ಶಿರಸಿ: ಎಐಸಿಸಿ ಅಧ್ಯಕ್ಷ ಹಾಗೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಲ್ದ್ವಾನಿಯಲ್ಲಿ ನಡೆದಿರುವ ಅವಮಾನಕರ ಘಟನೆಗೆ ಸಂಬಂಧಿಸಿದಂತೆ ಭೀಮ್ ಘರ್ಜನೆ ಸಂಘಟನೆಯ ಜಿಲ್ಲಾಧ್ಯಕ್ಷ ಅರ್ಜುನ್ ಮಿಂಟಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಬಂದು ಎಂಟು ದಶಕಗಳು ಕಳೆದಿದ್ದರೂ ದಲಿತರು ಹಾಗೂ ಶೋಷಿತ ಸಮುದಾಯಗಳಿಗೆ ಸಂಪೂರ್ಣ ಸಮಾನತೆ ಮತ್ತು ಗೌರವ ದೊರೆತಿದೆಯೇ ಎಂಬ ಪ್ರಶ್ನೆಯನ್ನು ಈ ಘಟನೆ ಮತ್ತೆ ಮುನ್ನೆಲೆಗೆ ತಂದಿದೆ ಎಂದು ಅವರು ಹೇಳಿದ್ದಾರೆ. ವಿರೋಧ ಪಕ್ಷದ ನಾಯಕರೊಬ್ಬರು ಭಾಷಣ ಮಾಡಿದ ವೇದಿಕೆಯನ್ನು ಬಳಿಕ ‘ಶುದ್ಧೀಕರಣ’ದ ಹೆಸರಿನಲ್ಲಿ ಹವನ ನಡೆಸಿ ಶುದ್ಧೀಕರಿಸಲಾಗಿದೆ ಎಂಬ ವರದಿಗಳು ಅತ್ಯಂತ ಖಂಡನೀಯವಾಗಿದ್ದು, ಇಂತಹ ನಡೆ ಸಂವಿಧಾನದ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಅರ್ಜುನ್ ಮಿಂಟಿ ಆರೋಪಿಸಿದ್ದಾರೆ.
“ಯಾರಿಗೆ ಬಂತು? ಎಲ್ಲಿಗೆ ಬಂತು 80ರ ಸ್ವಾತಂತ್ರ್ಯ? ಜಾತಿ ಆಧಾರಿತ ತಾರತಮ್ಯ ಮತ್ತು ಅಸ್ಪೃಶ್ಯತೆಯಂತಹ ಮನೋಭಾವಗಳು ಇನ್ನೂ ಸಮಾಜದಲ್ಲಿ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ. ಇಂತಹ ಘಟನೆಗಳು ಮಾನವೀಯ ಮೌಲ್ಯಗಳಿಗೆ ಧಕ್ಕೆ ತರುತ್ತವೆ,” ಎಂದು ಅವರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿರಸಿ | ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ರಮ ನಡೆದ ಸ್ಥಳದ ‘ಶುದ್ಧೀಕರಣ’ ಖಂಡನೀಯ: ಪ್ರಸನ್ನ ಶೆಟ್ಟಿ
ಡಾ. ಬಿ.ಆರ್. ಅಂಬೇಡ್ಕರ್ ಅವರು ಜಾತಿ ವ್ಯವಸ್ಥೆ ಹಾಗೂ ಅಸ್ಪೃಶ್ಯತೆಯ ವಿರುದ್ಧ ನಡೆಸಿದ ಹೋರಾಟವನ್ನು ಸ್ಮರಿಸಿದ ಅವರು, ಸಮಾಜದಲ್ಲಿ ಸಮಾನತೆ ಮತ್ತು ಮಾನವ ಗೌರವವನ್ನು ಸ್ಥಾಪಿಸುವುದು ಸಂವಿಧಾನದ ಮೂಲ ಆಶಯವಾಗಿದೆ ಎಂದು ಹೇಳಿದ್ದಾರೆ. ಹಿರಿಯ ದಲಿತ ನಾಯಕನೊಬ್ಬರಿಗೆ ಸಂಬಂಧಿಸಿದಂತೆ ಇಂತಹ ಘಟನೆ ನಡೆದಿರುವುದು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾದ ವಿಷಯವಾಗಿದ್ದು, ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಅರ್ಜುನ್ ಮಿಂಟಿ ಆಗ್ರಹಿಸಿದ್ದಾರೆ.
“ಜಾತಿ ಆಧಾರಿತ ಅವಮಾನ ಮತ್ತು ಅಸ್ಪೃಶ್ಯತೆಯಂತಹ ಆಚರಣೆಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ದಲಿತ ಸಮುದಾಯದಲ್ಲಿ ತೀವ್ರ ಆಕ್ರೋಶ ಉಂಟಾಗುವ ಸಾಧ್ಯತೆ ಇದೆ,” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಘಟನೆಯ ಸಂಪೂರ್ಣ ಸತ್ಯಾಸತ್ಯತೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ ವಾಸ್ತವಾಂಶಗಳನ್ನು ಬಹಿರಂಗಪಡಿಸಬೇಕು ಹಾಗೂ ಕಾನೂನಿನ ಪ್ರಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.




