“ಬಡ ರೈತರ ಹೆಸರಿನಲ್ಲಿ ಭೂಮಾಫಿಯಾವನ್ನು ರಕ್ಷಿಸುವ ಪ್ರಯತ್ನ ಬೇಡ; ಪ್ರಕೃತಿ ಸಂರಕ್ಷಣೆಯೇ ಆದ್ಯತೆಯಾಗಲಿ”
ಶಿರಸಿ: ಕಸ್ತೂರಿ ರಂಗನ್ ವರದಿ ಜಾರಿಯ ವಿರುದ್ಧ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನೀಡಿರುವ ಹೇಳಿಕೆಗೆ ಭೀಮ ಘರ್ಜನೆ ಸಂಘಟನೆಯ ಜಿಲ್ಲಾಧ್ಯಕ್ಷ ಅರ್ಜುನ್ ಮಿಂಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ರಾಜ್ಯ ಸರ್ಕಾರ ವೈಜ್ಞಾನಿಕ ಕಾರಣಗಳನ್ನು ಸಂಗ್ರಹಿಸಿ ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಬೇಕು” ಎಂಬ ಸಂಸದರ ಹೇಳಿಕೆ ಪ್ರಕೃತಿ ಸಂರಕ್ಷಣೆಗೆ ವಿರುದ್ಧವಾಗಿದ್ದು, ಅರಣ್ಯ ಒತ್ತುವರಿದಾರರನ್ನು ರಕ್ಷಿಸುವ ಪ್ರಯತ್ನದಂತಿದೆ ಎಂದು ಅವರು ಆರೋಪಿಸಿದ್ದಾರೆ.
ಪಶ್ಚಿಮ ಘಟ್ಟಗಳ ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವ ಅಗತ್ಯವಿರುವ ಸಂದರ್ಭದಲ್ಲಿ ಬೆಟ್ಟ ಪ್ರದೇಶಗಳಲ್ಲಿ ಅಕ್ರಮ ನಿರ್ಮಾಣ, ಅರಣ್ಯ ಒತ್ತುವರಿ, ಮರಗಳ ನಾಶ ಹಾಗೂ ಕಲ್ಲು ಗಣಿಗಾರಿಕೆಯಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು ಅತ್ಯಗತ್ಯ ಎಂದು ಅರ್ಜುನ್ ಮಿಂಟಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿರಸಿ | ಕಸ್ತೂರಿ ರಂಗನ್ ವರದಿ ಜಾರಿಗೆ ತರುವುದಿಲ್ಲ: ಅರಣ್ಯ ಸಚಿವರ ಭರವಸೆ
ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ಭಾಗಗಳಲ್ಲಿ ‘ಬಾಗಾಯತು ಬೆಟ್ಟದ ಸವಲತ್ತು’ ಮತ್ತು ‘ಹಳೆಯ ಒತ್ತುವರಿ’ ಎಂಬ ನೆಪದಲ್ಲಿ ಸರ್ಕಾರಿ ಹಾಗೂ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಬೃಹತ್ ಕಟ್ಟಡಗಳು, ಅಕ್ರಮ ತೋಟಗಳು ಹಾಗೂ ಇತರ ನಿರ್ಮಾಣಗಳನ್ನು ಮಾಡಲಾಗಿದೆ ಎಂಬ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
“ಬಡ ರೈತರ ಹೆಸರನ್ನು ಮುಂದಿಟ್ಟುಕೊಂಡು ಶ್ರೀಮಂತ ಒತ್ತುವರಿದಾರರನ್ನು ರಕ್ಷಿಸುವ ಪ್ರಯತ್ನ ನಡೆಯಬಾರದು. ಪರಿಸರ ಸಂರಕ್ಷಣಾ ನಿಯಮಗಳು ಸಾಮಾನ್ಯ ರೈತರ ಜೀವನೋಪಾಯಕ್ಕೆ ತೊಂದರೆ ಉಂಟುಮಾಡದ ರೀತಿಯಲ್ಲಿ ಜಾರಿಯಾಗಬೇಕು. ಆದರೆ ಸರ್ಕಾರಿ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಬಂಗಲೆ, ಗೇಟ್ ಹಾಗೂ ವಾಣಿಜ್ಯ ನಿರ್ಮಾಣಗಳನ್ನು ಮಾಡಿರುವವರ ವಿರುದ್ಧ ಕಾನೂನು ಕ್ರಮ ಅಗತ್ಯ,” ಎಂದು ಅವರು ಹೇಳಿದ್ದಾರೆ.
‘ವೈಜ್ಞಾನಿಕ ಸತ್ಯ’ದ ಬಗ್ಗೆ ಪ್ರಶ್ನೆ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅತಿಯಾದ ಭೂ ಪರಿವರ್ತನೆ, ಬೆಟ್ಟಗಳ ಕಡಿತ, ಅಕ್ರಮ ನಿರ್ಮಾಣ ಹಾಗೂ ಗಣಿಗಾರಿಕೆಗಳು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ವಯನಾಡ್ ಸೇರಿದಂತೆ ಗುಡ್ಡ ಪ್ರದೇಶಗಳಲ್ಲಿ ಸಂಭವಿಸಿದ ಭೂಕುಸಿತಗಳ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮತೆಯನ್ನು ನಿರ್ಲಕ್ಷಿಸಬಾರದು
“ಬೆಟ್ಟ ಪ್ರದೇಶಗಳ ಅತಿಯಾದ ಅಭಿವೃದ್ಧಿ ಹಾಗೂ ನೈಸರ್ಗಿಕ ಭೂಪ್ರದೇಶದ ಬದಲಾವಣೆಯಿಂದ ಮುಂದಿನ ದಿನಗಳಲ್ಲಿ ಗ್ರಾಮಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆಯನ್ನು ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಬೇಕು. ಇದನ್ನು ವೈಜ್ಞಾನಿಕ ದೃಷ್ಟಿಕೋನದಿಂದಲೇ ನೋಡಬೇಕು,” ಎಂದು ಅವರು ತಿಳಿಸಿದ್ದಾರೆ.
ಸರ್ಕಾರಿ ಬೆಟ್ಟ ಪ್ರದೇಶಗಳಲ್ಲಿ ಹೊಸದಾಗಿ ಗೇಟ್‌ಗಳು ಹಾಗೂ ಬೇಲಿಗಳನ್ನು ನಿರ್ಮಿಸಿರುವುದರಿಂದ ವನ್ಯಜೀವಿಗಳ ನೈಸರ್ಗಿಕ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಇದರಿಂದ ಆನೆ, ಚಿರತೆ ಸೇರಿದಂತೆ ವನ್ಯಜೀವಿಗಳು ಮಾನವ ವಸತಿ ಪ್ರದೇಶಗಳಿಗೆ ಪ್ರವೇಶಿಸುವ ಘಟನೆಗಳು ಹೆಚ್ಚಾಗಬಹುದು. ಈ ಕುರಿತು ಅರಣ್ಯ ಇಲಾಖೆ ಸಮಗ್ರ ಪರಿಶೀಲನೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಜನರ ಮನೆ ಬಾಗಿಲಿಗೆ ಜಾತಿ–ಆದಾಯ ಪ್ರಮಾಣಪತ್ರ: 9.60 ಲಕ್ಷ ವಿತರಣೆ, ಶೇ.85.76 ಸಾಧನೆ
ಸರ್ಕಾರಿ ಭೂಮಿ ಹಾಗೂ ಅರಣ್ಯ ಭೂಮಿ ಒತ್ತುವರಿ ಕುರಿತು ಸಲ್ಲಿಸಿರುವ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ತನಿಖೆ ನಡೆಯುತ್ತಿದೆ ಎಂದು ಅರ್ಜುನ್ ಮಿಂಟಿ ತಿಳಿಸಿದ್ದಾರೆ. ಅಕ್ರಮ ಒತ್ತುವರಿ, ಕಟ್ಟಡ ನಿರ್ಮಾಣ ಹಾಗೂ ಗೇಟ್‌ಗಳ ಕುರಿತು ಕಾನೂನುಬದ್ಧ ಪರಿಶೀಲನೆ ನಡೆಯಬೇಕು. ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ
“ಜನಪ್ರತಿನಿಧಿಗಳು ಪ್ರಕೃತಿ ಮತ್ತು ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವ ಸಂವಿಧಾನಾತ್ಮಕ ಕರ್ತವ್ಯವನ್ನು ನಿರ್ವಹಿಸಬೇಕು. ಯಾವುದೇ ಒತ್ತುವರಿದಾರರಿಗೆ ರಾಜಕೀಯ ರಕ್ಷಣೆ ನೀಡಬಾರದು. ಬಡ ರೈತರ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಪರಿಹರಿಸುವುದರ ಜೊತೆಗೆ ಸರ್ಕಾರಿ ಭೂಮಿಯ ಅಕ್ರಮ ಒತ್ತುವರಿಯನ್ನೂ ತೆರವುಗೊಳಿಸಬೇಕು,” ಎಂದು ಅರ್ಜುನ್ ಮಿಂಟಿ ಒತ್ತಾಯಿಸಿದ್ದಾರೆ.




