ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲ್ಲೂಕಿನ ಹೊರೆಯಾಲ ಗ್ರಾಮದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ವಾಲ್ಮೀಕಿ ಪುತ್ಥಳಿಗಳನ್ನು ಒಳಗೊಂಡ ಸ್ವಾಗತ ಕಮಾನು ನಿರ್ಮಾಣ ಕಾಮಗಾರಿಗೆ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರ ಆಪ್ತ ಸಹಾಯಕ ಗೋಪಾಲ್ ಹೊರೆಯಾಲ ಗುದ್ದಲಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿ, ಗ್ರಾಮದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಎಲ್ಲಾ ಸಮುದಾಯದವರು ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಹಬಾಳ್ವೆಯಿಂದ ಬದುಕಿದಾಗ ಮಾತ್ರ ಸಮಾಜದಲ್ಲಿ ಸೌಹಾರ್ದ ವಾತಾವರಣ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ತಾವು ಬಡತನದ ಕುಟುಂಬದಿಂದ ಬಂದಿರುವುದರಿಂದ ಬಡವರ ಸಂಕಷ್ಟಗಳ ಬಗ್ಗೆ ಸಂಪೂರ್ಣ ಅರಿವು ಇದೆ. ಈ ಹಿನ್ನೆಲೆ ಬಡವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹಾಗೂ ಸಂಸದ ಸುನಿಲ್ ಬೋಸ್ ಅವರ ನೆರವಿನೊಂದಿಗೆ ತಾಲ್ಲೂಕಿನಾದ್ಯಂತ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಹೊರೆಯಾಲ ಗ್ರಾಮಕ್ಕೆ ಈಗಾಗಲೇ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಂಜೂರು ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯ ಅನುದಾನವನ್ನು ಸಚಿವರಿಂದ ತರಲಾಗುವುದು ಎಂದು ಭರವಸೆ ನೀಡಿದರು. ದಲಿತರು ಹಾಗೂ ಹಿಂದುಳಿದ ವರ್ಗಗಳ ಬೀದಿಗಳನ್ನು ಒಳಗೊಂಡಂತೆ ಗ್ರಾಮದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಗ್ರಾಮದಲ್ಲಿ ಕೈಗೊಳ್ಳಬೇಕಿರುವ ಕಾಮಗಾರಿಗಳ ಪಟ್ಟಿ ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೇ ಸಚಿವರ ಗಮನಕ್ಕೆ ತಂದು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು. ಗ್ರಾಮದಲ್ಲಿನ ಎಲ್ಲಾ ಸಮುದಾಯದವರು ಸಹೋದರತ್ವದಿಂದ ಬದುಕಬೇಕು. ಹೊರೆಯಾಲವನ್ನು ತಾಲ್ಲೂಕಿನ ಮಾದರಿ ಗ್ರಾಮವನ್ನಾಗಿ ರೂಪಿಸಲು ಶಕ್ತಿ ಮೀರಿ ಕೆಲಸ ಮಾಡುವುದಾಗಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ?ಮೈಸೂರು | ರೇಡಿಯಾಲಜಿ ಸೌಲಭ್ಯಗಳು ಬಡವರಿಗೆ ನಿಲುಕಬೇಕು: ಡಾ. ಬಿ. ದಿನೇಶ್
ಡಾ. ಬಿ.ಆರ್. ಅಂಬೇಡ್ಕರ್ ಅವರ ಹೋರಾಟದ ಫಲವಾಗಿ ಸಮಾಜದ ಹಿಂದುಳಿದ ವರ್ಗಗಳಿಗೆ ಅವಕಾಶಗಳು ದೊರೆತಿವೆ. ಆ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಸರ್ಕಾರಿ ಉದ್ಯೋಗಗಳ ಜೊತೆಗೆ ಖಾಸಗಿ ಕಂಪನಿಗಳಲ್ಲಿಯೂ ಉದ್ಯೋಗ ಪಡೆಯುವತ್ತ ಯುವಕರು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.ಗ್ರಾಮದಲ್ಲಿ ನಿರ್ಮಾಣವಾಗಲಿರುವ ಸ್ವಾಗತ ಕಮಾನು ಮುಂದಿನ ದಿನಗಳಲ್ಲಿ ವಿಶೇಷ ಆಕರ್ಷಣೆಯಾಗಲಿದೆ. ಹೊರಗಿನಿಂದ ಗ್ರಾಮಕ್ಕೆ ಆಗಮಿಸುವವರಿಗೆ ಮಹನೀಯರ ಸಂದೇಶ ತಲುಪಿಸುವ ಉದ್ದೇಶದಿಂದ ಈ ಕಮಾನನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಈ ವಿಶೇಷ ಸುದ್ದಿ ಓದಿದ್ದೀರಾ?ಶೋಷಿತರ ಗಟ್ಟಿ ಧ್ವನಿ ಎನ್ ರಾಚಯ್ಯ ‘ಸಮಾನತೆಯ ಸಮಾಜʼದ ಕನಸುಗಾರ….
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಚ್.ಎಂ. ಮಹೇಶ್, ವಕೀಲ ಮಹೇಶ್, ಯಜಮಾನ ಚಿಕ್ಕತಮ್ಮಯ್ಯ, ಡಿ. ಮಹದೇವನಾಯಕ, ಇಂದ್ರನಾಯಕ, ಸಹ ಪ್ರಾಧ್ಯಾಪಕ ಡಾ. ಬಿ. ಶೇಖರ್, ಉಪನ್ಯಾಸಕ ಜಗದೀಶ್, ಶಿಕ್ಷಕಿ ಮಹೇಶ್ವರಿ, ಸಿಆರ್‌ಪಿಎಫ್‌ನ ರಾಜು ಸೇರಿದಂತೆ ಹಲವರು ಇದ್ದರು.




