‘ಗುರುವಂದನೆ ಎನ್ನುವುದು ಕೇವಲ ಸತ್ಕಾರವಲ್ಲ, ಅದು ಜ್ಞಾನದೀಪ ಹಚ್ಚಿದ ಗುರುಗಳಿಗೆ ಸಲ್ಲಿಸುವ ಶ್ರದ್ಧಾ ನಮನ’ ಎಂಬ ಸಂದೇಶದೊಂದಿಗೆ ಮೈಸೂರು ನಗರದ ತಿಲಕ್ ನಗರದಲ್ಲಿರುವ ಹೆಲೆನ್ ಕೆಲ್ಲರ್ ಸರ್ಕಾರಿ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರ ಆವರಣದಲ್ಲಿ 2001ರಿಂದ 2026ರವರೆಗಿನ ಹಳೆಯ ವಿದ್ಯಾರ್ಥಿಗಳ ಬಳಗದ ವತಿಯಿಂದ ಆಯೋಜಿಸಿದ್ದ ‘ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ’ ಕಾರ್ಯಕ್ರಮ ಶನಿವಾರ ಸಡಗರ, ಸಂಭ್ರಮ ಮತ್ತು ಭಾವುಕತೆಯ ನಡುವೆ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ನಾಟಕಕಾರ್ತಿ ಹಾಗೂ ಪ್ರಾಧ್ಯಾಪಕರಾದ ಡಾ. ಸುಜಾತ ಅಕ್ಕಿ ಅವರು, “ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದೆ. ಸಾವಿತ್ರಿಬಾಯಿ ಫುಲೆ ಅವರು ಜ್ಯೋತಿರಾವ್ ಫುಲೆ ಅವರ ಬೆಂಬಲದೊಂದಿಗೆ ಅನುಭವಿಸಿದ ಹೋರಾಟ ಮತ್ತು ತ್ಯಾಗವೇ ಮಹಿಳಾ ಶಿಕ್ಷಣ ಕ್ರಾಂತಿಗೆ ಭದ್ರ ಅಡಿಗಲ್ಲಾಯಿತು,” ಎಂದು ಹೇಳಿದರು. ಮಹಿಳಾ ಶಿಕ್ಷಣದ ಇತಿಹಾಸವನ್ನು ಸ್ಮರಿಸಿದ ಅವರು, ವಿಶೇಷ ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ಸೇವೆಯ ಮಹತ್ವವನ್ನು ಒತ್ತಿಹೇಳಿದರು.
ಹಿರಿಯ ರಂಗಭೂಮಿ ಕಲಾವಿದೆ ಹಾಗೂ ವಿಶೇಷ ಮಕ್ಕಳ ಶಿಕ್ಷಕಿಯಾಗಿರುವ ಇಂದಿರಾ ನಾಯರ್ ಮಾತನಾಡಿ, “2001ರಲ್ಲಿ ಈ ತರಬೇತಿ ಕೇಂದ್ರ ಆರಂಭವಾದ ದಿನಗಳು ಇನ್ನೂ ಮನಸಿನಲ್ಲಿ ಹಸಿರಾಗಿವೆ. ಅಂದಿನ ಶಿಕ್ಷಕರ ಸಮರ್ಪಣೆ, ಶಿಸ್ತು ಮತ್ತು ಪರಿಶ್ರಮ ಇಂದಿನ ತಲೆಮಾರಿನ ಶಿಕ್ಷಕರಿಗೆ ಮಾದರಿಯಾಗಬೇಕು,” ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೈಸೂರು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರಾಘವೇಂದ್ರ ಆರ್, “ವಿಶೇಷ ಅಗತ್ಯವುಳ್ಳ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರನ್ನು ತಯಾರಿಸುವುದು ಪವಿತ್ರ ಕಾರ್ಯ. ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಸ್ಮರಿಸಿ ಗೌರವಿಸುತ್ತಿರುವುದು ಸಮಾಜಕ್ಕೆ ಉತ್ತಮ ಮಾದರಿ” ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಕಳೆದ ಎರಡೂವರೆ ದಶಕಗಳಿಂದ ಸಾವಿರಾರು ವಿಶೇಷ ಶಿಕ್ಷಕರನ್ನು ರೂಪಿಸಿದ 28ಕ್ಕೂ ಹೆಚ್ಚು ಹಿರಿಯ ಹಾಗೂ ಪ್ರಸ್ತುತ ಶಿಕ್ಷಕರಿಗೆ ಭಕ್ತಿಪೂರ್ವಕವಾಗಿ ಗುರುವಂದನೆ ಸಲ್ಲಿಸಲಾಯಿತು. ಈ ವೇಳೆ ಆಶಾ ವಿ. ಹಿರೇಮಠ, ಎನ್.ಆರ್. ವಿಜಯ್, ಗಿರೀಶ್ ಎಸ್., ಅನ್ನಪೂರ್ಣ, ಡಾ. ಸಂಗೀತಾ, ಮಂಜುಳಾ ಪಾಟೀಲ್, ಸಿಸ್ಟರ್ ಲೀನಾ ಹಾಗೂ ಸುರೇಶ್ ಎ. ಸೇರಿದಂತೆ ಅನೇಕ ಗುರು ವೃಂದದವರನ್ನು ಸನ್ಮಾನಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಗುಂಡ್ಲುಪೇಟೆ | ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಗೋಪಾಲ್ ಹೊರೆಯಾಲ

ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ 2001ರಿಂದ 2026ರವರೆಗಿನ ವಿವಿಧ ಸಾಲಿನ ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಸೇರಿ ತರಬೇತಿ ದಿನಗಳ ಸ್ಮೃತಿಗಳನ್ನು ಹಂಚಿಕೊಂಡರು. ತಮ್ಮ ವೃತ್ತಿಜೀವನದ ಅನುಭವಗಳು, ವಿಶೇಷ ಮಕ್ಕಳ ಶಿಕ್ಷಣ ಕ್ಷೇತ್ರದ ಸವಾಲುಗಳು ಹಾಗೂ ಸಾಧನೆಗಳ ಕುರಿತು ಆತ್ಮೀಯ ಚರ್ಚೆಗಳು ನಡೆಯುವ ಮೂಲಕ ಕಾರ್ಯಕ್ರಮ ಮತ್ತಷ್ಟು ಅರ್ಥಪೂರ್ಣವಾಯಿತು.
ಈ ವಿಶೇಷ ಸುದ್ದಿ ಓದಿದ್ದೀರಾ?ಶೋಷಿತರ ಗಟ್ಟಿ ಧ್ವನಿ ಎನ್ ರಾಚಯ್ಯ ‘ಸಮಾನತೆಯ ಸಮಾಜʼದ ಕನಸುಗಾರ….
ಕಾರ್ಯಕ್ರಮದಲ್ಲಿ ಅಂಧ ಮಕ್ಕಳ ಶಾಲೆಯ ಅಧೀಕ್ಷಕ ಸತೀಶ್ ಕೆ.ಎಸ್., ಶ್ರವಣದೋಷವುಳ್ಳ ಮಕ್ಕಳ ಶಾಲೆಯ ಅಧೀಕ್ಷಕ ಮೀರಜ್, ಮುರುಳಿ ಎಚ್.ಎಚ್., ರಂಗನಾಥ್, ತಾರಾಮಣಿ, ಸುರೇಶ್ ಎ., ಡಾ. ಶಾಂಭವಿ ಸ್ವಾಮಿ ಹಾಗೂ ಕನ್ಯಾ ಸೇರಿದಂತೆ ಇನ್ನಿತರರು ಇದ್ದರು.




