ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ನ ಸಂಘಟನಾ ಭವಿಷ್ಯ, ಸಾಮಾಜಿಕ ಸಮೀಕರಣ, ಮಹಿಳಾ ಪ್ರಾತಿನಿಧ್ಯ ಹಾಗೂ ಹಿರಿಯ ನಾಯಕರ ನಡುವಿನ ಸಮತೋಲನದಂತಹ ಅಂಶಗಳನ್ನೂ ಪರಿಗಣಿಸಿ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ. ಹೀಗಾಗಿ ಎರಡನೇ ಪಟ್ಟಿ ಹೊರಬರುವವರೆಗೂ ತುಮಕೂರು ಕಾಂಗ್ರೆಸ್ನಲ್ಲಿ 'ಹಳಬರಿಗೆ ಮಣೆನಾ, ಹೊಸ ಮುಖಕ್ಕೆ ಅವಕಾಶನಾ, ಅಥವಾ ಮಹಿಳಾ ನಾಯಕತ್ವಕ್ಕೆ ಆದ್ಯತೆಯಾ?' ಎಂಬ ಕುತೂಹಲ ಮುಂದುವರಿಯಲಿದೆ.
ರಾಜ್ಯ ಕಾಂಗ್ರೆಸ್ನ ಸಂಘಟನಾತ್ಮಕ ಪುನರ್ರಚನೆ ಪ್ರಕ್ರಿಯೆ ವೇಗ ಪಡೆದುಕೊಂಡಿದ್ದರೂ, ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರ ಆಯ್ಕೆ ಮಾತ್ರ ಇನ್ನೂ ಸವಾಲಾಗಿ ಉಳಿದಿದೆ. ಜಿಲ್ಲೆಯ ಪ್ರಬಲ ಮೂರು ರಾಜಕೀಯ ಶಕ್ತಿಗಳಾದ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ, ಸಚಿವ ಕೆ ಎನ್ ರಾಜಣ್ಣ ಹಾಗೂ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರ ಬಣಗಳನ್ನು ಸಮನ್ವಯಗೊಳಿಸಿ ಪಕ್ಷವನ್ನು ಮುನ್ನಡೆಸಬಲ್ಲ ನಾಯಕನ ಆಯ್ಕೆ ಹೈಕಮಾಂಡ್ಗೆ ಸವಾಲಾಗಿಪರಿಣಮಿಸಿದೆ ಎನ್ನಲಾಗುತ್ತಿದೆ.
ತುಮಕೂರು ಜಿಲ್ಲೆಯಲ್ಲಿ ಈ ಮೂವರು ಹಿರಿಯ ನಾಯಕರ ಪ್ರಭಾವ ಪ್ರಬಲವಾಗಿರುವುದರಿಂದ, ಯಾವುದೇ ಒಂದು ಬಣಕ್ಕೆ ಆಪ್ತರಾಗಿರುವ ವ್ಯಕ್ತಿಯನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಿದರೆ ಮತ್ತೊಂದು ಬಣದ ಅಸಮಾಧಾನಕ್ಕೆ ಕಾರಣವಾಗಬಹುದು ಎಂಬ ಲೆಕ್ಕಾಚಾರವೂ ವರಿಷ್ಠರ ಮುಂದಿದೆ. ಹೀಗಾಗಿ ಯಾವುದೇ ಬಣದ ನೇರ ಪ್ರತಿನಿಧಿಯಲ್ಲದ, ಎಲ್ಲ ನಾಯಕರೊಂದಿಗೂ ಹೊಂದಾಣಿಕೆ ಮಾಡಿಕೊಂಡು ಸಂಘಟನೆ ಕಟ್ಟಬಲ್ಲ ವ್ಯಕ್ತಿಯ ಹುಡುಕಾಟ ನಡೆಯುತ್ತಿದೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ.
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹಿರಿಯ ನಾಯಕರು ಹಾಗೂ ಹೊಸ ಮುಖಗಳ ನಡುವೆ ನಿರೀಕ್ಷಿತ ಪೈಪೋಟಿ ಕಾಣಿಸದಿರುವುದಕ್ಕೂ ಪಕ್ಷದೊಳಗಿನ ಕೆಲ ವಾಸ್ತವಗಳು ಕಾರಣವಾಗಿವೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಸ್ಥಾನವಿದ್ದರೂ, ಕಾರ್ಯಕ್ರಮಗಳು, ಪ್ರತಿಭಟನೆಗಳು, ಸಭೆಗಳು ಹಾಗೂ ಸಂಘಟನಾ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಲು ವೈಯಕ್ತಿಕವಾಗಿ ಸಂಪನ್ಮೂಲ ಬಳಸಬೇಕಾದ ಪರಿಸ್ಥಿತಿ ಇದೆ ಎಂಬ ಅಸಮಾಧಾನ ಕೆಲ ನಾಯಕರಲ್ಲಿದೆ. ಜಿಲ್ಲೆಯ ಶಾಸಕರು ಮತ್ತು ಪ್ರಮುಖ ನಾಯಕರಿಂದ ಅಗತ್ಯ ಆರ್ಥಿಕ ಹಾಗೂ ಸಂಘಟನಾ ಬೆಂಬಲ ದೊರೆಯದಿದ್ದರೆ, ಅಧ್ಯಕ್ಷ ಸ್ಥಾನವು ಜವಾಬ್ದಾರಿಯ ಭಾರವಾಗುತ್ತದೆ ಎಂಬ ಅಭಿಪ್ರಾಯವೂ ಇದೆ.
ಇದೇ ಕಾರಣಕ್ಕೆ ರಾಜಕೀಯವಾಗಿ ಭವಿಷ್ಯ ರೂಪಿಸಿಕೊಳ್ಳಲು ಬಯಸುವ ಅನೇಕ ಹೊಸ ಮುಖಗಳು ಈ ಸ್ಥಾನದಿಂದ ದೂರ ಉಳಿಯುತ್ತಿದ್ದಾರೆ ಎನ್ನಲಾಗುತ್ತಿದೆ. ಅಧ್ಯಕ್ಷ ಸ್ಥಾನ ಪ್ರತಿಷ್ಠೆ ನೀಡಿದರೂ, ಅದಕ್ಕೆ ತಕ್ಕ ಸಂಘಟನಾ ಅಧಿಕಾರ ಮತ್ತು ಸಂಪನ್ಮೂಲಗಳಿಲ್ಲ ಎಂಬ ಭಾವನೆ ಹೊಸ ಪೀಳಿಗೆಯ ನಾಯಕರಲ್ಲಿ ಮೂಡಿರುವುದು ಕಾಂಗ್ರೆಸ್ಗೆ ಮತ್ತೊಂದು ಸವಾಲಾಗಿದೆ.
ತುಮಕೂರು ಜಿಲ್ಲೆಯಲ್ಲಿ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಗಳ ರಾಜಕೀಯ ಪ್ರಭಾವ ಗಮನಾರ್ಹ. ಹೀಗಾಗಿ ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ಸಾಮಾಜಿಕ ಸಮೀಕರಣವೂ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ.
ಒಕ್ಕಲಿಗ ಸಮುದಾಯದಿಂದ ಮಾಜಿ ಸಂಸದ ಮುದ್ದಹನುಮೇಗೌಡ, ಗೌರಿಶಂಕರ್ ಹಾಗೂ ಮುರಳೀಧರ ಹಾಲಪ್ಪ ಅವರ ಹೆಸರುಗಳು ಚರ್ಚೆಯಲ್ಲಿವೆ. ಆದರೆ ಈ ಮೂವರು ಅಧಿಕೃತವಾಗಿ ಅರ್ಜಿ ಸಲ್ಲಿಸಿಲ್ಲ ಎನ್ನಲಾಗುತ್ತಿದೆ. ಆದಾಗ್ಯೂ, ಇವರ ಕುರಿತು ಹೈಕಮಾಂಡ್ಗೆ ಜನಾಭಿಪ್ರಾಯ ಮತ್ತು ಪಕ್ಷದೊಳಗಿನ ಅಭಿಪ್ರಾಯಗಳು ತಲುಪಿವೆ ಎಂಬ ಮಾತು ಕೇಳಿಬರುತ್ತಿದೆ.
ಲಿಂಗಾಯತ ಸಮುದಾಯದಿಂದ ತಿಪಟೂರಿನ ಸಿ ಬಿ ಶಶಿಧರ್(ಟೂಡಾ) ಹಾಗೂ ಅರಕೆರೆ ಶಂಕರ್ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ. ವಿಶೇಷವಾಗಿ ಪಕ್ಷದ ಸಂಘಟನೆ ಹಾಗೂ ಜಿಲ್ಲಾ ಮಟ್ಟದ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಹೊಸ ಮುಖಕ್ಕೆ ಅವಕಾಶ ನೀಡಬೇಕೆಂಬ ಚರ್ಚೆ ನಡೆದರೆ ಈ ಹೆಸರುಗಳು ಮುನ್ನೆಲೆಗೆ ಬರಬಹುದಾಗಿದೆ.
ಕಾಂಗ್ರೆಸ್ನ ಸಾಮಾಜಿಕ ನ್ಯಾಯದ ರಾಜಕೀಯವನ್ನು ಗಮನದಲ್ಲಿಟ್ಟುಕೊಂಡರೆ, ಅಧ್ಯಕ್ಷ ಸ್ಥಾನವನ್ನು ಕೇವಲ ಪ್ರಬಲ ಜಾತಿ ಸಮೀಕರಣದ ಆಧಾರದ ಮೇಲೆ ನಿರ್ಧರಿಸುವ ಸಾಧ್ಯತೆ ಕಡಿಮೆ ಎಂಬ ಅಭಿಪ್ರಾಯವೂ ಇದೆ.
ಒಬಿಸಿ ಸಮುದಾಯದಿಂದ ನಟರಾಜ್ ಹಾಗೂ ನಿಕೇತ್ರಾಜ್ ಮೌರ್ಯ ಅವರ ಹೆಸರುಗಳು, ಎಸ್ಸಿ ಸಮುದಾಯದಿಂದ ರಾಮಕೃಷ್ಣಪ್ಪ, ನರಸೀಯಪ್ಪ, ನಾರಾಯಣಮೂರ್ತಿ ಹಾಗೂ ದಿನೇಶ್ ಅವರ ಹೆಸರುಗಳು ಚರ್ಚೆಯಲ್ಲಿವೆ. ಅಲ್ಪಸಂಖ್ಯಾತ ಸಮುದಾಯದಿಂದ ಅತೀಕ್ ಅಹಮದ್ ಹಾಗೂ ಇಗ್ಬಾಲ್ ಅಹಮದ್ ಅವರ ಹೆಸರುಗಳು ಕೇಳಿಬರುತ್ತಿವೆ.
ಇದರಿಂದ ಹೈಕಮಾಂಡ್ ಮುಂದೆ ಕೇವಲ ‘ಸಮರ್ಥ ನಾಯಕ ಯಾರು?’ ಎಂಬ ಪ್ರಶ್ನೆಯಷ್ಟೇ ಇಲ್ಲ. ‘ಯಾವ ಸಾಮಾಜಿಕ ಸಮುದಾಯಕ್ಕೆ ಅವಕಾಶ ನೀಡಿದರೆ ಪಕ್ಷದ ಸಂಘಟನಾ ಹಾಗೂ ಚುನಾವಣಾ ಸಮೀಕರಣಕ್ಕೆ ಅನುಕೂಲ?’ ಎಂಬ ಪ್ರಶ್ನೆಯೂ ಪ್ರಮುಖವಾಗಿದೆ.
ಈ ಬಾರಿ ಕಾಂಗ್ರೆಸ್ ಘೋಷಿಸಿರುವ ಸಂಘಟನಾತ್ಮಕ ಜಿಲ್ಲಾಧ್ಯಕ್ಷರ ಪಟ್ಟಿಯಲ್ಲಿ ಮಹಿಳೆಯರಿಗೆ ಅವಕಾಶ ಸಿಕ್ಕಿಲ್ಲ ಎಂಬ ಚರ್ಚೆ ಪಕ್ಷದೊಳಗೂ ಸಾಮಾಜಿಕ ಜಾಲತಾಣಗಳಲ್ಲೂ ನಡೆಯುತ್ತಿದೆ. ಬಾಕಿ ಉಳಿದಿರುವ ಐದು ಸಂಘಟನಾತ್ಮಕ ಜಿಲ್ಲೆಗಳಲ್ಲಿ ಕನಿಷ್ಠ ಎರಡು ಕಡೆ ಮಹಿಳೆಯರಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ.
ಹೀಗಾದರೆ ತುಮಕೂರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಹಿಳಾ ನಾಯಕಿಯರ ಹೆಸರುಗಳು ಏಕಾಏಕಿ ಪ್ರಬಲವಾಗಬಹುದು. ಗೂಳೂರು ಸೌಭಾಗ್ಯ, ಗೀತಾ ರಾಜಣ್ಣ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರೆ ಕೆ ಎಂ ಸುಜಾತಾ ಅವರ ಹೆಸರುಗಳು ಈ ಹಿನ್ನೆಲೆಯಲ್ಲಿ ಚರ್ಚೆಯಲ್ಲಿವೆ.
ವಿಶೇಷವಾಗಿ ಮಹಿಳಾ ಪ್ರಾತಿನಿಧ್ಯವನ್ನು ಸಮತೋಲನಗೊಳಿಸುವ ಉದ್ದೇಶ ಹೈಕಮಾಂಡ್ಗೆ ಇದ್ದರೆ, ತುಮಕೂರು ಜಿಲ್ಲೆಗೆ ಮಹಿಳಾ ಅಧ್ಯಕ್ಷರ ಆಯ್ಕೆ ಮಾಡುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಲಾಗದು.
ತುಮಕೂರು ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಮತ್ತೊಂದು ಕುತೂಹಲಕಾರಿ ಅಂಶವೆಂದರೆ, ಚರ್ಚೆಯಲ್ಲಿರುವ ಹಲವು ಹೆಸರುಗಳು ಅಧಿಕೃತವಾಗಿ ಅರ್ಜಿ ಸಲ್ಲಿಸಿಲ್ಲ ಎನ್ನುವುದು. ಇದರಿಂದ ಹೈಕಮಾಂಡ್ನ ಆಯ್ಕೆ ಪ್ರಕ್ರಿಯೆ ಅರ್ಜಿದಾರರ ಪಟ್ಟಿಗೆ ಸೀಮಿತವಾಗಿದೆಯೇ ಅಥವಾ ಪಕ್ಷದ ಹೊರಗಿನ ಜನಾಭಿಪ್ರಾಯ, ಸಂಘಟನಾ ಸಾಮರ್ಥ್ಯ ಮತ್ತು ಸಾಮಾಜಿಕ ಸಮೀಕರಣಗಳನ್ನೂ ಪರಿಗಣಿಸುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ.
ಯಾರನ್ನಾದರೂ ಅಚ್ಚರಿಯ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಮೂಲಕ ಮೂರು ಬಣಗಳ ನಡುವಿನ ಸಮತೋಲನ ಕಾಯ್ದುಕೊಳ್ಳುವ ತಂತ್ರವನ್ನು ವರಿಷ್ಠರು ಅನುಸರಿಸಿದರೂ ಅಚ್ಚರಿಯಿಲ್ಲ.
ಸಂಘಟನಾ ಸೃಜನ್ ಅಭಿಯಾನದಡಿ ರಾಜ್ಯದ 35 ಸಂಘಟನಾತ್ಮಕ ಜಿಲ್ಲೆಗಳ ಪೈಕಿ ಬಹುತೇಕ ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ಕಾಂಗ್ರೆಸ್ ಹೈಕಮಾಂಡ್ ಘೋಷಿಸಿದೆ. ಆದರೆ ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ವಿಜಯಪುರ ಹಾಗೂ ಕೂಡ್ಲಿಗಿ ಸಂಘಟನಾತ್ಮಕ ಜಿಲ್ಲೆಗಳ ಅಧ್ಯಕ್ಷರ ಆಯ್ಕೆ ಇನ್ನೂ ಬಾಕಿಯಿದೆ.
ಈ ಐದು ಜಿಲ್ಲೆಗಳಲ್ಲಿನ ರಾಜಕೀಯ ಮತ್ತು ಸಾಮಾಜಿಕ ಸಮೀಕರಣಗಳು ಹೈಕಮಾಂಡ್ನ ಅಂತಿಮ ನಿರ್ಧಾರವನ್ನು ಸಂಕೀರ್ಣಗೊಳಿಸಿವೆ ಎಂಬ ವಿಶ್ಲೇಷಣೆ ಪಕ್ಷದೊಳಗಿದೆ. ಈಗಾಗಲೇ ಘೋಷಣೆಯಾಗಿರುವ ಜಿಲ್ಲೆಗಳಲ್ಲಿ ಮಹಿಳಾ ಪ್ರಾತಿನಿಧ್ಯ ಕಾಣಿಸದಿರುವ ಹಿನ್ನೆಲೆಯಲ್ಲಿ, ಬಾಕಿ ಉಳಿದ ಜಿಲ್ಲೆಗಳ ಆಯ್ಕೆಯಲ್ಲಿ ಈ ಅಂಶಕ್ಕೆ ಹೆಚ್ಚಿನ ಆದ್ಯತೆ ಸಿಗಬಹುದು.
ಹಾಲಿ ಅಧ್ಯಕ್ಷರನ್ನೇ ಮುಂದುವರಿಸುವುದು ಒಂದು ಆಯ್ಕೆ. ಆದರೆ ಹಾಗೆ ಮಾಡಿದರೆ ಬಣ ರಾಜಕಾರಣದ ಸಮಸ್ಯೆ ಮುಂದುವರಿಯುವ ಸಾಧ್ಯತೆ ಇದೆ. ಮತ್ತೊಂದೆಡೆ, ಹೊಸ ಮುಖಕ್ಕೆ ಅವಕಾಶ ನೀಡಿದರೆ ಮೂರು ಪ್ರಮುಖ ನಾಯಕರ ನಡುವೆ ಸಮನ್ವಯ ಸಾಧಿಸುವ ಸಾಮರ್ಥ್ಯ ಆ ವ್ಯಕ್ತಿಗಿದೆಯೇ ಎಂಬುದು ಪರೀಕ್ಷೆಯಾಗಲಿದೆ.
ಹೀಗಾಗಿ ಹೈಕಮಾಂಡ್ಗೆ ಎದುರಾಗಿರುವ ನಿಜವಾದ ಪ್ರಶ್ನೆ ‘ಅಧ್ಯಕ್ಷರನ್ನಾಗಿ ಯಾರನ್ನು ನೇಮಿಸಬೇಕು?’ ಎಂಬುದಕ್ಕಿಂತ ‘ಮೂರು ಬಣಗಳ ನಡುವೆ ಸಮತೋಲನ ಕಾಯ್ದುಕೊಂಡು ಮುಂದಿನ ಚುನಾವಣೆಗೆ ಪಕ್ಷವನ್ನು ಸಂಘಟಿಸುವ ಸಾಮರ್ಥ್ಯ ಯಾರಿಗಿದೆ?’ ಎಂಬುದಾಗಿದೆ.
ಇದನ್ನೂ ಓದಿದ್ದೀರಾ? ರಾಯಚೂರು | ನೀರಿನ ಸಮಸ್ಯೆ ಪ್ರತಿಭಟನೆಯಲ್ಲಿ ಕಾಂಗ್ರೆಸ್–ಜೆಡಿಎಸ್ ಮುಖಂಡರ ಮಾತಿನ ಚಕಮಕಿ
ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ನ ಸಂಘಟನಾ ಭವಿಷ್ಯ, ಸಾಮಾಜಿಕ ಸಮೀಕರಣ, ಮಹಿಳಾ ಪ್ರಾತಿನಿಧ್ಯ ಹಾಗೂ ಹಿರಿಯ ನಾಯಕರ ನಡುವಿನ ಸಮತೋಲನದಂತಹ ಅಂಶಗಳನ್ನೂ ಪರಿಗಣಿಸಿ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ. ಹೀಗಾಗಿ ಎರಡನೇ ಪಟ್ಟಿ ಹೊರಬರುವವರೆಗೂ ತುಮಕೂರು ಕಾಂಗ್ರೆಸ್ನಲ್ಲಿ ‘ಹಳಬರಿಗೆ ಮಣೆನಾ, ಹೊಸ ಮುಖಕ್ಕೆ ಅವಕಾಶನಾ, ಅಥವಾ ಮಹಿಳಾ ನಾಯಕತ್ವಕ್ಕೆ ಆದ್ಯತೆಯಾ?’ ಎಂಬ ಕುತೂಹಲ ಮುಂದುವರಿಯಲಿದೆ.





