ʻಜ್ಞಾನಸಿರಿ’ ಎಂಬ ಸುಸಜ್ಜಿತ ಹೊಸ ಕ್ಯಾಂಪಸ್ ವಿಶ್ವವಿದ್ಯಾಲಯದ ಪ್ರಮುಖ ಸಾಧನೆಗಳಲ್ಲಿ ಒಂದಾಗಿದ್ದರೂ, ಕೇವಲ ಕಟ್ಟಡಗಳ ಅಭಿವೃದ್ಧಿಯಿಂದ ವಿಶ್ವವಿದ್ಯಾಲಯದ ಗುಣಮಟ್ಟವನ್ನು ಅಳೆಯಲು ಸಾಧ್ಯವಿಲ್ಲ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಬಲ್ಲ ಶಿಕ್ಷಣ, ಸಂಶೋಧನೆ ಮತ್ತು ಆಡಳಿತ ವ್ಯವಸ್ಥೆಯನ್ನು ರೂಪಿಸುವ ಜವಾಬ್ದಾರಿ ಮುಂದಿನ ಕುಲಪತಿಯ ಮೇಲಿದೆ.
ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಅವರ 4 ವರ್ಷದ ಅಧಿಕಾರಾವಧಿ ಇದೇ ಜುಲೈ 20ರಂದು ಪೂರ್ಣಗೊಳ್ಳಲಿದ್ದು, ನೂತನ ಕುಲಪತಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ವಿಶ್ವವಿದ್ಯಾಲಯದ ಮುಂದಿನ ಆಡಳಿತ ಚುಕ್ಕಾಣಿ ಯಾರ ಕೈ ಸೇರಲಿದೆ ಎಂಬ ಕುತೂಹಲ ಶೈಕ್ಷಣಿಕ ವಲಯದಲ್ಲಿ ಹೆಚ್ಚಾಗಿದ್ದು, ಈ ಬಾರಿ ನೇಮಕವಾಗುವವರು ವಿಶ್ವವಿದ್ಯಾಲಯದ 6ನೇ ಕುಲಪತಿಯಾಗಲಿದ್ದಾರೆ.
ಕುಲಪತಿ ಆಯ್ಕೆಗಾಗಿ ರಚನೆಯಾಗಲಿರುವ ಮೂರು ಸದಸ್ಯರ ಶೋಧನಾ ಸಮಿತಿಗೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಕೋಟಾದಲ್ಲಿ ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಹಿ. ಚಿ. ಬೋರಲಿಂಗಯ್ಯ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಸರ್ಕಾರ ಹಾಗೂ ರಾಜ್ಯಪಾಲರ ಪರವಾಗಿ ಇನ್ನಿಬ್ಬರು ಸದಸ್ಯರ ನೇಮಕ ಬಾಕಿ ಇರುವುದರಿಂದ ಶೋಧನಾ ಸಮಿತಿ ಇನ್ನೂ ಪೂರ್ಣಗೊಂಡಿಲ್ಲ.
ಸರ್ಕಾರದಿಂದ ನೇಮಕವಾಗುವ ಸದಸ್ಯರೇ ಸಮಿತಿಯ ಅಧ್ಯಕ್ಷರಾಗಲಿದ್ದು, ಅರ್ಜಿಗಳ ಪರಿಶೀಲನೆಯ ಬಳಿಕ ಅರ್ಹ ಮೂವರ ಹೆಸರನ್ನು ಮುಚ್ಚಿದ ಲಕೋಟೆಯಲ್ಲಿ ಕುಲಾಧಿಪತಿಯಾಗಿರುವ ರಾಜ್ಯಪಾಲರಿಗೆ ಶಿಫಾರಸು ಮಾಡಲಾಗುತ್ತದೆ.
ಈಗಾಗಲೇ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಅರ್ಹ ಪ್ರಾಧ್ಯಾಪಕರು ಕುಲಪತಿ ಹುದ್ದೆಗಾಗಿ ವಿವಿಧ ಮಟ್ಟದಲ್ಲಿ ಪ್ರಯತ್ನ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ. ಈವರೆಗೆ ತುಮಕೂರು ವಿಶ್ವವಿದ್ಯಾಲಯದಲ್ಲಿ ದಲಿತ, ಬ್ರಾಹ್ಮಣ, ಮುಸ್ಲಿಂ, ಒಕ್ಕಲಿಗ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ವ್ಯಕ್ತಿಗಳು ಕುಲಪತಿಯಾಗಿರುವ ಹಿನ್ನೆಲೆಯಲ್ಲಿ, ಈ ಬಾರಿ ಅವಕಾಶ ಸಿಗದ ಸಮುದಾಯಗಳ ಪರವಾಗಿ ರಾಜಕೀಯ ಹಾಗೂ ಸಾಮಾಜಿಕ ಮಟ್ಟದಲ್ಲಿ ಒತ್ತಡ ಹೆಚ್ಚಾಗುತ್ತಿದೆ ಎಂಬ ಚರ್ಚೆಯೂ ಕೇಳಿಬರುತ್ತಿದೆ.
ಆದರೆ, ಶೈಕ್ಷಣಿಕ ಹುದ್ದೆಗಳ ನೇಮಕಾತಿಯಲ್ಲಿ ಜಾತಿ ಅಥವಾ ರಾಜಕೀಯಕ್ಕಿಂತ ಅರ್ಹತೆ, ಆಡಳಿತ ಸಾಮರ್ಥ್ಯ ಮತ್ತು ಶೈಕ್ಷಣಿಕ ದೃಷ್ಟಿಕೋನಕ್ಕೆ ಆದ್ಯತೆ ನೀಡಬೇಕು ಎಂಬ ಅಭಿಪ್ರಾಯವೂ ಶಿಕ್ಷಣ ತಜ್ಞರಿಂದ ವ್ಯಕ್ತವಾಗುತ್ತಿದೆ.
ಸಾಮಾನ್ಯವಾಗಿ ಹಾಲಿ ಕುಲಪತಿಯ ಅಧಿಕಾರಾವಧಿ ಪೂರ್ಣಗೊಳ್ಳುವ ಮುನ್ನವೇ ಹೊಸ ಕುಲಪತಿ ನೇಮಕ ಪ್ರಕ್ರಿಯೆ ಅಂತಿಮ ಹಂತ ತಲುಪಬೇಕಾಗುತ್ತದೆ. ಆದರೆ ಈ ಬಾರಿ ಶೋಧನಾ ಸಮಿತಿಯೇ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ನೂತನ ಕುಲಪತಿ ನೇಮಕ ಜುಲೈ 20ರೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಪ್ರಭಾರ ಕುಲಪತಿ ನೇಮಕದ ಸಾಧ್ಯತೆಯೂ ಹೆಚ್ಚಿದ್ದು, ಅದಕ್ಕೂ ವಿಶ್ವವಿದ್ಯಾಲಯದ ಆಂತರಿಕ ವಲಯದಲ್ಲಿ ಚಟುವಟಿಕೆಗಳು ಆರಂಭವಾಗಿವೆ ಎಂಬ ಮಾಹಿತಿ ಹರಿದಾಡುತ್ತಿದೆ.
ಕುಲಪತಿಯ ಅಧಿಕಾರಾವಧಿಯ ಕೊನೆಯ ಒಂದು ತಿಂಗಳಲ್ಲಿ ಪ್ರಮುಖ ನೀತಿ ಅಥವಾ ಹಣಕಾಸು ಸಂಬಂಧಿತ ನಿರ್ಧಾರಗಳನ್ನು ಕೈಗೊಳ್ಳದಂತೆ ರಾಜ್ಯಪಾಲರ ಕಚೇರಿಯಿಂದ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಇದೆ. ಆದರೆ ಇದೇ ಅವಧಿಯಲ್ಲಿ ಸಿಂಡಿಕೇಟ್ ಸಭೆಗಳು ಮುಂದುವರಿದು ವಿವಿಧ ಆರ್ಥಿಕ ವಿಷಯಗಳಿಗೆ ಅನುಮೋದನೆ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಈ ಆರೋಪಗಳ ಕುರಿತು ವಿಶ್ವವಿದ್ಯಾಲಯದ ಅಧಿಕೃತ ಪ್ರತಿಕ್ರಿಯೆ ಹೊರಬಂದಿಲ್ಲ. ಆದಾಗ್ಯೂ, ಅಧಿಕಾರಾವಧಿಯ ಅಂತಿಮ ಹಂತದಲ್ಲಿ ಕೈಗೊಳ್ಳುವ ನಿರ್ಧಾರಗಳ ಪಾರದರ್ಶಕತೆ ಮತ್ತು ನಿಯಮಬದ್ಧತೆ ಕುರಿತು ಪ್ರಶ್ನೆಗಳು ಮೂಡಿವೆ.
22 ವರ್ಷಗಳ ಇತಿಹಾಸ ಹೊಂದಿರುವ ತುಮಕೂರು ವಿಶ್ವವಿದ್ಯಾಲಯ ಇಂದು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಶೈಕ್ಷಣಿಕ ಗುಣಮಟ್ಟದ ಕುಸಿತ, ಆರ್ಥಿಕ ಸಂಕಷ್ಟ, ಅತಿಥಿ ಉಪನ್ಯಾಸಕರ ಮೇಲಿನ ಅವಲಂಬನೆ, ಪದವಿ ಕಾಲೇಜುಗಳಲ್ಲಿ ದಾಖಲಾತಿ ಇಳಿಮುಖ, ಸಂಶೋಧನಾ ಚಟುವಟಿಕೆಗಳ ಕುರಿತು ಮೂಡಿರುವ ಪ್ರಶ್ನೆಗಳು, ನೇಮಕಾತಿ ಹಾಗೂ ಬಡ್ತಿಗಳ ವಿವಾದ, ಪಿಎಚ್.ಡಿ. ಸೀಟು ಹಂಚಿಕೆ, ಪರೀಕ್ಷಾ ವ್ಯವಸ್ಥೆಯ ಎಡವಟ್ಟು ಸೇರಿದಂತೆ ಹಲವು ವಿಷಯಗಳು ವಿಶ್ವವಿದ್ಯಾಲಯದ ಆಡಳಿತದ ಮೇಲೆ ಪರಿಣಾಮ ಬೀರಿವೆ.
ಇದರ ಜೊತೆಗೆ ವಿಶ್ವವಿದ್ಯಾಲಯದ ಆಂತರಿಕ ನಿಧಿ ಖಾಲಿಯಾಗಿರುವ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ. ವಿದ್ಯಾರ್ಥಿಗಳಿಂದ ವಿವಿಧ ಶುಲ್ಕಗಳ ಮೂಲಕ ಸಂಗ್ರಹಿಸಿದ ಸಂಪನ್ಮೂಲಗಳ ಸಮರ್ಪಕ ಬಳಕೆ ಕುರಿತು ಪ್ರಶ್ನೆಗಳು ಎದ್ದಿವೆ. ಇಂತಹ ಸಂದರ್ಭದಲ್ಲಿ ಕೇವಲ ಮೂಲಸೌಕರ್ಯ ನಿರ್ಮಾಣವಲ್ಲ, ಶೈಕ್ಷಣಿಕ ಗುಣಮಟ್ಟ, ಸಂಶೋಧನೆ, ಪಾರದರ್ಶಕ ಆಡಳಿತ ಮತ್ತು ಆರ್ಥಿಕ ಶಿಸ್ತು ಎಂಬ ನಾಲ್ಕು ಅಂಶಗಳಿಗೆ ಆದ್ಯತೆ ನೀಡಬಲ್ಲ ನಾಯಕತ್ವದ ಅಗತ್ಯ ಹೆಚ್ಚಾಗಿದೆ.
ಹೀಗಾಗಿ ಈ ಬಾರಿ ನಡೆಯುವ ಕುಲಪತಿ ಆಯ್ಕೆ ಕೇವಲ ಆಡಳಿತಾತ್ಮಕ ನೇಮಕಾತಿಯಾಗದೆ, ತುಮಕೂರು ವಿಶ್ವವಿದ್ಯಾಲಯದ ಮುಂದಿನ ದಶಕದ ದಿಕ್ಕನ್ನು ನಿರ್ಧರಿಸುವ ಮಹತ್ವದ ತೀರ್ಮಾನವಾಗಲಿದೆ. ವಿಶ್ವವಿದ್ಯಾಲಯದ ಶೈಕ್ಷಣಿಕ ವಾತಾವರಣವನ್ನು ಪುನರುಜ್ಜೀವನಗೊಳಿಸಿ, ಆರ್ಥಿಕ ಸ್ಥಿರತೆ ತರಬಲ್ಲ, ಪಾರದರ್ಶಕ ಹಾಗೂ ದೂರದೃಷ್ಟಿಯ ಆಡಳಿತಗಾರನಿಗಾಗಿ ವಿದ್ಯಾರ್ಥಿಗಳು, ಬೋಧಕ ವೃಂದ ಮತ್ತು ಶೈಕ್ಷಣಿಕ ವಲಯ ನಿರೀಕ್ಷೆಯಿಂದ ಕಾಯುತ್ತಿದೆ.




