ಐತಿಹಾಸಿಕ ಪರಂಪರೆ ನಮ್ಮ ಗತಕಾಲದ ಸಾಧನೆ, ಸಂಸ್ಕೃತಿ ಮತ್ತು ಅನನ್ಯತೆಯನ್ನು ಪ್ರತಿಬಿಂಬಿಸುವ ಜೀವಂತ ಸಾಕ್ಷಿಯಾಗಿದೆ. ಪ್ರಾಚೀನ ಶಾಸನಗಳು, ಹಸ್ತಪ್ರತಿಗಳು, ವಾಸ್ತುಶಿಲ್ಪ, ಸ್ಮಾರಕಗಳು ಹಾಗೂ ಸಾಂಪ್ರದಾಯಿಕ ಕಲೆಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ಯುವಜನರ ಜವಾಬ್ದಾರಿ ಎಂದು ಭಾರತೀಯ ಪುರಾತತ್ವ ಇಲಾಖೆಯ ನಿವೃತ್ತ ನಿರ್ದೇಶಕ ಡಾ. ಎಸ್.ವಿ. ವೆಂಕಟೇಶಯ್ಯ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ, ಇತಿಹಾಸ ವಿಭಾಗ, ತುಮಕೂರು ಸಂಶೋಧಕರ ತಂಡ, ಇತಿಹಾಸ ಸಂಕಲನ ಸಮಿತಿ, ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿ, ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ ‘ಐತಿಹಾಸಿಕ ಪರಂಪರೆ ಉಳಿಸಿ–ಇತಿಹಾಸ ದಿನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಹಿರಿಯರ ಜೀವನಪದ್ಧತಿ, ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಬೇರುಗಳನ್ನು ಅರಿಯಲು ಐತಿಹಾಸಿಕ ಪರಂಪರೆಯ ಸಂರಕ್ಷಣೆ ಅಗತ್ಯವಾಗಿದೆ ಎಂದರು.

ಇತಿಹಾಸ ವಿಭಾಗದ ಮುಖ್ಯಸ್ಥೆ ಪ್ರೊ. ವೇದಲಕ್ಷ್ಮಿ ಜಿ. ಮಾತನಾಡಿ, ಪ್ರಾಚೀನ ಹಸ್ತಪ್ರತಿಗಳು, ಶಾಸನಗಳು ಹಾಗೂ ನಾಣ್ಯಗಳು ಗತಕಾಲದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳ ಕುರಿತು ಮಹತ್ವದ ಮಾಹಿತಿಯನ್ನು ಒದಗಿಸುತ್ತವೆ ಎಂದರು.
This video cannot be played in your browser. Open the video directly
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಕೆ.ಎಸ್. ಕುಮಾರ್ ಮಾತನಾಡಿ, ಪ್ರಾಚೀನ ದೇವಾಲಯಗಳು, ಕೋಟೆಗಳು ಹಾಗೂ ಸ್ಮಾರಕಗಳನ್ನು ಅವುಗಳ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಸಂರಕ್ಷಿಸುವುದು ಅಗತ್ಯ ಎಂದು ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ. ಗೋವಿಂದರಾಯ ಮಾತನಾಡಿ, ತಾಳೆಗರಿ, ಹಸ್ತಪ್ರತಿಗಳು ಹಾಗೂ ಅಪರೂಪದ ಗ್ರಂಥಗಳನ್ನು ಸಂರಕ್ಷಿಸುವುದು ನಮ್ಮ ಅಸ್ಮಿತೆ ಮತ್ತು ಜ್ಞಾನಪರಂಪರೆಯನ್ನು ಭವಿಷ್ಯಕ್ಕೆ ತಲುಪಿಸುವ ಕಾರ್ಯವಾಗಿದೆ ಎಂದರು.
ತುಮಕೂರು ಸಂಶೋಧಕರ ತಂಡದ ಸಂಶೋಧನಾರ್ಥಿ ಬಿ.ಆರ್. ರಂಗನಾಥ್ ಅವರು ಮಧುಗಿರಿ ತಾಲೂಕಿನ ಇತಿಹಾಸ, ಶಾಸನಗಳು, ಶಿಲಾಯುಗದ ಉಪಕರಣಗಳು ಹಾಗೂ ನಾಣ್ಯಗಳ ಕುರಿತ ಬಿತ್ತಿಚಿತ್ರ ಪ್ರದರ್ಶನ ನಡೆಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಬಿ., ಪ್ರಾಧ್ಯಾಪಕರಾದ ಡಾ. ಎಂ.ಎಸ್. ನಾಗರಾಜು, ಡಾ. ಮಂಜುನಾಥ್ ಬುಡಸನಹಳ್ಳಿ, ಪತ್ರಾಂಕಿತ ವ್ಯವಸ್ಥಾಪಕಿ ಚಂದ್ರಕಲಾ, ಉಪನ್ಯಾಸಕರಾದ ರಘುನಾಥ್, ಎಚ್.ಡಿ. ನಾಗಭೂಷಣ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





