ಇಂದು ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು ವಿಪುಲ ಅವಕಾಶಗಳಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳುವ ಚಾಕಚಕ್ಯತೆಯನ್ನು ಬೆಳೆಸಿಕೊಂಡು ಜೀವನದಲ್ಲಿ ಉನ್ನತ ಸ್ಥಾನಕ್ಕೇರಬೇಕು. ಪ್ರಸ್ತುತ ವಿದ್ಯಾರ್ಥಿವೇತನ ಪಡೆಯುತ್ತಿರುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಶಿಕ್ಷಣ ಪಡೆದು ತಾವು ಕೂಡ ಇತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವವರಾಗಬೇಕು. ಸರಕಾರದ ವಿವಿಧ ಸವಲತ್ತುಗಳನ್ನು ಪಡೆದುಕೊಳ್ಳಲು ಸೂಕ್ತ ಮಾರ್ಗದರ್ಶನದ ಅಗತ್ಯವಿದ್ದಲ್ಲಿ ತಾನು ಸದಾ ಸಹಕರಿಸಲು ಸಿದ್ಧನಿದ್ದೇನೆ ಎಂದು ಕಾರ್ಕಳದ ಉದ್ಯಮಿ ಹಾಗೂ ಜಾನ್ಸ್ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ ಜಾನ್ ಆರ್. ಡಿಸಿಲ್ವ ಹೇಳಿದರು.
ಅವರು ಜಮೀಯತುಲ್ ಫಲಾಹ್ ಕಾರ್ಕಳ ತಾಲೂಕು ಘಟಕದ ವತಿಯಿಂದ ಆಯೋಜಿಸಲಾದ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಜಮೀಯತುಲ್ ಫಲಾಹ್ ಕೇಂದ್ರ ಸಮಿತಿ ಅಧ್ಯಕ್ಷ ಅಷ್ಪಾಕ್ ಅಹ್ಮದ್ ಮಾತನಾಡಿ, ಪೋಷಕರು ತಮ್ಮ ಅಮೂಲ್ಯ ಸಮಯವನ್ನು ಮಕ್ಕಳೊಂದಿಗೆ ಕಳೆಯಬೇಕು. ಶಾಲಾ-ಕಾಲೇಜುಗಳಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳು ದಾರಿ ತಪ್ಪದಂತೆ ಎಚ್ಚರಿಕೆ ವಹಿಸಬೇಕು. ಪೋಷಕರು ಮಕ್ಕಳಿಗೆ ನೀಡುವ ಸಮಯವೇ ಅವರ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಇಸ್ಲಾಂನ ಮೂಲ ತತ್ವವೇ ಶಿಕ್ಷಣವಾಗಿದ್ದು, ಪವಿತ್ರ ಖುರಾನ್‌ನ ಮೊದಲ ಸಂದೇಶವೂ ಓದಿಗೆ ಆದ್ಯತೆ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಜಮೀಯತುಲ್ ಫಲಾಹ್ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದನ್ನೇ ತನ್ನ ಪ್ರಮುಖ ಧ್ಯೇಯವನ್ನಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ಜಮೀಯತುಲ್ ಫಲಾಹ್ ಕೋಶಾಧಿಕಾರಿ ಮೊಹಮ್ಮದ್ ಶರೀಫ್ ಮಾತನಾಡಿ, ಮುಸ್ಲಿಂ ಸಮುದಾಯದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದಿಲ್ಲ ಎಂಬ ಆರೋಪ ಸತ್ಯಕ್ಕೆ ದೂರವಾದುದು. ಇಂದು ಬಹುತೇಕ ಮನೆಗಳಲ್ಲಿ ಪದವೀಧರರಿದ್ದಾರೆ. ಆದರೆ ಸರಕಾರಿ ಮತ್ತು ಖಾಸಗಿ ವಲಯದ ಉದ್ಯೋಗಗಳಲ್ಲಿ ಸಮುದಾಯದವರ ಪ್ರಾತಿನಿಧ್ಯ ಕಡಿಮೆ ಇರುವುದರಿಂದ ಇಂತಹ ಅಪವಾದಗಳು ಎದುರಾಗುತ್ತಿವೆ ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ಸರಕಾರಿ ಉದ್ಯೋಗಗಳಲ್ಲಿ ಮುಸ್ಲಿಮರ ಸಂಖ್ಯೆ ಗಣನೀಯವಾಗಿದ್ದರೂ, ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಅದು ಕುಸಿದಿತ್ತು. ಇತ್ತೀಚಿನ ದಿನಗಳಲ್ಲಿ ಉನ್ನತ ಸರಕಾರಿ ಹುದ್ದೆಗಳನ್ನು ಪಡೆಯುವ ನಿಟ್ಟಿನಲ್ಲಿ ಸಮುದಾಯದ ಯುವಜನರು ಆಸಕ್ತಿ ತೋರುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಉದ್ಯೋಗ ಕ್ಷೇತ್ರದಲ್ಲಿ ಇಸ್ಲಾಂ ಪ್ರತಿಪಾದಿಸುವ ನಿಷ್ಠೆ, ಕಾರ್ಯಪರತೆ, ಪ್ರಾಮಾಣಿಕತೆ ಹಾಗೂ ಭ್ರಷ್ಟಾಚಾರರಹಿತ ಆಡಳಿತದ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮೀಯತುಲ್ ಫಲಾಹ್ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಮೊಹಮ್ಮದ್ ಗೌಸ್ ವಹಿಸಿದ್ದರು.
ವೇದಿಕೆಯಲ್ಲಿ ಉದ್ಯಮಿಗಳಾದ ಮೊಹಮ್ಮದ್ ಅಸ್ಲಾಂ ಕುಂಟಲ್ಪಾಡಿ, ಕೆ.ಪಿ. ಶಬ್ಬೀರ್ ಹಸನ್ ಕಾಳಿಕಾಂಬಾ, ಜಮೀಯತುಲ್ ಫಲಾಹ್ ಉಪಾಧ್ಯಕ್ಷರಾದ ಅಬ್ದುಲ್ ರಶೀದ್ ಬಂಗ್ಲೆಗುಡ್ಡೆ, ಸಯ್ಯೇದ್ ಅಬ್ಬಾಸ್ ಅಂಚಿಕಟ್ಟೆ, ಸಂಘಟನಾ ಕಾರ್ಯದರ್ಶಿ ಸಯ್ಯದ್ ಹಸನ್ ಗಾಂಧಿ ಮೈದಾನ್ ಹಾಗೂ ಸದಸ್ಯರಾದ ಮೊಹಮ್ಮದ್ ಸಾಹೇಬ್ ಪುಲ್ಕೇರಿ, ಕೆ.ಎಸ್. ಮೊಹಮ್ಮದ್ ಕಾಸಿಮ್ ಅಂಚಿಕಟ್ಟೆ ಉಪಸ್ಥಿತರಿದ್ದರು.
ಕರ್ನಾಟಕ ಮುಸ್ಲಿಂ ಜಮಾತ್ ಕಾರ್ಕಳ ಅಧ್ಯಕ್ಷ ನಾಸಿರ್ ಶೇಕ್ ಬೈಲೂರು ಕಾರ್ಯಕ್ರಮ ನಿರೂಪಿಸಿದರು. ಸಮದ್ ಖಾನ್ ಸ್ವಾಗತಿಸಿ, ಅಬ್ದುಲ್ ಮುನೀರ್ ವಂದಿಸಿದರು.







