು ತಿಳಿಸಲಾಗಿತ್ತು. ತಕ್ಷಣ ಶಿರಸಿ ಸರ್ಕಾರಿ ಆಸ್ಪತ್ರೆಗೆ ಧಾವಿಸಿದಾಗ, ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಿಕ್ಷಕರೊಬ್ಬರು ಮಾಹಿತಿ ನೀಡಿದ್ದರು. ಆದರೆ, ತಮ್ಮ ಮಗ ಆತ್ಮಹತ್ಯೆ ಮಾಡಿಕೊಳ್ಳುವಂತಹ ಹುಡುಗನಲ್ಲ ಎಂದು ಪೋಷಕರು ಹೇಳಿದ್ದಾರೆ. ಘಟನೆ ನಡೆದ ದಿನದಂದು ಹಲ್ಲೆ ನಡೆದಿರುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಮಗನ ಸಾವಿಗೆ ಶಿಕ್ಷಕರೇ ಕಾರಣ ಇರಬಹುದು ಎಂದು ಪೋಷಕರು ಶಂಕೆ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ, ಹಾಸ್ಟೆಲ್‌ನಲ್ಲಿ ಘಟನೆ ನಡೆದ ಸಮಯದಲ್ಲಿ ಮಾತ್ರ ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದು ಇವರ ಅನುಮಾನವನ್ನು ಮತ್ತಷ್ಟು ಬಲಪಡಿಸಿದೆ.
ಈ ಎಲ್ಲಾ ಸಾಂದರ್ಭಿಕ ಪುರಾವೆಗಳನ್ನು ಆಧರಿಸಿ, ಗೋಕುಲ ಕೃಷ್ಣ ಗೌಡನ ಸಾವು ಆತ್ಮಹತ್ಯೆಯಲ್ಲ, ಬದಲಿಗೆ ಇದೊಂದು ವ್ಯವಸ್ಥಿತ ಕೊಲೆ ಆಗಿರಬಹುದು ಎಂದು ತಾಯಿ ಜಯಶ್ರೀ ಅವರು ದೂರಿನಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಿದ್ದಾಪುರ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಸಾವಿಗೆ ನಿಖರ ಕಾರಣ ಹಾಗೂ ದೂರಿನಲ್ಲಿ ಉಲ್ಲೇಖಿಸಲಾಗಿರುವ ಶಿಕ್ಷಕರ ಮೇಲಿನ ಆರೋಪಗಳ ಸತ್ಯಾಸತ್ಯತೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.




