- ‘ವಿದ್ಯಾರ್ಥಿ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ’
- ‘ಕಾನೂನುಬಾಹಿರವಾಗಿ ನಡೆದುಕೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ’
ಡ್ರಗ್ಸ್ ಮುಕ್ತ ಮಂಗಳೂರು ಮಾಡಲು ಮಂಗಳೂರು ಪೊಲೀಸರಿಗೆ ಆಗಸ್ಟ್ 15ರ ಗಡುವು ನೀಡಲಾಗಿತ್ತು. ಈ ನಿಟ್ಟಿನಲ್ಲಿ ಮಂಗಳೂರು ಪೊಲೀಸರು ಹಲವಾರು ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ವಿದ್ಯಾರ್ಥಿ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಪೊಲೀಸರು ಹಮ್ಮಿಕೊಂಡಿದ್ದಾರೆ. ಡ್ರಗ್ಸ್ ದಂಧೆಯಲ್ಲಿ ಭಾಗಿಯಾದ ಹಲವಾರು ಜನರನ್ನು ಬಂಧಿಸಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ” ಎಂದು ಹೇಳಿದರು.
“ಡ್ರಗ್ಸ್ ಹಾವಳಿಯಿಂದ ವಿದ್ಯಾರ್ಥಿಗಳು, ಜನರು ವಿಮುಕ್ತರಾಗಬೇಕು ಎಂಬುದೇ ನಮ್ಮ ಉದ್ದೇಶ. ಜಿಲ್ಲೆಯಲ್ಲಿ ಅನೈತಿಕ ಪೊಲೀಸ್ ಗಿರಿ ಪ್ರಕರಣಗಳಿಗೆ ಕಡಿವಾಣ ಹಾಕುವಲ್ಲಿ ಕ್ರಮ ಕೈಗೊಳ್ಳಲಾಗಿದೆ. ಹಿಂಸಾತ್ಮಕ ರೀತಿಯಲ್ಲಿ ಕಾನೂನುಬಾಹಿರವಾಗಿ ನಡೆದುಕೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಆಗಿದೆ” ಎಂದರು.
“ಜಿಲ್ಲೆಯಲ್ಲಿ ಭಯ, ಭೀತಿಯ ವಾತಾವರಣ ಸೃಷ್ಟಿಯಾಗಲು ಬಿಡುವುದಿಲ್ಲ. ಕಾನೂನು ಪ್ರಕಾರವಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಯಾರಿಗೂ ಕಾನೂನು ಕೈಗೆತ್ತಿಕೊಳ್ಳಲು ಬಿಡುವುದಿಲ್ಲ. ಸುಳ್ಳು ಮಾಹಿತಿಗಳಿಂದ ಅಪಪ್ರಚಾರ ಮಾಡಿ, ವಾತಾವರಣ ಕೆಡಿಸುವವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇದು ಹುಸಿ ದೇಶಭಕ್ತರ ಮೋದಿ ಕಾಲ; ಗಾಂಧಿ ಅವಮಾನಿಸುವ ಕಾಲ
ಪಕ್ಷದ ನಾಯಕರೊಬ್ಬರು ಜಿಲ್ಲಾಧಿಕಾರಿಗೆ ಪತ್ರ ಬರೆದು ಅಧಿಕಾರಿ ವರ್ಗಾವಣೆಗೆ ಕೋರಿರುವ ಬಗ್ಗೆ ಪ್ರತಿಕ್ರಿಯಿಸಿ, “ಯಾರು ಬೇಕಾದರೂ ಜಿಲ್ಲಾಧಿಕಾರಿಯವರಿಗೆ ರೆಕಮಂಡೇಶನ್ ಲೆಟರ್ ಕೊಡಬಹುದು. ಯಾವುದು ಸರಿ, ಯಾವುದು ತಪ್ಪು ಎಂದು ನಿರ್ಧರಿಸಿ ಕೆಲಸ ಮಾಡುವುದು ಮುಖ್ಯ” ಎಂದರು.
ಪ್ರೋಟೋಕಾಲ್ ವಿಚಾರವಾಗಿ ಉತ್ತರಿಸಿ, “ಶಾಸಕರಲ್ಲಿ ಸೃಷ್ಟಿಯಾಗಿದ್ದ ಗೊಂದಲವನ್ನ ನಿವಾರಿಸಲಾಗಿದೆ. ಯಾರ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನಗಳಿಲ್ಲ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇವೆ. ಯಾವುದೇ ಕಾರ್ಯಕ್ರಮವಾದರೂ ಜಿಲ್ಲಾಮಟ್ಟದಲ್ಲಿರುವ ಸಮಿತಿ ನೀಡುವ ನಿರ್ದೇಶನದಂತೆ ಕಾರ್ಯಕ್ರಮ ನಡೆಯಬೇಕು. ಈ ಬಗ್ಗೆ ಜಿಲ್ಲಾಧಿಕಾರಿಯವರು ಈಗಾಗಲೇ ಸ್ಪಷ್ಟ ಸೂಚನೆ ನೀಡಿದ್ದಾರೆ” ಎಂದು ವಿವರಿಸಿದರು.