- ‘ಪಕ್ಷದಲ್ಲಿ ಮೂಲ ಮತ್ತು ವಲಸಿಗ ಚಿಂತನೆ ಜಾಸ್ತಿಯಾಗುತ್ತಿದೆ’
- ‘ಕಾಂಗ್ರೆಸ್‌ಗೆ ಹೋಗುವುದಾಗಿ ಪ್ರೊಪಗಾಂಡ ಸಿದ್ದಪಡಿಸಿದ್ದಾರೆ’
ಬಿಜೆಪಿಯಲ್ಲಿ ನೆಮ್ಮದಿಯಿಂದ ಕೆಲಸ ಮಾಡಲು ಕೆಲವರು ಬಿಟ್ಟಿಲ್ಲ. ಅಂತವರ ಬಗ್ಗೆ ಕ್ರಮಕೈಗೊಳ್ಳಲು ಪಕ್ಷಕ್ಕೆ ತಿಳಿಸಿದ್ದೆ. ಆದರೆ, ಪಕ್ಷದಲ್ಲಿ ಮೂಲ ಮತ್ತು ವಲಸಿಗ ಚಿಂತನೆ ಜಾಸ್ತಿಯಾಗುತ್ತಿದೆ. ಇದು ಅವೈಡ್ ಆಗಬೇಕು ಎಂದು ಎಲ್ಲ ನಾಯಕರಿಗೂ ಹೇಳಿರುವೆ ಎಂದು ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್ ತಿಳಿಸಿದರು.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ನಾನು ಕಾಂಗ್ರೆಸ್‌ಗೆ ಹೋಗುತ್ತೇನೆ ಎಂದು ಕೆಲವರು ಪ್ರೊಪಗಾಂಡ ಸಿದ್ದಪಡಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲೂ ಈ ವಿಚಾರ ಹರಿಬಿಟ್ಟರು. ಈ ಬಗ್ಗೆ ಯಡಿಯೂರಪ್ಪ, ಸಿಟಿ ರವಿ ಹಾಗೂ ಬೊಮ್ಮಾಯಿ ಅವರ ಗಮನಕ್ಕೆ ತಂದಿರುವೆ” ಎಂದರು.
“ಪಕ್ಷದಲ್ಲಿ ಒಳ್ಳೆಯ ವಾತಾವರಣ ಸೃಷ್ಟಿಯಾಗಬೇಕು ಎಂದು ಎಲ್ಲರಿಗೂ ಮನವಿ ಮಾಡಿರುವೆ. ಯಡಿಯೂರಪ್ಪ ಅವರು ನನ್ನನ್ನು ಬಿಜೆಪಿಗೆ ಕರೆ ತಂದಿದ್ದಾರೆ. ಅವರನ್ನು ಮೀರಿ ಯಾವ ಕೆಲಸವನ್ನು ಮಾಡಲ್ಲ. ಭೇಟಿಯಾಗಲು ತಿಳಿಸಿದ್ದಾರೆ. ಇಂದು ಯಡಿಯೂರಪ್ಪ ಅವರನ್ನು ಭೇಟಿಯಾಗುತ್ತಿರುವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಆಪರೇಷನ್ ಹಸ್ತದ ಚರ್ಚೆ: ನಿರ್ಲಜ್ಜ ರಾಜಕೀಯ ನಡೆಗಳು
“ನಾನು ಪ್ರಬಲ ನಾಯಕ ಅಲ್ಲ. ಯಶವಂತಪುರಕ್ಕೆ ಸೀಮಿತವಾದ ನಾಯಕ. 20 ವರ್ಷ ಕಾಂಗ್ರೆಸ್‌ನಲ್ಲಿ ಇದ್ದೆ. ಈ ಕಾರಣಕ್ಕಾಗಿ ಮರಳಿ ಕಾಂಗ್ರೆಸ್‌ಗೆ ಹೋಗುತ್ತಾರೆ ಎಂದು ಕ್ರಿಯೇಟ್ ಮಾಡಲಾಗಿದೆ. ಯಾರೋ ಒಂದಿಬ್ಬರನ್ನು ಕ್ಷೇತ್ರದಲ್ಲಿ ವಜಾಮಾಡಿದರೆ ಸಾಲದು. ನೆಮ್ಮದಿಯಿಂದ ಕೆಲಸ ಮಾಡುವ ವಾತಾವರಣ ಸೃಷ್ಟಿಯಾಗಬೇಕು” ಎಂದರು.
ಸಿಎಂ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿ, “ನಮ್ಮ ಕ್ಷೇತ್ರದ ಸಮಸ್ಯೆಗಳನ್ನು ಸಿಎಂ ಗಮನಕ್ಕೆ ತಂದಿದ್ದೆ. ನಿನ್ನೆ ಕಾಲ್ ಮಾಡಿ ನನ್ನನ್ನು ಕರೆಯಿಸಿಕೊಂಡು ವಿಚಾರಿಸಿ, ಮೂರು ಸಮಸ್ಯೆಗಳಿಗೆ ಸ್ಪಂದಿಸುವೆ ಎಂದಿದ್ದಾರೆ. ನಮ್ಮ ಮಧ್ಯೆ ರಾಜಕೀಯ ಮಾತುಗಳು ನಡೆದಿಲ್ಲ” ಎಂದರು.