ಅವಳ ಕಣ್ಣೋಟ | ʼಮಾತೃಭೂಮಿ: ಎ ನೇಷನ್ ವಿಥೌಟ್ ವುಮೆನ್ʼ- ಹೆಣ್ಣಿಲ್ಲದ ಭವಿಷ್ಯದ ಎಚ್ಚರಿಕೆ

Date:

ಚಿತ್ರದಲ್ಲಿನ ಬಹುಪತಿತ್ವ ದ್ರೌಪದಿಯನ್ನು ನೆನಪಿಸುತ್ತದೆ. ಆದರೆ ಪೌರಾಣಿಕ ಕಥೆಯಲ್ಲಿ ಸಾಂಸ್ಕೃತಿಕ-ಕಥನಾತ್ಮಕ ಸಂದರ್ಭವಿದೆ. ಕಲ್ಕಿಯಲ್ಲಿ ಆಯ್ಕೆಯೇ ಇಲ್ಲ; ಅವಳನ್ನು ಖರೀದಿಸಿ ಹಂಚಿಕೊಳ್ಳಲಾಗುತ್ತದೆ. ಸಿನಿಮಾ ಬಹುಪತಿತ್ವವನ್ನು ಪ್ರಶ್ನಿಸುವುದಕ್ಕಿಂತ ಮಹಿಳೆಯ ಒಪ್ಪಿಗೆ ಮತ್ತು ತನ್ನ ಬದುಕಿನ ಬಗ್ಗೆ ನಿರ್ಧರಿಸುವ ಹಕ್ಕು ಎಷ್ಟು ಮುಖ್ಯ ಎಂಬುದನ್ನು ಮುಂದಿಡುತ್ತದೆ.

- Advertisement -

ಹೆಣ್ಣುಮಕ್ಕಳನ್ನು ಹುಟ್ಟುವುದಕ್ಕೂ ಮುನ್ನವೇ ತಿರಸ್ಕರಿಸುವ ಸಮಾಜ, ಒಂದು ಹಂತದಲ್ಲಿ ಹೆಣ್ಣಿನ ಕೊರತೆಯನ್ನೇ ಎದುರಿಸಬೇಕಾಗುತ್ತದೆ. ಈ ವಿರೋಧಾಭಾಸವನ್ನು ಭವಿಷ್ಯದ ಒಂದು ಹಳ್ಳಿಯ ಕಥೆಯಾಗಿ ಕಟ್ಟಿಕೊಡುವ ಸಿನಿಮಾ ಮಾತೃಭೂಮಿ: ಎ ನೇಷನ್ ವಿಥೌಟ್ ವುಮೆನ್. 2003ರಲ್ಲಿ ಬಿಡುಗಡೆಯಾದ ಮನೀಶ್ ಝಾ ನಿರ್ದೇಶನದ ಈ ಚಿತ್ರ, ಹೆಣ್ಣಿನ ಮೇಲಿನ ತಾರತಮ್ಯ ಮುಂದುವರಿದರೆ ಅದು ಕೇವಲ ಮಹಿಳೆಯರ ಬದುಕನ್ನಲ್ಲ, ಇಡೀ ಸಾಮಾಜಿಕ ವ್ಯವಸ್ಥೆಯನ್ನೇ ಹೇಗೆ ವಿಕೃತಗೊಳಿಸಬಹುದು ಎಂಬುದನ್ನು ಪ್ರಶ್ನಿಸುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಚಿತ್ರಕ್ಕೆ 2003ರ 60ನೇ ವೆನಿಸ್ ಫಿಲಂ ಫೆಸ್ಟಿವಲ್‌ನಲ್ಲಿ FIPRESCI ಪ್ರಶಸ್ತಿ ಸಂದಿದೆ. ಮಹಿಳೆಯರ ಸಮಸ್ಯೆ ಮತ್ತು ಹೆಣ್ಣು ಶಿಶುಹತ್ಯೆಯಂತಹ ಸೂಕ್ಷ್ಮ ವಿಷಯಗಳನ್ನು ಸಂವೇದನಾಶೀಲವಾಗಿ ನಿರ್ವಹಿಸಿದ್ದಕ್ಕಾಗಿ ಈ ಪ್ರಶಸ್ತಿ ನೀಡಲಾಯಿತು.

ಚಿತ್ರದ ಆರಂಭದಲ್ಲೇ ಒಂದು ಹೆಣ್ಣು ಮಗು ಹುಟ್ಟುತ್ತದೆ. ತಂದೆಗೆ ಹೆಣ್ಣುಮಗು ಬೇಡ. ಸಾರ್ವಜನಿಕ ಸಮಾರಂಭದ ನಡುವೆಯೇ ಮಗುವನ್ನು ಹಾಲಿನ ತೊಟ್ಟಿಯಲ್ಲಿ ಮುಳುಗಿಸಿ ಕೊಲ್ಲುತ್ತಾನೆ. ಇದು ಕೇವಲ ಒಂದು ಮಗುವಿನ ಸಾವಿನ ದೃಶ್ಯವಲ್ಲ; ಹೆಣ್ಣುಮಗುವಿನ ಜನನವನ್ನು ಅನಗತ್ಯವೆಂದು ನೋಡುವ ಮನೋಭಾವದ ಭೀಕರ ಪರಿಣಾಮಕ್ಕೆ ಚಿತ್ರದ ಮೊದಲ ಸೂಚನೆ.

ಈ ಸಂದರ್ಭದಲ್ಲಿ ಕಲ್ಕಿ ಪ್ರವೇಶಿಸುತ್ತಾಳೆ. ರಾಮಚರಣ್ ತನ್ನ ಐವರು ಗಂಡುಮಕ್ಕಳಿಗಾಗಿ ಅವಳನ್ನು ಐದು ಲಕ್ಷ ರೂಪಾಯಿ ಮತ್ತು ಐದು ಜಾನುವಾರುಗಳಿಗೆ ತಂದೆಯಿಂದ ಖರೀದಿಸಿ, ಐವರು ಸಹೋದರರೊಂದಿಗೆ ಮದುವೆ ಮಾಡುತ್ತಾನೆ. ಇದು ಪ್ರೀತಿ ಅಥವಾ ಒಪ್ಪಿಗೆಯ ಸಂಬಂಧವಲ್ಲ. ಹೆಣ್ಣಿನ ಕೊರತೆಗೆ ಹೆಣ್ಣಿನ ದೇಹವನ್ನೇ ಪರಿಹಾರವಾಗಿ ನೋಡಿದ ವ್ಯವಸ್ಥೆ. ಹೆಣ್ಣನ್ನು ಹುಟ್ಟಲು ಬಿಡದ ಸಮಾಜ ಕೊನೆಗೆ ಅವಳನ್ನು ಖರೀದಿಸುವ ಹಂತಕ್ಕೆ ಬಂದಾಗ, ಅದು ಸಾಧಿಸಿರುವುದು ಏನು ಎಂಬ ಪ್ರಶ್ನೆಯನ್ನು ಸಿನಿಮಾ ನಮ್ಮ ಮುಂದಿಡುತ್ತದೆ.

ಕಲ್ಕಿಯ ಬದುಕಿನಲ್ಲಿ ತಂದೆ ಅವಳನ್ನು ಮಾರುತ್ತಾನೆ; ರಾಮಚರಣ್ ಮತ್ತು ಸಹೋದರರು ಅವಳ ದೇಹದ ಮೇಲೆ ಹಕ್ಕು ಸಾಧಿಸುತ್ತಾರೆ. ವಾರದ ಏಳು ದಿನಗಳನ್ನು ಪುರುಷರೇ ಹಂಚಿಕೊಳ್ಳುತ್ತಾರೆ. ಮದುವೆ ಇಲ್ಲಿ ಸಂಬಂಧವಾಗಿರದೆ, ಮಹಿಳೆಯ ದೇಹದ ಮೇಲಿನ ಸ್ವಾಮ್ಯದ ವ್ಯವಸ್ಥೆಯಾಗಿ ಬದಲಾಗುತ್ತದೆ. ಹೆಣ್ಣಿನ ಒಪ್ಪಿಗೆಯಿಲ್ಲದೆ ಅವಳ ದೇಹದ ಮೇಲೆ ಕುಟುಂಬಕ್ಕೂ ಸಮಾಜಕ್ಕೂ ಹಕ್ಕು ಇದೆಯೇ? ಮದುವೆಯಾದ ಕ್ಷಣದಿಂದ ಮಹಿಳೆಯ ವೈಯಕ್ತಿಕ ಸ್ವಾತಂತ್ರ್ಯ ಮುಗಿಯುತ್ತದೆಯೇ?

ಚಿತ್ರದಲ್ಲಿನ ಬಹುಪತಿತ್ವ ದ್ರೌಪದಿಯನ್ನು ನೆನಪಿಸುತ್ತದೆ. ಆದರೆ ಪೌರಾಣಿಕ ಕಥೆಯಲ್ಲಿ ಸಾಂಸ್ಕೃತಿಕ-ಕಥನಾತ್ಮಕ ಸಂದರ್ಭವಿದೆ. ಕಲ್ಕಿಯಲ್ಲಿ ಆಯ್ಕೆಯೇ ಇಲ್ಲ; ಅವಳನ್ನು ಖರೀದಿಸಿ ಹಂಚಿಕೊಳ್ಳಲಾಗುತ್ತದೆ. ಸಿನಿಮಾ ಬಹುಪತಿತ್ವವನ್ನು ಪ್ರಶ್ನಿಸುವುದಕ್ಕಿಂತ ಮಹಿಳೆಯ ಒಪ್ಪಿಗೆ ಮತ್ತು ತನ್ನ ಬದುಕಿನ ಬಗ್ಗೆ ನಿರ್ಧರಿಸುವ ಹಕ್ಕು ಎಷ್ಟು ಮುಖ್ಯ ಎಂಬುದನ್ನು ಮುಂದಿಡುತ್ತದೆ.

pht 10

ಕಾಲಕ್ರಮೇಣ ಇದೇ ಮನೋಭಾವ ಇಡೀ ಹಳ್ಳಿಯನ್ನು ಯುವತಿಯರೇ ಇಲ್ಲದ ಸಮಾಜವನ್ನಾಗಿ ಮಾರ್ಪಡಿಸುತ್ತದೆ. ಮದುವೆಯಾಗಲು ಮಹಿಳೆಯರಿಲ್ಲ. ಹೆಣ್ಣಿನ ದೇಹ ಅಪರೂಪದ ವಸ್ತುವಾಗಿ, ಬೇಡಿಕೆಯ ಸರಕಾಗಿ ಕಾಣಿಸಿಕೊಳ್ಳುತ್ತದೆ. ಹೆಣ್ಣನ್ನು ನಿರಾಕರಿಸುತ್ತಾ ಬಂದ ಸಮಾಜವೇ ಕೊನೆಗೆ ಹೆಣ್ಣಿಗಾಗಿ ಹಾತೊರೆಯುವ ಸ್ಥಿತಿಗೆ ಬರುತ್ತದೆ.

ಆದರೆ ಇಲ್ಲಿಯೇ ಸಿನಿಮಾವನ್ನೂ ಪ್ರಶ್ನಿಸಬೇಕು. ಕಲ್ಕಿಯ ಮೇಲಿನ ದೌರ್ಜನ್ಯವನ್ನು ಅದು ತೀವ್ರವಾಗಿ ತೋರಿಸುತ್ತದೆ; ಆದರೆ ಅವಳ ಸ್ವಯಂ ನಿರ್ಧಾರದ ಜಾಗಕ್ಕೆ ಎಷ್ಟು ಅವಕಾಶ ನೀಡುತ್ತದೆ? ಕಲ್ಕಿ ಬಹುತೇಕ ಮೌನ, ದೇಹಭಾಷೆ ಮತ್ತು ಸಣ್ಣ ಪ್ರತಿರೋಧಗಳಿಗೆ ಸೀಮಿತ. ಸಿನಿಮಾ ಅವಳನ್ನು ವಸ್ತುವಾಗಿ ನೋಡುವುದನ್ನು ಖಂಡಿಸುತ್ತದೆ, ಆದರೆ ಅವಳನ್ನು ಪೂರ್ಣ ವ್ಯಕ್ತಿಯಾಗಿ—ಆಂತರಿಕ ಜಗತ್ತು, ರೋಷ, ತಂತ್ರ, ಆಸೆಗಳೊಂದಿಗೆ—ನಿರ್ಮಿಸುವಲ್ಲಿ ವಿಫಲವಾಗುತ್ತದೆ. ತುಲಿಪ್ ಜೋಶಿಯ ಅಭಿನಯ ಈ ಸೀಮಿತ ಜಾಗದಲ್ಲಿಯೇ ಭಯ, ನೋವು ಮತ್ತು ಪ್ರತಿರೋಧವನ್ನು ಹೊರತರುತ್ತದೆ. ಆದರೆ ಮೌನವೇ ಮಾತನಾಡುತ್ತದೆ ಎಂಬುದು ಸಾಕಾಗುವುದಿಲ್ಲ; ಅವಳ ಧ್ವನಿಯನ್ನು ಕೇಳಲು ಸಮಾಜ ಸಿದ್ಧವಿಲ್ಲ ಎಂಬುದನ್ನು ತೋರಿಸುವುದಕ್ಕಿಂತ, ಅವಳೇ ನಿರ್ಧರಿಸುವ ವ್ಯಕ್ತಿಯಾಗಿ ಕಾಣಿಸುವುದು ಅಗತ್ಯವಿತ್ತು.

ಕಲ್ಕಿಯ ಬದುಕಿನಲ್ಲಿ ಅವಳನ್ನು ಮಾರುವವರು, ಖರೀದಿಸುವವರು, ಪ್ರೀತಿಸುವ ಸೂರಜ್, ರಕ್ಷಿಸಲು ಪ್ರಯತ್ನಿಸುವ ರಘು—ಬಹುತೇಕ ಎಲ್ಲ ನಿರ್ಣಾಯಕ ಪಾತ್ರಗಳೂ ಪುರುಷರು. ಸೂರಜ್ ಅವಳನ್ನು ವ್ಯಕ್ತಿಯಾಗಿ ಕಾಣಲು ಪ್ರಯತ್ನಿಸುತ್ತಾನೆ. ಆದರೆ ಅವನ ಹತ್ಯೆ ಈ ಸಂಬಂಧಕ್ಕೂ ಅವಕಾಶ ನೀಡುವುದಿಲ್ಲ. ಮಹಿಳೆಯ ಮುಕ್ತಿಗೆ ಮತ್ತೆ ಒಬ್ಬ ‘ಒಳ್ಳೆಯ ಪುರುಷ’ನೇ ಅಗತ್ಯವೇ? ಸೂರಜ್ ಮತ್ತು ರಘು ಸಹಾನುಭೂತಿಯ ಪುರುಷರಾಗಿ ಕಾಣಿಸಿಕೊಂಡರೂ, ಕಲ್ಕಿಯ ಸ್ವಂತ ಧ್ವನಿಗಿಂತ ಅವರ ಪಾತ್ರಗಳು ಹೆಚ್ಚು ನಿರ್ಣಾಯಕವಾಗುತ್ತವೆ. ಕಲ್ಕಿಯ ಮುಕ್ತಿ ಪುರುಷರ ಕ್ರೌರ್ಯದಿಂದ ಪಾರಾಗುವುದಷ್ಟೇ ಅಲ್ಲ; ತನ್ನ ಬದುಕು, ದೇಹ ಮತ್ತು ಭವಿಷ್ಯದ ಬಗ್ಗೆ ತಾನೇ ನಿರ್ಧರಿಸುವ ವ್ಯಕ್ತಿಯಾಗಿ ಅವಳನ್ನು ಕಾಣುವುದೂ ಆಗಬೇಕಿತ್ತು. ಈ ಆಯಾಮವನ್ನು ಸಿನಿಮಾ ವಿಸ್ತರಿಸಲಿಲ್ಲ.

ರಘುವಿನ ಪಾತ್ರದ ಮೂಲಕ ಸಿನಿಮಾ ಲಿಂಗಕ್ಕೆ ಜಾತಿಯ ಆಯಾಮವನ್ನು ಸೇರಿಸುತ್ತದೆ. ಕೆಳಜಾತಿಯ ರಘು ಕಲ್ಕಿಗೆ ತಪ್ಪಿಸಿಕೊಳ್ಳಲು ಸಹಾಯ ಮಾಡಲು ಪ್ರಯತ್ನಿಸುತ್ತಾನೆ. ಅವನ ಹತ್ಯೆಯ ನಂತರದ ಸಾಮೂಹಿಕ ಹಿಂಸೆ, ಕಲ್ಕಿಯ ದೇಹವನ್ನು ಜಾತಿ-ಪುರುಷತ್ವ-ಅಧಿಕಾರಗಳ ಸಂಘರ್ಷದ ಯುದ್ಧಭೂಮಿಯನ್ನಾಗಿ ಮಾಡುತ್ತದೆ. ಆದರೆ ಸಿನಿಮಾ ಈ ಸಂಘರ್ಷವನ್ನು ಕೆಳಜಾತಿ ಪುರುಷರು vs ಮೇಲ್ಜಾತಿ ಪುರುಷರು ಎಂದು ಸರಳೀಕರಿಸುತ್ತದೆಯೇ, ಅಥವಾ ಜಾತಿ ಮತ್ತು ಪುರುಷತ್ವದ ನಡುವಿನ ಒಳಸಂಬಂಧವನ್ನು ಹೆಚ್ಚು ಸಂಕೀರ್ಣವಾಗಿ ತೋರಿಸುತ್ತದೆಯೇ? ರಘುವಿನ ಸಾವು ಮತ್ತು ನಂತರದ ಬಲಾತ್ಕಾರದಲ್ಲಿ ಮಹಿಳೆಯ ದೇಹವು ಎರಡೂ ಬದಿಗಳ ಅಧಿಕಾರದ ಆಯುಧವಾಗುತ್ತದೆ—ಇದು ಜಾತಿ ಮತ್ತು ಲಿಂಗದ ನಡುವಿನ ಒಳಸಂಬಂಧವನ್ನು ಸೂಚಿಸುತ್ತದೆ, ಆದರೆ ಅದನ್ನು ಇನ್ನಷ್ಟು ಆಳವಾಗಿ ವಿಶ್ಲೇಷಿಸುವುದಿಲ್ಲ.

ಮನೀಶ್ ಝಾ ಭವಿಷ್ಯದ ಹೆಣ್ಣಿಲ್ಲದ ಹಳ್ಳಿಯನ್ನು ಬಳಸಿ ವರ್ತಮಾನದ ಲಿಂಗ ಅಸಮಾನತೆಯನ್ನು ಡಿಸ್ಟೋಪಿಯನ್ ರೂಪಕವಾಗಿ ಕಟ್ಟಿಕೊಟ್ಟಿದ್ದಾರೆ. ಚಿತ್ರದ ವಾತಾವರಣ ಅಸ್ವಸ್ಥಗೊಳಿಸುತ್ತದೆ. ಹಿಂಸೆಗೆ ಮೆರುಗು ನೀಡದೆ, ಪ್ರೇಕ್ಷಕರನ್ನು ಅಸಹಜ ಸ್ಥಿತಿಗೆ ತಳ್ಳುವ ರೀತಿಯಲ್ಲಿ ದೃಶ್ಯಗಳನ್ನು ಕಟ್ಟಲಾಗಿದೆ. ಆದರೆ ಮಹಿಳೆಯ ಮೇಲಿನ ಹಿಂಸೆಯನ್ನು ಖಂಡಿಸುವ ಸಿನಿಮಾ, ಅದೇ ಹಿಂಸೆಯ ದೃಶ್ಯಾತ್ಮಕ ಆಘಾತವನ್ನೇ ಸಂದೇಶದ ಪ್ರಮುಖ ಸಾಧನವನ್ನಾಗಿ ಬಳಸುತ್ತಿದೆಯೇ? ಕಲ್ಕಿಯನ್ನು ಕಟ್ಟಿ ಇಡುವುದು, ಸಾಮೂಹಿಕ ಬಲಾತ್ಕಾರದ ಸೂಚನೆ, ದೇಹದ ಮೇಲಿನ ನಿರಂತರ ನಿಯಂತ್ರಣ—ಈ ದೃಶ್ಯಗಳಲ್ಲಿ ಚಿತ್ರ ನೋವನ್ನು ತೋರಿಸುವುದಕ್ಕಿಂತ ಅದನ್ನು ಅನುಭವವಾಗುವಂತೆ ಮಾಡುವ ಗಡಿಗೆ ಹತ್ತಿರ ಹೋಗುತ್ತದೆ.

ಪುರುಷ ನಿರ್ದೇಶಕರಾಗಿ ಝಾ ಫೆಮಿನಿಸ್ಟ್ ಸಹಾನುಭೂತಿಯನ್ನು ತೋರಿಸುತ್ತಾರೆ. ಆದರೆ ಸಿನಿಮಾ ಪುರುಷ-ಕೇಂದ್ರಿತ ನೋಟದಿಂದಲೇ ಬರುತ್ತದೆಯೇ? ಕಲ್ಕಿಯ ಆಂತರಿಕ ಜಗತ್ತು ಕಡಿಮೆ, ಪುರುಷರ ನಡುವಿನ ಸಂಘರ್ಷ ಹೆಚ್ಚು. ಇದು “ಒಳ್ಳೆಯ ಪುರುಷ”ನ ಅಗತ್ಯದ ಪ್ರಶ್ನೆಯನ್ನು ಇನ್ನಷ್ಟು ತೀವ್ರಗೊಳಿಸುತ್ತದೆ.

ತುಲಿಪ್ ಜೋಶಿಯ ಕಲ್ಕಿ ಪಾತ್ರ ಚಿತ್ರದ ಪ್ರಮುಖ ಶಕ್ತಿ. ಹೆಚ್ಚು ಸಂಭಾಷಣೆ ಇಲ್ಲದಿದ್ದರೂ ಕಣ್ಣು, ಮುಖಭಾವ ಮತ್ತು ದೇಹಭಾಷೆಯ ಮೂಲಕ ಭಯ, ನೋವು, ಅಸಹಾಯಕತೆ ಮತ್ತು ಸಣ್ಣ ಪ್ರತಿರೋಧಗಳನ್ನು ವ್ಯಕ್ತಪಡಿಸುತ್ತಾರೆ. ಅವಳ ಸುತ್ತಲಿನ ಪುರುಷರು ಅವಳ ದೇಹದ ಬಗ್ಗೆ ನಿರಂತರ ನಿರ್ಧಾರ ತೆಗೆದುಕೊಳ್ಳುತ್ತಿರುವಾಗ, ಅವಳ ಮೌನ ಮತ್ತು ಅವರ ಮಾತುಗಳ ನಡುವಿನ ವ್ಯತ್ಯಾಸ ಗಮನಾರ್ಹ.

ಸುಶಾಂತ್ ಸಿಂಗ್ ಸೇರಿದಂತೆ ಇತರ ನಟರು ಪುರುಷ ಸಮಾಜದ ವಿಭಿನ್ನ ಮುಖಗಳನ್ನು—ಅಧಿಕಾರ, ಅಸೂಯೆ, ಹತಾಶೆ, ಸ್ವಾಮ್ಯ ಮತ್ತು ಕ್ರೌರ್ಯ—ವಿಶ್ವಾಸಾರ್ಹವಾಗಿ ಕಟ್ಟಿಕೊಡುತ್ತಾರೆ. ರಾಮಚರಣ್ ಪಾತ್ರದಲ್ಲಿ ತಂದೆ, ಕುಟುಂಬದ ಮುಖ್ಯಸ್ಥ ಮತ್ತು ಮಹಿಳೆಯ ದೇಹದ ಮೇಲೆ ಹಕ್ಕು ಸಾಧಿಸುವ ಪುರುಷ ಎಂಬ ಹಲವು ಅಧಿಕಾರಗಳು ಒಂದೇ ವ್ಯಕ್ತಿಯಲ್ಲಿ ಸೇರುತ್ತವೆ.

Matrubhoomi 08

ಚಿತ್ರದ ಭವಿಷ್ಯದ ಹಳ್ಳಿ ಕಲ್ಪಿತವಾದರೂ ಅದರ ಮೂಲ ಪ್ರಶ್ನೆ ಭಾರತೀಯ ವಾಸ್ತವದಿಂದ ದೂರವಿಲ್ಲ. 2000–2019ರ ನಡುವೆ ಮಾತ್ರ ಸುಮಾರು 90 ಲಕ್ಷ ಹೆಣ್ಣುಮಕ್ಕಳು “ಕಾಣೆಯಾಗಿವೆ”. ಹರಿಯಾಣ, ಪಂಜಾಬ್, ರಾಜಸ್ಥಾನ, ಉತ್ತರಪ್ರದೇಶದಂತಹ ರಾಜ್ಯಗಳಲ್ಲಿ ಜನನ ಸಮಯದ ಲಿಂಗಾನುಪಾತ ಇನ್ನೂ ನೈಸರ್ಗಿಕ ಮಟ್ಟಕ್ಕಿಂತ ಕಡಿಮೆ. ಹೆಣ್ಣು ಭ್ರೂಣಹತ್ಯೆ ಕಾನೂನುಬಾಹಿರವಾದರೂ ಕೆಲವು ಪ್ರದೇಶಗಳಲ್ಲಿ ಮುಂದುವರಿದಿದೆ. ಈ ಕೊರತೆಯ ಪರಿಣಾಮವಾಗಿ ಉತ್ತರ ಭಾರತದ ಕೆಲವು ಹಳ್ಳಿಗಳಲ್ಲಿ ಬ್ರೈಡ್-ಬಯಿಂಗ್, ಬಲವಂತದ ಬಹುಪತಿತ್ವ ಮತ್ತು ಮಹಿಳೆಯರ ಸಾಗಾಣಿಕೆ ಈಗಾಗಲೇ ಕಾಣಿಸಿಕೊಂಡಿವೆ. ಹೀಗಾಗಿ ಚಿತ್ರದ ಹಳ್ಳಿ ಭಾರತದ ನೇರ ಚಿತ್ರಣವಲ್ಲ; ಆದರೆ ಅದು ತೋರಿಸುವ ಪ್ರಕ್ರಿಯೆ—ಹೆಣ್ಣನ್ನು ನಿರಾಕರಿಸುತ್ತಾ ಬಂದ ಸಮಾಜ ಕೊನೆಗೆ ಅವಳನ್ನು ಸರಕಾಗಿ ಪರಿಗಣಿಸುವ ಹಂತ—ಈಗಾಗಲೇ ನಡೆಯುತ್ತಿರುವ ವಾಸ್ತವದ ವಿಸ್ತರಣೆಯೇ ಆಗಿದೆ. ಡಿಸ್ಟೋಪಿಯಾ ಕೇವಲ ಎಚ್ಚರಿಕೆಯಲ್ಲ; ಅದು ವರ್ತಮಾನದ ತಾರ್ಕಿಕ ಮುಂದುವರಿಕೆ.

ಚಿತ್ರದ ಅಂತ್ಯದತ್ತ ಕಲ್ಕಿ ಗರ್ಭಿಣಿಯಾಗುತ್ತಾಳೆ. ಮಗುವಿನ ತಂದೆ ಯಾರು ಎಂಬ ಪ್ರಶ್ನೆ ಪುರುಷರನ್ನೇ ಪರಸ್ಪರ ಸಂಘರ್ಷಕ್ಕೆ ತಳ್ಳುತ್ತದೆ. ಹೆಣ್ಣಿನ ದೇಹದ ಮೇಲಿನ ಸ್ವಾಮ್ಯದಿಂದ ಆರಂಭವಾದ ಹೋರಾಟ, ಕೊನೆಗೆ ಪುರುಷರ ನಡುವಿನ ವಿನಾಶಕ್ಕೆ ಕಾರಣವಾಗುತ್ತದೆ.

ಮಾತೃಭೂಮಿಯ ಪ್ರಶ್ನೆ ಕೇವಲ “ಹೆಣ್ಣಿಲ್ಲದೆ ಪುರುಷರಿಗೆ ಬದುಕಲು ಸಾಧ್ಯವೇ?” ಎಂಬುದಲ್ಲ. ಹೆಣ್ಣನ್ನು ಮನುಷ್ಯಳಾಗಿ ಗೌರವಿಸದ ಸಮಾಜ ತನ್ನದೇ ಸಾಮಾಜಿಕ ವ್ಯವಸ್ಥೆಯನ್ನು ಹೇಗೆ ನಾಶಪಡಿಸಿಕೊಳ್ಳುತ್ತದೆ ಎಂಬುದೇ ಚಿತ್ರದ ಆಳವಾದ ಪ್ರಶ್ನೆ.

ಇದನ್ನೂ ಓದಿ ಡಿಜಿಟಲ್ ಹಿಂಸೆ : ಮಹಿಳೆಯರ ಧ್ವನಿಯನ್ನು ದಮನಗೊಳಿಸುವ ರಾಜಕಾರಣ

ಅವಳ ಕಣ್ಣೋಟ | ‌ʼಅಸ್ತಿತ್ವʼ- ಹೆಣ್ಣಿನ ಗುರುತು, ಸ್ವಾತಂತ್ರ್ಯ ಮತ್ತು ಪಿತೃಸತ್ತೆಯ ಪ್ರಶ್ನೆಗಳು

ಆರಂಭದಲ್ಲಿ ಒಂದು ಹೆಣ್ಣು ಮಗು ಕೊಲ್ಲಲ್ಪಡುತ್ತದೆ. ಕೊನೆಯಲ್ಲಿ ಮತ್ತೊಂದು ಹೆಣ್ಣು ಮಗು ಹುಟ್ಟುತ್ತದೆ. ಈ ಎರಡು ದೃಶ್ಯಗಳ ನಡುವಿನ ಪ್ರಯಾಣವೇ ಮಾತೃಭೂಮಿಯ ಅರ್ಥ. ಹೆಣ್ಣನ್ನು ನಿರಾಕರಿಸಿದ ಸಮಾಜ ಕೊನೆಗೆ ಹೆಣ್ಣಿಗಾಗಿ ಹಾತೊರೆಯುತ್ತದೆ. ಆದರೆ ಅವಳನ್ನು ಮನುಷ್ಯಳಾಗಿ ಬದುಕಲು ಬಿಡುವಷ್ಟು ಬದಲಾಗಿದೆಯೇ ಎಂಬ ಪ್ರಶ್ನೆಗೆ ಸಿನಿಮಾ ಸ್ಪಷ್ಟ ಉತ್ತರ ನೀಡುವುದಿಲ್ಲ.

ಹೆಣ್ಣನ್ನು ಉಳಿಸುವುದಷ್ಟೇ ಸಾಕೇ? ಅವಳಿಗೆ ತನ್ನ ದೇಹ, ಬದುಕು, ಬಯಕೆ ಮತ್ತು ಭವಿಷ್ಯದ ಬಗ್ಗೆ ತಾನೇ ನಿರ್ಧರಿಸುವ ಹಕ್ಕನ್ನು ನೀಡದೆ ಉಳಿಸುವುದಕ್ಕೆ ಅರ್ಥವೇನು?

ಮಾತೃಭೂಮಿ ಎರಡು ದಶಕಗಳ ಹಿಂದಿನ ಸಿನಿಮಾ. ಆದರೆ ಅದರ ಭಯಾನಕ ಭವಿಷ್ಯಕ್ಕಿಂತ ಅದು ನಮ್ಮ ವರ್ತಮಾನದ ಬಗ್ಗೆ ಕೇಳುವ ಪ್ರಶ್ನೆಗಳೇ ಹೆಚ್ಚು ಅಸ್ವಸ್ಥಗೊಳಿಸುತ್ತವೆ. ಹೆಣ್ಣನ್ನು ಹುಟ್ಟಲು ಬಿಡದ ಸಮಾಜ ಕೊನೆಗೆ ಅವಳನ್ನು ಹುಡುಕಬೇಕಾಗುತ್ತದೆ. ಆದರೆ ಅವಳನ್ನು ಹುಡುಕುವ ಮೊದಲು, ಅವಳನ್ನು ಮನುಷ್ಯಳಾಗಿ ಕಾಣಲು ಕಲಿಯಬೇಕಾಗುತ್ತದೆ.

Rukmini
ರುಕ್ಮಿಣಿ ನಾಗಣ್ಣವರ
+ posts

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರಣಗಟ್ಟಿ. ಪ್ರಸ್ತುತ ಬೆಂಗಳೂರಿನ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ರುಕ್ಮಿಣಿ ನಾಗಣ್ಣವರ
ರುಕ್ಮಿಣಿ ನಾಗಣ್ಣವರ
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರಣಗಟ್ಟಿ. ಪ್ರಸ್ತುತ ಬೆಂಗಳೂರಿನ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುತ್ತಿಗೆಗಳು ಸುತ್ತುವರೆದಿರುವ ಗ್ಯಾನೇಶ್ ರಾಜೀನಾಮೆ ಸನ್ನಿಹಿತವೇ?

ದಿಲ್ಲಿ- ಮುಂಬಯಿಯಲ್ಲಿ‌ ಯುವಜನರು ಮತ್ತು  ಪ್ರತಿಪಕ್ಷಗಳ ಪ್ರತಿಭಟನೆಗಳು ಮುಂದುವರೆದಿವೆ. ಕಾಂಗ್ರೆಸ್ ಮತ್ತಿತರೆ ...

ವಿಜಯಪುರ | ಬರಪೀಡಿತ ಪ್ರದೇಶಗಳಿಗೆ ಡಿಸಿಎಂ ಪರಮೇಶ್ವರ್‌ ಭೇಟಿ

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರು ಅ.8 ಹಾಗೂ 9ರಂದು ವಿಜಯಪುರ ಮತ್ತು...

ಮಲ್ಲೇಶ್ವರಂನಲ್ಲಿ ಫಾರ್ಮ್-7‌ ದುರ್ಬಳಕೆ ಆರೋಪ; ʼಈ ದಿನʼ ವರದಿ ಆಧರಿಸಿ ಕಾಂಗ್ರೆಸ್ ದೂರು

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

ಕಮಲನಗರ | ಅರ್ಹ ವೈದ್ಯಕೀಯ ಪದವಿ ಇಲ್ಲದೆ ವೈದ್ಯ ವೃತ್ತಿ: ಕ್ಲಿನಿಕ್ ಸೀಜ್

ಕಮಲನಗರ ತಾಲ್ಲೂಕಿನ ಚಾಂದೋರಿ ಗ್ರಾಮದಲ್ಲಿ ಯಾವುದೇ ವೈದ್ಯಕೀಯ ಪದವಿ ಇಲ್ಲದೆ ಅಕ್ರಮವಾಗಿ...